Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಲಸೂರು- ಬೆಂಗಳೂರು ಮೇಲ್ಸೇತುವೆ ಕಾಮಗಾರಿ ಶೀಘ್ರ ಪೂರ್ಣ

ಮಂಡ್ಯ ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ನೇರವಾಗಿ ಸಂಪರ್ಕ ನೀಡುವ ಕೃಷ್ಣರಾಜಪೇಟೆ ಭೇರ್ಯ ಸಾಲಿಗ್ರಾಮ ರಸ್ತೆಯ ಮಧ್ಯದ ತಾಲೂಕಿನ ಗಡಿ ಗ್ರಾಮವಾದ ಸಿಂಗನಹಳ್ಳಿ ಬಳಿ ಇರುವ ಹಾಸನ – ಮೈಸೂರು ರೈಲ್ವೆ ಗೇಟ್ ಗೆ ಸದ್ಯದಲ್ಲಿಯೇ ಮುಕ್ತಿ ದೊರೆಯಲಿದೆ. ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಯ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಐದು ದಶಕಗಳ ಸಮಸ್ಯೆಗೆ ಸದ್ಯದಲ್ಲಿಯೇ ಮುಕ್ತಿ ದೊರೆಯುತ್ತಿರುವುದರಿಂದ ಈ ಭಾಗದ ನಾಗರಿಕರು ಹಾಗೂ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೈಸೂರು ಹಾಸನ ರೈಲ್ವೆ ಮಾರ್ಗವು ಕೆ.ಆರ್.ಪೇಟೆ ತಾಲೂಕಿನ ಗಡಿ ಗ್ರಾಮವಾದ ಸಿಂಗನಹಳ್ಳಿಯ ಪಕ್ಕದಲ್ಲಿಯೇ ಹಾದುಹೋಗಿದ್ದು, ಕೆ.ಆರ್. ಪೇಟೆ ತಾಲೂಕಿನಿಂದ ಮೈಸೂರು ಜಿಲ್ಲೆಯ ಭೇರ್ಯಕ್ಕೆ ಹೋಗಬೇಕಾದರೆ ರೈಲ್ವೆ ಗೇಟನ್ನು ಸಾಗಿ ಮುಂದೆ ಹೋಗಬೇಕಾಗಿದೆ. ರೈಲು ಬರುವ ಸಮಯದಲ್ಲಿ ಆಗಾಗ್ಗೆ 15 ರಿಂದ 20 ನಿಮಿಷ ರೈಲು ಹೋಗುವವರೆಗೂ ಗೇಟ್ ಅನ್ನು ಹಾಕುವುದರಿಂದ, ಪ್ರಯಾಣಿಕರು ರೈಲು ಹೋಗುವವರೆಗೆ ಅನಿವಾರ್ಯವಾಗಿ ಕಾದು ಗೇಟು ತೆರೆದ ನಂತರ ಮುಂದೆ ಸಾಗುವುದು ಅನಿವಾರ್ಯವಾಗಿದೆ. ಈ ರೈಲ್ವೆ ಗೇಟ್ ನ ಸಮಸ್ಯೆಯೂ ಕಳೆದ 05 ದಶಕಗಳಿಂದಲೂ ಈ ಭಾಗದ ಪ್ರಯಾಣಿಕರನ್ನು ಕಾಡುತ್ತಿದ್ದು ಸದ್ಯ ಮೇಲ್ಸೇತುವೆ ನಿರ್ಮಾಣವಾಗುತ್ತಿರುವುದರಿಂದ ಈ ಭಾಗದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಒಂದುವರೆ ಕಿಲೋಮೀಟರ್ ವರೆಗೂ ಹೆಚ್ಚು ಉದ್ದವಿರುವ ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿಯು ಮೈಸೂರು ಹಾಸನ ರೈಲ್ವೆ ಹಳಿಯ ಮೇಲೆ ಹಾದು ಹೋಗಿದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಕೇಶಿಫ್ ನೇತೃತ್ವದಲ್ಲಿ ಕೆಎನ್ಆರ್‌ಸಿಎಲ್ ಗುತ್ತಿಗೆ ಕಂಪನಿಯು ಈ ಮೇಲ್ಸೇತುವೆ  ನಿರ್ಮಿಸುತ್ತಿದೆ. ರಾಜ್ಯ ಹೆದ್ದಾರಿಯ ಈ ಮಹತ್ವಕಾಂಕ್ಷಿ ಕಾಮಗಾರಿಯು ಸಂಪೂರ್ಣಗೊಂಡು ವಾಹನಗಳ ಸಂಚಾರಕ್ಕೆ ಮೇಲ್ ಸೇತುವೆಯು ಮುಕ್ತವಾಗುತ್ತಿದ್ದಂತೆಯೇ ಐವತ್ತು ವರ್ಷಗಳ ಈ ಭಾಗದ ರೈಲ್ವೆ ಗೇಟ್ ಸಮಸ್ಯೆಗೆ ಶಾಶ್ವತವಾದ ಪರಿಹಾರವು ದೊರಕಲಿದೆ.

ಹಗಲಿರುಳು ಎನ್ನದೇ ರಾಜ್ಯ ಹೆದ್ದಾರಿಯ ಕಾಮಗಾರಿಯು ನಡೆಯುತ್ತಿರುವುದು ಒಂದು ಕಡೆ ಸಂತೋಷವಾದರೆ, ಐವತ್ತು ವರ್ಷಗಳ ರೈಲ್ವೆ ಗೇಟ್ ನ ಸಮಸ್ಯೆಗೆ ಶಾಶ್ವತ ಪರಿಹಾರವೂ ದೊರಕುತ್ತಿರುವುದು ಮತ್ತೊಂದು ಸಂತೋಷಕ್ಕೆ ಕಾರಣವಾಗಿದೆ. ಮಡಿಕೇರಿಯಿಂದ, ಕೊಣನೂರು, ಸೋಮನಾಥಪುರ, ಸಾಲಿಗ್ರಾಮ, ಕೆ.ಆರ್.ಪೇಟೆ ನಾಗಮಂಗಲ, ಹುಲಿಯೂರುದುರ್ಗ, ಮಾಗಡಿ ಮಾರ್ಗವಾಗಿ ನೇರವಾಗಿ ಬೆಂಗಳೂರಿಗೆ ಸಂಪರ್ಕ ನೀಡುವ ಅತ್ಯಧುನಿಕ ತಂತ್ರಜ್ಞಾನದ ರಾಜ್ಯ ಹೆದ್ದಾರಿಯ ಕಾಮಗಾರಿಯು ನೇರವಾಗಿ ರಾಜ್ಯದ ರಾಜಧಾನಿಯಾದ ಬೆಂಗಳೂರಿಗೆ ಸಂಪರ್ಕ ನೀಡುವುದಲ್ಲದೆ ಮಡಿಕೇರಿ ಬೆಂಗಳೂರಿನ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ ಎನ್ನುವುದು ಸಂತೋಷದ ವಿಷಯವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!