Thursday, September 19, 2024

ಪ್ರಾಯೋಗಿಕ ಆವೃತ್ತಿ

ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸ ಹೆಚ್ಚಿಸಿದ ಮಂಡ್ಯ ಮೂಲದ ಸುಪ್ರೀಂ ನ್ಯಾಯಮೂರ್ತಿ ಬಿ.ವಿ.ನಾಗರತ್ನ

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿಈಗಲೂ ಜನರಿಗೆ ಅಪರಿಮಿತ ವಿಶ್ವಾಸ. ಅಂತಹ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಪ್ರಕರಣದ ತೀರ್ಪು ಸೋಮವಾರ ಪ್ರಕಟವಾಯಿತು. ಅದು ಗುಜರಾತ್‌ನಲ್ಲಿ ಎರಡು ದಶಕದ ಹಿಂದೆ ನಡೆದಿದ್ದ ಅತ್ಯಾಚಾರ ಹಾಗೂ ಏಳು ಮಂದಿ ಕೊಲೆ ಪ್ರಕರಣ. ನ್ಯಾಯಕ್ಕಾಗಿ ಎರಡು ದಶಕದಿಂದ ಹೋರಾಡುತ್ತಲೇ ಇದ್ದ ಮಹಿಳೆಯೊಬ್ಬರಿಗೆ ನ್ಯಾಯ ನೀಡಿದ್ದು ಮತ್ತೊಬ್ಬ ಹೆಣ್ಣು. ಆ ದಿಟ್ಟತನದ ತೀರ್ಪು ನೀಡಿದವವರು ಹೆಮ್ಮೆಯ ನ್ಯಾಯಮೂರ್ತಿ ಬಿ.ವಿ.ನಾಗರತ್ನ. ನಾಗರತ್ನ ಅವರು ಅಪ್ಪಟ ಕನ್ನಡತಿ. ಈ ಹಿಂದೆ ತಮ್ಮ ತಂದೆ ಕುಳಿತಿದ್ದ ನ್ಯಾಯಮೂರ್ತಿ ಹುದ್ದೆಯಲ್ಲಿಯೇ ಕುಳಿತ ನಾಗರತ್ನ ಬಲ್ಕಿಸ್‌ ಬಾನೋ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿ ಇಡೀ ದೇಶದ ಗಮನ ಸೆಳೆದಿದ್ದಾರೆ.

ನಾಗರತ್ನ ಅವರು ಎರಡು ದಶಕ ನ್ಯಾಯವಾದಿಯಾಗಿ, ಆನಂತರ ಒಂದೂವರೆ ದಶಕದ ಅವಧಿಯಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಹಾಗೂ ಈಗ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ತಮ್ಮ ತೀರ್ಪುಗಳ ಮೂಲಕವೇ ಗಮನ ಸೆಳೆದವರು. ಹಲವಾರು ಪ್ರಕರಣಗಳಲ್ಲಿ ಅವರು ನೀಡಿದ ತೀರ್ಪು ಅದಕ್ಕೆ ಉದಾಹರಣೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಬೆಟ್ಟದ ಅನತಿ ದೂರದಲ್ಲಿರುವ ಇಂಗಲಗುಪ್ಪೆ ಎಂಬ ಪುಟ್ಟ ಗ್ರಾಮದ ಪ್ರತಿಭೆ ನಾಗರತ್ನ. ಇವರ ತಂದೆ ಇ.ಎಸ್‌.ವೆಂಕಟರಾಮಯ್ಯ ಅವರು ನ್ಯಾಯವಾದಿಯಾಗಿ, ನ್ಯಾಯಮೂರ್ತಿಯಾಗಿದ್ದವರು. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿಯು ಸೇವೆ ಸಲ್ಲಿಸಿದವರು. ನ್ಯಾಯಾಂಗದಲ್ಲಿ ಘನತೆಯಿಂದ ಕೆಲಸ ಮಾಡಿ ಇತಿಹಾಸವಾಗಿರುವ ತಂದೆ ವೆಂಕಟರಾಮಯ್ಯ ಅವರಂತೆಯೇ ಮಗಳೂ ಕೂಡ.

ಬೆಂಗಳೂರು ವೆಂಕಟರಾಮಯ್ಯ ನಾಗರತ್ನ( BV Nagaratna) ಅವರು ಮೂಲತಃ ಮಂಡ್ಯ ಜಿಲ್ಲೆಯವರಾದರೂ ಜನಿಸಿದ್ದು ಬೆಂಗಳೂರಿನಲ್ಲಿ. ಈ ಕಾರಣದಿಂದ ಅವರ ಹೆಸರಿನೊಂದಿಗೆ ಬೆಂಗಳೂರು ಸೇರಿಕೊಂಡಿದೆ. ಅವರು ಜನಿಸಿದ್ದು 1962 ರ ಅಕ್ಟೋಬರ್ 30ರಂದು. ಬೆಂಗಳೂರಿನಲ್ಲಿಯೇ ಶಿಕ್ಷಣ. ಆದರ್ಶ ನ್ಯಾಯವಾದಿಯಾಗಿ ಆನಂತರ ನ್ಯಾಯಮೂರ್ತಿಯೂ ಆದ ಅಪ್ಪ ವೆಂಕಟರಾಮಯ್ಯ ಅವರಂತೆ ತಾನೂ ನ್ಯಾಯವಾದಿ ಆಗಬೇಕು ಎಂಬ ಕನಸು ಕಂಡವರು ನಾಗರತ್ನ. ಅಪ್ಪನ ಆಶಯವೂ ಅದೇ ಆಗಿತ್ತು. ಅದು ಈಡೇರಿತು ಕೂಡ. ಬೆಂಗಳೂರು ಹಾಗೂ ದೆಹಲಿಯಲ್ಲಿ ಕಾನೂನು ಶಿಕ್ಷಣ ಪಡೆದವರು. ಅದರಲ್ಲಿ ದೆಹಲಿ ಕಾನೂನು ಕಾಲೇಜಿನಲ್ಲಿ ಅವರು ಪಡೆದ ಶಿಕ್ಷಣ ಅವರನ್ನು ಅತ್ಯುತ್ತಮ ನ್ಯಾಯವಾದಿಯನ್ನಾಗಿ ರೂಪಿಸಲು ಕಾರಣವಾಯಿತು.

1987ರಲ್ಲಿ ಬೆಂಗಳೂರಿನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ನಾಗರತ್ನ ಅವರು ನ್ಯಾಯವಾದಿಯಾಗುವ ಸಮಯದಲ್ಲಿ ತಂದೆ ವೆಂಕಟರಾಮಯ್ಯ ಸುಪ್ರೀಂಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿ. ಇದರಿಂದ ದೆಹಲಿಯಲ್ಲಿಯೇ ಶಿಕ್ಷಣ ಪಡೆಯುವಂತಾಯಿತು. ಆದರೆ ನಾಗರತ್ನ ದೆಹಲಿ ಬದಲು ಕರ್ನಾಟಕ ಬಾರ್‌ ಕೌನ್ಸಿಲ್‌ ಸದಸ್ಯರಾದರು. ಸತತ 21 ವರ್ಷಗಳ ಕಾಲ ನಾಗರತ್ನ ಬೆಂಗಳೂರಲ್ಲೇ ನ್ಯಾಯವಾದಿಯಾಗಿ ಹತ್ತಾರು ಪ್ರಕರಣಗಳಲ್ಲಿ ನ್ಯಾಯ ಕೊಡಿಸಲು ಹೋರಾಡಿದವರು.

2008ರಲ್ಲಿ ಕರ್ನಾಟಕದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನಾಗರತ್ನ ಅವರು ನಿಯೋಜನೆಗೊಂಡರು. ಇದಾದ ಎರಡು ವರ್ಷದಲ್ಲಿಯೇ ಖಾಯಂ ನ್ಯಾಯಮೂರ್ತಿಗಳೂ ಆದರು. 2010ರಿಂದ ಹತ್ತು ವರ್ಷಗಳ ಕಾಲ ಕರ್ನಾಟಕದಲ್ಲಿಯೇ ನ್ಯಾಯಮೂರ್ತಿಯಾಗಿ ಗಮನಾರ್ಹ ಕೆಲಸ ಮಾಡಿದ್ದು ಅವರ ವಿಶೇಷ. 2009ರಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಡಿ.ದಿನಕರನ್‌ ಹಾಗೂ ಇತರೆ ನ್ಯಾಯಮೂರ್ತಿಗಳೊಂದಿಗೆ ಕೆಲಸ ಮಾಡುವಾಗ ನಾಗರತ್ನ ಅವರನ್ನು ವಕೀಲರ ಗುಂಪು ದಿಗ್ಬಂಧನ ಹಾಕಿತ್ತು. ಇಂತಹ ಬೆದರಿಕೆಗೆ ಜಗ್ಗುವುದಿಲ್ಲ ಎಂದು ನಾಗರತ್ನ ಅವರು ಹೇಳಿದ್ದು ಗಮನ ಸೆಳೆದಿತ್ತು.

ಭಾರತದಲ್ಲಿ ಮಾಧ್ಯಮದ ಮೇಲೆ ನಿಯಂತ್ರಣದ ಹಾಗೂ ನಕಲಿ ಸುದ್ದಿಗಳ ನಿಯಂತ್ರಣಕ್ಕೆ ಅವರು ನೀಡಿದ್ದ ಸೂಚನೆ ಗಮನ ಸೆಳೆದಿತ್ತು. ಕರ್ನಾಟಕದಲ್ಲಿ ವಾಹನ ತೆರಿಗೆ ವಿಚಾರದಲ್ಲಿ ಹೇರಲಾಗಿದ್ದ ಜೀವಮಾನ ತೆರಿಗೆ ರದ್ದಿಗೆ ಇವರ ತೀರ್ಪೇ ಕಾರಣವಾಯಿತು. ದೇವಾಲಯಗಳಲ್ಲಿನ ನೌಕರರಿಗೂ ಕಾನೂನು ಅನ್ವಯಿಸುತ್ತದೆ. ದೇವಾಲಯಗಳೇನು ವಾಣಿಜ್ಯ ಸಂಸ್ಥೆಗಳಲ್ಲ ಎಂದು ನೌಕರರ ಪರ ತೀರ್ಪು ನೀಡಿದ್ದರು. ಕರ್ನಾಟಕದ ಕಾಲೇಜುಗಳಲ್ಲಿ ಪ್ರವೇಶಗಳ ಪ್ರಮಾಣೀಕರಿಸುವ ಕುರಿತು ನೀಡಿದ ತೀರ್ಪು ಕೂಡ ಮಹತ್ವದ್ದಾಗಿದೆ. ಹೀಗೆ ಹತ್ತಾರು ಪ್ರಕರಣಗಳಲ್ಲಿ ಅವರು ನೀಡಿದ ನಿರ್ದೇಶನಗಳು ಹಲವಾರು ಮಂದಿಗೆ ನೆರವಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ ಇದೇ ಕಾರಣದಿಂದ ಅವರನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ 2020 ರಲ್ಲಿ ನಿಯೋಜಿಸಲಾಯಿತು. ಮರು ವರ್ಷ 2021ರಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಅವರು ಅಧಿಕೃತವಾಗಿ ನೇಮಕಗೊಂಡು ಮೂರು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ

ಕೋವಿಡ್‌ ಪೀಡಿತ ಪ್ರದೇಶಗಳಲ್ಲಿ ಮಧ್ಯಾಹ್ನದ ಊಟ ನಿಲ್ಲಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್‌ನ ಪೀಠದಲ್ಲಿ ನಾಗರತ್ನ ಅವರಿದ್ದರು. ಇದಲ್ಲದೇ ಕೋವಿಡ್‌ ವೇಳೆ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ನೆರವಿಗೂ ನಾಗರತ್ನ ಅವರಿದ್ದ ಪೀಠ ಧಾವಿಸಿತ್ತು.

ಅಪ್ಪನ ಹುದ್ದೆಯಲ್ಲಿ ಮಗಳು
ನ್ಯಾಯದಾನದ ವಿಚಾರ ಬಂದಾಗ ನೊಂದವರು, ಸಂಕಷ್ಟಕ್ಕೆ ಸಿಲುಕಿದವರು, ತುಳಿತಕ್ಕೆ ಒಳಗಾದವರು ಸಂವಿಧಾನದ ರಕ್ಷಣೆಯನ್ನು ಪಡೆದುಕೊಳ್ಳಲೇಬೇಕು ಎನ್ನುವುದನ್ನು ತಮ್ಮ ಕೃತಿಯಲ್ಲಿ ತೋರಿಸಿಕೊಟ್ಟವರು ನಾಗರತ್ನ ಅವರು.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿದ ಮಹಿಳೆ ಎನ್ನಿಸಲಿದ್ದಾರೆ. ಅದಕ್ಕಿಂತ ಅವರ ತಂದೆ ಕುಳಿತು ನ್ಯಾಯದಾನ ಮಾಡಿದ ಸ್ಥಾನದಲ್ಲಿಯೇ ಕುಳಿತು ಈ ಹುದ್ದೆ ಅಲಂಕರಿಸಿದ ಭಾರತದ ತಂದೆ- ಮಗಳು ಎಂಬ ಹಿರಿಮೆಯೊಂದಿಗೆ ಕನ್ನಡದ ಗರಿಮೆಯನ್ನೂ ಹೆಚ್ಚಿಸಲಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!