ಗುಜರಾತಿನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ ಒಂಬತ್ತು ಮಂದಿಗೆ ಗುರುವಾರ ಮ್ಯಾಜಿಸ್ಟ್ರೇಟ್ ಕೋರ್ಟ್ ದೋಷಿಗಳೆಂದು ತೀರ್ಪು ನೀಡಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಐದು ವರ್ಷದ ಹಿಂದಿನ ಪ್ರಕರಣದ ವಿಚಾರಣೆಯನ್ನು ಎತ್ತಿ ಹಿಡಿದಿರುವ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಂಗ, ಅನುಮತಿ ಇಲ್ಲದೆ “ಆಜಾದಿ” ಘೋಷಣೆ ಕೂಗಿ ಮೆರವಣಿಗೆ ನಡೆಸಿದಕ್ಕಾಗಿ ಶಿಕ್ಷೆ ವಿದಿಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಜೆ ಎ ಪರ್ಮಾರ್ ತೀರ್ಪು ನೀಡಿದ್ದಾರೆ.
ಊನಾ ದ ದಲಿತ ಥಳಿತ ಘಟನೆಯ ಒಂದು ವರ್ಷವನ್ನು ಗುರುತಿಸಲು 2017 ರ ಜುಲೈನಲ್ಲಿ ಅನುಮತಿ ಇಲ್ಲದೆ, ಮೆಹ್ಸಾನಾ ದಿಂದ ಬನಸ್ಕಾಂತ ಜಿಲ್ಲೆಯ ಧನೇರಾ ಗೆ ಅಜಾದಿ ಮೆರವಣಿಗೆ ನಡೆಸಿದ್ದಕ್ಕಾಗಿ ಮೆಹ್ಸಾನಾ ದ ಪೋಲೀಸರು ಜಿಗ್ನೇಶ್ ಮೇವಾನಿ ಮತ್ತು ಇತರ 9 ಜನರ ವಿರುದ್ಧ ಐಪಿಸಿ ಸೆಕ್ಷನ್ 143ರಡಿ ಪ್ರಕರಣ ದಾಖಲಿಸಿದ್ದರು.
ಎಫ್ಐಆರ್ ನಲ್ಲಿ ಹೆಸರಿಸಲಾದ ಒಟ್ಟು 12 ಆರೋಪಿಗಳಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಇನ್ನೊಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇವಾನಿ ಅವರು ಪ್ರಧಾನಮಂತ್ರಿಯವರ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಅಸ್ಸಾಂ ನ ಪೊಲೀಸರು, ಇತ್ತೀಚೆಗಷ್ಟೇ ಬಂದಿಸಿದ್ದರು. ಕಳೆದ ವಾರವಷ್ಟೇ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದಾದ ಎರಡೇ ದಿನದಲ್ಲಿ ಈ ಹಳೆಯ ಪ್ರಕರಣ ಮತ್ತೆ ಹೊರಬಿದ್ದಿದೆ.