Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಂತಾರ ಸಿನಿಮಾ ಮತ್ತು Confused ಹೊಸಪೀಳಿಗೆ

   ✍🏿 ಮಾಚಯ್ಯ ಎಂ.ಹಿಪ್ಪರಗಿ


  • ಸಂಗೀತದ ಟ್ಯೂನುಗಳನ್ನು ಕದ್ದ ಆರೋಪ ಕಾಂತಾರದ ಮೇಲಿದೆ 

  • ಕ್ರೌರ್ಯವನ್ನು ಬಿಚ್ಚಿಡುವ ಅವಕಾಶ ಕಳೆದು ಕೊಂಡ ಸಿನಿಮಾ

ಒಂದು ಸಿನಿಮಾದ ಯಶಸ್ಸನ್ನು ಅಳೆಯಲು ಇರುವ ಮಾನದಂಡಗಳೇನು? ಈ ಪ್ರಶ್ನೆ ನನ್ನನ್ನು ಕಾಡುವಂತೆ ಮಾಡಿದ್ದು ಕಾಂತಾರ ಸಿನಿಮಾ. ಒಂದು ಕಡೆ ವಿಪರೀತ ಎನಿಸುವಷ್ಟು ಪ್ರಶಂಸೆ, ಮತ್ತೊಂದು ಕಡೆ ದೇಸಿ ಜನರ ಆಚರಣೆಯನ್ನು ವೈದಿಕಗೊಳಿಸಿದ; ಸಂಗೀತದ ಟ್ಯೂನುಗಳನ್ನು ಕದ್ದ ಆರೋಪಗಳು. ಸಿನಿಮಾವೊಂದು ಜನರನ್ನು ಥಿಯೇಟರಿಗೆ ಕರೆತರಲು ಇದಕ್ಕಿಂತ ಇನ್ನೇನು ಬೇಕು! ಬಹಳ ದಿನಗಳ ನಂತರ ನಾನೂ ಥಿಯೇಟರಿಗೆ ಹೋಗಿ ಸಿನಿಮಾ ನೋಡಿದೆ. ನಿಜ ಹೇಳಬೇಕೆಂದರೆ ಸಿನಿಮಾ ಇಷ್ಟವಾಯ್ತು.

ನನಗೀಗ ಕಾಡುತ್ತಿರುವ ಪ್ರಶ್ನೆಯೇ ಇದು. ಒಂದು ಸಿನಿಮಾ ನೋಡುಗರಿಗೆ ಇಷ್ಟವಾಗುವುದೇ ಅದರ ಯಶಸ್ಸಾ? ಹೌದು ಎನ್ನುವುದಾದರೆ, ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ನಡೆಸುವ ಬ್ಯುಸಿನೆಸ್ಸೇ ಯಶಸ್ಸಿನ ಮಾನದಂಡ ಎನ್ನುವಂತಾಗುತ್ತೆ. ಅದು ಎಷ್ಟರಮಟ್ಟಿಗೆ ಸರಿ? ಯಾಕೆಂದರೆ, ‘ಮನುಷ್ಯರ ಇಷ್ಟ’ ಎನ್ನುವುದು ತುಂಬಾ ಸೀಮಿತ ಸಂಗತಿ.

ಆರೋಗ್ಯಕ್ಕೆ ಅಪಾಯ ಎಂಬುದು ಅರಿವಿದ್ದರೂ, ನಮ್ಮ ಜನ ಕೇವಲ ಬಾಯಿರುಚಿಯ ಇಷ್ಟದ ಕಾರಣಕ್ಕೆ ‘ಜಂಕ್ ಫುಡ್ಗಳಿಗೆ ಮುಗಿಬೀಳುತ್ತಾರೆ. ಕೋಟ್ಯಂತರ ರೂಪಾಯಿಯ ವ್ಯವಹಾರ ಮಾಡಿಕೊಡುತ್ತಾರೆ. ಜನರ ’ಇಷ್ಟ’ಗಳನ್ನು ತಮ್ಮ ಉತ್ಪನ್ನಗಳಿಗೆ ಅಡವಿರಿಸಿಕೊಳ್ಳುವ ಸಲುವಾಗಿಯೇ ದೊಡ್ಡದೊಡ್ಡ ಕಂಪನಿಗಳು ತಮ್ಮ ಖಾದ್ಯಗಳಿಗೆ ಮತ್ತು ಬರಿಸುವ ಅಪಾಯಕಾರಿ ಮಾದಕಗಳನ್ನು ಮಿಕ್ಸ್ ಮಾಡಿ ಲಾಭ ಗಳಿಸಿದ, ಜನರ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಿದ ನಿದರ್ಶನಗಳುಂಟು.

ಹಾಗಾಗಿ ನಮ್ಮ ಜನರ ‘ಇಷ್ಟ’ಗಳಿಗೆ ಆಲೋಚನೆ ಕಮ್ಮಿ; ತರ್ಕ, ವಿಮರ್ಶೆಗಳೂ ಜಾಳುಜಾಳು. ಏಕತಾನತೆಯಿಂದ ಬೇಸತ್ತ ಮನಸ್ಸು, ಕೂಡಾ ಸಟ್ಟನೆ ಎದುರುಗೊಳ್ಳುವ ಹೊಸತರದ ಪ್ರಯತ್ನಕ್ಕೆ ಮಾರುಹೋಗಿ ಇಷ್ಟಪಡುತ್ತೆ. ಹೀಗೆ ಮಾರುಹೋಗುವಾಗ ಮನಸ್ಸಿಗೆ ‘ವಿಭಿನ್ನ’ ಎನ್ನುವುದು ಮುಖ್ಯವಾಗುತ್ತದೆಯೇ ವಿನಾ, ಹೊಸತುವಿನ ‘ವಿಶಿಷ್ಟತೆ’, ‘ಪರಿಣಾಮ’ಗಳ ಬಗ್ಗೆ ಅಷ್ಟಾಗಿ ಗಮನವಿರುವುದಿಲ್ಲ.

ಒಟ್ಟಾರೆಯಾಗಿ ‘ಇಷ್ಟ’ ಎನ್ನುವುದು ಆಳ ಅಭಿಪ್ರಾಯವಿಲ್ಲದ, ಸ್ಥೂಲ ಒಳನೋಟವಿಲ್ಲದ, ಗಂಭೀರ ಮುನ್ನೋಟವಿಲ್ಲದ ತೇಲು-ಅನಿಸಿಕೆಯಷ್ಟೆ. ಇನ್ನೂ ಸಮಂಜಸವಾಗಿ ಅರ್ಥ ಮಾಡಿಸಬೇಕೆಂದರೆ, ಪರಸ್ಪರ ಪರಿಚಿತರೇ ಅಲ್ಲದ ಹೆಣ್ಣು-ಗಂಡನ್ನು ವಿಪರೀತ ಮೇಕಪ್ಪುಗಳಿಗೆ ಒಡ್ಡಿ, ಸಕುಟುಂಬ ಪರಿವಾರವೆಂಬ ಮುಜುಗರದ ಅಖಾಡದ ನಡುವೆ ಮುಖಾಮುಖಿಯಾಗಿ ಕೂರಿಸಿ, ‘ನಿನಗೆ ಹುಡುಗಿ ಇಷ್ಟ ಆದಳಾ?’ ’ಹುಡುಗ ಇಷ್ಟ ಆದನಾ?’ (ಹುಡುಗಿಯರಿಗೆ ಅಂತಹ ಆಯ್ಕೆ ನೀಡುವ ಮಂದಿಯೂ ಕಮ್ಮಿ!) ಅಂತ ಕೇಳಿದಂತಿರುತ್ತೆ.

ಪರಸ್ಪರ ಅರ್ಥ ಮಾಡಿಕೊಂಡಿರದ ಆ ಹುಡುಗ, ಹುಡುಗಿ ಕೊಡುವ ‘ಇಷ್ಟ’ದ ಉತ್ತರ ಕೇವಲ ಬಾಹ್ಯ ಸೌಂದರ್ಯವನ್ನು ಆಧರಿಸಿರುತ್ತೆ. ಒಂದು ಸುದೀರ್ಘ ದಾಂಪತ್ಯಕ್ಕೆ ಬಾಹ್ಯ ಸೌಂದರ್ಯಕ್ಕಿಂತ ಮನಸ್ಸಿನ ತರಂಗಗಳು ಹೆಚ್ಚು ಹೊಂದಿಕೊಳ್ಳಬೇಕು. ಆದರೆ ‘ಇಷ್ಟ’ ಅಂತಹ ತರಂಗಗಳ ಗೋಜಿಗೇ ಹೋಗುವುದಿಲ್ಲ. ಇದು ’ಇಷ್ಟ’ಕ್ಕೆ ಇರುವ ಸೀಮಿತತೆ. ಈ ಒಂದು ಕಾರಣಕ್ಕೇ ನಮ್ಮ ಜನರ ‘ಇಷ್ಟ’ಗಳ ಆಧಾರದಲ್ಲಿ ಒಬ್ಬ ವ್ಯಕ್ತಿಯ, ಒಂದು ವಿದ್ಯಮಾನದ, ಒಬ್ಬ ನಾಯಕನ, ಒಂದು ಸರ್ಕಾರದ ಯಶಸ್ಸನ್ನು ಅಳೆಯುವ ಕುರಿತು ನನಗೆ ಒಂದಷ್ಟು ತಕರಾರುಗಳಿವೆ. ಇರಲಿ, ಸಿನಿಮಾ ಎಂಬ ಉದ್ಯಮಕ್ಕೆ ಮರಳುವುದಾದರೆ ಕೋಟ್ಯಂತರ ರೂಪಾಯಿ ಸುರಿದು ತಿಂಗಳಾನುಗಟ್ಟಲೆ ಶ್ರಮಪಟ್ಟು ರೂಪಿಸುವ ಸಿನಿಮಾಗೆ ಖಂಡಿತವಾಗಿಯೂ ‘ಬ್ಯುಸಿನೆಸ್ ಆಯಾಮ ಇರಲೇಬೇಕು. ಆ ನಿಟ್ಟಿನಲ್ಲಿ ಜನರಿಗೆ ಸಿಕ್ಕಾಪಟ್ಟೆ ‘ಇಷ್ಟ’ವಾಗಿರುವ ಕಾಂತಾರ ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕರು ಗೆದ್ದಿದ್ದಾರೆ. What about Kantara Cinema?

ನನ್ನ ಪ್ರಕಾರ ಹೇಳುವುದಾದರೆ, ಗೆಲ್ಲಲು ಇದ್ದ ಅದ್ಭುತ ಅವಕಾಶವನ್ನು ಕಳೆದುಕೊಂಡ, ಸಿಕ್ಕಾಪಟ್ಟೆ ‘ಇಷ್ಟ’ಪಡಬಹುದಾದ ಸಿನಿಮಾ. ಕಾಂತಾರ ಅಂದರೆ ಕಾಡು, ಅಡವಿ, ಕಠಿಣ ಜಾಡು ಎಂಬ ಅರ್ಥಗಳಿವೆ. ಕಾಡು ಅಂದಾಕ್ಷಣ ಅಲ್ಲಿನ ಗಿಡಮರ, ಪ್ರಾಣಿಪಕ್ಷಿ, ನದಿತೊರೆಗಳಷ್ಟೆ ನಮ್ಮ ಕಲ್ಪನೆಯಲ್ಲಿ ಕಟ್ಟಿಕೊಳ್ಳುತ್ತವೆ. ಇವೆಲ್ಲವುಗಳ ಜೊತೆ ತಲೆತಲಾಂತರದಿಂದ ತಮ್ಮ ಬದುಕನ್ನು ಹಾಸುಹೊಕ್ಕಾಗಿಸಿಕೊಂಡ ಬುಡಕಟ್ಟು, ಆದಿವಾಸಿ ಸಮುದಾಯಗಳೂ ಕಾಡಿನ ಭಾಗ ಎನ್ನುವುದನ್ನು ನಾವು ಮನಗಾಣಬೇಕು.

ಆದರೆ ಇವತ್ತು ಆ ಬುಡಕಟ್ಟು, ಆದಿವಾಸಿಗಳ ಪರಿಸ್ಥಿತಿ ಹೇಗಿದೆ ಎನ್ನುವುದರ ಕಲ್ಪನೆಯೂ ನಮ್ಮಲ್ಲಿ ಬಹಳಷ್ಟು ಜನರಿಗೆ ಇಲ್ಲ. ಕಾಡಿನ ರಕ್ಷಣೆಯ ಹೆಸರಿನಲ್ಲಿ ನಮ್ಮ ಸರ್ಕಾರಗಳೇ ಅವರ ಮೇಲೆ ನಡೆಸುತ್ತಿರುವ ದೌರ್ಜನ್ಯದ ಕುರಿತು ಬೆಳಕು ಚೆಲ್ಲುವ ಅದ್ಭುತ ಅವಕಾಶ ಕಾಂತಾರ ಸಿನಿಮಾ ತಂಡದ ಮುಂದಿತ್ತು. ಬಿಡಿಬಿಡಿ ವ್ಯಕ್ತಿಗಳಿಂದ ಆ ಜನರ ಮೇಲೆ ನಡೆಯುತ್ತಿರುವ ಶೋಷಣೆಗಿಂತ ಸರ್ಕಾರದ ಯಂತ್ರಾಂಗಗಳಿಂದ ಆ ಜನ ಅನುಭವಿಸುತ್ತಿರುವ ಯಾತನೆ ದೊಡ್ಡದು. ಆ ಹಸಿ ಸರ್ಕಾರಿ ಕ್ರೌರ್ಯದ ವಿವರಣೆ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸುವಂತದ್ದು.

ನಿಜ ಹೇಳಬೇಕೆಂದರೆ, ಕಾಂತಾರ ಸಿನಿಮಾದ ಆರಂಭ ಕೂಡಾ ಅದೇ ದಿಕ್ಕಿನಲ್ಲಿ ಸಾಗುವ ಭರವಸೆ ಮೂಡಿಸುತ್ತದೆಯಾದರೂ, ಹಠಾತ್ತನೆ ನೋಡುಗನನ್ನು ದಿಗ್ಭ್ರಮೆಗೊಳಿಸಬೇಕೆನ್ನುವ ಕಮರ್ಷಿಯಲ್ ಆಯಾಮಕ್ಕೆ ಹೊರಳಿಕೊಳ್ಳುವ ಸಿನಿಮಾ, ಒಂದು ಸಿನಿಮಾವಾಗಿ ತನ್ನ ಸಾಮಾಜಿಕ ಜವಾಬ್ಧಾರಿಯಿಂದ ನುಣುಚಿಕೊಂಡಿದೆ. Keeping the laws ಹೆಸರಿನಲ್ಲಿ ಬುಡಕಟ್ಟು ಸಮುದಾಯದ ಮೇಲೆ ಅತಿಕ್ರಮಣ ಮಾಡುವ ಸರ್ಕಾರದ ಪ್ರತಿನಿಧಿಯಾದ ಅರಣ್ಯಾಧಿಕಾರಿಯ ಪಾತ್ರವು ಇದ್ದಕ್ಕಿದ್ದಂತೆ, ಚಿತ್ರದ ಸಸ್ಪೆನ್ಸ್ ಆಯಾಮವನ್ನು ಕಾಪಾಡುವ ಸಲುವಾಗಿ ವಿನಾಕಾರಣ ಬುಡಕಟ್ಟು ಸಮುದಾಯಗಳ ಪರವಾಗಿ ಹೊರಳಿಕೊಳ್ಳುವುದೇ ಅಸಮಂಜಸ ಎನ್ನಿಸುತ್ತೆ ಮಾತ್ರವಲ್ಲ; ವಾಸ್ತವದಿಂದ ದೂರಾದ ಸಂಗತಿಯಾಗಿ ಉಳಿಯುತ್ತದೆ.

ನಿಜ ಜೀವನದಲ್ಲಿ ಸರ್ಕಾರದ ಪ್ರತಿನಿಧಿಗಳು (ಅಧಿಕಾರಿಗಳು), ಭೂ ಮಾಲೀಕ ಬಂಡವಾಳಶಾಹಿಗಳು (ಧಣಿ) ಮತ್ತು ಸರ್ಕಾರ ಇವೆಲ್ಲವುಗಳ ಪರಸ್ಪರ ಹೊಂದಾಣಿಕೆಯ ಯಂತ್ರವು ಬುಡಕಟ್ಟು ಸಮುದಾಯಗಳ ಮೇಲೆ ಕ್ರೌರ್ಯವನ್ನು ತೋರುತ್ತಿವೆ. ಅದನ್ನು ಬಿಚ್ಚಿಡುವ ಅವಕಾಶ ಕಾಂತಾರ ಸಿನಿಮಾದ ಮುಂದಿತ್ತು. ಹಾಗೆ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಾ ಹೋದರೆ, ಸಿನಿಮಾ ತನ್ನ ಗ್ಲ್ಯಾಮರ್ ಕಳೆದುಕೊಂಡು ಡಾಕ್ಯುಮೆಂಟರಿಯಾಗಿಬಿಡುತ್ತಿತ್ತು ಎಂದು ಕೆಲವರು ದೂರಬಹುದು. ಅಂತವರಿಗೆ ತಮಿಳಿನ ‘ಜೈಭೀಮ್, ’ವಿಸಾರಣೈ’ ಮೊದಲಾದ ಸಿನಿಮಾಗಳು ಉತ್ತರವಾಗುತ್ತವೆ ಅನ್ನೋದು ನನ್ನ ಅನಿಸಿಕೆ. ಕಮರ್ಷಿಯಲ್ ಗ್ಲ್ಯಾಮರ್ ಉಳಿಸಿಕೊಂಡೂ, ಆ ಸಿನಿಮಾಗಳು ವಾಸ್ತವವನ್ನು ನೋಡುಗರಿಗೆ ಕಟ್ಟಿಕೊಟ್ಟಿದ್ದವು. ಇಷ್ಟವಾಗಿದ್ದವು. ಜೊತೆಗೆ ಗೆದ್ದಿದ್ದವು ಕೂಡಾ! ಅಪ್ಪಿತಪ್ಪಿಯೂ ಡಾಕ್ಯುಮೆಂಟರಿಗಳಾಗಲಿಲ್ಲ….

ಕಾಂತಾರ ಸಿನಿಮಾದ ಅಂತ್ಯದಲ್ಲಿ ಪಂಜುರ್ಲಿ ದೈವವು ಸರ್ಕಾರದ ಪ್ರತಿನಿಧಿಯಾದ ಅರಣ್ಯಾಧಿಕಾರಿಯನ್ನೂ, ಕಾಡುಮಕ್ಕಳನ್ನೂ ಒಟ್ಟಿಗೇ ಸೇರಿಸಿ ‘ಕೂಡಿ ಬಾಳುವ’ ಸಂದೇಶ ರವಾನಿಸವುದು ಸಹಾ ವಾಸ್ತವಕ್ಕೆ ದೂರವಾದ ಸಂಗತಿ. ಆ ಮೂಲಕ ಸರ್ಕಾರ, ಕಾಡಿನ ಜನರನ್ನು ಪೊರೆಯಬೇಕು ಅಂತಲೋ; ಅಥವಾ ಸರ್ಕಾರದ ಸಹಕಾರದೊಂದಿಗೆ ಕಾಡಿನ ಮಕ್ಕಳು ಬದುಕಬೇಕು ಅಂತಲೋ ಹೇಳಲು ಹೊರಟಂತಿದೆ. ಆದರೆ ಇದು ಆಶಯದಷ್ಟು, ಸುಲಭವಿಲ್ಲ. ಯಾಕೆಂದರೆ ಬೇಲಿಯೇ ಎದ್ದು ಹೊಲ ಮೇಯುವ ಕಾಲಘಟ್ಟದಲ್ಲಿ ನಾವಿದ್ದೇವೆ. ತಲೆಮಾರುಗಳಿಂದ ನೆಲೆಸುತ್ತಾ ಬಂದ ಜಾಗದಿಂದ ಜನರನ್ನು ಸರ್ಕಾರಗಳೇ ಗುಳೆ ಎಬ್ಬಿಸುತ್ತಿವೆ. ಇಂಥಾ ಸುಡು ವಾಸ್ತವದ ನಡುವೆ ಕ್ಲೈಮ್ಯಾಕ್ಸ್‌ಗೋಸ್ಕರ ಸತ್ಯಕ್ಕೆ ದೂರವಾದ ದೃಶ್ಯಾವಳಿಯನ್ನು ಸೇರಿಸಿರುವುದು ಸಿನಿಮಾಕ್ಕಿದ್ದ ಗೆಲ್ಲುವ ಅವಕಾಶವನ್ನು ಕಿತ್ತುಕೊಂಡಿದೆ ಅನ್ನಬಹುದು.

ಎಲ್ಲಕ್ಕಿಂತ ವಿರೋಧಾಭಾಸದ ಸಂಗತಿ ಮತ್ತೊಂದಿದೆ. ‘ಧಣಿ’ಯನ್ನು ವಿಲನ್ ಆಗಿಸಿ, ಸರ್ಕಾರದ ಪ್ರತಿನಿಧಿಯಾದ ಅರಣ್ಯಾಧಿಕಾರಿ ಹಾಗೂ ಬುಡಕಟ್ಟು ಜನರನ್ನು ಒಂದು ಮಾಡುವ ಸಿನಿಮಾವು ಬಹುಮುಖ್ಯ ಸತ್ಯವೊಂದನ್ನು ಮರೆತಂತಿದೆ. ಇವತ್ತು ಸರ್ಕಾರ ಅಂತ ನಾವೇನು ಬಾಯ್ತುಂಬ ಕರೆಯುತ್ತೇವಲ್ಲ, ಆ ಸರ್ಕಾರಗಳು ಸಿನಿಮಾದ ಆ ಧಣಿಯ ’ರೂಪಕ’ಗಳು! ಪ್ರತಿಬಿಂಬಗಳು!! ಭೂಮಾಲೀಕ-ಬಂಡವಾಳಶಾಹಿ ವ್ಯಕ್ತಿಗಳೇ ಇವತ್ತು ಸರ್ಕಾರಗಳಾಗಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಅಧಿಕಾರ ನಡೆಸುತ್ತಿವೆ. ಆ ಅರ್ಥದಲ್ಲಿ ಸಿನಿಮಾದ ಧಣಿ ನಿಜಕ್ಕೂ ಸರ್ಕಾರದ ರೂಪಕ. ಒಂದು ಕಡೆ ಧಣಿಯೇ, ಅರ್ಥಾತ್ ಭೂಮಾಲೀಕ-ಬಂಡವಾಳಶಾಹಿಗಳ ಹಿಡಿತಕ್ಕೊಳಪಟ್ಟ ಸರ್ಕಾರವೇ ಬುಡುಕಟ್ಟು ಜನರ ಮೇಲೆ ಶೋಷಣೆ ನಡೆಸುತ್ತಿರುವಾಗ, ಮತ್ತೊಂದೆಡೆ ಸರ್ಕಾರದ ಯಜಮಾನಿಕೆಯ ಆಜ್ಞಾನುಸಾರಿಯಾದ ಸರ್ಕಾರಿ ಸೇವಕ ಅಧಿಕಾರಿಯ ಮೂಲಕ ಶೋಷಿತರ ರಕ್ಷಣೆಯ ಆಶಯ ಹೊರಹಾಕುವುದು ಸತ್ಯಕ್ಕೆ ಎಷ್ಟು ಮಾತ್ರ ಸನಿಹ, ನೀವೇ ಹೇಳಿ?

ಮೊದಲೇ ಹೇಳಿದಂತೆ ಒಂದು ವಿಭಿನ್ನ ಪ್ರಯತ್ನದಂತೆ ಮೂಡಿಬಂದಿರುವ ಕಾಂತಾರ ಸಿನಿಮಾವನ್ನು ಜನ ಮುಗಿಬಿದ್ದು ’ಇಷ್ಟ’ಪಡುತ್ತಿದ್ದಾರೆ. ಆ ‘ಇಷ್ಟ’ದ ನಡುವೆ ಇಂತಹ ವಾಸ್ತವಿಕ ಕೊರತೆಗಳು ನಗಣ್ಯವೆನ್ನಿಸಬಹುದು ಅಥವಾ ‘ಕೊಂಕು ಮಾತು’ಗಳಾಗಿಯೂ ಕಾಣಿಸಬಹುದು. ಆದರೆ ’ಇಷ್ಟ’ದ ಮಂಪರು ಇಳಿದುಹೋಗಿ, ಸಿನಿಮಾದ ನಿರ್ಮಾಪಕ ಕೋಟಿ ಕೋಟಿ ಲಾಭವನ್ನು ಮನೆಗೆ ಕೊಂಡೊಯ್ದ ಬಳಿಕ, ಈ ಸಿನಿಮಾ ಏನನ್ನು ಉಳಿಸಿಹೋಯ್ತು? ಎಂದು ಕೇಳಿಕೊಂಡಾಗ, ಇಷ್ಟಪಟ್ಟ ನಮ್ಮನ್ನು ನಾವು ಸಮರ್ಥಿಸಿಕೊಳ್ಳಲು ನೈಜ ಎನ್ನಿಸುವ ಒಂದೆರಡು ಕಾರಣಗಳಾದರೂ ಉಳಿಯಬೇಕಲ್ಲವೇ? ಬಹುಶಃ ಅದನ್ನೇ ಅಲ್ಲವೇ ಸಿನಿಮಾದ ಯಶಸ್ಸು ಅನ್ನೋದು….

ಕ್ಷಮಿಸಿ, ಕಾಂತಾರ ಸಿನಿಮಾದ ಬಗ್ಗೆ ಬರೆಯಲು ನನ್ನನ್ನು ಪ್ರೇರೇಪಿಸಿದ್ದು ಈ ಯಾವ ಕಾರಣವೂ ಅಲ್ಲ. ಬೇರೆಯದೇ ಸಂಗತಿಯಿದೆ. ಕಾಂತಾರ ಸಿನಿಮಾದ ನಂತರ, ನಮ್ಮ ಇಂದಿನ ಯುವಪೀಳಿಗೆಯನ್ನು ಕಾಡುತ್ತಿರುವ ದ್ವಂದ್ವ ಎಷ್ಟು ಆಳವಾದದ್ದು, ಎಷ್ಟು ಅಪಾಯಕಾರಿಯಾದದ್ದು ಎಂಬುದು ಮತ್ತೊಮ್ಮೆ ಮನದಟ್ಟಾಗಿದೆ. ಸಿನಿಮಾದಲ್ಲಿ ಅಸ್ಪೃಷ್ಯತೆ ಮತ್ತು ಜಾತೀಯತೆಯನ್ನು ಸಾಮಾಜಿಕ ಪಿಡುಗು, ಕೆಟ್ಟ ಆಚರಣೆ ಎನ್ನುವಂತೆ ಬಿಂಬಿಸಿದ ನಿರ್ದೇಶಕ ಕಂ ನಾಯಕ ನಟ, ನಿಜ ಜೀವನದಲ್ಲಿ ಅದೇ ಜಾತೀಯತೆಯನ್ನು ಗಟ್ಟಿಗೊಳಿಸಲು ಹರಸಾಹಸ ಪಡುತ್ತಿರುವ ಮತೀಯವಾದಿ ಸಿದ್ಧಾಂತದ ಜೊತೆಗೆ ರಾಜಾರೋಷವಾಗಿ ನಿಲ್ಲುತ್ತಿರುವುದನ್ನು ನೋಡಿದಾಗ ಈಗಿನ ಯುವಜನಾಂಗ ಅದೆಷ್ಟು ದ್ವಂದ್ವ, ಗೊಂದಲಗಳ ನಡುವೆ ಅಸ್ತವ್ಯಸ್ತಗೊಂಡಿದ್ದಾರೆ ಅನ್ನಿಸದಿರದು. ಈ ಅಸ್ತವ್ಯಸ್ತತೆ ಬಹಳ ಅಪಾಯಕಾರಿಯಾದದ್ದು. ಅದರ ಝಳ ಈಗಾಗಲೇ ಬಡಿಯುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಧಗಧಗಿಸಲಿದೆ.

ಅಂದಹಾಗೆ, ಹೊಸಪೀಳಿಗೆಯವರ ಮನಸ್ಸನ್ನು ’ಅವರು’ ಆಕ್ರಮಿಸಿಕೊಳ್ಳುತ್ತಾ ಬಂದರು ಎಂಬುದು ಎಷ್ಟು ಸತ್ಯವೋ; ಯುವಜನಾಂಗದ ಮೇಲೆ ನಾವು, ಅಂದರೆ ಜಾತ್ಯತೀತರು-ಪ್ರಗತಿಪರರು-ಸಂವಿಧಾನವಾದಿಗಳು, (ರಾಜಕೀಯ ಪಕ್ಷಗಳೂ ಸೇರಿ) ನಮ್ಮ ಪ್ರಭಾವವನ್ನು ವಿಸ್ತರಿಸುವಲ್ಲಿ ಸೋಲುತ್ತಾ ಬಂದೆವು ಎನ್ನುವುದೂ ಅಷ್ಟೇ ಸತ್ಯ….. ಏನಂತೀರಾ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!