Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಕಲ್ಪನಾ ನೇತೃತ್ವದಲ್ಲಿ ಎಂ.ಎಸ್.ಸಿದ್ದರಾಜು ಬೆಂಬಲಿಗರ ಸಭೆ

ವರದಿ : ಪ್ರಭು. ವಿ.ಎಸ್.

ಮದ್ದೂರು ವಿಧಾನಸಭಾ ಚುನಾವಣೆ ಸಂಬಂಧ ಕೈಗೊಳ್ಳಬೇಕಾದ ಕ್ರಮ ಕುರಿತಾಗಿ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ನಿವಾಸದಲ್ಲಿ ಬುಧವಾರ ಎಂ.ಎಸ್.ಸಿದ್ದರಾಜು ಅಭಿಮಾನಿಗಳು ಹಾಗೂ ಬೆಂಬಲಿಗರ ಸಭೆ ಆಯೋಜಿಸಲಾಗಿತ್ತು.

ಸುಮಾರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಬೆಂಬಲಿಗರು ಸಾಧಕ ಮತ್ತು ಬಾಧಕಗಳ ಬಗ್ಗೆ ಚರ್ಚೆ ನಡೆಸಿದರಲ್ಲದೇ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಕಳೆದ ಐದು ವರ್ಷಗಳಿಂದೀಚೆಗೆ ತಮ್ಮ ಬೆಂಬಲಿಗರೂ ಸೇರಿದಂತೆ ಎಂ.ಎಸ್. ಸಿದ್ದರಾಜು ಅಭಿಮಾನಿಗಳಿಗೆ ಯಾವುದೇ ರಾಜಕೀಯ ಸ್ಥಾನಮಾನಗಳು ಲಭ್ಯವಿಲ್ಲದ ಹಾಗೂ ಇತ್ತೀಚಿನ ದಿನಗಳಲ್ಲಿ ಪಕ್ಷ ಸಂಘಟನೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ತಮ್ಮನ್ನು ಪರಿಗಣಿಸದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಮದ್ದೂರು ತಾಲೂಕಿನಲ್ಲಿ ನಡೆದ ಪಂಚರತ್ನ ರಥಯಾತ್ರೆ ಸೇರಿದಂತೆ ಇತರೆ ಕಾರ್ಯಕ್ರಮಗಳ ಬಗ್ಗೆ ಸಮರ್ಪಕ ಮಾಹಿತಿ ನೀಡದ ಮತ್ತು ತಮ್ಮನ್ನು ಸಂಪರ್ಕಿಸದ ಹಿನ್ನೆಲೆಯಲ್ಲಿ ಹಾಗೂ ವರಿಷ್ಠರ ನಿಲುವಿನಿಂದ ತಾವು ತಟಸ್ಥರಾಗೇ ಉಳಿದಿರುವುದಾಗಿ ಇಂದು ಸಭೆ ಸೇರಿರುವ ತಾವುಗಳು ಮುಂದಿನ ನಡೆ ಕುರಿತಾಗಿ ನೀಡುವ ಸಲಹೆ ಸೂಚನೆಗಳನ್ನು ಪರಿಗಣಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಮುಕ್ತ ಚರ್ಚೆ
ಯುವ ಮುಖಂಡ ಕಾರ್ಕಹಳ್ಳಿ ಸಿದ್ದೇಗೌಡ ಮಾತನಾಡಿ, ಎಂ.ಎಸ್. ಸಿದ್ದರಾಜು ಬೆಂಬಲಿಗರೆಂಬ ಹಣೆಪಟ್ಟಿ ಹೊತ್ತಿರುವ ಜೆಡಿಎಸ್ ಕಾರ್ಯಕರ್ತರಿಗೆ ಯಾವುದೇ ಮನ್ನಣೆ ಸಿಗುತ್ತಿಲ್ಲ. ಅಲ್ಲದೇ ಪೊಲೀಸ್, ತಾಲೂಕು ಕಚೇರಿ ಮತ್ತು ತಳಮಟ್ಟದ ಅಧಿಕಾರಿಗಳು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂಬ ಅಳಲು ತೋಡಿಕೊಂಡರು.

ಕೆಲ ಬೆಂಬಲಿಗರು ಕಳೆದ ಹಲವಾರು ವರ್ಷಗಳಿಂದಲೂ ಜೆಡಿಎಸ್ ಪಕ್ಷದಲ್ಲಿದ್ದು ಪಕ್ಷವು ಎಂ.ಎಸ್. ಸಿದ್ದರಾಜು ಸೇರಿದಂತೆ ತಮಗೆ ಸ್ಥಾನಮಾನಗಳನ್ನು ನೀಡಿದ್ದು ಎಚ್.ಡಿ. ದೇವೇಗೌಡರ ಕುಟುಂಬ ತಮ್ಮ ಬೆಂಬಲಕ್ಕಿದ್ದು ಚುನಾವಣೆ ಸಂದರ್ಭದಲ್ಲಿ ಯಾವುದೇ ರಾಷ್ಟ್ರೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳದೆ ಪ್ರಾದೇಶಿಕ ಪಕ್ಷದಲ್ಲಿ ಮುಂದುವರೆಯುವಂತೆ ಒತ್ತಾಯಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಗೋವಿಂದೇಗೌಡ, ಯುವ ಮುಖಂಡ ಕದಲೂರು ಮಹೇಂದ್ರ, ಮೆಣಸಗೆರೆ ರಾಜಣ್ಣ, ತಾ.ಪಂ. ಮಾಜಿ ಸದಸ್ಯ ಧನಂಜಯ್ಯ, ಸೊಳ್ಳೇಪುರ ಸತೀಶ್ ಇನ್ನಿತರೆ ಮುಖಂಡರು ತಾವು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದು ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ ಸ್ಪಷ್ಟ ನಿಲುವನ್ನು ಪ್ರಕಟಿಸುವ ಜತೆಗೆ ತಮಗೆ ರಾಜಕೀಯ ಸ್ಥಾನಮಾನಗಳ ಬಗ್ಗೆ ಸ್ಪಷ್ಟ ಸಂದೇಶ ಹೊರಬಿದ್ದ ಬಳಿಕವೇ ತಮ್ಮ ತೀರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮುಂದಿನ ದಿನಗಳಲ್ಲಿ ತಾವು ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಿರುವುದಾಗಿ ಕಾರ್ಯಕರ್ತರ ಹಿತದೃಷ್ಠಿಯಿಂದ ತಾವು ಕ್ಷೇತ್ರದಾದ್ಯಂತ ಪ್ರವಾಸ ನಡೆಸುವಂತೆ ಕೆಲ ಮುಖಂಡರು ಕಲ್ಪನಾ ಸಿದ್ದರಾಜು ಅವರಿಗೆ ಮನವಿ ಮಾಡಿದರು.

ಈ ಕುರಿತು ಮಾತನಾಡಿದ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ತಮ್ಮೆಲ್ಲರ ಅಭಿಪ್ರಾಯವನ್ನು ಪರಿಗಣಿಸುವ ಜತೆಗೆ ತಮ್ಮ ಕುಟುಂಬದ ಹಿತೈಷಿಗಳಾದ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಬದ್ಧರಿರುವುದಾಗಿ, ಮುಂದಿನ ಎರಡು ದಿನಗಳಲ್ಲಿ ತಮ್ಮ ನಿಲುವು ಪ್ರಕಟಿಸುವ ಕುರಿತಾಗಿ ಸಭೆಗೆ ತಿಳಿಸಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಮಾಜಿ ಶಾಸಕ ದಿ.ಎಂ.ಎಸ್. ಸಿದ್ದರಾಜು ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ವಿವಿಧೆಡೆಗಳಿಂದ ಆಗಮಿಸಿದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಮಹಿಳೆಯರು ಮತ್ತು ಎಂ.ಎಸ್. ಸಿದ್ದರಾಜು ಅಭಿಮಾನಿಗಳು ಸಭೆಯಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!