ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲ್ಲೂಕು ಸುಂಡಹಳ್ಳಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ರೂ.1.17 ಕೋಟಿಗಳ ವೆಚ್ಚದಲ್ಲಿ ಮುಚ್ಚು ಹರಾಜು ಕಟ್ಟೆಗಳ ನಡುವೆ ಎಳನೀರು ಮಾರುಕಟ್ಟೆಗಾಗಿ ಸನ್ ಶೇಡ್ ಅಳವಡಿಸುವ ಕಾಮಗಾರಿಗೆ ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದ್ದು, ಸುಂಡಹಳ್ಳಿಯ ಎಳನೀರು ಮಾರುಕಟ್ಟೆಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ರೈತರು ಎಳನೀರು ಮಾರುಕಟ್ಟೆಗೆ ಎಳನೀರು ಸಾಗಿಸಲು ವಾಹನ ಸರಬರಾಜು ಮಾಡಲು ಶೀಘ್ರವಾಗಿ ಅನುಕೂಲ ಕಲ್ಪಿಸಲಾಗುವುದು. ಇಲ್ಲಿನ ಎಳನೀರು ಮಾರುಕಟ್ಟೆಯ ಸೌಲಭ್ಯವನ್ನು ರೈತ ಬಾಂಧವರು ಉಪಯೋಗಿಸಿಕೊಳ್ಳಬೇಕು. ಮದ್ದೂರು ಎಳನೀರು ಮಾರುಕಟ್ಟೆಯ ರೀತಿಯಲ್ಲಿ ಸುಂಡಹಳ್ಳಿ ಮಾರುಕಟ್ಟೆಯಲ್ಲೂ ರೈತರಿಗೆ ಅನುಕೂಲ ಕಲ್ಪಿಸುತ್ತೇವೆ ಎಂದು ತಿಳಿಸಿದರು.
ಇಂಡುವಾಳುನಲ್ಲಿ 2ನೇ ಅಂಗನವಾಡಿ ಕೇಂದ್ರ ಉದ್ಘಾಟನೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 275ರ ಪರಿಹಾರ ಬಾಬ್ತು ಆಯವ್ಯಯದಲ್ಲಿ ಕೆಆರ್ ಐಡಿಎಲ್ ವತಿಯಿಂದ ನಿರ್ಮಾಣ ಮಾಡಿರುವ ಇಂಡುವಾಳು ಗ್ರಾಮದ 2ನೇ ಅಂಗನವಾಡಿ ಕೇಂದ್ರವನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ಉದ್ಘಾಟನೆ ಮಾಡಿದರು.
ಇದಕ್ಕೂ ಮೊದಲು ಮಂಡ್ಯದ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೋಷಣ್ 2.0 ಯೋಜನೆಯಡಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲ್ಲೂಕು ವ್ಯಾಪ್ತಿಯ ಸಕ್ಷಮ್ ಅಂಗನವಾಡಿ ಕೇಂದ್ರಗಳಿಗೆ ಎಲ್.ಇ.ಡಿ. ಟಿ.ವಿ.ಗಳನ್ನು ಶಾಸಕ ರಮೇಶ ಬಂಡಿ ಸಿದ್ದೇಗೌಡ ವಿತರಣೆ ಮಾಡಿದರು.




