ವರದಿ : ಧರಣೇಶ್
ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಪುತ್ಥಳಿಗೆ ರೈತ ಸಂಘಟನೆ, ಪ್ರಗತಿಪರ ಸಂಘಟನೆಯ ಮುಖಂಡರು ಮಾಲಾರ್ಪಣೆ ಮಾಡುವ ಮೂಲಕ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ಜನ್ಮದಿನವನ್ನು ಹೋರಾಟದ ದಿನವಾಗಿ ಆಚರಣೆ ಮಾಡಿದರು.
ರೈತ ಮುಖಂಡ ಕೀಲಘಟ್ಟದ ನಂಜುಂಡಯ್ಯ ಮಾತನಾಡಿ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ರಾಜ್ಯದಲ್ಲಿ ಅಸಂಘಟಿತ ರೈತರನ್ನು ಸಂಘಟಿಸುವ ಮೂಲಕ ರೈತರ ಹೆಸರಿನಲ್ಲಿ ಬೃಹತ್ ರೈತ ಸಂಘಟನೆಯನ್ನು ಸ್ಥಾಪನೆ ಮಾಡಿ, ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ, ಕೃಷಿ ಭೂಮಿಗೆ ವಿದ್ಯುತ್ ಸೇರಿದಂತೆ ಹತ್ತು ಹಲವು ಹೋರಾಟಗಳನ್ನು ಮಾಡುವ ಮೂಲಕ ರಾಜ್ಯ, ದೇಶವಲ್ಲದೆ ವಿದೇಶಗಳಲ್ಲಿ ರೈತರಿಗೆ ದನಿಯಾದವರು. ಇಂತಹ ಮಹಾನ್ ಚೈತನ್ಯ ಜನಿಸಿದ ದಿನವನ್ನು ನಾವು ಹೋರಾಟದ ದಿನವೆಂದು ಆಚರಿಸುವ ಮೂಲಕ ಅವರ ಶೋಷಣೆಯ ವಿರುದ್ಧದ ಹೋರಾಟಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ರೈತ ಸಂಘಟನೆ ಹಲವು ಬೇಡಿಕೆಗಳನ್ನು ಒತ್ತಾಯಿಸಿ ತಾಲ್ಲೂಕು ಗ್ರೇಡ್-2 ತಹಶೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಮುಖಂಡರಾದ ಅಣ್ಣೂರು ಮಹೇಂದ್ರ, ಗುಡಿಗೆರೆ ಶಿವಲಿಂಗಯ್ಯ, ಸೊ ಸಿ ಪ್ರಕಾಶ್, ದಯಾನಂದ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಉಮಾಶಂಕರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಶ್ರೀಕ ಶ್ರೀನಿವಾಸ್ ಆರ್, ಮಮತಾ ಶಂಕರೇಗೌಡ, ಮರಿಲಿಂಗ, ರಮೇಶ್, ವೆಂಕಟೇಶ್, ಇತರರಿದ್ದರು.




