Friday, November 20, 2026

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಕೈಗಾರಿಕೆಗಳು ಅವಶ್ಯಕ – ಕೆ.ಶಿವಲಿಂಗಯ್ಯ

ಕೃಷಿ ಪ್ರದೇಶವಾದ ಮಂಡ್ಯದ ಬೆಳೆಗಳಿಗೆ ಮೌಲ್ಯವರ್ಧಿತ ಬೆಲೆ ಸಿಗಬೇಕಾದರೆ, ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಕೈಗಾರಿಕೆಗಳು ಅವಶ್ಯಕ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ ಅಭಿಪ್ರಾಯಪಟ್ಟರು.

ಮಂಡ್ಯ ಜಿಲ್ಲಾ ಮುದ್ರಣ ಮಾಲೀಕರ ಸಂಘದ ವತಿಯಿಂದ ಮುದ್ರಣ ರಂಗದ ಪಿತಾಮಹ ಜೊಹಾನ್ಸ್ ಗುಟೆನ್‌ಬರ್ಗ್ ಸವಿನೆನಪಿನಲ್ಲಿ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಮುದ್ರಣಕಾರರ ದಿನಾಚರಣೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಒಂದು ಪ್ರದೇಶದ ಅಭಿವೃದ್ಧಿಗೆ ಕೈಗಾರಿಕೀಕರಣ ಪೂರಕವಾಗಿದ್ದು ಅದರ ಅವಶ್ಯಕತೆ ಇದೆ. ಬೆಂಗಳೂರು ಮೈಸೂರುಗಳ ನಡುವೆ ಇರುವ ಮಂಡ್ಯಕ್ಕೆ ದಶಪಥ ರಸ್ತೆ, ಉತ್ತಮ ರೈಲು ವ್ಯವಸ್ಥೆಯ ಸಂಪರ್ಕವಿದ್ದು ಮುದ್ರಣ ಕ್ಷೇತ್ರದ ಕ್ಲಸ್ಟರ್ ತೆರೆಯಲು ಸೂಕ್ತ ಪ್ರದೇಶವಾಗಿದೆ. ಹಸಿರು ಕ್ರಾಂತಿ, ಕ್ಷೀರಕ್ರಾಂತಿ ಆಗಿದ್ದು, ಉದ್ಯೋಗ ಕ್ರಾಂತಿಗೆ ಕೈಗಾರಿಕೆಗಳು ಅವಶ್ಯಕ ಎಂದು ಪ್ರತಿಪಾದಿಸಿದರು.

ಕೈಗಾರಿಕೆ ಬಂದರೆ ಮಹಿಳಾ ಸಬಲೀಕರಣಕ್ಕೂ ನೆರವಾಗುತ್ತದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೈಗಾರಿಕೀಕರಣದಲ್ಲಿ ಜಿಲ್ಲೆ ಹಿಂದುಳಿದಿದೆ.ವಿವಿಧ ರೀತಿಯ ಚಳುವಳಿಗಳು ಕೈಗಾರಿಕೆ ನಿರ್ಮಾಣಕ್ಕೆ ಹಿನ್ನಡೆ ಉಂಟು ಮಾಡಿದೆ.ಅದಕ್ಕೆ ಬೇಕಾದ ವಾತಾವರಣವನ್ನು ಇಲ್ಲಿಯ ಜನತೆ ನಿರ್ಮಾಣ ಮಾಡಬೇಕು ಎಂದರು.
ಸರ್ಕಾರ ಬೆಂಗಳೂರಿನ ನಂತರ ಎರಡನೇ ಹಂತದ ನಗರಗಳ ಬೆಳವಣಿಗೆಗೆ ಆದ್ಯತೆ ನೀಡಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸೂಚಿಸಿದರು.

ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು

ಸಮಾರಂಭ ಉದ್ಘಾಟಿಸಿದ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿ, 14ನೇ ಶತಮಾನದಲ್ಲಿ ಮುದ್ರಣ ರಂಗದ ಪಿತಾಮಹ ಜೊಹಾನ್ಸ್ ಗುಟೆನ್ ಬರ್ಗ್ ಮುದ್ರಣ ಯಂತ್ರವನ್ನು ಕಂಡುಹಿಡಿದ ನಂತರ ಅಕ್ಷರ ಜೋಡಣೆಯಿಂದ ಪ್ರಾರಂಭವಾದ ಮುದ್ರಣ ಕಾರ್ಯ ಇಂದು ವೆಬ್ ಮುದ್ರಣದ ಹಂತಕ್ಕೆ ಬಂದು ನಿಂತಿದೆ. ಅವರಿಂದಾಗಿ ಇಂದು ಕೋಟ್ಯಂತರ ರೂ.ಗಳ ವ್ಯವಹಾರ ನಡೆಯುತ್ತಿದೆ ಎಂದು ಕೃತಜ್ಞತೆ ಅರ್ಪಿಸಿದರು. ಮುದ್ರಣ ಕ್ಷೇತ್ರದ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಅಭಿಪ್ರಾಯಪಟ್ಟರು.

ಮಂಡ್ಯ ಜಿಲ್ಲಾ ಮುದ್ರಣ ಮಾಲೀಕರ ಸಂಘದ ಉಪಾಧ್ಯಕ್ಷ ಜೆ.ಲಕ್ಷ್ಮಿನಾರಾಯಣ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಭೆ ಆರಂಭಕ್ಕೂ ಮುನ್ನ ಮುದ್ರಣ ರಂಗದ ಪಿತಾಮಹ ಜೊಹಾನ್ಸ್ ಗುಟೆನ್ ಬರ್ಗ್ ಅವರ ಚಿತ್ರಪಟಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಮುದ್ರಣ ಮಾಲೀಕರ ಸಂಘದ ಅಧ್ಯಕ್ಷ ಪಿ.ರಾಜಣ್ಣ ದಂಪತಿ ಹಾಗೂ ಕೆ.ಆರ್.ವಿ.ಪ್ರಿಂಟರ್ಸ್ ಮಾಲೀಕ ಹೆಚ್.ಎಲ್.ನಾರಾಯಣ್ ಅವರನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಸಂಚಾಲಕ ಎಂ.ಮಹೇಶ್ ಕುಮಾರ್, ಜಿಲ್ಲಾ ಮುದ್ರಣ ಮಾಲೀಕರ ಸಂಘದ ಪದಾಧಿಕಾರಿಗಳಾದ ಎಂ.ಎಸ್.ಸತೀಶ್, ಎಂ.ಎಸ್.ಶಿವಪ್ರಕಾಶ್ ಹಾಗೂ ಸದಸ್ಯರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ