ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೆಪ್ಟೆಂಬರ್ 15 ರಂದು ಆಚರಿಸುತ್ತಿದ್ದು, ಮಕ್ಕಳಿಗೆ, ಸಾರ್ವಜನಿಕರಿಗೆ ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ತಿಳಿಸಿದರು.
ಮಂಡ್ಯ ಮಿಮ್ಸ್ ನ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
1997ರ ಸೆಪ್ಟೆಂಬರ್ 15 ರಂದು ವಿಶ್ವಸಂಸ್ಥೆಯು ವಿಶ್ವ ಪ್ರಜಾಪ್ರಭುತ್ವ ದಿನವೆಂದು ತೀರ್ಮಾನಿಸಿ ಘೋಷಣೆ ಮಾಡಿತು. ತದನಂತರ 2007ರಲ್ಲಿ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸುವುದಾಗಿ ಸಹಿ ಹಾಕಿ ಒಪ್ಪಂದ ಮಾಡಿಕೊಂಡವು ಎಂದರು.
ಕರ್ನಾಟಕ ಸರ್ಕಾರ ಈ ವರ್ಷ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವುದಾಗಿ ತಿಳಿಸಿತು. ಆದ್ದರಿಂದ ಈ ದಿನ ನಮ್ಮ ರಾಷ್ಟ್ರಕ್ಕೆ ಹಾಗೂ ಪ್ರಜಾಪ್ರಭುತ್ವ ಇರುವಂತಹ ಎಲ್ಲಾ ರಾಷ್ಟ್ರಗಳಿಗೂ ಪವಿತ್ರವಾದ ದಿನವಾಗಿದೆ ಎಂದರು.
ಯಾವುದೇ ಸರ್ಕಾರ ರಚನೆಯಾಗಬೇಕೆಂದರೆ ಪ್ರಜೆಗಳಿಂದ ಪ್ರತಿನಿಧಿಗಳು ಆಯ್ಕೆಯಾಗಿ ಮುಂದೆ ಸರ್ಕಾರವನ್ನು ರಚಿಸಿ ನಡೆಸಿಕೊಂಡು ಹೋಗಲಾಗುತ್ತದೆ. ಈ ಮೂಲಕ ಪ್ರಜೆಗಳ ತೀರ್ಮಾನದ ಮಹತ್ವವನ್ನು ತಿಳಿಯಬಹುದು ಎಂದರು.
ಸಂವಿಧಾನ ಶಿಲ್ಪಿಯಾದ ಡಾ ಬಿ ಆರ್ ಅಂಬೇಡ್ಕರ್ ರವರು ಭಾರತ ಸಂವಿಧಾನದಲ್ಲಿ ಪ್ರಜಾಪ್ರಭುತ್ವವನ್ನು ರಚಿಸುವ ಮೂಲಕ ದೇಶದ ಪ್ರತಿಯೊಬ್ಬರ ಬದುಕಿಗೆ ಶಕ್ತಿ ತುಂಬುವಂತಹ ಕೆಲಸವನ್ನು ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಕಷ್ಟು ಶ್ರಮಿಸಿದ್ದಾರೆ. ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂವಿಧಾನವನ್ನು ಪ್ರಶಂಸಿಸುವಂತೆ ಮಾಡಿದ್ದಾರೆ. ನಮ್ಮ ಭಾರತ ದೇಶಕ್ಕೆ ಸಂವಿಧಾನವನ್ನು ನೀಡಿದ ಮಹಾನ್ ವ್ಯಕ್ತಿಯಾದ ಇವರನ್ನು ಪ್ರತಿಯೊಬ್ಬರು ನೆನೆಯಬೇಕು ಎಂದರು.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಣೆಯ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ಅತೀ ಉದ್ದವಾದ ಮಾನವ ಸರಪಳಿಯ ಮೂಲಕ ಅಧಿಕೃತವಾಗಿ ಪ್ರಜಾಪ್ರಭುತ್ವದ ಅರಿವನ್ನು ಮೂಡಿಸಲಾಗುವುದು. ಮಾನವ ಸರಪಳಿಯು ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೂ ಏಕಕಾಲದಲ್ಲಿ ಜಾಗೃತಿ ಮೂಡಿಸಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಮದ್ದೂರಿನ ನಿಡಘಟ್ಟ ಗ್ರಾಮದಿಂದ ಶ್ರೀರಂಗಪಟ್ಟಣದ ಸಿದ್ದಲಿಂಗಾಪುರದವರೆಗೂ ಸುಮಾರು 65 ಕಿ. ಮೀ. ವರೆಗೂ ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಮಾನವ ಸರಪಳಿಯ ನಿರ್ಮಾಣ ಮಾಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ಬಹಳ ಯಶಸ್ವಿಯಾಗಿ ಮೂಡಿಸಿದಂತಹ ಜಿಲ್ಲಾಡಳಿತ, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ಅಭಿನಂದನೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ ಅವರು ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದೀ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ:
ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ; ನಮ್ಮ ಸಂವಿಧಾನ ಸಭೆಯಲ್ಲಿ 1949ನೆಯ ಇಸವಿ ನವೆಂಬರ್ ತಿಂಗಳ ಇಪ್ಪತ್ತಾರನೆಯ ತಾರೀಖಾದ ಈ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ ಎಂದು ಭಾರತದ ಸಂವಿಧಾನದ ಪೀಠಿಕೆಯನ್ನು ಬೋದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಶುಗರ್ ಸಕ್ಕರೆ ಕಂಪನಿಯ ಅಧ್ಯಕ್ಷ ಸಿ ಡಿ ಗಂಗಾಧರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ರೆಡ್ ಕ್ರಾಸ್ ಸಂಸ್ಥೆಯ ಡಾ ಮೀರಾಶಿವಲಿಂಗಯ್ಯ ಅವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.