ನಮ್ಮ ಪೂರ್ವಜರು ಕನ್ನಡ ಭಾಷೆಯನ್ನು ಮಾತನಾಡಿಕೊಂಡು ಬಂದಿರುವವರೇ ಆಗಿದ್ದಾರೆ, ಬೇರೆಯವರು ವ್ಯಾಪಾರ ವ್ಯವಹಾರಕ್ಕಾಗಿ ನಮ್ಮ ಕನ್ನಡ ನಾಡಿಗೆ ಬಂದು ನೆಲೆ ನಿಂತು ಕನ್ನಡ ಕಲಿತು ಕನ್ನಡದಲ್ಲಿ ವ್ಯವಹಾರ ಮಾಡುತ್ತಿದ್ದಾರೆ, ನಮ್ಮಲ್ಲಿ ಮಾರವಾಡಿಗಳು, ಮರಾಠಿಗರು, ತಮಿಳು, ತೆಲುಗು, ಹಿಂದಿ ಇತರೆ ಭಾಷಿಗರು ಕನ್ನಡ ಭಾಷೆಗೆ ಹೊಂದಿಕೊಂಡು ಹೋಗುತ್ತಿದ್ದಾರೆ, ಮಾತೃಭಾಷೆ ಕನ್ನಡಕ್ಕೆ ಸಹೃದಯತೆ ಇದೆ, ಮಾತೃತ್ವ ಗುಣವಿದೆ ಎಂದು ಮಳವಳ್ಳಿ ತಾಲ್ಲೂಕಿ 7ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ ಪಿ.ಸುಂದ್ರಪ್ಪ ಲಿಂಗಪಟ್ಟಣ ತಿಳಿಸಿದರು.
ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಿಂತ ಮಂಡ್ಯ ಜಿಲ್ಲೆ ಶೇ90 ರಷ್ಟು ಭಾಗ ಹಚ್ಚ ಕನ್ನಡ ಭಾಷೆಯನ್ನೆ ಮಾತನಾಡುವ ಜಿಲ್ಲೆಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಭಾಷೆಗಳ ಮಿಶ್ರಣವಿಲ್ಲ, ಮಳವಳ್ಳಿ ತಾಲ್ಲೂಕಿನ ಕನ್ನಡಿಗರು ವಿದೇಶದಲ್ಲಿ ವಾಸವಾಗಿದ್ದಾರೆ, ಆಂಗ್ಲ ಭಾಷೆಯನ್ನು ವ್ಯವಹಾರಕ್ಕಾಗಿ ಕಲಿಯಬೇಕೇ ಹೊರತು ಕಲಿಯಲು ಬೇಡವೆಂತಲ್ಲ, ಮೊದಲು ತಾಯಿ, ನಾಡು ನುಡಿಗೆ ಆದ್ಯತೆ ನೀಡಬೇಕು. ಎಲ್ಲಾ ಭಾಷೆಯ ಬಗ್ಗೆಯೂ ಸಹಾನೂಭೂತಿ ಇರಬೇಕೇ ವಿನಹಃ ಅಪ್ಪಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ನಮ್ಮ ಸರ್ಕಾರ ಕನ್ನಡ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ ಶಾಲೆಗಳು ಅಭಿವೃದ್ಧಿಗೊಳಿಸಬೇಕು, ಕನ್ನಡ ನಾಡಿನ ಜನ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿ ಕನ್ನಡ ಭಾಷೆ ಈ ನೆಲದಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡಬೇಕು, ಸರ್ಕಾರಿ ಸವಲತ್ತು ಪಡೆಯುವವರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು ಎಂಬ ನಿಯಮವಾಗಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಸರ್ಕಾರಿ ಹುದ್ದೆಗಳಲ್ಲಿ ಹೆಚ್ಚು ಆದ್ಯತೆ ನೀಡಬೇಕು. ಈ ರೀತಿಯಾದಾಗ ಕನ್ನಡ ಶಾಲೆಗಳ ಸ್ಥಿತಿ-ಗತಿ ಸ್ವಲ್ಪ ಮಟ್ಟಿಗಾದರೂ ಸುಧಾರಣೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಬಾಷೆಯಲ್ಲಿ ಓದಿ ಉನ್ನತ ಹುದ್ದೆ ಆಲಂಕರಿಸಿರುವ ಮಳವಳ್ಳಿಯ ಎಂ. ನಂಜುಂಡಸ್ವಾಮಿ ಐ.ಪಿ.ಎಸ್. ಅಧಿಕಾರಿ ಆಗಿದ್ದಾರೆ, ಹಲಗೂರು ಹೋಬಳಿಯ ಮಾರಗೌಡನಹಳ್ಳಿಯ ಡಾ.ಎಂ.ಜೆ.ಅಭಿಷೇಕ್ಗೌಡ ಎಂಬುವವರು ಐ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಸ್ತುತ ಅಸ್ಸಾಂ ರಾಜ್ಯದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಡಾ. ಲಕ್ಷ್ಮಿ ಆಶ್ವಿನ್ಗೌಡ ಎನ್ ಕೋಡಿಹಳ್ಳಿ ಅವರು ಐ.ಆರ್.ಎಸ್. ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರುವುದು ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ತ್ರಿವರ್ಣ ಧ್ವಜಾರೋಹಣವನ್ನು ಶಾಸಕ ಡಾ. ಕೆ ಅನ್ನದಾನಿ, ನಾಡಧ್ವಜಾರೋಹನವನ್ನು ತಹಶೀಲ್ದಾರ್ ಕೆ.ಎನ್ ಲೋಕೇಶ್, ಪರಿಷತ್ತಿನ ಧ್ವಜಾರೋಹನವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿಕೆ ರವಿಕುಮಾರ್ ಚಾಮಲಪುರ ನರೆವೇರಿಸಿದರು.
ಮಳವಳ್ಳಿ ತಾಲ್ಲೂಕು ಪಂಚಾಯಿತಿಯಿಂದ ಜಾನಪದ ಕಲಾಮೇಳದೊಂದಿಗೆ ಬೆಳ್ಳಿ ರಥದಲ್ಲಿ ಸಮ್ಮೇಳನಾಧ್ಯಕ್ಷರನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಮಳವಳ್ಳಿ ಕೊಳ್ಳೇಗಾಲ ರಸ್ತೆ ಸಮೀಪ ನಿರ್ಮಿಸಿರುವ ಕನ್ನಡ ಭವನವನ್ನು ಶಾಸಕ ಡಾ.ಕೆ ಅನ್ನದಾನಿ ಉದ್ಘಾಟಿಸಿದರು. ಪುಸ್ತಕಮೇಳ, ಆರೋಗ್ಯ ಶಿಬಿರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರಾಧನಾಗರಾಜು, ಉಪಾಧ್ಯಕ್ಷ ಪ್ರಶಾಂತ್, ಸದಸ್ಯರಾದ ನಂದಕುಮಾರ್, ಸಿದ್ದರಾಜು ಪ್ರಮೀಳ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಿಲ್ಲಾಧ್ಯಕ್ಷ ರವಿಚಾಮಲಾಪುರ, ಜಿಲ್ಲಾ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ತಾಲ್ಲೂಕು ಅಧ್ಯಕ್ಷ ಚೇತನ್ಕುಮಾರ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಸಪ್ಪ ನೆಲಮಾಕನಹಳ್ಳಿ, ಕಸಾಪ ಜಿಲ್ಲಾ ಉಪಾಧ್ಯಕ್ಷ ಕೊದೇನಾಕೊಪ್ಪಲು ದೇವರಾಜು ಮತ್ತಿತರರು ಭಾಗವಹಿಸಿದ್ದರು.




