ದೇಶದಲ್ಲಿ ಕಾರ್ಯಾಂಗ, ನ್ಯಾಯಾಂಗ, ಖಾಸಗಿ ಉದ್ಯಮ, ಮಾಧ್ಯಮ ಕ್ಷೇತ್ರಗಳ ಮೇಲ್ವರ್ಗದ ಕೈಯಲ್ಲಿವೆ, ಅವರು ಆಯಕಟ್ಟಿನ ಜಾಗದಲ್ಲಿದ್ದು ಎಲ್ಲವನ್ನೂ ನಿಯಂತ್ರಣ ಮಾಡುತ್ತಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಮಂಡ್ಯ ತಾಲೂಕಿನ ಕರಡಿಕೊಪ್ಪಲು ಗ್ರಾಮದಲ್ಲಿ ಕಾಂಗ್ರೆಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಸಿ. ಪುಟ್ಟಸ್ವಾಮಿಗೌಡ ಅವರು ನಿರ್ಮಿಸಿರುವ ಸಿದ್ದರಾಮಯ್ಯ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಸಂವಿಧಾನದಿಂದ ಶೋಷಿತರು ಹಾಗೂ ಹಿಂದುಳಿದವರು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಹಿಂದುಳಿದ ವರ್ಗದ ಜನರು ವೋಟ್ ಬ್ಯಾಂಕ್ ಆಗದೆ ಶಿಕ್ಷಣ ಪಡೆದು ಸಂಘಟಿತರಾಗಬೇಕು, ಹಕ್ಕುಗಳನ್ನು ಕೇಳಲು ಮುಂದಾಗಬೇಕು ಜಾತಿ ವ್ಯವಸ್ಥೆ ಇನ್ನೂ ಪೂರ್ತಿ ಹೋಗಿಲ್ಲ. ಶಾಸಕಾಂಗದಲ್ಲಿ ಮೀಸಲಾತಿ ಇರುವುದರಿಂದ ಹಿಂದುಳಿದವರು ಹಾಗೂ ಶೋಷಿತ ಸಮುದಾಯದವರು ಶಾಸಕರಾಗಲು ಸಾಧ್ಯವಾಗಿದೆ ಎಂದರು.
ಹಿಂದುಳಿದ ವರ್ಗಗಳು ಶಿಕ್ಷಣ ಪಡೆದರೆ ಮಾತ್ರ ತಮ್ಮ ಹಕ್ಕುಗಳಿಗೆ ಹೋರಾಟ ಮಾಡಬಹುದು. ಹಿಂದುಳಿದ ವರ್ಗಗಳ ಜಾತಿಗಳ ಕಾಂತರಾಜು ವರದಿಯ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಬಿಡುಗಡೆಯಾಗಿ ಅನುಷ್ಠಾನವಾಗಿದ್ದರೆ ಹಿಂದುಳಿದ ವರ್ಗಗಳಿಗೆ ಶಕ್ತಿ ಬಂದು ಮೀಸಲಾತಿ ಸಿಗುತ್ತಿತ್ತು.ಹಿಂದುಳಿದ ವರ್ಗದವರ ಪರ ಹೋರಾಟ ಮಾಡುತ್ತಿರುವವರಿಗೆ ಹಿಂದುಳಿದ ವರ್ಗಗಳು ಬೆಂಬಲ ಹಾಗೂ ಸಹಕಾರ ಕೊಡಬೇಕು ಎಂದು ಹೇಳಿದರು.

ಸ್ವಾರ್ಥ ಸೇವೆಯಲ್ಲಿ ಮುಳುಗಿರುವ ಜನರ ನಡುವೆ ಪುಟ್ಟಸ್ವಾಮಿಯವರು ಸ್ವಂತ ಖರ್ಚಿನಲ್ಲಿ ನಮ್ಮೂರಿನ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ನೀರಿನ ಘಟಕ ತೆರೆದಿದ್ದಾರೆ. ಸರ್ಕಾರ ಹಳ್ಳಿಗಳಲ್ಲಿ ಮೊದಲೆಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಿತ್ತು, ಈಗ ಅದನ್ನು ಸ್ಥಗಿತಗೊಳಿಸಿದೆ. ಕರಡಿಕೊಪ್ಪಲು ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಇಲ್ಲಿನ ನಾಯಕರ ಮೂಲಕ ಸರ್ಕಾರದ ಗಮನಕ್ಕೆ ತಂದು ಕೆಲಸ ಮಾಡಿಸಿಕೊಡುತ್ತೇನೆ ಎಂದು ತಿಳಿಸಿದರು.
ಡಾ.ಯತೀಂದ್ರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ
ಡಾ.ರಾಮ ಮನೋಹರ ಲೋಹಿಯ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ ಮಾತನಾಡಿ ಮುಂಬರುವ 2029ರ ಲೋಕಸಭಾ ಚುನಾವಣೆ ಯಲ್ಲಿ ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿ ಆಗಬೇಕು, 2028ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಯ್ಕೆ ಯಾಗಲಿ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಪಂಚವೇ ಕಂಡರಿಯದ ಗ್ಯಾರಂಟಿ ಯೋಜನೆಗಳ ಮೂಲಕ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಭದ್ರತೆ ಕೊಟ್ಟವರು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ರಿಯಲ್ ಎಸ್ಟೇಟ್ ನವರು ಅಧಿಕಾರವಿದ್ದಾಗ ಅವರ ಜೊತೆ ನಿಲ್ಲುತ್ತಾರೆ ಅಧಿಕಾರವಿಲ್ಲದಾಗ ಅವರ ಜೊತೆ ಯಾರು ನಿಲ್ಲಲ್ಲ. ಅವರು ಬೇರೆ ಪಕ್ಷಗಳ ಜೊತೆ ಹೋಗುತ್ತಾರೆ. ಆದ್ದರಿಂದ ಸಿದ್ದರಾಮಯ್ಯ ಅವರು ಗ್ಯಾರಂಟಿ ಡ್ಯಾಮ್ ಕಟ್ಟಿದ್ದಾರೆ. ಸಾಮಾಜಿಕ ಹಾಗೂ ಸಂವಿಧಾನದ ಡ್ಯಾಮ್ ಗಳು ರಾಜ್ಯದಲ್ಲಿ ಉಳಿಯಬೇಕಾದರೆ ಅದರ ನಾಯಕತ್ವವನ್ನು ಯತಿಂದ್ರ ಸಿದ್ದರಾಮಯ್ಯ ನಾಯಕತ್ವ ವಹಿಸಬೇಕಾಗುತ್ತದೆ ಎಂದರು.
ಪುಟ್ಟಸ್ವಾಮಿಗೌಡ ಸ್ವಂತ ಗಳಿಕೆ ಹಣ ತಂದು ಶುದ್ಧ ಕುಡಿಯುವ ನೀರಿನ ಘಟಕ ಮಾಡಿದ್ದಾರೆ. ಊರಿನ ಮಣ್ಣಿನ ಋಣ ತೀರಿಸುವ ದೃಷ್ಟಿಯಿಂದ ಬದ್ಧತೆಯಿಂದ ಈ ಕೆಲಸ ಮಾಡಿದ್ದಾರೆ.ಅಂತಹವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ಬೆಂಬಲಿಸಬೇಕು ಎಂದರು.
ಬಡವರು,ದಲಿತರು,ಹಿಂದುಳಿದ ವರ್ಗಗಳು ಅನಾಥವಾಗಿವೆ ಇಂಥವರಿಗೆ ರಾಜಕೀಯ ನಾಯಕತ್ವ ಕೊಡಬೇಕು,ಸಾಮಾಜಿಕ ಭದ್ರತೆ ಸಾಮಾಜಿಕ ನ್ಯಾಯ ಕೊಡಿಸ ಬೇಕಾದರೆ ನಿಮ್ಮಂತವರಿಂದ ಮಾತ್ರ ಸಾಧ್ಯ. ಅಂದು ಸಿದ್ದರಾಮಯ್ಯ ಪರ ಹೋರಾಟ ಮಾಡಿರುವ ರೀತಿ ಯತೀಂದ್ರ ಪರ ಹೋರಾಟ ಮಾಡುತ್ತೇನೆ.ನನ್ನ ಜೀವ ಇರುವವರೆಗೂ ಅಹಿಂದ ಪರ ನಿಂತು ಹೋರಾಟ ರೂಪಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ಶಾಸಕ ಡಿ.ರವಿಶಂಕರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಜೆ.ಗೋಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಸಿ. ಪುಟ್ಟಸ್ವಾಮಿಗೌಡ, ಮಂಜೇಗೌಡ ಶಶಿಧರ್, ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.




