Thursday, September 19, 2024

ಪ್ರಾಯೋಗಿಕ ಆವೃತ್ತಿ

ಶೋಷಿತರ ಆರ್ಥಿಕ ಸಬಲೀಕರಣಕ್ಕೆ ಸಹಕಾರ ಸಂಘ ಅತ್ಯಾವಶ್ಯಕ- ಜ್ಞಾನಪ್ರಕಾಶ್‌ ಸ್ವಾಮೀಜಿ

ಶೋಷಿತ ಸಮುದಾಯಗಳು ಆರ್ಥಿಕವಾಗಿ ಬೆಳೆಯಲು ಸಹಕಾರಿ ಕ್ಷೇತ್ರ ಅತ್ಯಾವಶ್ಯಕ ಎಂದು ಮೈಸೂರು ಉರಿಲಿಂಗ ಪದ್ದಿಮಠದ ಬಹುಜನ ಪೀಠಾಧಿಪತಿ ಜ್ಞಾನಪ್ರಕಾಶ್‌ಸ್ವಾಮೀಜಿ ಹೇಳಿದರು.

ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಎಸ್ಸಿ,ಎಸ್ಟಿ ನೌಕರರ ಸಂಘದ ಆವರಣದಲ್ಲಿ ವಿಶ್ವಜ್ಞಾನಿ ನೌಕರರ ಅಭಿವೃದ್ದಿ ಸಹಕಾರ ಸಂಘ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ಅವರ ಋಣದಲ್ಲಿರುವ ವಿದ್ಯಾವಂತರು, ನೌಕರರು ಸಾಕಷ್ಟು ಮಂದಿ ಇದ್ದಾರೆ, ಇವರನ್ನು ಒಗ್ಗೂಡಿಸಿ, ಸಹಕಾರಿ ತತ್ವದಡಿ, ಆರ್ಥಿಕ ಸಬಲಿಕರಣಕ್ಕೆ ಮಾರ್ಗದರ್ಶ ಮಾಡಬೇಕಿದೆ, ಶೋಷಿತ ಸಮುದಾಯಗಳು ಸ್ವಾಭಿಮಾನದಿಂದ ಬದುಕಲು, ವಿದ್ಯೆ, ಅಧಿಕಾರ, ಆರ್ಥಿಕ ಸಬಲೀಕರಣದ ಚಿಂತನೆಗಳನ್ನು ಬಿತ್ತರಿಸಬೇಕಿದೆ ಎಂದು ನುಡಿದರು.

ಕಳೆದ ಕೆಲವು ವರ್ಷಗಳ ಹಿಂದೆ ವಿಶ್ವಜ್ಞಾನಿ ನೌಕರರ ಅಭಿವೃದ್ದಿ ಸಹಕಾರ ಸಂಘ ಸ್ಥಾಪನೆ ಮಾಡಿದಾಗ, ರಾಜ್ಯಾದ್ಯಂತದ ಹೆಸರು ಮಾಡಿ, ಸಾಕಷ್ಟು ನೌಕರರು ಇಂತಹದ್ದೇ ಸಂಘ, ಸೂಪರ್‌ ಮಾರ್ಕೇಟ್ ಸ್ಥಾಪನೆ ಮಾಡಲು ಮಾದರಿಯಾಯಿತು, ಆದರೆ ಬೇಲಿಯೇ ಎದ್ದು ಬಿತ್ತನೆ ಜೀಜಗಳನ್ನು ಮೇದುಬಿಟ್ಟಿದೆ, ಹಣ ವಸೂಲಿಗೆ ಕಾನೂನು ಕ್ರಮಕ್ಕೆ ದೂರು ನೀಡಲಾಗಿದೆ ಒಳಿತಾಗುತ್ತದೆ ಎಂದು ಹೇಳಿದರು.

ಅಧೀಕ್ಷಕ ಇಂಜಿನಿಯರ್ ಚಂದ್ರಹಾಸ್ ಮಾತನಾಡಿ, ಸಂಘ ಆರಂಭ ಮಾಡುವಾಗ ಜನ ಒಗ್ಗಟ್ಟಾಗಿ ಆರ್ಥಿಕ ಸೌಲಭ್ಯ, ನೆರವು, ಸಹಕಾರ ಪಡೆದು ಸಬಲೀಕರಣ ಗೊಳ್ಳಲಿ ಎಂದು ನಾವು ಆರ್ಥಿಕ ನೆರವು ನೀಡಿದ್ದೇವು, ಬಹಳ ಆಸಕ್ತಿ -ಶ್ರದ್ದೆಯಿಂದ ಆರಂಭಗೊಂಡಿತು, ಆರ್ಥಿಕ ವ್ಯವಹಾರ ಚೆನ್ನಾಗಿ ನಡೆಯಿತು. ಹಣ ವಂಚಿಸಿರುವವರನ್ನು ಕ್ಷಮಿಸುವ ಮಾತೇ ಇಲ್ಲ, ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.

ಸಿಇಓ ಎಂ.ಲಿಂಗರಾಜಮ್ಮ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ 1ಕೋಟಿ 11ಲಕ್ಷದ 65 ಸಾವಿರ ರೂ.ಗಳ ವ್ಯವಹಾರ ನಡೆಸುತ್ತಿದೆ, 54 ಲಕ್ಷದ 90 ಸಾವಿರ ರೂ.ಗಳನ್ನು ಸಾಲ ನೀಡದೆ, 13 ಲಕ್ಷದ 64 ಸಾವಿರ ರೂ.ವಸೂಲಾಗಿದೆ, 4ಲಕ್ಷ ರೂ.ಬಡ್ಡಿ ಬಂದಿದೆ, ಲಾಭದಾಯಕವಾಗಿ ಸಂಘ ನಡೆಯುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಸೇವೆಯಲ್ಲಿ ನಿವೃತ್ತಿಗೊಂಡ ಸಂಘ ಸದಸ್ಯರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವಜ್ಞಾನಿ ನೌಕರರ ಅಭಿವೃದ್ದಿ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ನಂಜುಂಡಸ್ವಾಮಿ, ಉಪಾಧ್ಯಕ್ಷೆ ಅರುಣಾಕ್ಷಿ, ನಿರ್ದೇಶಕರಾದ ಎಲ್.ಡಿ.ಶಿವಶಂಕರ, ಸಿ.ಎನ್.ಶಿವಕುಮಾರ್, ವೆಂಕಟರಾಮು, ಪ್ರಕಾಶ್, ರಮೇಶ್, ನಿರಂಜನ್, ವರದರಾಜು, ಧೀರೆಂದ್ರಕುಮಾರ್, ಶಿವಣ್ಣ, ನಾಗರತ್ನ, ಎಸ್.ಅಂದಾನಯ್ಯ, ಮೋಹನ್‌ಕುಮಾರ್, ಮುಖ್ಯಅತಿಥಿ ಪ್ರೊ.ಡಾ.ಸಿ.ದೇವರಾಜ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!