Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಕಾಂಗ್ರೆಸ್ ನಾಯಕರ ಒಳಜಗಳ: ಪುರಸಭೆ ಸ್ಥಾಯಿ ಸಮಿತಿಗೆ ಜಾ.ದಳದ ಲೋಕೇಶ್ ಆಯ್ಕೆ

ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದ ಪುರಸಭೆಯ ಕಾಂಗ್ರೆಸ್ ಸದಸ್ಯರು.. ಬಿಜೆಪಿ ಜೆಡಿಎಸ್ ಮೈತ್ರಿಕೂಟವನ್ನು ಬೆಂಬಲಿಸಿ ಜೆಡಿಎಸ್ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ ಕಾಂಗ್ರೆಸ್ ಸದಸ್ಯರು.. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್ ಮುಖಂಡ ಎಚ್.ಆರ್.ಲೋಕೇಶ್ ಆಯ್ಕೆ.. ಇವು ಕೆ.ಆರ್.ಪೇಟೆ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲಿ ನಡೆದ ಘಟನೆಗಳು….

ಶುಕ್ರವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷ ನಟರಾಜು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯನ್ನು ಚುನಾವಣೆ ನಡೆಸುವ ಮೂಲಕ ಅಂತಿಮಗೊಳಿಸಿದರು. 23 ಸದಸ್ಯ ಬಲದ ಕೆ.ಆರ್. ಪೇಟೆ ಪುರಸಭೆಯಲ್ಲಿ ಕಾಂಗ್ರೆಸ್ 10, ಜೆಡಿಎಸ್ 11, ಬಿಜೆಪಿ ಹಾಗೂ ಪಕ್ಷೇತರರು ತಲಾ ಒಂದೊಂದು ಸ್ಥಾನವನ್ನು ಪಡೆದಿದ್ದಾರೆ . ಕೆ.ಆರ್.ಪೇಟೆ ಪುರಸಭೆಯಲ್ಲಿ ಸದಸ್ಯರು 2 ಗುಂಪುಗಳಾಗಿ ಪ್ರತ್ಯೇಕ ಬಣಗಳನ್ನು ರಚಿಸಿಕೊಂಡಿದ್ದು, ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ. ಮಹೇಶ್ ಹಾಗೂ ಹಿರಿಯ ಸದಸ್ಯರಾದ ಕೆ.ಸಿ. ಮಂಜುನಾಥ್ ಬಣದಿಂದ ಕ್ರಮವಾಗಿ ಪಕ್ಷೇತರ ಸದಸ್ಯ ಶಾಮಿಯಾನ ತಿಮ್ಮೇಗೌಡ ಹಾಗೂ ಜೆಡಿಎಸ್ ಸದಸ್ಯ ಹೆಚ್.ಆರ್.ಲೋಕೇಶ್ ಆಯ್ಕೆ ಬಯಸಿದ್ದರು. ಅಂತಿಮವಾಗಿ ಪುರಸಭೆ ಅಧ್ಯಕ್ಷ ನಟರಾಜು ಸ್ಥಾಯಿಸಮಿತಿಗೆ ಅಧ್ಯಕ್ಷರನ್ನು ಕೈ ಎತ್ತಿಸುವ ಮೂಲಕ ಮತದಾನ ಮಾಡಿಸಿ ಆಯ್ಕೆ ಮಾಡಿದರು.

ಕಾಂಗ್ರೆಸ್ ಕೈ ಕೊಟ್ಟ ಸದಸ್ಯರು

ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್ ಪುರಸಭೆ ಸದಸ್ಯರಾದ ಕೆ.ಸಿ.ಮಂಜುನಾಥ್, ಡಿ.ಪ್ರೇಮ್ ಕುಮಾರ್, ಪ್ರವೀಣ್ ಶೆಟ್ಟಿ ಬಹಿರಂಗವಾಗಿ ಕೈ ಎತ್ತಿ ಮತದಾನ ಮಾಡುವ ಮೂಲಕ ಜೆಡಿಎಸ್ ಸದಸ್ಯ ಹೆಚ್.ಆರ್. ಲೋಕೇಶ್ ಅವರನ್ನು ಬೆಂಬಲಿಸಿದರೆ ಕಾಂಗ್ರೆಸ್ ಸದಸ್ಯ ಕೆ.ಆರ್.ರವೀಂದ್ರಬಾಬು ಸ್ಥಾಯಿಸಮಿತಿ ಅಧ್ಯಕ್ಷರ ಚುನಾವಣೆಯಿಂದ ದೂರ ಉಳಿದರೆ ಸದಸ್ಯೆ ಕಲ್ಪನಾ ದೇವರಾಜು ಲೋಕೇಶ್ ಮತ್ತು ಶಾಮಿಯಾನ ತಿಮ್ಮೇಗೌಡ ಇಬ್ಬರನ್ನು ಬೆಂಬಲಿಸಿ ಪತ್ರ ನೀಡಿ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಾಮಿಯಾನ ತಿಮ್ಮೇಗೌಡ ಅವರ ಪರವಾಗಿ ಜೆಡಿಎಸ್ ಸದಸ್ಯರಾದ ಬಿ.ಜಿ.ಗಿರೀಶ್ ಹಾಗೂ ಇಂದ್ರಾಣಿವಿಶ್ವನಾಥ್ ಮತಚಲಾಯಿಸಿದರೂ ಕೂಡ ಶಾಮಿಯಾನ ತಿಮ್ಮೇಗೌಡ ಕೇವಲ ಎಂಟು ಮತಗಳನ್ನು ಪಡೆಯಲು ಮಾತ್ರ ಸಾಧ್ಯವಾಯಿತು, ಕಾಂಗ್ರೆಸ್ ಬಂಡಾಯ ಸದಸ್ಯರ ಬೆಂಬಲ ಗಳಿಸಿ ಸ್ಥಾಯಿಸಮಿತಿ ಅಧ್ಯಕ್ಷರ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಜೆಡಿಎಸ್ ಸದಸ್ಯ ಹೆಚ್ಆರ್ ಲೋಕೇಶ್ ಬಂಡಾಯ ಸದಸ್ಯರ ಮತಗಳ ಜೊತೆಗೆ ಅಧ್ಯಕ್ಷ ಉಪಾಧ್ಯಕ್ಷರ ಮತಗಳನ್ನು ಪಡೆದು ಒಟ್ಟು 12 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದರು.

ಕೆ.ಆರ್.ಪೇಟೆ ತಾಲೂಕು ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಇಂದು ನಡೆದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಬಟಾಬಯಲಾಯಿತು.. ಮೊನ್ನೆ ತಾನೆ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿದ್ದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರ ಎದುರು ಮಾಜಿ ಶಾಸಕ ಕೆ ಬಿ ಚಂದ್ರಶೇಖರ್ ವಿರುದ್ಧ ದೂರಿನ ಸುರಿಮಳೆಯನ್ನೇ ಸುರಿಸಿ ಸಚಿವರ ಆಕ್ರೋಶಕ್ಕೆ ಗುರಿಯಾಗಿದ್ದ ಕೆ.ಸಿ. ಮಂಜುನಾಥ್ ಹಾಗೂ ಡಿ. ಪ್ರೇಮ್ ಕುಮಾರ್ ಇಂದು ಬಹಿರಂಗವಾಗಿ ಮಾಜಿ ಶಾಸಕ ಕೆ ಬಿ ಚಂದ್ರಶೇಖರ್ ಸಹೋದರ ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ. ಮಹೇಶ್ ವಿರುದ್ಧ ತಿರುಗಿ ಬಿದ್ದಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಾಮಿಯಾನ ತಿಮ್ಮೇಗೌಡ ಹಾಗೂ ಕಾಂಗ್ರೆಸ್ ಮುಖಂಡರಿಗೆ ಮರ್ಮಾಘಾತ ನೀಡಿದ್ದಾರೆ.

ಜೆಡಿಎಸ್ ನ ಇಬ್ಬರು ಸದಸ್ಯರು ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದರೂ ಕಾಂಗ್ರೆಸ್ ಚಿನ್ಹೆಯಿಂದ ಆಯ್ಕೆಯಾಗಿರುವ ನಾಲ್ವರು ಕಾಂಗ್ರೆಸ್ ಪುರಸಭಾ ಸದಸ್ಯರು ತಮ್ಮ ಪಕ್ಷದ ಅಭ್ಯರ್ಥಿಗೆ ಒಳೇಟು ನೀಡಿ ಸಂಭ್ರಮಿಸುತ್ತಿದ್ದಾರೆ..

ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಮೊದಲ ಎರಡೂವರೆ ವರ್ಷದ ಆಡಳಿತದ ಅವಧಿ ಭಾನುವಾರಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಇಂದು ಆಯ್ಕೆಯಾಗಿರುವ ಒಂದು ವರ್ಷ ಅವಧಿಯ ಸ್ಥಾಯಿಸಮಿತಿ ಅಧ್ಯಕ್ಷ ಸ್ಥಾನವು ಮುಂದುವರೆಯುವುದೇ ಇಲ್ಲ, ಅಧಿಕಾರವು ಭಾನುವಾರಕ್ಕೆ ಅಂತ್ಯವಾಗುವುದೇ ಎಂಬುದೇ ಜಿಜ್ಞಾಸೆಯಾಗಿದೆ. ಏಕೆಂದರೆ ಕೆ ಆರ್ ಪೇಟೆ ಪುರಸಭೆಯ ಅಧ್ಯಕ್ಷ ನಟರಾಜು ಹಾಗೂ ಉಪಾಧ್ಯಕ್ಷೆ ಗಾಯತ್ರಿ ಸುಬ್ಬಣ್ಣ ಅವರ ಆಡಳಿತ ಅವಧಿಯು ಭಾನುವಾರಕ್ಕೆ ಮುಕ್ತಾಯಗೊಳ್ಳುತ್ತಿದ್ದು ಬರುವ ಸೋಮವಾರದಿಂದ ಪಾಂಡವಪುರ ಉಪ ವಿಭಾಗಾಧಿಕಾರಿಗಳಾದ ನಂದೀಶ್ ಆಡಳಿತಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಒಟ್ಟಾರೆ ಇಂದು ನಡೆದ ಸ್ಥಾಯಿಸಮಿತಿ ಅಧ್ಯಕ್ಷರ ಚುನಾವಣೆಯು ಕೆ ಆರ್ ಪೇಟೆ ಕಾಂಗ್ರೆಸ್ ಒಳ ಜಗಳವನ್ನು ಬೀದಿಗೆ ತಂದು ಬಟಾ ಬಯಲು ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!