Thursday, May 16, 2024

ಪ್ರಾಯೋಗಿಕ ಆವೃತ್ತಿ

ಬಸವತತ್ವದ ವಿರೋಧಿಗಳನ್ನು ತಿರಸ್ಕರಿಸಿ – ಬೆಟ್ಟಹಳ್ಳಿ ಮಂಜುನಾಥ್

ರಾಜ್ಯದ ಬಹುಸಂಖ್ಯಾತ ಲಿಂಗಾಯತ ಸಮಾಜದ ಮತದಾರರನ್ನು ಯಾವ ಪಕ್ಷವಾಗಲಿ, ಪ್ರಭಾವಿ ನಾಯಕರಾಗಲಿ ಹೈಜಾಕ್ ಮಾಡಿ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು 2023ರ ವಿಧಾನಸಭೆ ಚುನಾವಣೆಯ ಫಲಿತಾಂಶ ಸಾಬೀತು ಮಾಡಲಿದೆ ಎಂದು ಲಿಂಗಾಯತ ಮಹಾಸಭಾ ಅಧ್ಯಕ್ಷ ಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ್ ತಿಳಿಸಿದ್ದಾರೆ.

ಪ್ರಜ್ಞಾವಂತ ಲಿಂಗಾಯತ ಮತದಾರರು ಜಾಗೃತರಾಗಿದ್ದಾರೆ. ಯಾವುದೊ ಒಂದು ವರ್ಗದ ನಾಯಕರ ಹಿಡಿತಕ್ಕೆ ಸಿಲುಕದ ಶರಣರು  ಪೊಳ್ಳು ಭರವಸೆಗಳನ್ನು ನಂಬುವ ಕಾಲ ದೂರವಾಗಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಗದಂತೆ ಮಾಡಿರುವ ರಾಜಕೀಯ ಷಡ್ಯಂತ್ರ ಹಾಗೂ ಮೀಸಲಾತಿ ಹೆಸರಲ್ಲಿ ಸಮುದಾಯದ ಒಳಪಂಗಡಗಳನ್ನು ಒಡೆಯುವ ಹುನ್ನಾರವನ್ನು ಸಮಾಜದ ಮತದಾರರು ಮರೆತಿಲ್ಲ. ಆಡಂಬರದ ಮಾತು, ಆಮಿಷಗಳ ಗಿಮಿಕ್, ಸುಳ್ಳು ಆಶ್ವಾಸನೆಗಳನ್ನು ನಂಬದ ಲಿಂಗಾಯತ ಸಮಾಜ ಬಸವತತ್ವ ಬೆಂಬಲಿಸುವ, ಶರಣರ ಆಶಯವನ್ನು ಅನುಷ್ಠಾನಗೊಳಿಸುವ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಈ ಬಾರಿ ವಿಧಾನಸೌಧಕ್ಕೆ ಕಳುಹಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಸಮುದಾಯವನ್ನು ಕಡೆಗಣಿಸುತ್ತಾ ಬಂದಿರುವ ಅಭ್ಯರ್ಥಿಗಳನ್ನು ತಿರಸ್ಕರಿಸಿ ಲಿಂಗಾಯತರ ಭಾವನೆಗಳನ್ನು ಗೌರವಿಸಿ ಸಮುದಾಯದ ಹಿತಕಾಯುವವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶೀಘ್ರವೇ ವಿಶ್ವಗುರು ಬಸವಣ್ಣನವರ ಅಶ್ವರೂಢ ಪುತ್ಥಳಿ ಸ್ಥಾಪನೆ,  ತಾಲ್ಲೂಕು ಕೇಂದ್ರಗಳಲ್ಲಿ ಬಸವಭವನ ನಿರ್ಮಾಣ, ಸರ್ಕಾರಿ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಕ್ರಮ,   ಪ್ರಮುಖ ರಸ್ತೆ, ಉದ್ಯಾನವನ, ವೃತ್ತಗಳಿಗೆ ಬಸವೇಶ್ವರರ ನಾಮಕರಣ,   ಲಿಂಗಾಯತ ಸಮುದಾಯಕ್ಕೆ ಸ್ವತಂತ್ರಧರ್ಮ ಮಾನ್ಯತೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಬೆಂಬಲಿಸುವ ಪಕ್ಷ ಹಾಗೂ ಅಭ್ಯರ್ಥಿಗಳನ್ನು  ಈ ಚುನಾವಣೆಯಲ್ಲಿ ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!