Thursday, September 19, 2024

ಪ್ರಾಯೋಗಿಕ ಆವೃತ್ತಿ

ಪುಸ್ತಕ ಓದುವ ಅಭಿರುಚಿಯಿಂದ ಅಗಾಧ ಜ್ಞಾನ- ಡಾ. ಲತಾ ರಾಜಶೇಖರ್

ಪುಸ್ತಕ ಓದುವ ಅಭಿರುಚಿಯಿಂದ ಅಗಾಧ ಜ್ಞಾನ ಲಭಿಸುತ್ತದೆ. ನಮ್ಮ ಆಲೋಚನೆಗಳು ಮತ್ತು ವ್ಯಕ್ತಿತ್ವ ವಿಕಾಸವಾಗುತ್ತದೆ. ಜೊತೆಗೆ ಬದುಕು ಉತ್ಕೃಷ್ಟಗೊಳ್ಳುತ್ತದೆ ಎಂದು ಖ್ಯಾತ ಮಹಾಕವಯತ್ರಿ ಡಾ. ಲತಾ ರಾಜಶೇಖರ್ ಅಭಿಪ್ರಾಯಪಟ್ಟರು.
ಮಂಡ್ಯ ನಗರದ ರೈತಬಂಧು ಮಂಡ್ಯ ಫೌಂಡೇಷನ್ ಸಭಾಂಗಣದಲ್ಲಿ ಪರಿಚಯ ಪ್ರಕಾಶನ, ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ, ಜಿಲ್ಲಾ ಯುವ ಬರಹಗಾರರ ಬಳಗ, ಭೂಮಿ ಬೆಳಗು ಸಾಂಸ್ಕೃತಿಕ ಸಂಘ, ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದಿನಿಂದ ಆರಂಭವಾದ ‘ಪರಿಚಯ ಪುಸ್ತಕ ಹಬ್ಬ’ ಉದ್ಘಾಟಿಸಿ  ಅವರು ಮಾತನಾಡಿದರು.
ಒಂದು ಉತ್ತಮ ಪುಸ್ತಕ ಒಬ್ಬ ಉತ್ತಮ ಗುರುವಿಗೆ ಸಮಾನ. ಆದ್ದರಿಂದ ಪುಸ್ತಕ ಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು. ಜನರು ಮೊಬೈಲ್, ಟಿವಿಗೆ ಅಂಟಿಕೊಂಡ ಮೇಲೆ ಪುಸ್ತಕ ಓದುವ ಆಸಕ್ತಿ ಕಡಿಮೆಯಾಗಿದೆ ಎಂದು‌ ವಿಷಾದಿಸಿದ ಅವರು, ಕನ್ನಡದಲ್ಲಿ ಪ್ರತಿನಿತ್ಯ ನೂರಾರು ಪುಸ್ತಕ ಪ್ರಕಟವಾಗುತ್ತಿವೆ. ಇವು ಓದುಗರಿಗೆ ತಲುಪಬೇಕು. ಪುಸ್ತಕ ಸಂಸ್ಕೃತಿ ಉಳಿಯಬೇಕು ಎಂದರು.
ಪುಸ್ತಕ ಹಬ್ಬ ನಡೆಯುವುದರಿಂದ ಓದುವ ಅಭಿರುಚಿ ಬೆಳೆಯುದಲ್ಲದೆ, ಮುದ್ರಣ ವೆಚ್ಚ ಮತ್ತು ಕಾಗದ ಬೆಲೆ ಹೆಚ್ಚಳದಿಂದ ಸಂಕಷ್ಟ ಸ್ಥಿತಿಯಲ್ಲಿ‌ರುವ ಪ್ರಕಾಶಕರಿಗೆ ಅನುಕೂಲವಾಗುತ್ತದೆ. ಪುಸ್ತಕೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಓದುಗರಿಗೆ ಉತ್ತಮ‌ ಪುಸ್ತಕಗಳು ಸುಲಭವಾಗಿ ಲಭ್ಯವಾಗುತ್ತವೆ. ಆಗಾಗ ಇಂತಹ ಪುಸ್ತಕ ಮಾರಾಟ ನಡೆಯಲಿ ಎಂದು ಆಶಿಸಿದರು.
ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಜನರಲ್ಲಿ  ಓದುವ ಹವ್ಯಾಸ ಇನ್ನೂ ಜೀವಂತವಾಗಿದೆ. ಆದರೆ, ಜನರ ಆಸಕ್ತಿಯ ಪುಸ್ತಕಗಳು ಅವರಿರುವ ಕಡೆ ಖರೀದಿಗೆ ಲಭ್ಯವಿಲ್ಲ. ಈ ದಿಕ್ಕಿನಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಆಗಾಗ ನಡೆದರೆ ಲೇಖಕರಿಗೆ, ಪ್ರಕಾಶಕರಿಗೆ, ಓದುಗರಿಗೆ ತುಂಬ ಅನುಕೂಲವಾಗುತ್ತದೆ. ಪುಸ್ತಕ‌ ಸಂಸ್ಕೃತಿಯು ಚಳವಳಿ ಸ್ವರೂಪ ಪಡೆಯುತ್ತದೆ ಎಂದರು.
ಕನ್ನಡ ಸಾಹಿತ್ಯದ ಎಲ್ಲ ಲೇಖಕರ ವಿವಿಧ ಪ್ರಕಾರದ ಪುಸ್ತಕಗಳು ಒಂದೇ ಸೂರಿನಡಿಯಲ್ಲಿ ಓದುಗರಿಗೆ ದೊರಕುವ ಸಮರ್ಪಕ‌ ಜಾಲ ವ್ಯವಸ್ಥೆ  ಇಲ್ಲ. ಆದ್ದರಿಂದ, ಸರ್ಕಾರ ಗ್ರಂಥಾಲಯ ಇಲಾಖೆಯ ಮೂಲಕ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಮಳಿಗೆ ಸ್ಥಾಪಿಸಬೇಕು. ಲೇಖಕರಿಂದ ಪುಸ್ತಕ ಖರೀದಿಸುವ ಜೊತೆಗೆ ಸರ್ಕಾರದ ಎಲ್ಲ ಅಕಾಡೆಮಿ, ಪ್ರಾಧಿಕಾರ, ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪುಸ್ತಕಗಳು ಓದುಗರಿಗೆ ಕಡಿಮೆ ದರದಲ್ಲಿ ಲಭಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ ಎಂ. ಯೋಗೀಶ್, ಚಲನಚಿತ್ರ ನಿರ್ದೇಶಕ ಎಂ.ಜಿ. ವಿನಯಕುಮಾರ್, ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎನ್. ರಾಜೇಂದ್ರಸಿಂಗ್ ಬಾಬು ಮಾತನಾಡಿದರು. ಪರಿಚಯ ಪ್ರಕಾಶನದ ಸಂಸ್ಥಾಪಕ ಎಂ.ಎನ್. ಶಿವಕುಮಾರ್, ರಾಷ್ಟ್ರ ಯುವ  ಪ್ರಶಸ್ತಿ ಪುರಸ್ಕೃತೆ ಕೆ.ಪಿ. ಅರುಣಕುಮಾರಿ, ಯುವ ಕವಿ‌ ಮೊಹಮ್ಮದ್ ಅಜರುದ್ದೀನ್, ಕಲಾವಿದ ನಾರಾಯಣಸ್ವಾಮಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕವಯತ್ರಿ ಡಾ. ಲತಾ ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು.
ಮಂಡ್ಯನಗರದ ವಿ.ವಿ. ರಸ್ತೆಯ ಎರಡನೆಯ ತಿರುವಿನಲ್ಲಿರುವ ರೈತಬಂಧು ಮಂಡ್ಯ ಫೌಂಡೇಷನ್ ಸಭಾಂಗಣದಲ್ಲಿ‌ ಇಂದಿನಿಂದ ಮೂರು ದಿನಗಳ ಕಾಲ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆಯ ವರೆಗೆ ಕನ್ನಡ ಪುಸ್ತಕ‌ಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಕನ್ನಡ ಸಾಹಿತ್ಯದ ವಿವಿಧ ಪ್ರಕಾರದ ಪುಸ್ತಕಗಳನ್ನು ಓದುಗರು ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಜೊತೆಗೆ ‘ಶೆಲ್ಪಿ ಕಾರ್ನರ್’ನಲ್ಲಿ ಓದುಗರು ತಾವು ಖರೀದಿಸಿದ ತಮ್ಮ ನೆಚ್ಚಿನ ಪುಸ್ತಕದೊಂದಿಗೆ ‘ಶೆಲ್ಪಿ’ ತೆಗೆದುಕೊಂಡು ಸಂಭ್ರಮಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9916894417 ಸಂಪರ್ಕಿಸಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!