Friday, October 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಾಳೆಯಿಂದ 2 ದಿನಗಳ ಕಾಲ ಮಂಡ್ಯದಲ್ಲಿ ಉದ್ಯೋಗ ಮೇಳ

ಮಂಡ್ಯ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಅಕ್ಟೋಬರ್ ೧೮ ಮತ್ತು ೧೯ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಉದ್ಯೋಗ ಮೇಳ ನಡೆಯುವ ಮಂಡ್ಯ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬುಧವಾರ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷಾಂತರ ಮಂದಿ ಯುವ ಮತದಾರರು ಮತ ನೀಡಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಎರಡು ದಿನಗಳ ಕಾಲ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಚುನಾವಣೆಗೆ ಸ್ಪರ್ಧೆ ಮಾಡಿ, ಕ್ಷೇತ್ರ ಪ್ರವಾಸ ಮಾಡುವಾಗ ನಿರುದ್ಯೋಗ ಸಮಸ್ಯೆ ಅವರ ಗಮನಕ್ಕೆ ಬಂದಿತ್ತು. ಅದರಲ್ಲೂ ಕೇಂದ್ರ ಕೈಗಾರಿಕಾ ಮಂತ್ರಿಯಾದ ಮೇಲೂ ಸಹ ಯುವಕರ ನಿರುದ್ಯೋಗ ಸಮಸ್ಯೆ ಬಗ್ಗೆ ತೀವ್ರ ಚರ್ಚೆಯಾಯಿತು. ಇದನ್ನು ಹೋಗಲಾಡಿಸುವ ಸಲುವಾಗಿ ಸ್ವತ: ಕುಮಾರಸ್ವಾಮಿ ಅವರು ಚಿಂತನೆ ನಡೆಸಿ ಮಂಡ್ಯದಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದಾರೆ ಎಂದರು.

ದೇಶದ ಪ್ರತಿಷ್ಟಿತ ಕಾರ್ಪೋರೇಟ್ ಕಂಪನಿಗಳು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ನೂರಾರು ಕಂಪನಿಗಳು ಭಾಗಿಯಾಗಲಿದ್ದು, ೨೦೦ಕ್ಕೂ ಅಧಿಕ ಕೌಂಟರ್‌ಗಳಲ್ಲಿ ನಿರುದ್ಯೋಗಿ ಯುವಕರ ಸಂದರ್ಶನ ನಡೆಯಲಿದೆ. ಈಗಾಗಲೇ ಎರಡು ಸಾವಿರಕ್ಕೂ ಅಧಿಕ ಮಂದಿ ನೋಂದಾಯಿತರಾಗಿದ್ದು, ಇನ್ನೂ ಒಂದು ಸಾವಿರ ಮಂದಿ ನೋಂದಾಯಿತರಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಪ್ರತಿ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಬೇಕೆಂಬುದು ಕುಮಾರಸ್ವಾಮಿ ಅವರ ಚಿಂತನೆಯಾಗಿದೆ. ಈ ನಿಟ್ಟಿನಲ್ಲಿ ಯೋಜನೆಯನ್ನು ಕೈಗೊಂಡಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಜೊತೆಗೆ ಅಂದು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗಿಯಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಭಾಗವಹಿಸಿದ ಬಹುತೇಕರಿಗೆ ಉದ್ಯೋಗ ದೊರೆಯುವ ವಿಶ್ವಾಸವಿದ್ದು, ಹಾಗೊಂದು ವೇಳೆ ಉದ್ಯೋಗ ಸಿಗದವರಿಗೂ ದಾಖಲಾತಿ ಪಡೆದುಕೊಂಡು ನಂತರದ ದಿನಗಳಲ್ಲಿ ಉದ್ಯೋಗ ಕಲ್ಪಿಸಲು ಕಂಪನಿ ಮೂಲಕ ನಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಮುಖಂಡ ಬೇಲೂರು ಸೋಮಶೇಖರ್, ನವೀನ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!