Friday, November 20, 2026

ಪ್ರಾಯೋಗಿಕ ಆವೃತ್ತಿ

ಕನ್ನಂಬಾಡಿ ರಕ್ಷಣೆಯೇ ಎಲ್ಲಾ ಪಕ್ಷಗಳ ಆದ್ಯತೆಯಾಗಲಿ

ಕೃಷ್ಣರಾಜಸಾಗರ ಜಲಾಶಯವೇ ಮುಖ್ಯ ಹೊರತು,ಅಲ್ಲಿ ಗಣಿಗಾರಿಕೆ ಮಾಡುತ್ತಿರುವ ಪಕ್ಷಗಳಲ್ಲ. ಕಾಂಗ್ರೆಸ್ ಪಕ್ಷವೇ ಇರಲಿ ಇತರ ಯಾವ ಪಕ್ಷದವರೇ ಇರಲಿ,ಕನ್ನಂಬಾಡಿ ಜಲಾಶಯದ ರಕ್ಷಣೆಯೇ ಎಲ್ಲಾ ಪಕ್ಷಗಳ ಆದ್ಯತೆಯಾಗಲಿ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್
ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಟ್ರಯಲ್ಬ್ಲಾಸ್ಟ್ ಆದ ನಂತರ ನೋಡಿಕೊಳ್ಳೋಣವೆಂದು ಯಾರೂ ನಿರ್ಧಾರ ಮಾಡುವುದಿಲ್ಲ. ಹೀಗಿರುವಾಗ ಜಲಾಶಯ ರಕ್ಷಣೆ ದೃಷ್ಟಿಯಿಂದ ಅದರ ಸಮೀಪವೇ ಟ್ರಯಲ್ ಬ್ಲಾಸ್ಟ್ ಮಾಡುತ್ತೇವೆಂದು ಹೇಳುತ್ತಿರುವುದು ದುರಂತ. ಕೆಆರ್‌ಎಸ್ ಡ್ಯಾಂನ ಆಯುಷ್ಯ 120 ವರ್ಷ. ಈಗಾಗಲೇ 92 ವರ್ಷ ಆಗೋಗಿದೆ. ಹೀಗಿರುವಾಗ ಪ್ರಾಯೋಗಿಕ ಪರೀಕ್ಷೆ ಮಾಡಬೇಕೇ ಎಂದು ಪ್ರಶ್ನಿಸಿದ ಅವರು, ಗಣಿಗಾರಿಕೆ ಮಾಡಲು ಬೇಕಾದಷ್ಟು ಜಾಗವಿದೆ. ಅಲ್ಲಿಗೆ ಹೋಗಿ ಮಾಡಲಿ ಎಂದರು.

ಒಂದು ವೇಳೆ ಕಾಂಗ್ರೆಸ್ ಮುಖಂಡರು ಗಣಿಗಾರಿಕೆ ಮಾಡುತ್ತಿದ್ದರೂ ಅಷ್ಟೇ. ನಮಗೆ ಡ್ಯಾಂ ಸುರಕ್ಷಿತವಾಗಿರುವುದಷ್ಟೇ ಮುಖ್ಯ. ಇನ್ನು ಜಿಲ್ಲಾಡಳಿತ ಮತ್ತೆ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಮತ್ತೆಂದು ಅಂತಹ ಪರಿಕಲ್ಪನೆ ಮಾಡಿಕೊಳ್ಳುವುದು ಬೇಡ. ನಾವು ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಟ್ರಯಲ್ ಬ್ಲಾಸ್ಟ್ಗೆಂದು ಜಾರ್ಖಂಡ್‌ನಿಂದ ಬಂದಿರುವ ವಿಜ್ಞಾನಿಗಳು ಯಾರು?ಅವರನ್ನು ಅಲ್ಲಿನ ಸರ್ಕಾರ ಕಳಿಸಿದೆಯೇ? ಗಣಿ ಮಾಲೀಕರು ತಮಗೆ ಬೇಕಾದವರನ್ನು ಕರೆಸಿಕೊಂಡಿರಬಹುದು. ಆ ರಾಜ್ಯದ ಸಂಘ ಸಂಸ್ಥೆಯೊಂದರ ಸದಸ್ಯರನ್ನು ವಿಜ್ಞಾನಿಗಳೆಂದು ಕರೆಸಿದ್ದಾರೆ. ರಾಜ್ಯದ ಕಂದಾಯ ಇಲಾಖೆಯ ಅಧೀನದಲ್ಲಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವೇ ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯವಿದೆ ಎಂದು ವರದಿ ನೀಡಿದೆ.2019 ಹಾಗೂ 2020ರಲ್ಲಿಯೂ ಮತ್ತೆ ವರದಿ ಕೊಟ್ಟಿದೆ. ಅದರಲ್ಲಿರುವಂತೆ ಗಣಿಗಾರಿಕೆ ನಿಲ್ಲಿಸಬೇಕು.

ಸುಮಾರು 37 ಕಿ.ಮೀ ಏಕಬಂಡೆಯ ಮೇಲೆ ಡ್ಯಾಂ ನಿರ್ಮಾಣ ಮಾಡಲಾಗಿದೆ. ನೀರು ಸಂಗ್ರಹವಾಗುತ್ತದೆ ಎನ್ನುವ ಕಾರಣಕ್ಕೆ ಅಂದು ಕಾಮಗಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಮಾಡುತ್ತಿರುವ ಹಾಗೂ ಡ್ಯಾಂ ಕೆಳಗಿರುವ ಸ್ಥಳ ಒಂದೇ ಬಂಡೆಯ ಮೇಲಿದೆ. ಇದನ್ನು ಹಿಂದೆಯೇ ಸ್ಪಷ್ಟಪಡಿಸಲಾಗಿದೆ. ಹೀಗಿರುವಾಗ ಪರೀಕ್ಷೆ ಮಾಡುವ ಅವಶ್ಯಕತೆಯಾದರೂ ಏನಿದೆ ಎಂದು ಪ್ರಶ್ನಿಸಿದ ಅವರು, ಪಾಂಡವಪುರ ಶಾಸಕ ಸಿ.ಎಸ್.ಪುಟ್ಟರಾಜು ಬ್ಲಾಸ್ಟ್ ಮಾಡಲಿ ಬಿಡಿ ಎನ್ನುವುದು ದೊಡ್ಡ ದುರಂತ. ಆದ್ದರಿಂದ ಮತ್ತೆ ಬ್ಲಾಸ್ಟ್ ಮಾಡಿಸುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಬಾರದು ಎಂದು ಸಲಹೆ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಮಾತನಾಡಿ, ಟ್ರಯಲ್ ಬ್ಲಾಸ್ಟ್ ನಿಂದ ಅನಾಹುತವಾದರೆ ಬರೋಬರಿ 32 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಇರುವುದಿಲ್ಲ. ಬೆಂಗಳೂರಿನ ಜನರು ಬಾಟಲಿ ನೀರಿಗಾಗಿ ಪರದಾಡಬೇಕಾಗುತ್ತದೆ. ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಸಮೀಪ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸುವಂತೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಗಿದೆ.

ಈವರೆಗೂ ಸ್ಥಳ ಪರಿಶೀಲನೆಯನ್ನೂ ಮಾಡದ ಡಿಸಿ, ಟ್ರಯಲ್ ಬ್ಲಾಸ್ಟ್ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ವಿಪರ್ಯಾಸ. ಡ್ಯಾಂ ಸಮೀಪ ಸಂಪೂರ್ಣ ಗಣಿಗಾರಿಕೆ ನಿಂತಿಲ್ಲ. ಬ್ಲಾಸ್ಟ್ ನಡೆಸಲು ಮುಂದಾಗಿದ್ದ ಜಾಗದಿಂದ 50 ರಿಂದ 100 ಮೀಟರ್ ಅಂತರದಲ್ಲಿಯೇ ಸ್ಫೋಟ ನಡೆಯುತ್ತಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸುತ್ತಿಲ್ಲ. ಡಿಸಿ ಎಸ್.ಅಶ್ವಥಿ ಅವರು ಮಹಾರಾಣಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಷ್ಟಿಯಲ್ಲಿ ಸೋಮು ಸ್ವರ್ಣಸಂದ್ರ, ರಾಮಲಿಂಗಯ್ಯ, ಸಂಪಳ್ಳಿ ಉಮೇಶ್, ಆನಂದ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ