ಮಂಡ್ಯನಗರದ ಕಾಳಪ್ಪ ಬಡಾವಣೆ (ಆರ್.ಟಿ.ಒ ಶ್ರಮಿಕ ನಗರ)ಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಿಮ್ಸ್ ರಕ್ತನಿಧಿ ಕೇಂದ್ರ ಮಂಡ್ಯ, ಡಿ..ಆರ್.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಡ್ಯ, ವರ್ಧಮಾನ್ ಜೈನ್ ನೇತ್ರಾಲಯ, ಮಂಡ್ಯ ದಂತಲೋಕ ಸೂಪರ್ ಸ್ಪೆಷಾಲಿಟಿ ಡೆಂಟಲ್ ಆಸ್ಪತ್ರೆ ಮಂಡ್ಯ ಹಾಗೂ ಮಂಡ್ಯ ಖಾಸಗಿ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘ ಮಂಡ್ಯ ಹಾಗೂ ನೆಲದನಿ ಬಳಗ ಮಂಡ್ಯ ಇವರ ಸಂಯುಕ್ತಾಶ್ರದಲ್ಲಿ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆದು 28 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ 73ನೇ ಬಾರಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಇಡೀ ಕಾಳಪ್ಪ ಬಡಾವಣೆಯ ಜನರ ಆರೋಗ್ಯ ತಪಾಸಣೆಗಗಾಗಿ ಉಚಿತ ಶಿಬಿರ ಆಯೋಜಿಸಲಾಗಿತ್ತು. ಶ್ರಮಿಕರು ಸರದಿ ಸಾಲಿನಲ್ಲಿ ನಿಂತು ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಕೊಂಡರು.
ಈ ಶಿಬಿರದಲ್ಲಿ ಆರೋಗ್ಯ ತಪಾಸಣೆ, ಬಿ.ಪಿ, ಶುಗರ್ ರಕ್ತ ಪರೀಕ್ಷೆ, ರಕ್ತದ ಗ್ರೂಪಿಂಗ್ ಹಾಗೂ ದಂತ ತಪಾಸಣೆ ಕಣ್ಣಿನ ತಪಾಸಣೆ, ಮಹಿಳೆಯರಿಗೆ ಸ್ತ್ರೀರೋಗ ತಜ್ಞ ಮಹಿಳಾ ವೈದ್ಯರಿಂದ ಕ್ಯಾನ್ಸರ್ ತಪಾಸಣೆ ಮಾಡಿಸಲಾಯಿತು.
ಇದಕ್ಕೂ ಮುನ್ನ ಶ್ರಮಿಕ ನಗರ ನಿವಾಸಿಗಳು ಮಂಡ್ಯನಗರದ ವಿವಿಧ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಿ ಜೈ ಭೀಮ್ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಿಮ್ಸ್ ನಿರ್ದೇಶಕ ನರಸಿಂಹಮೂರ್ತಿ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಜಾಗೃತಿ ಕರ್ನಾಟಕದ ಸಂತೋಷ್, ಸುಬ್ರಮಣ್ಯ, ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




