ಇತ್ತೀಚಿಗೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಹಿರೇಕೋಡಿ ನಂದಿ ಪರ್ವತ ಆಶ್ರಮದಲ್ಲಿ ನಡೆದ 108 ಕಾಮಕುಮಾರ ನಂದಿ ಮಹಾರಾಜ ಜೈನ ಮುನಿಗಳ ಹತ್ಯೆ ಖಂಡಿಸಿ ಮಂಡ್ಯನಗರದಲ್ಲಿ ಜೈನ ಸಮುದಾಯದವರು ಮಂಗಳವಾರ ಪ್ರತಿಭಟನೆ ನಡೆಸಿದರು.
ಶ್ರೀಅನಂತನಾಥ ಸ್ವಾಮಿ ದಿಗಂಬರ ಜೈನ ಸಮಾಜದ ನೇತೃತ್ವದಲ್ಲಿ ಮಂಡ್ಯನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಅಹಿಂಸೆಯೇ ಪರಮ ಧರ್ಮ ತತ್ವಕ್ಕೆ ಕಟಿಬದ್ಧರಾಗಿ, ವಿಶ್ವಕ್ಕೆ ಶಾಂತಿ ಬೋಧಿಸಿದ ಜೈನ ಮತ, ಶಾಂತಿ ಸೌಹಾರ್ದತೆಗೆ ಕಾರಣವಾಗಿದ್ದು, ಪಶು, ಪಕ್ಷಿಗಳಾಗಿ ಸಕಲ ಜೀವರಾಶಿಗಳಿಗೆ ತೊಂದರೆ ಬಯಸದ ಆದರ್ಶ ಸಮಾಜವಾಗಿದೆ, ಜೈದಿಗಂಬರ ಮುನಿಗಳ ಸನ್ಯಾಸಕ್ಕೆ ಶ್ರೇಷ್ಠ 108 ಗುಣಪಾಲಕರಾದ ದಿಗಂಬರ ಮುನಿಗಳು ನಿದರ್ಶನರಾಗಿದ್ದು, ನಂದಿ ಆಶ್ರಮದಲ್ಲಿ ಆಚಾರ್ಯ ಕಾಮ ಕುಮಾರನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಸಮಾಜವೇ ತಲೆ ತಗ್ಗಿಸುವ ವಿಚಾರ ಎಂದು ಖಂಡಿಸಿದರು.
ನಂದಿ ಮಹಾರಾಜರ ಹತ್ಯೆ ಮಾಡಿದ ದುರುಳರಿಗೆ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಕಾನೂನು ಕ್ರಮ ಜರುಗಿಸಬೇಕು, ಆರೋಪಿಗಳು ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ ಶಿಕ್ಷೆ ನೀಡಬೇಕಾಗಿದೆ ಎಂದು ಒತ್ತಾಯಿಸಿದರು. ಇನ್ನು ಮುಂದೆ ಜೈನ ಮುನಿಗಳು ಹಾಗೂ ಸನ್ಯಾಸಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ನೇತೃತ್ವವನ್ನು ಜೈನ ಸಮಾಜದ ಅಧ್ಯಕ್ಷ ಶಾಂತಿ ಪ್ರಸಾದ್, ಕಾರ್ಯದರ್ಶಿ ರವಿ, ಮುಖಂಡರಾದ ಭರತ್ ಕುಮಾರ್, ವೀರೇಂದ್ರ ಕುಮಾರ್ ಜೈನ್, ಜಯಂತಿ ಮಹೇಂದ್ರ, ಜಯಂತಿ ಬಾಹುಬಲಿ, ರಾಕೇಶ್ ಜೈನ್ ವಹಿಸಿದ್ದರು.




