Tuesday, October 22, 2024

ಪ್ರಾಯೋಗಿಕ ಆವೃತ್ತಿ

ಸಾಹಿತ್ಯ ಸಮ್ಮೇಳನದ ಬದಲಿಗೆ ಜಾತ್ರೆ ನಡೆಸಲು ಹೊರಟ ಜೋಶಿ; ಜಗದೀಶ್ ಕೊಪ್ಪ ಕಿಡಿ

ಶತಮಾನಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯೇತರರು ಸಮ್ಮೇಳನದ ಅಧ್ಯಕ್ಷರಾಗಬಾರದೆಂಬ ಅಲಿಖಿತ ನಿಯಮವಿದೆ. ಈ ಅಲಿಖಿತ ನಿಯಮದ ಬಗ್ಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲವಾಗಿದೆ ಎಂದು ಹಿರಿಯ ಸಾಹಿತಿ ಜಗದೀಶ್ ಕೊಪ್ಪ ಹರಿಹಾಯ್ದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನ ನಡೆಸಲು ಕಬ್ಬು ಬೆಳೆದ ಸ್ಥಳವನ್ನು ಬಳಕೆ ಮಾಡುತ್ತಿದ್ದು, ಈತ ಸಾಹಿತ್ಯ ಸಮ್ಮೇಳನದ ಬದಲಿಗೆ ಜಾತ್ರೆ ನಡೆಸುತ್ತಿದ್ದಾನೆಯೇ. ವೇದಿಕೆಗೆ ೫ ಕೋಟಿ ರೂ ಖರ್ಚು ಮಾಡುತ್ತಿದ್ದಾರೆ. ಆತ್ಮಸಾಕ್ಷಿ ಇದೆಯೇ ? ಈ ಮನುಷ್ಯನ ಹುಚ್ಚಾಟಕೆ ಕಿವಿಗೊಟ್ಟು ಸುಮ್ಮನಿರುವ ರಾಜ್ಯ ಸರ್ಕಾರದ ನಿಲುವುಗಳಿಗೆ ನಮ್ಮ ಪ್ರತಿರೋಧವಿದೆ. ಇದು ಸಮ್ಮೇಳನವೇ ದಂಧೆಯೇ ಎಂದು ಪ್ರಶ್ನಿಸಿದರು.

೧೯೧೬ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಸೃಷ್ಠಿಸಿದ ಸಾಹಿತ್ಯ ಪರಿಷತ್ತಿಗೆ ಇದುವರೆಗೂ ಸಾಹಿತಿಗಳೇ ಅಧ್ಯಕ್ಷರಾಗಿದ್ದಾರೆ. ಹಾಲಿ ಅಧ್ಯಕ್ಷ ಸಾಹಿತ್ಯೇತರರು, ಕನ್ನಡ ಪರಿಚಾರಕರು ಏಕೆ ಆಗಬಾರದು ಎಂದು ಗೊಂದಲ ಸೃಷ್ಠಿಸುತ್ತಿದ್ದು, ನಾಡಿಗೆ ಸಾಹಿತ್ಯ ಲೋಕದ ದಿಗ್ಗಜರ ಮಾರ್ಗದರ್ಶನ ಪಡೆಯುವ ಉದ್ದೇಶದಿಂದ ಸಮ್ಮೇಳನಗಳು ನಡೆಯುತ್ತಿದ್ದು, ಸಾಹಿತ್ಯ ಪರಿಷತ್ತಿನ ಬೈಲಾದಲ್ಲಿ ಇಲ್ಲ ಎಂದು ಮಾತನಾಡುವುದು ಅವಿವೇಕದ ಪರಮಾವಧಿ ಎಂದು ಕಿಡಿಕಾರಿದರು.

ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಇಂದು ನಮ್ಮಲ್ಲಿ ತಾತ್ವಿಕ ಸಿದ್ದಾಂತದ ಆಧಾರದಡಿ ಭಿನ್ನಾಭಿಪ್ರಾಯವಿದೆ, ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಮುನ್ನ ಆಯಾ ಜಿಲ್ಲೆಗಳ ಹಿರಿಯ ಸಾಹಿತಿಗಳನ್ನು ಕರೆದು ಸಮಾಲೋಚನೆ ಮಾಡಬೇಕಾದುದ್ದು, ಅಧ್ಯಕ್ಷರ ಗಮನಕ್ಕೆ ಬರಲಿಲ್ಲವೇ ಎಂದು ಪ್ರಶ್ನಿಸಿದರು.

ಹಿರಿಯ ಸಾಹಿತಿಗಳನ್ನು ಕರೆದು, ತಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಏನೆಲ್ಲ ಇರಬೇಕು, ಏನಾಗಬೇಕು ಎಂಬ ಸಲಹೆ ಪಡೆಯುವ ಕನಿಷ್ಠ ಪ್ರಜ್ಞೆ ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನ ತಪ್ಪಲ್ಲವೇ ಎಂದು ಪ್ರಶ್ನೆ ಮಾಡಿದ ಅವರು ಸಾಹಿತಿಗಳಿಂದ ಚುನಾಯಿತನಾಗಿ ಬಂದಿದ್ದೇನೆ. ೬೮ ಸಾವಿರ ಮತಗಳಿಂದ ಗೆದ್ದೇನೆನ್ನುವ ಈತ ಇಂದ್ರಲೋಕದಿಂದ ಬಂದಿದ್ದಾನೆಯೇ ಎಂದು ಕಿಡಿ ಕಾರಿದರು.

ಕಾಸರಗೂಡಿನಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತೀರಿಕೊಂಡ ಮೂರು ತಿಂಗಳಿಗೆ ಅಧ್ಯಕ್ಷ ನೆನಪಾಗುತ್ತಾನೆ, ಮಂಡ್ಯ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಅಲ್ಲಿ ಸ್ಥಳೀಯ ಅಧ್ಯಕ್ಷಬೇಕೆಂದು ರಾಜ್ಯಾಧ್ಯಕ್ಷರಿಗೆ ಅನಿಸಲಿಲ್ಲವೇ? ಕರ್ನಾಟಕ ಪ್ರತಿ ಜಿಲ್ಲೆಗೆ ತನ್ನದೇ ಆದ ಸಾಂಸ್ಕೃತಿಕ ಗುಣವಿದೆ. ಭಾಷೆಯ ಪರಂಪರೆಯಿದೆ ಅದಕ್ಕೆ ಒಬ್ಬರು ಅಧ್ಯಕ್ಷರು ಬೇಕಲ್ಲವೇ ಎಂದು ಕೇಳಿದರು.

ಶ್ರೀರಂಗಪಟ್ಟಣದಲ್ಲಿ ಕಸಾಪ ಮಾಜಿ ಅಧ್ಯಕ್ಷ ಪಿ.ಡಿ.ತಿಮ್ಮಪ್ಪ ಟಿಪ್ಪು ಸುಲ್ತಾನ್ ಬಗ್ಗೆ ಗೋಷ್ಠಿ ನಡೆಸುವಂತೆ ಕೇಳಿದ ಪ್ರಶ್ನೆಗೆ ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿರಿಯ ಧರ್ಪ ತೋರಿದ್ದು, ಅಧ್ಯಕ್ಷನಾಗಿ ಸಮ್ಮೇಳನದಲ್ಲಿ ಮಂಡ್ಯ ಜಿಲ್ಲೆ ರೂಪುಗೊಂಡ ಬಗ್ಗೆ, ಇಲ್ಲಿನ ಸಾಹಿತಿಗಳ ಕೊಡುಗೆಗಳ ಬಗ್ಗೆ ಗೋಷ್ಠಿಗಳು ನಡೆಯಬೇಕು ಎಂದು ಸಲಹೆ ನೀಡಿದರು.

ಎಲ್ಲಾ ಕ್ಷೇತ್ರಗಳಲ್ಲೂ ಮಹನೀಯರಿದ್ದಾರೆ. ಆದರೆ ಅವರನ್ನು ಸನ್ಮಾನ ಮಾಡುವುದಕ್ಕೆ ಅಭ್ಯಂತರವಿಲ್ಲ, ಸಾಹಿತ್ಯ ಪರಿಷತ್ತಿ ದಿವ್ಯ ಪರಂಪರೆಯನ್ನು ಮಂಡ್ಯದ ನೆಲದಲ್ಲಿ ಮುರಿಯಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಅಧ್ಯಕ್ಷನಿಗೆ ತಿಳಿಹೇಳಿ ಕಿವಿ ಹಿಂಡಬೇಕಾದುದು ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸರ್ಕಾರ ನೈತಿಕ ಕರ್ತವ್ಯ ಎಂದು ತಾಕೀತು ಮಾಡಿದರು.

೨೬ ಮಠಾಧೀಶರ ಪತ್ರಗಳು ಬಂದಿವೆ ಎಂದು ಹೇಳುತ್ತಿದ್ದಾರೆ, ಬೇಬಿ ಮಠದ ಮಠಾಧೀಶರಿಗೆ ಬುದ್ದಿ ಬೆಳೆದಿಲ್ಲ, ಅದು ಅಕ್ಷರಸಹ ಬೇಬಿ ಮಠವೇ ಸರಿ ಎಂದ ಅವರು, ಅದು ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರಾಗಿಸಲು ಪತ್ರಗಳು ಬಂದಿವೆಯೆಂದು ಹೇಳುವುದು, ಅತ್ಯಂತ ಆತ್ಮವಂಚನೆಗೆ ಮಾತುಗಳು. ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡುವುದೇ ಆಗಿದ್ದರೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರನ್ನು ಅಖಿಲ ಭಾರತ ಕನ್ನಡ ಅಸಾಹಿತ್ಯ ಸಮ್ಮೇಳನ ಎಂದು ಬದಲಿಸಿಕೊಳ್ಳಲಿ ಕೆಂಡಕಾರಿದರು.

ಸಮ್ಮೇಳನವು ಬೆಂಗಳೂರು ಕೇಂದ್ರೀಕೃತವಾಗಿದ್ದು, ಅತಿಥೇಯ ಮಂಡ್ಯ ಸಮರ್ಥ ಪ್ರತಿನಿಧಿಗಳಿಲ್ಲದೇ ನಗಣ್ಯವಾಗಿದ್ದು, ಇದರ ಜವಾಬ್ದಾರಿಗಳು ಮತ್ತು ಅಧಿಕಾರಿಗಳು ವಿಕೇಂದ್ರೀಕರಣಗೊಳ್ಳಬೇಕು, ನಮ್ಮ ಊರಿನ ಸಮ್ಮೇಳನ ಸಾಹಿತ್ಯ ಸಮ್ಮೇಳನವಾಗಿಯೇ ನಡೆಯಬೇಕು. ಕಸಾಪ ಅಧ್ಯಕ್ಷರು ಸಾರ್ವಜನಿಕವಾಗಿ ಬಳಸುತ್ತಿರುವ ಭಾಷೆ, ಧೋರಣೆ ಮತ್ತು ನಡವಳಿಕೆಗಳನ್ನು ಸರಿಪಡಿಸಿಕೊಳ್ಳಬೇಕು. ಸಮ್ಮೇಳನದ ಸಮಸ್ತ ಖರ್ಚು ವೆಚ್ಚಗಳ ಸೋಷಿಯಲ್ ಆಡಿಟ್ ಕಡ್ಡಾಯವಾಗಿಸಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ, ಹಿರಿಯ ಸಾಹಿತಿ ಚಿಕ್ಕಮರಳಿ ಬೋರೇಗೌಡ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಹಿರಿಯ ವಕೀಲ ಬಿ.ಟಿ.ವಿಶ್ವನಾಥ್, ಸಿಐಟಿಯುನ ಸಿ.ಕುಮಾರಿ, ಜನಶಕ್ತಿಯ ಪೂರ್ಣಿಮಾ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!