Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗದ ‘ಕಲಿಕಾ ಮಾಧ್ಯಮವಾಗಿ ಕನ್ನಡ’ : ನಿರಂಜನಾರಾಧ್ಯ ಅಸಮಾಧಾನ

ಹಾವೇರಿಯಲ್ಲಿ ಜರುಗಿದ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಗೊಂದಲ ಹಾಗು ಪ್ರತಿರೋಧದ ನಡುವೆ ಮುಕ್ತಾಯವಾಗಿದೆ. ಆದರೆ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ನಿರ್ಣಾಯಕ ವಿಷಯವಾಗಬೇಕಿದ್ದ ‘ಶಿಕ್ಷಣದಲ್ಲಿ ಕಲಿಕಾ ಮಾಧ್ಯಮವನ್ನಾಗಿ ಕನ್ನಡ’ ಕುರಿತು ಚರ್ಚೆಯಾಗದೇ ಇರುವುದು ವಿಷಾದನೀಯ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ.ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಶಿಕ್ಷಣದಲ್ಲಿ ಕಲಿಕಾ ಮಾಧ್ಯಮವನ್ನಾಗಿ ‘ಕನ್ನಡ’ವನ್ನು ತರುವ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಿವೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ‘ಕನ್ನಡ ಸಾಹಿತ್ಯ ಸಮ್ಮೇಳನ’ದಲ್ಲಿ ಒತ್ತಾಯದ ಭಾಗವಾಗಿ ನಿರ್ಣಯಗಳಲ್ಲಿ ಮಾಧ್ಯಮದ ವಿಷಯವನ್ನು ಒಂದು ಪ್ರಮುಖ ನಿರ್ಣಯವಾಗಿ ಕೈಗೊಂಡು ಸರ್ಕಾರಗಳನ್ನು ಒತ್ತಾಯಿಸುವ ಪರಿಪಾಠವಿತ್ತು. ಈ ಬಾರಿಯ ಸಮ್ಮೇಳನದಲ್ಲಿ ಒಂದು ನಿರ್ಣಯವನ್ನಾಗಿಯೂ ಅಂಗೀಕರಿಸದಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ” ಎಂದು ಅಸಮಾಧಾನ ಹೊರಹಾಕಿದ್ದಾರೆ.

“ಕನಿಷ್ಠ ಪ್ರೌಢ ಶಿಕ್ಷಣದವರೆಗೆ ಕನ್ನಡವನ್ನು ಸಾರ್ವತ್ರಿಕವಾಗಿ ಕಲಿಕಾ ಮಾಧ್ಯಮವನ್ನಾಗಿಸುವುದು ಕನ್ನಡದ ಮಕ್ಕಳ ಕಲಿಕೆ ಹಾಗೂ ಭವಿಷ್ಯದ ದೃಷ್ಟಿಯಿಂದ ಜೊತೆಗೆ ಕನ್ನಡದ ಸಂಸ್ಕೃತಿ, ಪರಂಪರೆ, ಇತಿಹಾಸದ ಕೊಂಡಿಗಳನ್ನು ಕಳಚಿಕೊಳ್ಳದೆ ಉಳಿಸಿಕೊಳ್ಳುವ ದೃಷ್ಟಿಯಿಂದ ನಿರ್ಣಾಯಕ ವಿಷಯವಾಗಿದೆ ಎಂಬುವುದನ್ನು ನಾವು ಮರೆಯಬಾರದು” ಎಂದರು. “ಕಲಿಕೆಯ ಮಾಧ್ಯಮವಾಗಿ ಕನ್ನಡ ಇಲ್ಲದಿರುವುದು, ಕನ್ನಡದ ಬಳಕೆಯನ್ನು ಎಲ್ಲ ವಲಯಗಳಿಂದ ಮರೆಯಾಗುವಂತೆ ಮಾಡುತ್ತದೆ. ಒಂದು ರೀತಿಯಲ್ಲಿ ಭಾಷೆಯ ಅಳಿವು ಪ್ರಾರಂಭವಾಗುವುದು ಇಲ್ಲಿಯೇ” ಎಂದು ಆತಂಕ ವ್ಯಕ್ತಪಡಿಸಿದರು.

“ನಮ್ಮದು ಎಷ್ಟೋ ಸಾವಿರ ವರ್ಷಗಳ ಇತಿಹಾಸವಿರುವ ಶ್ರೀಮಂತ ಸಾಹಿತ್ಯ ಹಾಗೂ ಶಾಸ್ತ್ರೀಯ ಭಾಷೆ ಎಂಬ ಒಂದೇ ಒಂದು ಕಾರಣಕ್ಕೆ ಭಾಷೆ ಉಳಿಯುತ್ತದೆ ಎಂದು ಬೊಬ್ಬಿಡುವುದರಿಂದ ಖಂಡಿತ ಭಾಷೆ ಉಳಿಯಲಾರದು. ಭಾಷೆಯೊಂದನ್ನು ಇಂದಿನ ಪೀಳಿಗೆ ತನ್ನ ದೈನಂದಿನ ಚಟುವಟಿಕೆಗಳಲ್ಲಿ ಬಳಸದಿದ್ದರೆ, ಸರ್ಕಾರಗಳು ಆ ಬಗೆಯಲ್ಲಿ ಅನುವಾಗುವಂತೆ ಕಡ್ಡಾಯಗೊಳಿಸದಿದ್ದರೆ ಭಾಷೆಗೆ ಎಷ್ಟೇ ಇತಿಹಾಸವಿದ್ದರೂ ಅದು ವ್ಯರ್ಥ” ಎಂದು ಹೇಳಿದರು.

“ಮುಂದಿನ ಪೀಳಿಗೆ ಭಾಷೆ ಬಳಸದೆ, ಸರ್ಕಾರ ಅದನ್ನು ಕಡ್ಡಾಯ ಮಾಡದೇ ಕೇವಲ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾರಣ , ಈ ವಿಧೇಯಕದಲ್ಲಿ ಎಲ್ಲಿಯೂ ಕಲಿಕಾ ಮಾಧ್ಯಮವಾಗಿ ಕನ್ನಡವನ್ನು ಕಡ್ಡಾಯಗೊಳಿಸುವ ಪ್ರಸ್ತಾಪಗಳಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.

“ಇನ್ನೊಂದು ಆತಂಕಕಾರಿ ವಿಷಯವೆನೆಂದರೆ ಇತ್ತೀಚಿನ ತಿದ್ದುಪಡಿಯೊಂದರ ಮೂಲಕ ಕನ್ನಡವನ್ನು ಕನಿಷ್ಠ ಮೊದಲ ಅಥವಾ ಎರಡನೇ ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಸಬೇಕೆಂಬ ಕನ್ನಡ ಭಾಷಾ ಕಲಿಕಾ ಅಧಿನಿಯಮ 2015ದನ್ನೂ ತಿಳಿಗೊಳಿಸಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. “86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನವು ಕನ್ನಡ-ಕನ್ನಡಿಗ-ಕರ್ನಾಟಕ ಉಳಿಯಲು ನಿರ್ಣಾಯಕವಾಗಿ ಬೇಕಿದ್ದ ‘ಶಿಕ್ಷಣದಲ್ಲಿ ಕಲಿಕಾ ಮಾಧ್ಯಮದ ವಿಷಯ’ವನ್ನು ಹಿನ್ನೆಲೆಗೆ ಸರಿಸಿ, ಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸಿ  ನೆರೆಹೊರೆಯ ಸಮಾನ ಶಾಲೆಗಳನ್ನಾಗಿಸಬೇಕೆನ್ನುವ ಕನ್ನಡಿಗರ ಒತ್ತಾಸೆಗೆ ತಣ್ಣೀರು ಸುರಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕನ್ನಡಿಗರಿಗೆ ಉಳಿದಿರುವ ಒಂದೇ ಮಾರ್ಗವೆಂದರೆ ಕಲಿಕೆಯಲ್ಲಿ ಕನ್ನಡದ ವಿಷಯವನ್ನು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಒಂದು ಪ್ರಮುಖ ವಿಷಯವನ್ನಾಗಿಸುವ ಮೂಲಕ ಯಾವ ಸರ್ಕಾರಗಳು ಕನ್ನಡಕ್ಕೆ ಕಲಿಕೆಯಲ್ಲಿ ಸಾರ್ವಭೌಮ ಸ್ಥಾನವನ್ನು ಕಲ್ಪಿಸಲು ಬದ್ಧವಾಗಿವೆಯೋ ಅಂಥವರಿಗೆ ನಮ್ಮ ನಿರ್ಣಾಯಕ ಮತ ಎಂಬುದನ್ನು 7 ಕೋಟಿ ಕನ್ನಡಿಗರು ಒಕ್ಕೊರಲಿನಿಂದ ಹೇಳಬೇಕಾಗಿದೆ” ಎಂದು ಕರೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!