Friday, September 20, 2024

ಪ್ರಾಯೋಗಿಕ ಆವೃತ್ತಿ

ಜಲ್ ಜೀವನ್ ಮಿಷನ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಸುಮಲತಾ ಅಂಬರೀಶ್

ಜಲ್ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಸದೆ ಸುಮಲತಾ ಅಂಬರೀಶ್ ಅವರು ಸೂಚಿಸಿದರು.

ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಲ್ ಜೀವನ್ ಮಿಷನ್ ಯೋಜನೆಯಡಿ 3 ಹಂತದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ.ಆದರೆ ಇನ್ನೂ ಹಲವೆಡೆ ಕಾಮಗಾರಿ ಪೂರ್ಣ ಗೊಂಡಿಲ್ಲ.ಇನ್ನು ಕೆಲವು ಕಾಮಗಾರಿಗಳನ್ನು ಗುತ್ತಿಗೆದಾರರು ಅರ್ಧಕ್ಕೆ ಬಿಟ್ಟಿದ್ದಾರೆ.ಇಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲ ಜೀವನ್ ಯೋಜನೆಗೆ ಸಂಬಂಧಿಸಿದಂತೆ ಎರಡು ಪೈಪ್ ಲೈನ್ ಇರುವ ಬಗ್ಗೆ ಚರ್ಚಿಸಿದಾಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡಿ ಜಲ್ ಜೀವನ್ ಮಿಷನ್ ಮುಂದಿನ 30 ವರ್ಷಗಳ ಅವಧಿಗೆ ಆಯೋಜಿಸಲಾಗುತ್ತದೆ. ಕೆಲವು ಹಿಂದೆ ನಿರ್ಮಿಸಿರುವ ಪೈಪ್ ಲೈನ್ ಹಳೆಯದಾಗಿದ್ದು, ಯೋಜನೆಗೆ ಅನುಗುಣವಾಗಿ ನೀರು ಸರಬರಾಜು ಮಾಡುವುದು ಕಷ್ಟಕರವಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ರಸ್ತೆಯ ಗುಣಮಟ್ಟ ಹೆಚ್ಚಿಸುವುದು, ರಸ್ತೆ ದೀಪಗಳು, ಸೂಚನಾ ಪಲಕಗಳು ಹೆಚ್ಚಿಸುವ ಕುರಿತು ಈಗಾಗಲೇ ಸೂಚನೆ ನೀಡಲಾಗಿದ್ದು, ಅವುಗಳ ಅನುಷ್ಠಾನವಾಗಬೇಕು.ಕಾಮಗಾರಿ ಪೂರ್ಣವಾಗದೆ ಜನರಿಂದ ಟೋಲ್ ಸಂಗ್ರಹಣೆ ಮಾಡಲಾಗುತ್ತಿದೆ‌. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಒಪ್ಪಿಕೊಂಡಿರುವ ಎಲ್ಲಾ ಕಾಮಗಾರಿಗಳು ಹಾಗೂ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕುರಿತಂತೆ ಚರ್ಚಿಸಲಾಗಿರುವ ವಿಷಯಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಎನ್‌ಹೆಚ್‌ಎಐ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ,ಕುಮಾರ ಅವರು ಮಾತನಾಡಿ, ಈಗಾಗಲೇ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಪರಿಶೀಲಿಸಿದ ಸಂದರ್ಭದಲ್ಲಿ ಮುಖ್ಯವಾಗಿ ವೇಗ ಮಿತಿಯ ಬಗ್ಗೆ ಸೂಚನಾ ಫಲಕ ಅಳವಡಿಸುವಂತೆ ತಿಳಿಸಲಾಗಿದೆ ಹಾಗೂ 1525 ಬೀದಿ ದೀಪ‌ದ ಅವಶ್ಯಕತೆ ಇದ್ದು ಕೇವಲ 850 ಮಾತ್ರ ಅಳವಡಿಸಲಾಗಿದೆ. ಹೈವೇ ಪ್ಯಾಟ್ರೋಲಿಂಗ್, ಅಂಬೂಲೆನ್ಸ್ ಹಾಗೂ ಕ್ರೇನ್ ಗಳ ಸಂಖ್ಯೆ ಹೆಚ್ಚಳ ಮಾಡುವಂತೆ ತಿಳಿಸಲಾಗಿದೆ ಎಂದರು.

ಮಳೆಯ ಕೊರತೆ ಉಂಟಾದರೆ ಹಾಲಿ ಬೆಳೆಗೆ ನೀರು ಒದಗಿಸುವ ಬಗ್ಗೆ ಹಾಗೂ ಕುಡಿಯುವ ನೀರಿನ ಬಗ್ಗೆ ಸಂಸದರು ಮಾಹಿತಿ ಕೇಳಿದಾಗ ಕಾವೇರಿ ನೀರಾವರಿ ನಿಗಮ ನಿಯಮಿತದ ಅಧೀಕ್ಷಕ ಇಂಜಿನಿಯರ್ ರಘುರಾಮ್ ಅವರು ಮಾತನಾಡಿ, ಸದರಿ ಪರಿಸ್ಥಿತಿಯಲ್ಲಿ ಮಳೆಯ ಅಭಾವ ಉಂಟಾದರೆ ಜುಲೈ‌ ಅಂತ್ಯದವರೆಗೆ ಮಾತ್ರ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯ. ನೀರಾವರಿ ಸಲಹಾ ಸಮಿತಿಗೆ ಮಾಹಿತಿ ನೀಡಲು ಕೃಷಿ, ನೀರಾವರಿ ಹಾಗೂ ಕಂದಾಯ ಇಲಾಖೆ ಒಟ್ಟಿಗೆ ಸಮೀಕ್ಷೆ ನಡೆಸಿ ವರದಿ ನೀಡಲಿದೆ ಎಂದರು.

ಸಭೆಯಲ್ಲಿ ಮಂಡ್ಯ ಶಾಸಕ ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಅರಣ್ಯ ಅಧಿಕಾರಿ ರುತ್ರನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!