Friday, September 20, 2024

ಪ್ರಾಯೋಗಿಕ ಆವೃತ್ತಿ

ಮಹಾರಾಷ್ಟ್ರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ; ಪರಿಶೀಲನೆ

ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ನೇರಿಯಲ್ಲಿರುವ ಭಾರತೀಯ ಕೃಷಿ ಅನುಸಂದಾನ‌ ಪರಿಷತ್ತಿನ ಸಿದ್ದಗಿರಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಸಾವಯವ ಕೃಷಿ ಪ್ರಾತ್ಯಕ್ಷಿಕೆ ಪರಿಶೀಲಿಸಿದರು.

ಕ್ಷೇತ್ರದಲ್ಲಿ ಅನುಸರಿಸುತ್ತಿರುವ ಕೃಷಿ ಪದ್ದತಿ , ಜೀವಾಮೃತ ಬಳಕೆ, ಸಹಕಾರಿ ಪದ್ದತಿಗಳು , ಪಶು ಸಂಗೋಪನೆ, ರೈತ ತರಬೇತಿಗಳ ಬಗ್ಗೆ ಕೃಷಿ ಸಚಿವರು ಕನ್ನೇರಿ‌ ಮಠದ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮಿಜಿ ಹಾಗೂ ಕೃಷಿ ತಜ್ಞರಿಂದ ಮಾಹಿತಿ ಪಡೆದರು.

ಕಡಿಮೆ‌ ನೀರಿನಲ್ಲಿ ಬೆಳೆಯುವ ಸಿರಿಧಾನ್ಯಗಳ ಬಗ್ಗೆ ಸಚಿವರು ವಿಶೇಷ ಗಮನ ಹರಿಸಿ ಕೃಷಿ ವಿಜ್ಞಾನಿಗಳೊಂದಿಗೆ ಚರ್ಚಿಸಿದರು. ಸಾವಯವ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ, ಬೇಡಿಕೆ, ಪೂರೈಕೆ ಬಗ್ಗೆ ಕೂ‌ಡ ಸಚಿವರು ವಿವರ ಪಡೆದರು.

ಇಲ್ಲಿ ಬೆಳೆದ ತರಕಾರಿ, ಧಾನ್ಯಗಳು ವಾರಕ್ಕೆ ಎರೆಡೆರೆಡು ಬಾರಿ ಬೆಂಗಳೂರು, ಮಂಬೈ ಗೋವಾ ರಾಜ್ಯಗಳಿಗೂ ಸರಬರಾಜಾಗುತ್ತಿರುವ ಬಗ್ಗೆ ಹಾಗೂ ದಿನೇ ದಿನೇ ಈ ಸಾವಯವ ಉತ್ಪನ್ನ ಹೆಚ್ಚುತ್ತಿರುವ ಬೇಡಿಕೆ ಬಗ್ಗೆ ಕನ್ನೇರಿ‌ ಮಠದ ಕಾಡ ಸಿದ್ದೇಶ್ವರ ಸ್ವಾಮಿಜಿಯವರು‌ ಮಾಹಿತಿ ನೀಡಿದರು.

ಸಗಣಿ ಬಳಸಿ ಪೇಯಿಂಟ್, ಗೋಡೆ ಪುಟ್ಟಿ, ಸಾವಿರಾರು ಗಣಪತಿ ಮೂರ್ತಿಗಳನ್ನು ತಯಾರಿಸಿ ಮಾರುಕಟ್ಟೆಗೆ  ಮಾರುತ್ತಿರುವ ಬಗ್ಗೆ ಹಾಗೂ ಗೋಮೂತ್ರ ಉತ್ಪನ್ನಗಳ ತಯಾರಿಕೆ ಬಗ್ಗೆಯೂ ಸ್ವಾಮೀಜಿ ವಿವರಿಸಿದರು.

ದೇಶದಲ್ಲಿ ‌ಮಾದರಿ ಕೃಷಿ , ಹಾಗೂ ಶೈಕ್ಷಣಿಕ ಕ್ರಮಗಳು, ಅತ್ಯಂತ ಕನಿಷ್ಠ ದರದಲ್ಲಿ ನೀಡಲಾಗುತ್ತಿರುವ ಗರಿಷ್ಠ ಗುಣಮಟ್ಟದ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಹಾಗೂ ಕನ್ನೆರಿ ಮಠದ ಸಾಮಾಜಿಕ ಕಳಕಳಿಯ ಸೇವೆಗಳ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಸಚಿವರು ಸಾವಯವ ಪದ್ದತಿಯಲ್ಲಿ ಬೆಳೆದ ವಿವಿಧ ಬೆಳೆಗಳ ಪ್ರಾಯೋಗಿಕ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗೋ ಸಂಪತ್ತು ಕಂಡು ಹರ್ಷ 

ಕನ್ನೇರಿ ಕೃಷಿ ‌ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿದ್ದ ಸಾವಿರಕ್ಕೂ ಅಧಿಕ ಸಂಖ್ಯೆಯ ವಿವಿಧ ತಳಿಗಳ ಗೋವುಗಳನ್ನು ಕಂಡು ಸಚಿವರು ಪುಳಕಿತರಾದರು. ಗೋವುಗಳನ್ನು ಮೈದಡವಿ ಪ್ರೀತಿ ತೋರಿದರು. ಕೃಷಿ
ವಿಜ್ಞಾನ ಕೇಂದ್ರ ಹಾಗೂ ಮಠದ ವತಿಯಿಂದ ಮಾಡಲಾಗುತ್ತಿರುವ ಗೋವುಗಳ ಆರೈಕೆ, ಸಗಣಿ‌ ಮತ್ತು ಗೋ ಮಾತ್ರದ ಬಳಕೆ ಬಗ್ಗೆ ಶ್ರೀ ಮಠದ ಪಶು ವೈದ್ಯರಿಂದ ಮಾಹಿತಿ‌ ಪಡೆದ ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು

ಸಿರಿಧಾನ್ಯ ಮೇಳಕ್ಕೆ ಆಹ್ವಾನ

ಕೃಷಿ ಇಲಾಖೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ 5-7 ರ ವರಗೆ ನಡೆಯುವ ಸಿರಿಧಾನ್ಯ ‌ಮೇಳದಲ್ಲಿ ಕನ್ನೇರಿ ಮಠದ ಕೃಷಿ ವಿಜ್ಞಾನ ಕೇಂದ್ರದಿಂದ ಪ್ರತಿನಿಧಿಸಿ, ಪ್ರದರ್ಶನ ಹಾಗೂ ಮಾರಾಟದಲ್ಲಿ ಭಾಗಿಯಾಗುವಂತೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿ‌‌ ಸಿದ್ದೇಗೌಡ, ಮದ್ದೂರು ಶಾಸಕ ಉದಯ್ ಗೌಡ, ಮಹಾರಾಷ್ಟ್ರ ಕೊಲ್ಲಾಪುರ ಕಾರ್ಪೋರೇಟರ್ ಭರತ್, ಕೃಷಿ ಇಲಾಖೆ ಅಧಿಕಾರಿಗಳಾದ
ಅರುಣ್ , ಜಾದವ್, ಕೃಷಿ ಕೇಂದ್ರದ‌ ಮುಖ್ಯಸ್ಥ ಡಾ ರವೀಂದ್ರ, ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!