Friday, September 20, 2024

ಪ್ರಾಯೋಗಿಕ ಆವೃತ್ತಿ

ಪಾಕಿಸ್ತಾನದ ಉಗ್ರರ ನೆಲೆ ಮೇಲೆ ಇರಾನ್‌ ಕ್ಷಿಪಣಿ ದಾಳಿ

ಪಾಕಿಸ್ತಾನದ ಸುನ್ನಿ ತೀವ್ರಗಾಮಿ ಗುಂಪು ಜೈಶ್ ಅಲ್-ಅದ್ಲ್‌ಗೆ ಸೇರಿದ ನೆಲೆಗಳನ್ನು  ಗುರಿಯಾಗಿಸಿಕೊಂಡು ಇರಾನ್‌ ಕ್ಷಿಪಣಿ ದಾಳಿ ನಡೆಸಿದ್ದು, ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ ಎಂದು ಪಾಕಿಸ್ತಾನ ತಿಳಿಸಿದೆ. ಕಳೆದ ಕೆಲ ದಿನಗಳಿಂದ ಇರಾನ್, ಸಿರಿಯಾ ಮತ್ತು ಇರಾಕ್ ಮೇಲೆ ಇದೇ ರೀತಿಯ ದಾಳಿಯನ್ನು ನಡೆಸಿತ್ತು.

ಪಾಕಿಸ್ತಾನದ ಸುನ್ನಿ ತೀವ್ರಗಾಮಿ ಗುಂಪು ಜೈಶ್ ಅಲ್-ಅದ್ಲ್‌ಗೆ ಸೇರಿದ ನೆಲೆಗಳ ಮೇಲೆ ಕಾರ್ಯಾಚರಣೆಗೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಇರಾನ್‌ನ ಸರ್ಕಾರಿ ಮಾದ್ಯಮಗಳು ವರದಿ ಮಾಡಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ದಾಳಿಯನ್ನು ದೃಢಪಡಿಸಿದ್ದು, ಇದು ಪಾಕ್‌ನ ವಾಯುಪ್ರದೇಶದ ಮೇಲೆ ನಡೆದ ಪ್ರಚೋದಿತ ದಾಳಿ ಎಂದು ಹೇಳಿಕೊಂಡಿದ್ದು, ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ. ಈ ದಾಳಿಯು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ವಾಯುನೆಲೆಯ ನಿಯಮಗಳನ್ನು ಉಲ್ಲಂಘಿಸಿ ಇರಾನ್‌ ದಾಳಿ ನಡೆಸಿದ್ದು, ಇಂತಹ ಕ್ರಮಗಳು ಉಭಯ ದೇಶಗಳ ನಡುವೆ ಗಂಭೀರ ಪರಿಣಾಮ ಉಂಟುಮಾಡಬಹುದು ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯು ತಿಳಿಸಿದೆ. ಇರಾನ್ ರಾಯಭಾರಿಯನ್ನು ಕರೆಸಿಕೊಂಡಿರುವ ಪಾಕ್‌, ಕ್ಷಿಪಣಿ ದಾಳಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

ಪಾಕಿಸ್ತಾನ ಹಾಗೂ ಇರಾನ್ ನಡುವೆ ಸಂವಹನಕ್ಕೆ ಹಲವು ಮಾರ್ಗಗಳಿದ್ದರೂ, ಈ ದಾಳಿಯನ್ನು ನಡೆಸಿರುವುದು  ಹೆಚ್ಚು ಕಳವಳಕಾರಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಭಯೋತ್ಪಾದಕತೆ ಈ ಭಾಗದ ಎಲ್ಲ ದೇಶಗಳಿಗೆ ಸಮಾನ ಅಪಾಯ ಎನ್ನುವುದನ್ನು ಪಾಕಿಸ್ತಾನ ಪ್ರತಿಪಾದಿಸುತ್ತಲೇ ಬಂದಿದೆ ಹಾಗೂ ಇದರ ತಡೆಗೆ ಪರಸ್ಪರ ಸಮನ್ವಯದ ಕ್ರಮ ಅಗತ್ಯವಾಗಿದೆ. ಇಂಥ ಏಕಪಕ್ಷೀಯ ಕೃತ್ಯಗಳು ನೆರೆಹೊರೆಯ ದೇಶಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ಪೂರಕವಲ್ಲ ಹಾಗೂ ದ್ವಿಪಕ್ಷೀಯ ವಿಶ್ವಾಸಕ್ಕೆ ಗಂಭೀರವಾಗಿ ಧಕ್ಕೆ ತರುವಂಥದ್ದು ಎಂದು ಖಂಡಿಸಿದೆ.

ತೀವ್ರಗಾಮಿ ಸಂಘಟನೆಗಳನ್ನು ಪಾಕಿಸ್ತಾನ ಪೋಷಿಸುತ್ತಿದೆ ಎಂದು ಇರಾನ್‌ ಈ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿತ್ತು.  ‘ಜೈಶ್ ಅಲ್ ಅದ್ಲ್‌‘ ಪಾಕಿಸ್ತಾನದ ಬಲೂಚಿಯಲ್ಲಿ ನೆಲೆಯುರಿರುವ ಒಂದು ತೀವ್ರಗಾಮಿ ಸಂಘಟನೆಯಾಗಿದ್ದು, 2012ರಲ್ಲಿ ಸ್ಠಾಪನೆಗೊಂಡಿತ್ತು. ಜೈಶ್ ಅಲ್ ಅದ್ಲ್‌  ತೀವ್ರಗಾಮಿ ಗುಂಪನ್ನು ಹೆಡೆಮುರಿ ಕಟ್ಟಲು ಇರಾನ್ ಪ್ರಯತ್ನಿಸಿದ್ದು,  ಅದರ ವಿರುದ್ಧ ಗಡಿಯಲ್ಲಿ ಯುದ್ಧ ಸಾರಿತ್ತು. ತೀವ್ರಗಾಮಿ ಗುಂಪಿನ ನೆಲೆಗಳನ್ನು ನಾಶ ಮಾಡಲು ಇರಾನ್‌ಗೆ ಕ್ಷಿಪಣಿ ದಾಳಿ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ.

ತಿಂಗಳ ಆರಂಭದಲ್ಲಿ ಇರಾನ್‌ನಲ್ಲಿ ಎರಡು ಆತ್ಮಾಹುತಿ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಕನಿಷ್ಠ 84 ಜನರು ಮೃತಪಟ್ಟಿದ್ದರು ಮತ್ತು 284 ಜನರು ಗಾಯಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್‌ ಕ್ಷಿಪಣಿ ದಾಳಿ ನಡೆಸಿತ್ತು.

ಗಾಝಾದಲ್ಲಿನ ಸಂಘರ್ಷದ ಮಧ್ಯೆ ಈ ಘಟನೆಯು ಇರಾಕ್‌ ಮತ್ತು ಇರಾನ್‌ ನಡುವಿನ ಸಂಬಂಧವನ್ನು ಹಳಸುವಂತೆ ಮಾಡಿದೆ. ಎರಡೂ ದೇಶಗಳು ರಾಜತಾಂತ್ರಿಕ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವು. ಇರಾನ್ ಈ ಹಿಂದೆ ಜೈಶ್ ಅಲ್-ಅದ್ಲ್ ವಿರುದ್ಧ  ಗಡಿಯಲ್ಲಿ ಕದನಗಳಲ್ಲಿ ತೊಡಗಿಸಿಕೊಂಡಿದ್ದರೂ, ಗಡಿಯಾಚೆಗಿನ ಕ್ಷಿಪಣಿ ದಾಳಿಯ ಎಂದಿಗೂ ನಡೆಸಿರಲಿಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!