Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೈ ಭೀಮ್…. ಜೈ ಶ್ರೀ ರಾಮ್…. ಶರಣು ಶರಣಾರ್ಥಿ……

ವಿವೇಕಾನಂದ ಎಚ್.ಕೆ

ಜೈ ಭೀಮ್,
ಜೈ ಶ್ರೀ ರಾಮ್,
ಶರಣು ಶರಣಾರ್ಥಿ,
ಹರಿ ಓಂ,
ಹರ ಹರ ಮಹದೇವ್,
ಓಂ ನಮಃ ಶಿವಾಯ,
ಹರೇ ರಾಮ ಹರೇ ಕೃಷ್ಣ,
ಜೈ ಹನುಮಾನ್,
ಜೈ ಭಗವಾನ್,
ಜೈ ಸದ್ಗುರು,
ನಮೋ ಮಂಜುನಾಥ,
ನಮೋ ವೆಂಕಟೇಶ,
ಸ್ವಾಮಿ ಶರಣಂ ಅಯ್ಯಪ್ಪ ,
ಓಂ ಶಕ್ತಿ,
ಓಂ ಕಲ್ಕಿ,
ನಮೋ ಬುದ್ಧಾಯ,
ಲಾಲ್ ಸಲಾಂ,
ಜೈ ಭಾರತ್,
ಓಂ ಶಕ್ತಿಮಾತಾ,
ಸಾಧು ಸಾಧು ಸಾಧು,
ಜೈ ಸನಾತನ,
ಜೈ ಬಸವೇಶ್ವರ,…….

ಹೀಗೆ ದೂರವಾಣಿಯಲ್ಲಿ ಅಥವಾ ನೇರವಾಗಿ ಭೇಟಿಯಾದಾಗ ಭಾರತೀಯ ಸಮಾಜದಲ್ಲಿ ವಿನಿಮಯ ಮಾಡಿಕೊಳ್ಳುವ ಪದಗಳ ಉದಾಹರಣೆ ಇದು. ಈ ದೇಶದ ವೈವಿಧ್ಯತೆಯನ್ನು ಸಾರುತ್ತದೆ ಮತ್ತು ಅದೇ ಸಮಯದಲ್ಲಿ ವಿಭಜಕ ಮನೋಭಾವವನ್ನು ಸಹ ಸೂಚಿಸುತ್ತದೆ….

ಈ ಪದಗಳ ವಿನಿಮಯ ಅನೇಕ ಅರ್ಥಗಳನ್ನು ಸಹ ಸೂಚಿಸುತ್ತದೆ ಅದು ಭಕ್ತಿಯ ಸಂಕೇತವು ಆಗಿರಬಹುದು ಸ್ವಾಭಿಮಾನವು ಆಗಿರಬಹುದು ಮೂಡನಂಬಿಕೆಯೂ ಆಗಿರಬಹುದು ಸೈದ್ಧಾಂತಿಕವೂ ನಿಲುವುಗಳು, ಸಂಘಟನಾತ್ಮಕ ಶಕ್ತಿಯು ಆಗಿರಬಹುದು ಭಯದ ಸಂಕೇತವು ಆಗಿರಬಹುದು ಗುಲಾಮಿತನದ ಮನೋಭಾವವು ಆಗಿರಬಹುದು ರಾಜಕೀಯವು ಆಗಿರಬಹುದು……

ಈ ಎಲ್ಲಾ ಮಾನಸಿಕ ಸಂಕೋಲೆಗಳನ್ನ ಬಿಡಿಸಿಕೊಂಡು ಸ್ವಚ್ಛಂದ ಮಾನವೀಯ – ನಾಗರಿಕ – ಜೀವಪರ ನಿಲುವುಗಳಲ್ಲಿ ಜೀವನ ದರ್ಶನ ಮಾಡುವುದು ಒಂದು ಅದ್ಭುತ ಅನುಭವ. ಹುಟ್ಟುವ ಮಗು ಆ ಕ್ಷಣದಿಂದಲೇ ಅನೇಕ ಸಂಬಂಧಗಳ ಬಲೆಯೊಳಗೆ ಸಿಲುಕಿ ಬಿಡುತ್ತದೆ ತನ್ನ ಬದುಕನ್ನು ಸ್ವಚ್ಛಂದವಾಗಿ ಅನುಭವಿಸಲು ಈ ಕಲುಷಿತ ವಾತಾವರಣ ಬಿಡುವುದಿಲ್ಲ.ಬೆಳೆಯುತ್ತಾ ಬೆಳೆಯುತ್ತಾ ಸಂಕುಚಿತವಾಗುತ್ತಾ ಸಾಗುತ್ತದೆ…….

ನಾವು ಭಾವಿಸುವ ಬೆಳವಣಿಗೆ, ನಾವು ನಿರೀಕ್ಷಿಸುವ ಅಭಿವೃದ್ಧಿ, ನಮ್ಮ ಆಶಯದ ಸಾಧನೆ ವಾಸ್ತವಿಕವಾಗಿ ಬಹುತೇಕ ವಸ್ತು ಸಂಸ್ಕೃತಿಯ ಯಶಸ್ಸನ್ನು ಅವಲಂಬಿಸಿರುತ್ತದೆ. ಅದರ ಪರಿಣಾಮವೇ ಮನುಷ್ಯನೊಳಗೆ ಸಣ್ಣತನ ಸೃಷ್ಟಿಯಾಗಿ ಬಿಡುತ್ತದೆ. ದ್ವೇಷ, ಅಸೂಯೆ, ಶ್ರೇಷ್ಠತೆಯ ವ್ಯಸನ, ದುರಾಸೆ ಇವುಗಳು ಮೇಲುಗೈ ಪಡೆಯುತ್ತದೆ. ಆದರೂ ಈ ವಾಸ್ತವ ಬದುಕಿನಲ್ಲಿ ಈ ಎಲ್ಲದರ ನಡುವೆ ನಾವು ಜೀವನ ಸಾಗಿಸಲೇಬೇಕಿದೆ. ಆದರೆ ವೈಯಕ್ತಿಕ ಮಟ್ಟದಲ್ಲಿ ಈ ಬಲೆಯೊಳಗೆ ಸಿಲುಕದೆ ಅಂತರ್ಯದಲ್ಲಿ ವಿಶಾಲ ಮನೋಭಾವವನ್ನು , ಮುಕ್ತ ವಾತಾವರಣವನ್ನು ಉಳಿಸಿಕೊಂಡು, ಬೆಳೆಸಿಕೊಂಡು ನಮ್ಮ ಚಿಂತನೆಗಳನ್ನ ಹೆಚ್ಚು ವೈಜ್ಞಾನಿಕವಾಗಿ ವೈಚಾರಿಕವಾಗಿ ಈ ಪ್ರಕೃತಿಯ ಮೂಲಕ್ಕೆ ನಿಷ್ಠರಾಗಿ ಬದುಕಬೇಕಿದೆ.

ಮೇಲಿನ ಘೋಷಣೆಗಳು ಗೌರವ ಪೂರ್ವಕವಾಗಿ ನಮ್ಮ ತನ್ನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇರುವುದಾದರೆ ಅದು ಸ್ವಾಗತ ಅಥವಾ ಸಹನೀಯ. ಆದರೆ ಅದು ವಿಭಜಕ ಮನೋಭಾವದ ಇತರರನ್ನು ಕೀಳಾಗಿ ಕಾಣುವ ಅಥವಾ ಇತರರಲ್ಲಿ ದ್ವೇಷವನ್ನ ಸೃಷ್ಟಿ ಮಾಡುವ ರೀತಿಯಲ್ಲಿ ಆ ಪದಗಳ ಪ್ರಯೋಗವಾದರೆ ಅದು ನಿಜಕ್ಕೂ ದುರಾದೃಷ್ಟಕರ……

ಈ ರೀತಿಯ ಪದಗಳ ಹೆಚ್ಚು ಪ್ರಯೋಗ ಮಾಡುವವರನ್ನು ಗಮನಿಸಿ ನೋಡಿ. ಅವರ ಬಗ್ಗೆ ಅಭಿಮಾನ, ಪ್ರೀತಿಗಿಂತ ಒಂದು ರೀತಿಯ ಭಯ ನಮ್ಮಲ್ಲಿ ಆವರಿಸುತ್ತದೆ. ಏಕೆಂದರೆ ಬಹುತೇಕ ಅವರ ಘೋಷಣೆಗಳು ಅಕ್ರಮಣಕಾರಿಯಾಗಿರುತ್ತದೆ. ಇದು ಇತರರಲ್ಲಿ ಮತ್ತಷ್ಟು ಅಭದ್ರತೆ ಕಾಡಲು ಶುರುವಾಗುತ್ತದೆ…..

ಒಟ್ಟಿನಲ್ಲಿ ಈ ಪದ ಪ್ರಯೋಗ ಸಂಪೂರ್ಣ ತಪ್ಪು ಎಂದು ಹೇಳುತ್ತಿಲ್ಲ. ಆದರೆ ಅದು ನಮ್ಮ ನಾಗರೀಕ ಸಮಾಜದ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಯ ಆಶಯಗಳಿಗೆ ಪೂರಕವಾಗಿದ್ದರೆ ಮಾತ್ರ ಅದನ್ನು ಸ್ವೀಕರಿಸಬಹುದು. ಏಕೆಂದರೆ ಎಲ್ಲ ತತ್ವ ಸಿದ್ಧಾಂತಗಳಿಗಿಂತ ಮಾನವೀಯತೆಯೇ ಅತ್ಯಂತ ಶ್ರೇಷ್ಠ ಜೀವಪರ ನಿಲುವುಗಳನ್ನು ಹೊಂದಿರುತ್ತದೆ. ಸೈದ್ದಾಂತಿಕ,ಧಾರ್ಮಿಕ, ರಾಜಕೀಯ ಭಿನ್ನಾಭಿಪ್ರಾಯಗಳು ಈಗಿನ ಆಧುನಿಕ ಕಾಲದಲ್ಲಿ ಈ ಸಮಾಜವನ್ನು ಮತ್ತಷ್ಟು ನೆಮ್ಮದಿಯಿಂದ ದೂರ ತೆಗೆದುಕೊಂಡು ಹೋಗಲು ನಾವು ಬಿಡಬಾರದು.

ಏನೇ ಆಗಲಿ ಸದಾ ಶಾಂತಿ ಪ್ರೀತಿ ಸಹನೆಯತ್ತ ಎಲ್ಲರ ಮನಸ್ಸುಗಳು ಹರಿಯಲಿ. ಇರುವ ಜೀವನ ಸಮಯದಲ್ಲಿ ನೆಮ್ಮದಿಯಿಂದ, ತೃಪ್ತಿಯಿಂದ ಬದುಕೋಣ. ಇಂದಿನ ಸಂಘರ್ಷಮಯ ವಾತಾವರಣದಲ್ಲಿ ನಮ್ಮ ಸಂತೋಷದ ದಿನಗಳು ಬಹಳಷ್ಟು ಕಡಿಮೆಯಾಗುತ್ತಿವೆ. ಆ ನಗುವಿನ ದಿನಗಳು ಹೆಚ್ಚಾಗಲಿ ಅದಕ್ಕೆ ನಾವೆಲ್ಲರೂ ಮನಸ್ಸುಗಳ ಅಂತರಂಗದ ಚಳುವಳಿಯನ್ನು ಕಟ್ಟೋಣ ಎಂದು ಮನವಿ ಮಾಡಿಕೊಳ್ಳುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!