ಜೆಡಿಎಸ್ ನಾಯಕ ಕೆ.ಅನ್ನದಾನಿ ಮಾಡಿರುವ ಆರೋಪಕ್ಕೆ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉತ್ತರ ನೀಡಬೇಕೆ ಹೊರತು ಉತ್ತರಿಸಲು ಅಥವಾ ಮಾತನಾಡಲು ಕಾಂಗ್ರೆಸ್ ಎಸ್ಸಿಎಸ್ಟಿ ಜಿಲ್ಲಾಧ್ಯಕ್ಷ ಶ್ರೀಧರ್ ನೈತಿಕತೆಯಿಲ್ಲ ಎಂದು ಜೆಡಿಎಸ್ ಎಸ್ಸಿಎಸ್ಟಿ ಜಿಲ್ಲಾಧ್ಯಕ್ಷ ಸಾತನೂರು ಜಯರಾಂ ಕೆಂಡಕಾರಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪರಿಶಿಷ್ಠ ವಿಭಾಗದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಅನ್ನದಾನಿ ಅವರ ವಿರುದ್ಧ ಶ್ರೀಧರ್ ಹೇಳಿಕೆಯನ್ನು ಖಂಡಿಸುತ್ತೇವೆ ಎಂದರು.
ಅನ್ನದಾನಿ ಅವರು ಮಾಡಿದ ಆರೋಪ ಪಿ.ಎಂ.ನರೇಂದ್ರಸ್ವಾಮಿ ಅವರ ವಿರುದ್ಧ ಮಾತ್ರವಲ್ಲ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಎಲ್ಲಾ ಸಮಿತಿಗಳ ಭ್ರಷ್ಟಾಚಾರದ ವಿರುದ್ಧವಾಗಿದೆ. ಅವರ ಸಮಿತಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲವೆಂದಾದರೆ ಅವರೇ ಮಾಧ್ಯಮದ ಮೂಲಕ ಹೇಳಿಕೆ ನೀಡಲಿ ಎಂದರು.
ಅನ್ನದಾನಿ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದು ಶ್ರೀಧರ್ ಅವರಿಗೆ ಶೋಭೆ ತರುವುದಿಲ್ಲ, ನಿಮ್ಮ ನಾಯಕರಿಗೆ ಧೈರ್ಯವಿದ್ದರೆ ಉತ್ತರ ನೀಡಲಿ, ಇಲ್ಲವಾದಲ್ಲಿ ಮಲೆ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲಿ ಎಂದರು.
ಪಿ.ಎಂ.ನರೇಂದ್ರಸ್ವಾಮಿ ಅವರು ತಮ್ಮ ಸ್ವಾರ್ಥಕ್ಕೆ ಪರಿಶಿಷ್ಠ ಜನಾಂಗವನ್ನು ಬಳಸಿಕೊಂಡು ಮೋಸವೆಸಗುತ್ತಿದ್ದಾರೆ. ಅಧಿಕಾರದ ಅಮಲಿನಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಿದಲ್ಲಿ ಕ್ಷೇತ್ರದ ಜನತೆ ತಕ್ಕ ರೀತಿಯಲ್ಲಿ ಉತ್ತರ ನೀಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ವಕ್ತಾರೆ ಪದ್ಮಾವತಿ, ನಗರಸಭಾ ಸದಸ್ಯೆ ಮೀನಾಕ್ಷಿ ಪುಟ್ಟಸ್ವಾಮಿ, ನವೀನ್ಕುಮಾರ್, ವೇಣುಗೋಪಾಲ್, ಶಂಕರ್ ಇದ್ದರು.




