Saturday, November 21, 2026

ಪ್ರಾಯೋಗಿಕ ಆವೃತ್ತಿ

ದಲಿತನ ಸಜೀವ ದಹನ ಪ್ರಕರಣ | ಪೊಲೀಸರ ಕರ್ತವ್ಯಲೋಪ ; ನಾರಾಯಣಸ್ವಾಮಿ ಕಿಡಿ

ಜಯಕುಮಾರ್ ಅವರ ಜಮೀನಿನಲ್ಲಿ ಹುಲ್ಲಿನ ಮೆದೆಯನ್ನು ಅಕ್ರಮವಾಗಿ ಹಾಕಿಕೊಂಡು ದಲಿತ ರೈತನಿಗೆ ಕೊಲೆ ಬೆದರಿಕೆ ಹಾಕಿ ನಿನ್ನ ಕುಟುಂಬವನ್ನು ಜೀವಂತವಾಗಿ ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವ ಕೊಲೆ ಆರೋಪಿ ಅನಿಲ್ ನ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳದ ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ದಲಿತ ರೈತ ಜಯಕುಮಾರ್ ಜೀವಂತವಾಗಿ ದಹನವಾದ ಘಟನೆ ನಡೆದಿರುವ ಕೆ.ಆರ್. ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮಕ್ಕೆ ಅವರು ಇಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿದರು.

ಕತ್ತರಘಟ್ಟ ಗ್ರಾಮದಲ್ಲಿ ದಲಿತ ರೈತ ಜೀವಂತವಾಗಿ ಸುಟ್ಟು ಕರಕಲಾಗಿರುವ ಘಟನೆಯನ್ನು ಪೊಲೀಸರು ಆತ್ಮಹತ್ಯೆ ಪ್ರಕರಣವೆಂದು ಕೇಸು ದಾಖಲಿಸಿ ಬಡ ರೈತನ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಬಡ ರೈತನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ತಪ್ಪಿತಸ್ಥನ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ದಲಿತ ರೈತ ಜಯಕುಮಾರ್ ಜಮೀನಿನಲ್ಲಿ ಹುಲ್ಲಿನ ಮೆದೆ ಹಾಕಿಕೊಂಡಿರುವ ಒಂದು ಎಕರೆ 20ಗುಂಟೆ ಜಮೀನು ಹಾಗೂ ನಮೂನೆ 57ಅಡಿಯಲ್ಲಿ ಅರ್ಜಿ ಸಲ್ಲಿಸಿ ವ್ಯವಸಾಯ ಮಾಡುತ್ತಿರುವ 2 ಎಕರೆ 20ಗುಂಟೆ ಜಮೀನನ್ನು ಪತ್ನಿ ಲಕ್ಷ್ಮಿಯ ಹೆಸರಿಗೆ ಮಂಜೂರು ಮಾಡಿ ತಂತಿ ಬೇಲಿ ಹಾಕಿಸಿ ಸ್ವಾಧೀನಕ್ಕೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಡಾ.ಅಶೋಕ್ ಆವರಿಗೆ ಸೂಚನೆ ನೀಡಿದರು.

ಕೃಷ್ಣರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಮುಖಂಡರಾದ ಕತ್ತರಘಟ್ಟ ರಾಜೇಶ್, ಲಕ್ಷ್ಮೀಪುರ ರಂಗಸ್ವಾಮಿ, ಛಲವಾದಿ ಮಹಾಸಭಾ ಜಿಲ್ಲಾ ಅಧ್ಯಕ್ಷ ಮಾಂಬಳ್ಳಿ ಜಯರಾಮ್, ದಯಾನಂದ, ಸುನಿಲ್, ಕೆ.ವಿನೋದ್, ರವಿಶಿವಕುಮಾರ್, ಅಗ್ರಹಾರ ಬಾಚಹಳ್ಳಿ ಜಗಧೀಶ್, ಕಮಲಾಕ್ಷಿ ನಾಗರಾಜು, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ