Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನರ ಸಮಸ್ಯೆ ಬಗೆಹರಿಸಲು ‘ಜನತಾ ದರ್ಶನ’: ಸಚಿವ ಚಲುವರಾಯಸ್ವಾಮಿ

ಸರ್ಕಾರದ ವಿವಿಧ ಇಲಾಖೆಗಳಿಗೆ ಜನಸಾಮಾನ್ಯರ ಅಲೆದಾಟ ತಪ್ಪಿಸಲು ಹಾಗೂ ಜನರ ಸಮಸ್ಯೆ ಬಗೆಹರಿಸಲು ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು,ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಖಾತೆ ಬದಲಾವಣೆ, ಪಹಣಿ ಸಮಸ್ಯೆ, ಸರ್ವೆ ಇಲಾಖೆಯ ಪೋಡಿ,ದುರಸ್ತು ಹಾಗೂ ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಜನಸಾಮಾನ್ಯರು ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆಯುವ ಸಂಕಷ್ಟವನ್ನು ಕೊನೆಗಾಣಿಸಲು ರಾಜ್ಯದ ಮುಖ್ಯಮಂತ್ರಿಗಳು ಜನತಾ ದರ್ಶನ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದಾರೆ. ಅದರನ್ವಯ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.

nudikarnataka.com

ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾನೂನು ಬದ್ದ ಸಮಸ್ಯೆಗಳಿಗೆ ಮುಕ್ತಿಹಾಡಿ ಅರ್ಜಿಗಳ ಸಂಖ್ಯೆಯನ್ನು ಸೂನ್ಯಗೊಳಿಸುವ ಗುರಿ ಹೊಂದಲಾಗಿದ್ದು, ಗ್ರಾ.ಪಂ ಹಾಗೂ ಕಂದಾಯ ಇಲಾಖೆಯ ಹೊಣೆಗಾರಿಕೆ ಹೆಚ್ಚಳವಾಗಿರುತ್ತದೆ ಎಂದರು.

ಅನ್ಯಾಯಕ್ಕೆ ಅಂತ್ಯವಾಡಬೇಕಿದೆ

ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಕಳೆದೆರಡು ವರ್ಷಗಳ ಅವಧಿಯಲ್ಲಿ ಮೋಸ ಮಾಡಲಾಗಿದೆ, ಒಂದೆರಡು ಎಕರೆ ಜಮೀನುಳ್ಳ ರೈತರಿಂದ ಲಕ್ಷಾಂತರ ರೂ.ಹಣ ವಸೂಲಿ ಮಾಡಲಾಗಿದೆ, ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಲಾಗಿದೆ, ಇಂತಹ ಅನ್ಯಾಯಕ್ಕೆ ಅಂತ್ಯವಾಡಬೇಕಿದೆ ಎಂದರು.

 

ಇಂದು ಸ್ವೀಕರಿಸಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇ ಮಾಡಲಾಗುವುದು. ಜನಸಾಮಾನ್ಯರಿಗೆ ಸ್ಪಂದಿಸದ ನೌಕರರಿಗೆ ಸಲಾಂ ಹೊಡೆಯುವ ಪ್ರವೃತ್ತಿಗೆ ಕಡಿವಾಣ ಹಾಕಿ ಉನ್ನತ ಅಧಿಕಾರಿಗಳ ಗಮನಕ್ಕೆ ತರಲು ಜನತಾ ದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಚುನಾವಣಾ ಪ್ರಣಾಳಿಕೆ ಕಾರ್ಯಗತಗೊಳಿಸಲು ಮುಂದಾಗಿದ್ದು, ಈಗಾಗಲೇ ಶಕ್ತಿ, ಅನ್ನಭಾಗ್ಯ, ಉಚಿತ ವಿದ್ಯುತ್ ಹಾಗೂ ಗೃಹಲಕ್ಷಿ ಯೋಜನೆಗಳು ಸೇರಿ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

ಹಾಲಿನ ದರವನ್ನು ಲೀಟರ್‌ಗೆ ಮೂರು ರೂ. ಹೆಚ್ಚಳ, ಕೃಷಿಕರಿಗೆ ಮೂರವೃಎ ಲಕ್ಷಗಳ ವರೆಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿದ್ದು, ಮಳವಳ್ಳಿ ತಾಲ್ಲೂಕಿನ ಅಭಿವೃದ್ದಿಗೆ ಸುಮಾರು ನೂರು ಕೋಟಿ ರೂಪಾಯಿಗಳ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ನ್ಯಾಯ ಸಿಗುವ ವಿಶ್ವಾಸ

ನಾಳೆ ನವದೆಹಲಿಯಲ್ಲಿ ನಡೆಯುವ ಸಿಡಬ್ಲೂಆರ್‌ಸಿ ಸಭೆಯಲ್ಲಿ ರಾಜ್ಯಕ್ಕೆ ನ್ಯಾಯ ಸಿಗುವ ವಿಶ್ವಾಸವಿದ್ದು, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾವೇರಿ ಪ್ರತಿಭಟನೆ ಬಗ್ಗೆ ಬಹಳ ಗೌರವವಿದ್ದು, ಜಿಲ್ಲೆಯ ರೈತರು ಬೆಳೆದಿರುವ ಬೆಳೆ ರಕ್ಷಣೆ ಹಾಗೂ ಎಂಟತ್ತು ಜಿಲ್ಲೆಗಳಿಗೆ ಆಗತ್ಯವಾಗಿರುವ ಕುಡಿಯುವ ನೀರು ಪೂರೈಸಲು ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ೫೦೦ಕ್ಕೂ ಹೆಚ್ಚು ಜನಸಾಮಾನ್ಯರು ವಿವಿಧ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದರು.ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾರ್ವಜನಿಕರಿಂದ ಮಾಹಿತಿ ಪಡೆದು ಅರ್ಜಿಗಳನ್ನು ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಪಿ.ಎಂ ನರೇಂದ್ರಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಸಿ ಜಾಫರ್, ಜಿಲ್ಲಾಧಿಕಾರಿ ಡಾ. ಕುಮಾರ್, ಜಿ.ಪಂ ಸಿಇಓ ಶೇಕ್ ತನ್ವೀರ್ ಆಸೀಫ್, ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಉಪ ವಿಭಾಗಾಧಿಕಾರಿ ಎಂ. ಶಿವಮೂರ್ತಿ, ತಹಶೀಲ್ದಾರ್ ಕೆ.ಎನ್ ಲೊಕೇಶ್, ತಾ,ಪಂ ಕಾರ್ಯನಿರ್ವಹಕಾಧಿಕಾರಿ ಎಲ್ ಮಮತ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!