ಹಣವಂತರಿಗೆ ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಸಿಗುತ್ತದೆ. ಆದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಸಿಗುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಆರೋಪ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷಕ್ಕಾಗಿ 35 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿದಿರುವ ಕೀಲಾರ ಜಯರಾಮ್ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಅವರಿಗೆ ಟಿಕೆಟ್ ನೀಡಬೇಕಿತ್ತು. ದೇವೇಗೌಡರು ಕೂಡ ಶ್ರೀಕಂಠೇಗೌಡರು ನಿಲ್ಲದಿದ್ದರೆ ನಿನಗೆ ಟಿಕೆಟ್ ಕೊಡುವುದಾಗಿ ಈಶ್ವರನ ಆಣೆ ಮಾಡಿ ಹೇಳಿದ್ದರು
ಆದರೆ ಎಂದಿಗೂ ಪಕ್ಷದ ಬಾವುಟವನ್ನೇ ಕಟ್ಟದ ಹಾಗೂ ಸದಸ್ಯತ್ವವನ್ನೇ ಪಡೆಯದ ಹಣವಂತರಾಗಿರುವ ಹೆಚ್.ಕೆ.ರಾಮು ಅವರಿಗೆ ಜೆಡಿಎಸ್ ವರಿಷ್ಠರು ಮಣೆ ಹಾಕಿದ್ದಾರೆ ಎಂದು ಟೀಕಿಸಿದರು.
ಹೆಚ್.ಕೆ.ರಾಮು ಅವರಿಗೆ ಬಿ.ಫಾರಂ ಕೊಡುವ ಮೊದಲು ಕೀಲಾರ ಜಯರಾಂ ಅವರನ್ನು ಸೌಜನ್ಯಕ್ಕಾದರೂ ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದರಿಂದ ಸ್ವಾಭಿಮಾನ ಉಳಿಸಿಕೊಳ್ಳಲು ಮಧುಮಾದೇಗೌಡರನ್ನು ಬೆಂಬಲಿಸಲು ತೀರ್ಮಾನ ಕೈಗೊಳ್ಳಬೇಕಾಯಿತು ಎಂದು ಹೇಳಿದರು.
ಜಿ.ಮಾದೇಗೌಡರು ಹುಟ್ಟು ಹೋರಾಟಗಾರರು, ತಮ್ಮ ಜೀವ ಇರುವವರೆಗೂ ಕಾವೇರಿ ಹೋರಾಟ , ರೈಪಪರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಗಾಂಧಿಭವನ ಗಾಂಧಿ ಗ್ರಾಮಗಳ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.
ಸ್ವರ್ಗದಲ್ಲಿರುವವರಿಗೆ ಶಾಂತಿ ಸಿಗಬೇಕು. ಅವರ ಹೆಸರು ಹಸಿರಾಗಿರಲಿ ಎಂಬ ಕಾರಣಕ್ಕೆ ಮಧು ಜಿ.ಮಾದೇಗೌಡ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಜಯಶೀಲರನ್ನಾಗಿ ಮಾಡಿದರೆ ಜಿ.ಮಾದೇಗೌಡರನ್ನು ಸ್ಮರಿಸಿದಂತಾಗುತ್ತದೆ ಎಂದರು.
ಧರ್ಮ ಅಸಹಿಷ್ಣುತೆ
ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ತರುವಾಯ ಧರ್ಮ ಅಸಹಿಷ್ಣುತೆ ವ್ಯಾಪಕವಾಗಿದೆ. ಗಾಂಧಿಯನ್ನು ಹತ್ಯೆ ಮಾಡಿರುವ ಬಗ್ಗೆ ನಾವೆಲ್ಲ ತಿಳಿದಿದ್ದೇವೆ. ಇದೇ ಸರ್ಕಾರ ಮುಂದುವರೆದರೆ ಮುಂದಿನ ದಿನಗಳಲ್ಲಿ ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲು ಹಿಂಜರಿಯುವುದಿಲ್ಲ ಎಂದು ಕಿಡಿಕಾರಿದರು.
ಕೀಲಾರ ಜಯರಾಂ ಮಾತನಾಡಿ,35 ವರ್ಷದ ನನ್ನ ಪಕ್ಷ ನಿಷ್ಠೆಯನ್ನು ತಿರಸ್ಕರಿಸಿ, ಕನಿಷ್ಠ ಪಕ್ಷ ಸೇವೆ ಮಾಡದ ವ್ಯಕ್ತಿಗೆ ಮಣೆ ಹಾಕಿರುವುದು ನಿಷ್ಠಾವಂತ ಕಾರ್ಯಕರ್ತನಾದ ನನಗೆ ನೋವುಂಟು ಮಾಡಿದೆ.
ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಮೌಲ್ಯವಿಲ್ಲ ಎಂದು ಅರಿತು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು.
ಮರಿತಿಬ್ಬೇಗೌಡ ಪ್ರತಿನಿಧಿಸುತ್ತಿರುವ ಶಿಕ್ಷಕರ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಹೇಳಿ ನಮ್ಮ ನಮ್ಮಲ್ಲೆ ಒಡಕು ಮೂಡಿಸುವ ಹುನ್ನಾರ ನಡೆಸಿದ್ದರು. ಮರಿತಿಬ್ಬೇಗೌಡರ ಸ್ನೇಹ ಮುಖ್ಯ ಎಂಬ ಕಾರಣಕ್ಕೆ ತಿರಸ್ಕರಿಸಿದೆ ಎಂದರು.