ರೈತ ವಿರೋಧಿ ಭೂ-ಸುಧಾರಣಾ ಕಾಯಿದೆ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ನಲ್ಲಿ ಮತ ಹಾಕಿದ ಜಾತ್ಯಾತೀತ ಜನತಾದಳಕ್ಕೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಹಚ್.ಡಿ.ಕುಮಾರಸ್ವಾಮಿ ಪರವಾಗಿ ಮತ ಕೇಳಲು ಯಾವುದೇ ನೈತಿಕತೆ ಇಲ್ಲ ಎಂದು ಮಂಡ್ಯ ಜಿಲ್ಲಾ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್ ಟೀಕಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಿ ಎಂದು ಚಳವಳಿ ನಿರತರಾಗಿದ್ದ ರೈತ ಮಹಿಳೆಗೆ ಇಷ್ಟು ದಿನ ಎಲ್ಲ ಮಲಗಿದೆಯಮ್ಮ ಎಂದು ಪ್ರಶ್ನೆ ಮಾಡಿದ್ದರು. ಅಂತವರು ನಾನು ರೈತ ಪರ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ ಎಂದರು.
ಬಿ.ಜೆ.ಪಿ ಸರ್ಕಾರ ಕಾರ್ಪೋರೇಟರ್ ಕುಳಗಳಿಗೆ ರೈತರ ಕೃಷಿ ಭೂಮಿ ಕಿತ್ತುಕೊಳ್ಳುವ ಹುನ್ನಾರದ ಅಂಗವಾಗಿ ರೈತರ ಅನುಮತಿ ಇಲ್ಲದೆ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಾಗೂ ಒಬ್ಬ ವ್ಯಕ್ತಿ 450 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಲು ಭೂ-ಸುಧಾರಣಾ ಕಾಯಿದೆ ತಿದ್ದುಪಡಿ ತರಲು ಮುಂದಾಗಿತ್ತು, ಆ ಸಂದರ್ಭದಲ್ಲಿ ಜೆಡಿಎಸ್ ಈ ಕಾಯ್ದೆಗೆ ಸಹಿ ಹಾಕಿದ್ದರಿಂದ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರವಾಗಿತ್ತು ಎಂದರು.
ಮತ ಪಡೆಯಲು ಕುಮಾರಸ್ವಾಮಿಗೆ ನೈತಿಕತೆ ಇಲ್ಲ
ಭೂ- ಸುಧಾರಣಾ ಕಾಯಿದೆಯನ್ನು ವಿರೋಧಿಸುತ್ತಿದ್ದ ಜೆ.ಡಿ.ಎಸ್ ಪಕ್ಷ ವಿಧಾನ ಪರಿಷತ್‌ನಲ್ಲಿ ತಿದ್ದುಪಡಿ ಕಾಯಿದೆ ಪರವಾಗಿ ಮತ ಚಲಾಯಿಸಿ ಮಸೂದೆ ಅಂಗೀಕಾರಕ್ಕೆ ಕಾರಣವಾಗಿತ್ತು. ರೈತ ವಿರೋಧಿ ಕಾಯಿದೆಯನ್ನು ಬೆಂಬಲಿಸಿ, ಈಗ ರೈತರ ಮತ ಪಡೆಯಲು ಕುಮಾರಸ್ವಾಮಿಗೆ ನೈತಿಕತೆ ಇಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನ್ಯಾಯಯುತ ಬೆಲೆಗಾಗಿ ಚಳವಳಿ ಮಾಡುತ್ತಿದ್ದ ರೈತ ಹೋರಾಟಗಾರ್ತಿಗೆ ಇಷ್ಟು ದಿನ ಎಲ್ಲ ಮಲಗಿದ್ದೆ ಎಂದು ಸಾರ್ವಜನಿಕವಾಗಿ ಅವಮಾನಿಸಿದ ಕುಮಾರಸ್ವಾಮಿಗೆ ರೈತರ ಮತ ಕೇಳಲು ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಆರೋಪಿಗಳ ರಕ್ಷಣೆ
ಮಂಡ್ಯದ ಮನ್‌ಮುಲ್‌ನಲ್ಲಿ ನಡೆದ ಹಾಲು-ನೀರು ಹಗರಣದಲ್ಲಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ದೋಚಿದ ಆರೋಪಿಗಳಿಗೆ ರಕ್ಷಣೆಗೆ ಮುಂದಾಗಿದ್ದು ಯಾರು? ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಯಾಗಿ ಮಂಡ್ಯ ಜಿಲ್ಲೆಗೆ ರೂ.8.750 ಕೋಟಿ ಹಾಗೂ ಜಿಲ್ಲೆಗೆ ಒಂದು ಹೊಸ ಸಕ್ಕರೆ ಕಾರ್ಖಾನೆ ಎಂದು ಘೋಷಣೆ ಮಾಡಿ ಪುಕ್ಕಟ್ಟೆ ಪ್ರಚಾರವನ್ನು ಗಿಟ್ಟಿಸಿ ಅನುದಾನವನ್ನು ನೀಡದೆ ಕುಮಾರಸ್ವಾಮಿ ವಂಚಿಸಿದ್ದಾರೆ. ಅಂತಹವರಿಗೆ ಜಿಲ್ಲೆಯ ಜನ ಚುನಾವಣೆಯಲ್ಲಿ ಉತ್ತರಿಸಲಿದ್ದಾರೆ ಎಂದರು.
2018ರ ಚುನಾವಣೆಯಲ್ಲಿ ಕುಮಾರಸ್ವಾಮಿ ಸುಮಾರು 18 ಭರವಸೆಗಳನ್ನು ನೀಡಿದ್ದರು, ಇದರಲ್ಲಿ 17 ಭರವಸೆಗಳನ್ನು ಈಡೇರಿಸಲಾಗದ ಕುಮಾರಸ್ವಾಮಿರವರಿಗೆ ಈ ಜಿಲ್ಲೆಯ ರೈತರ ಮತ ಪಡೆಯಲು ಯಾವುದೇ ನೈತಿಕತೆ ಇಲ್ಲ, ಕೇವಲ ಜಾತಿ ಹಾಗೂ ರೈತರ ಹೆಸರನ್ನು ಹೇಳಿಕೊಂಡು ರಾಜಕಾರಣ ಮಾಡುತ್ತಿರುವ ಕುಮಾರಸ್ವಾಮಿಗೆ ಈ ಜಿಲ್ಲೆಯ ರೈತರು ಸ್ವಾಭಿಮಾನಿಗಳೆಂದು ತಿಳಿಸುವ ಕಾಲ ಇದಾಗಿದೆ ಎಂದರು.
ರಾಮನಗರ ನನ್ನ ಕರ್ಮ ಭೂಮಿ ನಾನು ರಾಮನಗರ ಬಿಟ್ಟು ಬೇರೆ ಎಲ್ಲಿ ಹೋಗುವುದಿಲ್ಲ ಎಂದು ಹೇಳಿರುವ ಕುಮಾರಸ್ವಾಮಿಯವರಿಗೆ ಇದ್ದಕ್ಕಿದಂತೆ ಮಂಡ್ಯ ಜನರನ್ನು ಭಾವನಾತ್ಮಕವಾಗಿ ಸೆಳೆದು ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮುಂದಾಗಿರುವುದನ್ನು ಮಂಡ್ಯದ ಜನ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಬಿ.ಜೆ.ಸ್ವಾಮಿ, ಬೋರೇಗೌಡ, ಚಂದ್ರಣ್ಣ, ಹೆಚ್.ಡಿ.ಜಯರಾಂ, ಮಂಜಣ್ಣ ಹಾಗೂ ಕೆ.ಕುಬೇರ ಉಪಸ್ಥಿತರಿದ್ದರು.