✍️ ಎನ್.ನಾಗೇಶ್
-
ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದರೂ ನಿಲ್ಲದ ಅಕ್ರಮ ಗಣಿಗಾರಿಕೆ
- ಕೆ.ಆರ್.ಎಸ್ ನಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ನಡೆಯುತ್ತಿದ್ದರೂ ತಡೆ ಹಾಕದ ಜಿಲ್ಲಾಡಳಿತ
ಪಾಂಡವಪುರ ತಾಲ್ಲೂಕಿನ ಕನಗನಮರಡಿ ಸುಮಾರು 500 ಮನೆಗಳಿರುವ ಗ್ರಾಮ. ನೆಮ್ಮದಿಯಾಗಿ ವ್ಯವಸಾಯ ಮಾಡಿಕೊಂಡಿದ್ದ ಕನಗನಮರಡಿ ಗ್ರಾಮಸ್ಥರು ಈಗ್ಗೆ ಕಳೆದ ಕೆಲ ವರ್ಷಗಳಿಂದೀಚೆಗೆ ಅಕ್ರಮವಾಗಿ ನಡೆಯು ತ್ತಿರುವ ಗಣಿಗಾರಿಕೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕೆ.ಆರ್.ಎಸ್ ಅಣೆಕಟ್ಟೆಯ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿಯೇ ಆದೇಶ ಹೊರಡಿಸಿರುವ ಪಟ್ಟಿಯಲ್ಲಿ ಈ ಗ್ರಾಮದ ಹೆಸರಿದ್ದರೂ ಕೂಡ ಅಕ್ರಮ ಗಣಿಗಾರಿಕೆ ನಿಂತಿಲ್ಲ. ಒಂದೆಡೆ ಜಿಲ್ಲಾಧಿಕಾರಿ ಅಕ್ರಮ ಗಣಿಗಾರಿಕೆ ಎಂದರೆ ಮತ್ತೊಂದೆಡೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೇ ಇದು ಅಕ್ರಮ ಅಲ್ಲ ಎಂದು ಸಾರಿ ಸಾರಿ ಹೇಳುತ್ತಾರೆ.

ಪ್ರಭಾವಿ ರಾಜಕೀಯ ಮುಖಂಡರ ಅಕ್ರಮ ಗಣಿಗಾರಿಕೆಯಿಂದ ಊರು, ಜಮೀನು ಉಳಿಸಿಕೊಳ್ಳಲು ಕನಗನಮರಡಿ ಗ್ರಾಮಸ್ಥರು ಈಗ ರೈತಸಂಘದ ನಾಯಕ ದರ್ಶನ್ ಪುಟ್ಟಣ್ಣಯ್ಯ, ಕೆಂಪೂಗೌಡ ಅವರ ನೇತೃತ್ವದಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ. ಮಾತ್ರವಲ್ಲದೆ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದರೂ ಕ್ರಮ ವಹಿಸದ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಸುರಂಗಕ್ಕೆ ಧಕ್ಕೆ
ಕನಗನಮರಡಿ ಗ್ರಾಮದ ಸರ್ವೆ ನಂ.94 ರಲ್ಲಿ 4 ಎಕರೆ ಪ್ರದೇಶದಲ್ಲಿ ಎಲೆಚಾಕನಹಳ್ಳಿಯ ವೈ.ಬಿ.ಅಶೋಕ್ ಪಟೇಲ್ ಹಾಗೂ ಸರ್ವೆ ನಂ.87/4 ರಲ್ಲಿ 2.34 ಎಕರೆ ಪ್ರದೇಶದಲ್ಲಿ ಹೇಮಲತಾ ಬಸವರಾಜು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಗಣಿಗಾರಿಕೆಯಿಂದ ಇಲ್ಲಿನ ಜನರ ಬದುಕು ದುಸ್ತರವಾಗಿದೆ. ಬ್ಲಾಸ್ಟ್ ನಿಂದಾಗಿ ಮನೆ, ದೇವಸ್ಥಾನದ ಕಟ್ಟಡಗಳು ಬಿರುಕು ಬಿಟ್ಟಿದೆ. ಸೇವಿಸುವ ಗಾಳಿ, ಕುಡಿಯುವ ನೀರು ಕಲುಷಿತವಾಗಿದೆ. ರೈತರು ಬೆಳೆದ ಬೆಳೆಗಳು ಧೂಳಿನಿಂದ ಆವೃತವಾಗಿವೆ. ಧೂಳು ಸುತ್ತಮುತ್ತಲ ಕೃಷಿ ಜಮೀನಿಗೆ ಹರಡಿಕೊಂಡು ಪರಾಗಸ್ಪರ್ಶ ಕ್ರಿಯೆಗೆ ಅಡ್ಡಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾವಿರಾರು ಎಕರೆ ಜಮೀನಿಗೆ ನೀರೊದಗಿಸುವ ವಿಶ್ವೇಶ್ವರಯ್ಯ ನಾಲೆಯ ಸುರಂಗ ಹಾಗೂ ಹುಲಿಕೆರೆ ಸುರಂಗಕ್ಕೆ ಅಪಾಯ ಬಂದಿದೆ. ಸುರಂಗ ಬಿರುಕು ಬಿಟ್ಟಿದ್ದು, ನಾಲೆ ಏರಿಯ ಮಣ್ಣು ಕುಸಿದು ಬಿದ್ದಿದೆ.

ಅಕ್ರಮ ಗಣಿಗಾರಿಕೆಯಿಂದ ಸುರಂಗಕ್ಕೆ ಅಪಾಯ ಎದುರಾದರೆ ಮದ್ದೂರು, ಮಳವಳ್ಳಿ, ಮಂಡ್ಯ ತಾಲೂಕಿಗೆ ನೀರಿಗೆ ಸಮಸ್ಯೆ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ ರೈತಸಂಘದ ಯುವ ನಾಯಕ ದರ್ಶನ್ ಪುಟ್ಟಣ್ಣಯ್ಯ ಇದಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ಶನಿವಾರ ಪತ್ರಕರ್ತರ ಸಂಘದಲ್ಲಿ ಬಿಡುಗಡೆ ಮಾಡಿದ್ದಾರೆ.
ಶಾಸಕರಿಗೆ ನಿಗಾ ಇಲ್ಲ
ಅಕ್ರಮ ಗಣಿಗಾರಿಕೆಯಿಂದ ಕೆ ಆರ್ ಎಸ್ ಅಣೆಕಟ್ಟೆಗೆ ಧಕ್ಕೆಯಾಗುತ್ತದೆ. ಕನ್ನಂಬಾಡಿ ಅಣೆಕಟ್ಟೆ ಬಗ್ಗೆ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ನಿಗಾ ಇಲ್ಲ. ಎಷ್ಟಾದರೂ ಅವರು ಅಕ್ರಮ ಗಣಿಗಾರಿಕೆ ಮಾಡುತ್ತಿದ್ದವರಲ್ಲವೇ? ಹಾಗಾಗಿ ಅವರು ಕನಗನಮರಡಿ ಗಣಿಗಾರಿಕೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಂದು ವೇಳೆ ಕೆಆರ್‌ಎಸ್ ಡ್ಯಾಂ ಹಾಳಾದರೂ ಅಲ್ಲಿಂದಲೂ ಬೇಕಾದರೂ ಕಲ್ಲನ್ನು ಸಾಗಿಸುತ್ತಾರೆ ಎಂದು ರೈತಸಂಘದ ಅಧ್ಯಕ್ಷ ಕೆಂಪೂಗೌಡ ದೂರುತ್ತಾರೆ.

ಇತ್ತೀಚೆಗೆ ದಿಶಾ ಸಮಿತಿ ಸಭೆಯಲ್ಲಿ ಗಣಿ ಅಧಿಕಾರಿಗಳು ಕೆಆರ್‌ಎಸ್ ಡ್ಯಾಂನಿಂದ ಕನಗನಮರಡಿ 20 ಕಿ.ಮೀ. ಗಿಂತ ದೂರವಿದೆ. ಆದ್ದರಿಂದ ಕಾನೂನು ಬದ್ಧವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ವಾಸ್ತವವಾಗಿ ನೋಡಿದರೆ ಅದಕ್ಕಿಂತ ಕಡಿಮೆಯೇ ಇದೆ. ಡ್ಯಾಂನಿಂದ ಪಶ್ವಿಮ ಮಾರ್ಗವಾಗಿ ಅಳತೆ ಮಾಡಿದರೆ 20 ಕಿ.ಮೀ ವ್ಯಾಪ್ತಿಯ ಒಳಗೆ ಬರಲಿದೆ. ಮಾತ್ರವಲ್ಲದೆ ವಾಸ್ತವದಲ್ಲಿ ಗಣಿಗಾರಿಕೆ ನಡೆಯುತ್ತಿರುವ ಕಲ್ಲಿನ ಸೆಲೆ ಕೆಆರ್‌ಎಸ್ ಡ್ಯಾಂಗೆ ನೇರ ಸಂಬಂಧಪಟ್ಟಿದೆ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆಯಿದೆ ಎನ್ನುವ ಸತ್ಯವನ್ನು ರೈತರು ತಿಳಿಸುತ್ತಾರೆ. ಆದರೆ, ಅಧಿಕಾರಿ ವರ್ಗ ಇದಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಪ್ರಭಾವಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ನ್ಯಾಯಾಂಗ ಹೋರಾಟ ಮಾಡಲು ರೈತಸಂಘ ಮುಂದಾಗಿದೆ ಎಂದು ಕೆಂಪೂಗೌಡ ಹೇಳಿದರು.
ಏನೂ ಮಾಡೋಕಾಗಲ್ಲ
ಈ ಬಗ್ಗೆ ಪ್ರಶ್ನಿಸಿದರೆ ಬಿಜೆಪಿ ಸರ್ಕಾರ ಇರುವವರೆಗೂ ನಮ್ಮನ್ನು ಯಾರು ಏನು ಮಾಡೋಕೆ ಆಗಲ್ಲ ಎಂದು ಎಲೆಚಾಕನಹಳ್ಳಿ ಬಸವರಾಜು ಹಾಗೂ ಅಶೋಕ ಪಟೇಲ್ ಧಮಕಿ ಹಾಕುತ್ತಾರೆ. ಎಂ.ಸಿ.ಮಧು ಎಂಬಾತ ಮಾಹಿತಿ ಹಕ್ಕು ಕಾಯ್ದೆಯಡಿ ಕನಗನಮರಡಿ ಗಣಿಗಾರಿಕೆಗೆ ಸಂಬಂಧಿಸಿದಂತೆ ದಾಖಲೆಗಳ ಸಂಗ್ರಹಕ್ಕೆ ಮುಂದಾಗಿದ್ದ. ಆತನಿಗೆ ಅಶೋಕ್ ಪಟೇಲ್ ಕಡೆಯ ಯೋಗೇಶ್ ಹಾಗೂ ಇತರರು ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಮಧು ಸುಮ್ಮನಿರದಿದ್ದರೆ ಸುಮ್ಮನೆ ಬಿಡೋಲ್ಲ ಎಂದು ಆವಾಜ್ ಹಾಕಿದ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರು ನೀಡಿ ಒಂದು ತಿಂಗಳಾದರೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.
ಇತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಪೋಲಿಸ್ ಅಧಿಕಾರಿಗಳೇ ನಮಗೆ ಮೇಲಿನಿಂದ ಒತ್ತಡ ಇದೆ ಎಂದು ಹೇಳುತ್ತಾರೆ, ಎಂದರೆ ಅಕ್ರಮ ಗಣಿಗಾರಿಕೆ ಧಣಿಗಳ ಪ್ರಭಾವ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ರೈತಸಂಘದ ಬಲರಾಮ್ ಹೇಳುತ್ತಾರೆ.

ಮಂಡ್ಯ ಜಿಲ್ಲೆಯಲ್ಲಿ ಸಚಿವ ನಾರಾಯಣಗೌಡ, ಆರು ಜೆಡಿಎಸ್ ಶಾಸಕರಿದ್ದರೂ ಅಕ್ರಮ ಗಣಿಗಾರಿಕೆ ಬಗ್ಗೆ ಒಂದು ಸಭೆಯಲ್ಲೂ ಸೊಲ್ಲೆತ್ತಿಲ್ಲ. ನಮಗೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ ಮತ್ತೆ ಉಗ್ರ ಹೋರಾಟಕ್ಕೆ ಮುಂದಾಗು ತ್ತೇವೆಂದು ಕನಗನಮರಡಿ ಗ್ರಾಮಸ್ಥರಾದ ವಿಜಯ್ ಕುಮಾರ್, ಜಯರಾಂ, ರಾಜು, ಕೃಷ್ಣಮೂರ್ತಿ ಮತ್ತಿತರರು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎನ್.ರವೀಂದ್ರ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದಾಗ, ಜಿಲ್ಲಾಡಳಿತವು ಪೊಲೀಸ್ ಬಲ ಬಳಸಿ ಹೋರಾಟವನ್ನು ಹತ್ತಿಕ್ಕಿತ್ತು ಎಂದು ಇದೇ ಗ್ರಾಮಸ್ಥರು ದೂರಿದ್ದಾರೆ. ಆದರೆ ಈಗ ವಿದೇಶದಿಂದ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರ ಆಗಮನವಾಗಿದ್ದು, ಅವರ ನೇತೃತ್ವದಲ್ಲೇ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ಈಗಲಾದರೂ ಅಕ್ರಮ ಗಣಿಗಾರಿಕೆಗೆ ತಡೆ ಬೀಳುತ್ತಾ? ಇಲ್ಲಾ ಮುಂದುವರಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.




