Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಬ್ಬುಕಟಾವು ಕೂಲಿ ಕಾರ್ಮಿಕರಿಗೆ ಮೂಲಸೌಕರ್ಯ ಒದಗಿಸಿ: ಡಾ.ಕುಮಾರ

2024-25ನೇ ಸಾಲಿನ ಕಬ್ಬು ಅರೆಯುವಿಕೆ ಪ್ರಕ್ರಿಯೆಯು ಜುಲೈ ಮಾಹೆಯ ಅಂತ್ಯಕ್ಕೆ  ಪ್ರಾರಂಭಗೊಳ್ಳಲಿರುವುದ ರಿಂದ ಕಬ್ಬು ಕಟಾವುಗೊಳಿಸಲು ಹೊರ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಕೂಲಿ ಕಾರ್ಮಿಕರು ಆಗಮಿಸುವ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಸೂಚಿಸಿದ್ದಾರೆ.

ಕಾರ್ಮಿಕರಿಗೆ ಕಾರ್ಖಾನೆಗಳ ಮೂಲಕ ಸುಸಜ್ಜಿತವಾದ ಮತ್ತು ವಾಸಕ್ಕೆ ಯೋಗ್ಯವಾದ ಸ್ಥಳಗಳಲ್ಲಿ ವಾಸದ ಮನೆಗಳ ವ್ಯವಸ್ಥೆ ಮಾಡುವುದು. ಕೂಲಿ ಕಾರ್ಮಿಕರು ವಾಸ ಮಾಡುವ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಶುದ್ಧ ಆಹಾರ, ತಾತ್ಕಾಲಿಕ ಶೌಚಾಲಯಗಳು ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವುದು. ಮಳೆಗಾಲವಾದ್ದರಿಂದ ಕೂಲಿ ಕಾರ್ಮಿಕರು ವಾಸ ಮಾಡುವ ಸ್ಥಳಗಳಲ್ಲಿ ಮಳೆ ನೀರು ನಿಲ್ಲದಂತೆ ಹಾಗೂ ಮಳೆಯಿಂದ ಯಾವುದೇ ಅನಾಹುತಗಳು ಸಂಭವಿಸದಂತೆ ಕ್ರಮಕೈಗೊಳ್ಳುವಂತೆ ಮಂಡ್ಯ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ನೀಡಿದ ಸೂಚನೆಗಳೇನು ? 

  • ಪ್ರಸ್ತುತ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದು, ಕಾರ್ಮಿಕರು ವಾಸ ಮಾಡುವ ಸ್ಥಳಗಳಲ್ಲಿ ಶುಚಿತ್ವಕ್ಕೆ ಬೇಕಾಗುವ ಸವಲತ್ತುಗಳನ್ನು ನೀಡಿ, ಕಾಲಕಾಲಕ್ಕೆ ರೋಗ ನಿಯಂತ್ರಣ ಸಿಂಪಡಣೆಗಳನ್ನು ಸಿಂಪಡಿಸುವುದು ಹಾಗೂ (Mosquito net) ಸೊಳ್ಳೆ ಪರದೆಗಳನ್ನು ವಿತರಿಸುವುದು.
  • ಕೂಲಿ ಕಾರ್ಮಿಕರ ಜೊತೆ ಆಗಮಿಸುವ ಅವರ ಕುಟುಂಬದ ಸದಸ್ಯರು ವೃದ್ಧರಾಗಿದ್ದಲ್ಲಿ ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಬಿ.ಪಿ, ಷುಗರ್ ಹಾಗೂ ಇತರೆ ಕಾಯಿಲೆಗಳಿದ್ದಲ್ಲಿ ಚಿಕಿತ್ಸಾ ಸೌಲಭ್ಯ ನೀಡುವುದು.
  • ಚಿಕ್ಕ ಮಕ್ಕಳಿದ್ದಲ್ಲಿ (0-6) ವರ್ಷದಳೊಗಿನ ಮಕ್ಕಳಿಗೆ ವ್ಯಾಕ್ಸಿನ್‌ ಗಳನ್ನು ನೀಡಲು ಸ್ಥಳೀಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ ಕಾಲಕಾಲಕ್ಕೆ ಸೌಲಭ್ಯಗಳನ್ನು ದೊರಕಿಸುವುದು ಮತ್ತು (0-6) ವರ್ಷದೊಳಗಿನ ಮಕ್ಕಳು ಕೂಲಿ ಕಾರ್ಮಿಕರೊಂದಿಗೆ ಕಬ್ಬು ಕಟಾವಿಗೆ ಹೋಗದಂತೆ ನಿರ್ಬಂಧ ವಿಧಿಸುವುದು, ಅಂತಹ ಮಕ್ಕಳಿಗೆ ಸ್ಥಳೀಯ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾತಿ ಮಾಡಲು ಕ್ರಮಕೈಗೊಳ್ಳುವುದು.
  • 6 ರಿಂದ 14 ವರ್ಷದೊಳಗಿನ ಮಕ್ಕಳು ಕೂಲಿ ಕಾರ್ಮಿಕರೊಂದಿಗೆ ಬಂದಲ್ಲಿ ಸ್ಥಳೀಯ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡುವುದು ಹಾಗೂ ತಾಲ್ಲೂಕು ಶಿಕ್ಷಣ ಅಧಿಕಾರಿಗಳ ಜೊತೆ ಸಮನ್ವಯವನ್ನು ಸಾಧಿಸಿಕೊಂಡು ಈ ಕಾರ್ಯವನ್ನು ಯಥಾವತ್ತಾಗಿ ಜಾರಿಗೊಳಿಸುವುದು.
  • ಕೂಲಿ ಕಾರ್ಮಿಕರ ಜೊತೆ ಆಗಮಿಸುವ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸ್ಥಳೀಯ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಸರ್ಕಾರಿ ಘೋಷಣಾ ಸೌಲಭ್ಯಗಳನ್ನು ಕಾಲ ಕಾಲಕ್ಕೆ ದೊರಕುವಂತೆ ಕ್ರಮ ಕೈಗೊಳ್ಳುವುದು.
  • ಕೂಲಿ ಕಾರ್ಮಿಕರು ಮಧ್ಯವರ್ತಿಗಳ ಕಮಿಷನ್ ಹಾವಳಿಗೆ ತುತ್ತಾಗುವುದರಿಂದ ಕಾರ್ಖಾನೆ ಅವರು ನೇರವಾಗಿ ಈಗಾಗಲೇ ಸರ್ಕಾರ ನಿರ್ದಿಷ್ಟ ಪಡಿಸಿರುವ ಕೂಲಿ ದರಗಳಂತೆ ತಮ್ಮ ಕಾರ್ಖಾನೆ ವ್ಯಾಪ್ತಿಯಲ್ಲಿ ಯಥಾವತ್ತಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದು ಹಾಗೂ ಕಾರ್ಮಿಕ ಇಲಾಖೆಯಿಂದ ಕೂಲಿ ಕಾರ್ಮಿಕರಿಗೆ ದೊರಕುವ ಸೌಲಭ್ಯಗಳನ್ನು ಕಾಲಕಾಲಕ್ಕೆ ಒದಗಿಸುವುದು ಮತ್ತು ಕೂಲಿ ಕಾರ್ಮಿಕರಿಗೆ ಕಬ್ಬು ಕಟಾವು ಮಾಡಲು ಸುರಕ್ಷಾ ಶೂಗಳು. ಸಾಧನಗಳು, ಗೌಸ್‌ಗಳನ್ನು ತಮ್ಮ ವ್ಯಾಪ್ತಿಯಲ್ಲಿ ನೀಡುವುದು.
  • ಕೂಲಿ ಕಾರ್ಮಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೂಲಿ ಆಧಾರದ ಮೇಲೆ ವಲಸೆ ಹೋಗುವುದರಿಂದ ಈ ಮೇಲ್ಕಂಡಂತೆ ತಿಳಿಸಿದ ಎಲ್ಲಾ ಸೌಲಭ್ಯಗಳು ಯಥಾವತ್ತಾಗಿ ಜಾರಿಯಾಗಲು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸೌಲಭ್ಯಗಳನ್ನು ಜಾರಿಗೊಳಿಸುವುದು.
  • ಕೂಲಿ ಕಾರ್ಮಿಕರು ಜಿಲ್ಲೆಗೆ ಆಗಮಿಸಿ ಕೆಲಸ ಮುಗಿಸಿಕೊಂಡು ತಮ್ಮ ಊರುಗಳಿಗೆ ಸೇರುವವರೆಗೂ ಆಯಾ ವ್ಯಾಪ್ತಿಯ ಕಾರ್ಖಾನೆಗಳಿದ್ದೇ ಸಂಪೂರ್ಣ ಜವಾಬ್ದಾರಿಯಾಗಿದ್ದು, ಯಾವುದೇ ಪ್ರಾಣ ಹಾನಿ ಹಾಗೂ ಇನ್ನಿತರ ಅವಘಡಗಳು ಸಂಭವಿಸದಂತೆ ಕ್ರಮವಹಿಸುವುದು.

ಮಂಡ್ಯ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು ನೀಡಿರುವ ನಿರ್ದೇಶನದಂತೆ ಸೌಲಭ್ಯಗಳನ್ನು ಯಥಾವತ್ತಾಗಿ ಜಾರಿಗೊಳಿಸುವುದು ಹಾಗೂ ಸಂಬಂಧಿಸಿದ ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ತಮ್ಮ ವ್ಯಾಪ್ತಿಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಖಾನೆಗಳೊಂದಿಗೆ ಸಮನ್ವಯ ಸಾಧಿಸಲು ಸೂಚಿಸಿದೆ ಹಾಗೂ ಪ್ರತಿ ಮಾಹೆವಾರು ಸಂಬಂಧಿಸಿದ ಕಾರ್ಖಾನೆಗಳ ಜೊತೆ ಸಭೆ ನಡೆಸಿ ವರದಿಯನ್ನು ಜಿಲ್ಲಾಧಿಕಾರಿ ಕಛೇರಿಗೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!