Thursday, June 13, 2024

ಪ್ರಾಯೋಗಿಕ ಆವೃತ್ತಿ

ಯುವಜನತೆ ದೇಶದ ಅಭಿವೃದ್ದಿಗೆ ಕೈ ಜೋಡಿಸಬೇಕು

ಭಾರತ ದೇಶದ ಶೇ.65 ರಷ್ಟು ಯುವಜನತೆ ಅಭಿವೃದ್ಧಿಗೆ ಕೈ ಜೋಡಿಸಿ ನಮ್ಮ ದೇಶ ವಿಶ್ವದಲ್ಲೇ ಸರ್ವಶ್ರೇಷ್ಠ ಹಾಗೂ ಶಕ್ತಿಶಾಲಿಯಾಗಿ ಹೊರಹೊಮ್ಮುವಂತೆ ಮಾಡಬೇಕೆಂದು ಕೇಂದ್ರ ಇಂಧನ ಮತ್ತು ಭಾರಿ ಕೈಗಾರಿಕೆಗಳ ರಾಜ್ಯ ಖಾತೆ ಸಚಿವ ಕ್ರಿಶನ್ ಪಾಲ್ ಗುರ್ಜರ್ ತಿಳಿಸಿದರು.

ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕೈಯಲ್ಲಿರುತ್ತದೆ.ಭಾರತದ ಭವಿಷ್ಯ ರೂಪಿಸಲು ಉತ್ತಮ ನಾಯಕರನ್ನು ಆಯ್ಕೆಮಾಡಬೇಕು.ಆ ಉತ್ತಮ ನಾಯಕ ತನ್ನ ದೇಶಕ್ಕೆ ಮೊದಲ ಸ್ಥಾನ ನೀಡಬೇಕು ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಯಾವುದೇ ಕಡತವಿದ್ದಾರೂ 3 ತಿಂಗಳೊಳಗಾಗಿ ವಿಲೇವಾರಿಯಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಡಿ.ಬಿ.ಟಿ ಮೂಲಕ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುವುದರಿಂದ ಯಾವುದೇ ರೀತಿಯ ಮಧ್ಯವರ್ತಿ ಅಥವಾ ಕಚೇರಿಗೆ ಅಲೆದಾಡಬೇಕಿಲ್ಲ. ನೇರವಾಗಿ ಹಣ ಪಾವತಿಯಾಗುವುದರಿಂದ ಭ್ರಷ್ಟಚಾರಕ್ಕೆ ಮೋದಿಜೀ ಅವರ ಸರ್ಕಾರ ಕಡಿವಾಣ ಹಾಕಿದೆ ಎಂದರು.

ಮೊದಲು ಬಡವರು ಬ್ಯಾಂಕ್‍ನಲ್ಲಿ ಖಾತೆ ತೆರೆಯಬೇಕಾದರೆ 500 ರೂ ಠೇವಣಿ ಮಾಡಿ ಅವರಿಗೆ ಗೊತ್ತಿರುವ ಇಬ್ಬರ ಸಾಕ್ಷಿ ಪಡೆಯಬೇಕಿತ್ತು. ಆದರೆ ಜನ್‍ಧನ್ ಯೋಜನೆಯಡಿ ಯಾವುದೇ ಡೆಪಾಸಿಟ್ ಇಲ್ಲದೇ ಬ್ಯಾಂಕ್ ಖಾತೆ ತೆರೆಯಬಹುದಾಗಿದೆ. ಈ ಯೋಜನೆಯಿಂದ ಕೋಟ್ಯಂತರ ಜನರು ಕಡಿಮೆ ಅವಧಿಯಲ್ಲಿ ತಮ್ಮ ಬ್ಯಾಂಕ್ ಖಾತೆ ತೆರೆದರು. ಬ್ಯಾಂಕ್ ಖಾತೆಯಿಂದ ಕೋವಿಡ್ ಸಂದರ್ಭದಲ್ಲಿ ಹಣವನ್ನು ಯಾವುದೇ ತೊಂದರೆಯಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ಜಮೆ ಮಾಡಲಾಯಿತು ಎಂದರು.

ಇಂದು ವಿಶ್ವದಲ್ಲೇ ಬಹಳಷ್ಟು ದೇಶಗಳು ಭಾರತ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಆಪರೇಷನ್ ಗಂಗಾ ಯೋಜನೆಯಡಿ ಅವರನ್ನು ಸುರಕ್ಷಿತವಾಗಿ ಕರೆತರಲಾಯಿತು ಎಂದರು.

ಅಗ್ನಿಪಥ್ ಯೋಜನೆಯನ್ನು 17.6 ರಿಂದ 23 ವರ್ಷ ವಯೋಮಿತಿಯೊಳಗಿನವರಿಗೆ ಮಾತ್ರ ಏಕೆ ಸೀಮಿತವಾಗಿದೆ. ವಯೋಮಿತಿಯನ್ನು ವಿಸ್ತರಿಸಬೇಕು ಎಂದು ವಿದ್ಯಾರ್ಥಿನಿ ನಿಸರ್ಗ ಪ್ರಶ್ನಿಸಿದಾಗ. 17.5 ರಿಂದ 23 ವರ್ಷ ವಯೋಮಿತಿಯೊಳಗಿನವರಿಗೆ ಉದ್ಯೋಗದ ಸಮಸ್ಯೆ ಉಂಟಾಗಬಾರದು ಹಾಗೂ ಈ ವಯೋಮಿತಿಯಲ್ಲಿ ಶಿಸ್ತುಬದ್ಧ ತರಬೇತಿ ಪಡೆದರೆ. ಶಿಸ್ತನ್ನು ಅವರು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಆಸ್ತಿಯಾಗುತ್ತಾರೆ. ತರಬೇತಿಯ ನಂತರ ಅವರು ಒಳ್ಳೆಯ ಉದ್ಯೋಗವನ್ನು ಸಹ ಪಡೆಯಬಹುದು ಎಂದರು.

ಸುನೀಲ್ ಕುಮಾರ್ ಎಂಬ ವಿದ್ಯಾರ್ಥಿ ಮಾಜಿ ಸೈನಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ತಂದೆ,ತಾಯಿ ಕಳೆದುಕೊಂಡ ಪ್ರತಿಯೊಬ್ಬ ಮಗುವಿಗೂ ದೊರಕಬೇಕು ಎಂದಾಗ,ಸಚಿವರು ಪ್ರತಿಕ್ರಿಯಿಸಿ ಕೋವಿಡ್‍ನಿಂದ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡವರಿಗೆ ಸರ್ಕಾರದಿಂದ ಉಚಿತ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಲಾಗಿದೆ ಎಂದರು.

ನಂಜುಂಡ ಎಂಬ ವಿಕಲಚೇತನ ವಿದ್ಯಾರ್ಥಿ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುವ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ ಹೊಂದಿರುವ ಪಠ್ಯಪುಸ್ತಕವನ್ನು ನೀಡಬೇಕು ಎಂದು ಕೋರಿದಾಗ ಸಚಿವರು ಪ್ರತಿಕ್ರಿಯಿಸಿ ಈ ವಿಷಯನ್ನು ಕೇಂದ್ರ ಸರ್ಕಾರದಲ್ಲಿ ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗುವುದು ಎಂದರು.

ನಸಿಯಾ ತಾಜ್ ಎಂಬ ವಿದ್ಯಾರ್ಥಿನಿ ಹಣದುಬ್ಬರದ ಬಗ್ಗೆ ಕೇಳಿದಾಗ, ಕರೋನಾ ಮತ್ತು ರಷ್ಯ- ಉಕ್ರೇನ್ ಯುದ್ಧದಿಂದ ಹಣದುಬ್ಬರದಲ್ಲಿ ತೊಂದರೆಯಾಗಿದ್ದು, ಮುಂದಿನ ದಿನಗಳಲ್ಲಿ ಸರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸೋಮಶೇಖರ್,ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಸಫಾಯಿ ಕರ್ಮಚಾರಿಗಳ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ,ಜಿಲ್ಲಾಧಿಕಾರಿ ಎಸ್.ಅಶ್ವತಿ,ಜಿ.ಪಂ.ಮುಖ್ಯಕಾರ್ಯನಿರ್ವಾಹಕಾಧಿಕಾರಿ ದಿವ್ಯಾಪ್ರಭು, ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜ, ಉಪವಿಭಾಗಾಧಿಕಾರಿ ಆರ್.ಐಶ್ವರ್ಯ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!