Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಬಂಡಾಯ | ಸ್ವಾಭಿಮಾನಿ ಬಣದ ಅಭ್ಯರ್ಥಿಯಾಗಿ ವಿಜಯ್ ಆನಂದ್ ಕಣಕ್ಕೆ

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ವಾಭಿಮಾನಿ ಬಣದ ಒಕ್ಕೊರಲ ಅಭ್ಯರ್ಥಿಯಾಗಿ ಕೆ.ವಿ.ಶಂಕರಗೌಡರ ಮೊಮ್ಮೊಗ ಕೆ.ಎಸ್.ವಿಜಯ್ ಆನಂದ್ ಅವರನ್ನು ಕಣಕ್ಕಿಳಿಸಲು  ಮಂಡ್ಯದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜನೆಗೊಂಡಿದ್ದ ಸ್ವಾಭಿಮಾನಿ ಬಣದ ಸಭೆಯಲ್ಲಿ, ಸ್ವಾಭಿಮಾನಿ ಬಣದಿಂದ ನಾಮಪತ್ರ ಸಲ್ಲಿಸಿರುವ ಜಿ.ಪಂ.ಮಾಜಿ ಸದಸ್ಯ ಹೆಚ್.ಎನ್.ಯೋಗೇಶ್, ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ನಾಮಪತ್ರಗಳನ್ನು ಹಿಂಪಡೆದು, ಅಂತಿಮವಾಗಿ ಕೆ.ಎಸ್. ವಿಜಯ್ ಆನಂದ್ ಅವರನ್ನು ಕಣಕ್ಕಿಳಿಸುವ ನಿರ್ಣಯಕ್ಕೆ ಬರಲಾಯಿತು.

ಈ ಸಂದರ್ಭದಲ್ಲಿ ವಿಜಯ್ ಆನಂದ್ ಮಾತನಾಡಿ, ಕ್ಷೇತ್ರದ ರಾಜಕೀಯ ಪಡೆಸಾಲೆಯಲ್ಲಿ ವ್ಯಕ್ತವಾಗುವ ವದಂತಿಗಳಿಗೆ ದಯಮಾಡಿ ಕಿವಿಗೊಡಬೇಡಿ, ನಾನು ಎಂತಹ ಕಠಿಣ ಸಂದರ್ಭದಲ್ಲೂ ಕಣದಿಂದ ಹಿಂದೆ ಸರಿಯುವುದಿಲ್ಲ, ನಿಷ್ಠೆ – ನಿಯತ್ತಿನಿಂದ ಸಮಾಜ ಸೇವೆ ಮಾಡಿರುವ ಕುಟುಂಬ ನಮ್ಮದು, ಆದರೆ ನಮ್ಮ ಬಳಿ ಹಣವಿಲ್ಲ, ಜನರಿಗೆ ಮೋಸ ಮಾಡಿ, ಬದುಕುವುದು ನಮ್ಮ ಜಾಯಮಾನವಲ್ಲ, ಕ್ಷೇತ್ರದ ಜನತೆ ನನ್ನನ್ನು ನಂಬಿ ಬೆಂಬಲಿಸಿದರೆ ಸದಾ ನಿಮ್ಮ ಜೊತೆ ಇದ್ದು, ಕಾರ್ಯ ನಿರ್ವಹಿಸುತ್ತೇನೆ, ನಮ್ಮ ಕುಟುಂಬವನ್ನು ಪೋಷಿಸುವ ಹೊಣೆಗಾರಿಕೆ ಕ್ಷೇತ್ರದ ಜನರದ್ದು ಎಂದು ಗದ್ಗದಿತರಾದರು.

ದೇವರ ಆಶೀರ್ವಾದ ಹಾಗೂ ಜನತೆಯ ಬೆಂಬಲದ ಶಕ್ತಿ ಮಾತ್ರ ನನಗಿದೆ, ನನಗೆ ಸ್ವಂತ ನಿವೇಶನ ಅಥವಾ ಮನೆಯಿಲ್ಲ, ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ, 2 ಎಕರೆ ಜಮೀನು ನನ್ನ ಹೆಸರಿನಲ್ಲಿದೆ. ಅದು ಚಿಕ್ಕಪ್ಪನಿಗೆ ಸೇರಬೇಕಾದ ಆಸ್ತಿ. ಅದನ್ನು ಹಿಂದಿರುಗಿಸಲು ನನಗೇನು ಬೇಸರವಿಲ್ಲ. ಕ್ಷೇತ್ರದ ಮತದಾರರ ಕಾಲಿಗೆ ಬಿದ್ದು, ಕೈ ಮುಗಿದು, ಆಶೀರ್ವದಿಸುವಂತೆ ಮನವಿ ಮಾಡುತ್ತೇನೆ. ಮತದಾರರು ಸ್ವಾಭಿಮಾನಿ ಪಡೆಯ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮುದ್ದನಘಟ್ಟ ಮಹಾಲಿಂಗೇಗೌಡ ಮಾತನಾಡಿ, ಮತದಾರರು ಹಾಗೂ ನಮ್ಮೊಳನಿರುವ ಕೆಲ ಮುಖಂಡರಿಗೆ ಆಮಿಷ ತೋರುವ, ಬೆದರಿಸುವ ಕ್ರಿಯೆ ಕೆಲ ಅಭ್ಯರ್ಥಿಯಿಂದ ಸಾಗುತ್ತಿದೆ, ಇದು ಅಸಾಧ್ಯದ ಮಾತು. ನಾನು ಮತ್ತು ತಿಮ್ಮೇಗೌಡ ಬಸರಾಳು ಹೋಬಳಿಗೆ, ಹೆಚ್.ಎನ್.ಯೋಗೇಶ್ ಕಸಬಾ ಹೋಬಳಿಗೆ, ಅಭ್ಯರ್ಥಿ ವಿಜಯಾನಂದ ಕೆರಗೋಡು ಹೋಬಳಿಗೆ, ಶಾಸಕ ಎಂ.ಶ್ರೀನಿವಾಸ್ ಮಂಡ್ಯ ನಗರ ವ್ಯಾಪ್ತಿಗೆ ನಾಯಕತ್ವ ವಹಿಸಿ ಚುನಾವಣೆ ಮಾಡಲು ಮುಂದಾಗುತ್ತೇವೆ, ನಿಮ್ಮ ಸಹಕಾರವಿರಲಿ ಎಂದು ಮನವಿ ಮಾಡಿದರು.

ವಿಜಯ್ ಆನಂದ್ ಅವರ ಚುನಾವಣಾ ಖರ್ಚಿಗೆ ನೆರವಾಗಲು ಕ್ಷೇತ್ರವ್ಯಾಪ್ತಿಯ ಬಿ.ಗೌಡಗೆರೆ ಗ್ರಾಮದ ಮಹೇಂದ್ರ,ಬಿ.ಹೊಸೂರು ಗ್ರಾಮದ ಶಿವಣ್ಣ ಹಾಗೂ ಆನೆಕೆರೆ ಬೀದಿಯ ಸುನೀತಾ ರವೀಂದ್ರ ಅವರು ಧನ ಸಹಾಯ ಮಾಡಿದರು.

ಸಭೆಯಲ್ಲಿ ಮುಖಂಡರಾದ ಬಿ.ಲೋಕೇಶ್, ತಿಮ್ಮೇಗೌಡ, ಎಂ.ಆರ್.ಎಂ. ಮಂಜು, ಜಯಶೀಲಮ್ಮ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!