ಶಿವಸುಂದರ್
ಜನೋಪಕಾರಿ ಐದು ಗ್ಯಾರಂಟಿಗಳನ್ನು ಆಧರಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ಮಾದರಿ ಅಭಿವೃದ್ಧಿ ಮತ್ತು ಫ಼್ಯಾಸಿಸಂ ಗೆ ಕರ್ನಾಟಕ ಮಾದರಿ ಪ್ರತಿರೋಧ ವೆಂಬ ಪ್ರತಿಪಾದನೆಗಳು ಕರ್ನಾಟಕದಲ್ಲಿ ಮತ್ತು ದೇಶಾದ್ಯಂತ ವಿಸ್ತೃತವಾಗಿ ಚರ್ಚೆಯಾಗುತ್ತಿದೆ.
ನಾಗರಿಕ ಸಮಾಜದ ಪ್ರತಿರೋಧ- ಸಕಾರಾತ್ಮಕ ಆದರೆ ಉತ್ಪ್ರೇಕ್ಷಿತ
ಕರ್ನಾಟಕ ಮಾದರಿ ಪ್ರತಿರೋಧ ವೆಂಬುದು ಈ ಚುನಾವಣೆಯಲ್ಲಿ ಕರ್ನಾಟಕದ ನಾಗರಿಕ ಸಮಾಜದ ಕೆಲವು ಸಂಘಟನೆಗಳು ಮತ್ತು ಒಕ್ಕೂಟಗಳು ಈ ಚುನಾವಣೆಯಲ್ಲಿ ಬಿಜೆಪಿಯ ವಿರೋಧವಾಗಿ ಸಕ್ರಿಯವಾಗಿ ನಡೆಸಿದ ಪ್ರಚಾರ ಹಾಗೂ ಬಿಜೆಪಿಯನ್ನು ಸೋಲಿಸಲು ಇತರ ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ನಡೆಸಿದ ಕಾರ್ಯತಂತ್ರಗಳನ್ನೇ ಪ್ರಧಾನವಾಗಿ ಗಮನದಲ್ಲಿಟ್ಟುಕೊಂಡಿದೆ. ಇದರ ಜೊತೆಗೆ ಚುನಾವಣಾ ಫಲಿತಾಂಶ ಬಂದು ಬಿಜೆಪಿ ಸೀಟಿನ ಲೆಕ್ಕದಲ್ಲಿ ಹೀನಾಯವಾಗಿ ಸೋತ ಮೇಲೆ ಈ ಪ್ರಾಮಾಣಿಕ ಹಾಗೂ ಫ಼್ಯಾಸಿಸ್ಟ್ ವಿರೋಧಿ ಗುಂಪುಗಳ ಪ್ರಯತ್ನಗಳು ಕರ್ನಾಟಕದ ಚುನಾವಣಾ ಫಲಿತಾಂಶದಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂಬ ಅಭಿಪ್ರಾಯಗಳೂ ಕೂಡ ಕರ್ನಾಟಕ ಮಾದರಿ ಪ್ರತಿರೋಧ ದ ಬಗ್ಗೆ ದೇಶಾದ್ಯಂತ ಅತ್ಯುತ್ಸಾಹಿ ಚರ್ಚೆಗಳು ನಡೆಯಲು ಕಾರಣವಾಗಿವೆ.
ಆದರೆ ಚುನಾವಣಾ ಫಲಿತಾಂಶ ತಂದುಕೊಟ್ಟ ನಿರಾಳ ವಾಸ್ತವದ್ದಾಗಿದ್ದರೂ, ಹಾಗೂ ಅದರಲ್ಲಿ ನಾಗರಿಕ ಸಮಾಜದ ಗುಂಪುಗಳ ಪಾತ್ರ ಅತ್ಯಂತ ಸಕಾರಾತ್ಮಕವಾಗಿದ್ದರೂ ಚುನಾವಣಾ ಫಲಿತಾಂಶದ ಬಗ್ಗೆ ಹಾಗೂ ನಾಗರಿಕ ಸಮಾಜದ ಪಾತ್ರದ ಬಗ್ಗೆ ಹೇಗೆ ಅತ್ಯಂತ ಉತ್ಪ್ರೇಕ್ಷಿತ ಚಿತ್ರಣ ನೀಡಲಾಗುತ್ತಿದೆ ಎಂಬುದನ್ನು ಈಗಾಗಲೇ ಈ ಅಂಕಣದಲ್ಲಿ ಹಲವಾರು ಲೇಖನದಲ್ಲಿ ಅಂಕಿಅಂಶ ಹಾಗೂ ವಿಶ್ಲೇಷಣೆಗಳ ಮೂಲಕ ವಿವರಿಸಲಾಗಿದೆ. ಹೀಗಾಗಿ ಅದನ್ನು ಈ ಲೇಖನದಲ್ಲಿ ಪುನರಾವರ್ತಿಸುವ ಅಗತ್ಯವಿಲ್ಲ.
ಸಾರಾಂಶದಲ್ಲಿ ಹೇಳುವುದಾದರೆ ಬಿಜೆಪಿಯ ಚುನಾವಣಾ ಸೋಲು ನಿರಾಳ ತರುವಂತಿದ್ದರೂ ಕಾಂಗ್ರೆಸ್ಸಿನ ಗೆಲುವುದು ಸ್ಥಿರವಾಗುತ್ತಿರುವ ಮತ್ತು ಹೆಚ್ಚಾಗುತ್ತಿರುವ ಬಿಜೆಪಿಯ ಕೋಮುವಾದಿ ಸಾಮಾಜಿಕ ಹಾಗೂ ಸೈದ್ಧಾಂತಿಕ ನೆಲೆಯನ್ನು ಅಲುಗಾಡಿಸುವುದಿರಲ್ಲಿ ಯಶಸ್ವಿಯಾಗಿಲ್ಲ. ಇದು ಎಂಥಾ ಬಲವಾದ ಆಡಳಿತ ವಿರೋಧಿ ಅಲೆ ಇದ್ದರೂ ಬಿಜೆಪಿಯ ಓಟು ಶೇರು ಮಾತ್ರ ಸ್ಥಿರವಾಗಿರುವುದರಲ್ಲೂ, ಹಾಗೂ ಕೋಮು ಗಲಭೆಗಳು ಮತ್ತು ಘಟನೆಗಳು ನಡೆದ ಪ್ರದೇಶಗಳಲ್ಲಿ ಕೋಮುವಾದವು ಬಿಜೆಪಿ ವಿರೋಧಿ ಅಸಮಾಧಾನಗಳನ್ನು ಮರೆಸಿರುವುದರಲ್ಲೂ ಸ್ಪಷ್ಟವಾಗುತ್ತದೆ. ಹಾಗೆಯೇ ನಾಗರಿಕ ಸಮಾಜದ ಗುಂಪುಗಳು ಮೊದಲಿಗಿಂತ ಹೆಚ್ಚು ಸಕ್ರಿಯವಾಗಿ ಜನರ ನಡುವೆ ಹೋಗಿ ಬಿಜೆಪಿ ವಿರುದ್ಧ ಪ್ರಚಾರ ಮಾಡಿದ್ದರೂ ಅದು ಈಗಾಗಲೇ ದಲಿತರಲ್ಲಿ, ಮುಸ್ಲಿಮರಲ್ಲಿ ಹಾಗೂ ಮಹಿಳೆಯರಲ್ಲಿ ಸಂಘಟಿತವಾಗಿ ರೂಪುಗೊಂಡಿದ್ದ ಬಿಜೆಪಿ ವಿರೋಧಿ ಮತಚಲಾವಣೆಯ ನಿರ್ಧಾರಗಳಿಗೆ ಪೂರಕವಾಗಿ ಕೆಲಸ ಮಾಡಿದೆಯೇ ವಿನಾ ಕೇವಲ ನಾಗರಿಕ ಗುಂಪುಗಳು ಚುನಾವಣೆಗೆ ಎರಡು ತಿಂಗಳ ಮುನ್ನ ನಡೆಸಿದ ಪ್ರಚಾರ ಮಾತ್ರದಿಂದಲೇ ಸಂಘಪರಿವಾರ ಐದು ವರ್ಷಗಳಿಂದ ಪ್ರತಿನಿತ್ಯ ನಡೆಸುತ್ತಾ ಬಂದಿರುವ ಪ್ರಚಾರ ಹಾಗೂ ಸೈದ್ಧಾಂತಿಕ ಸಂಘಟನೆಗಳನ್ನು ಸೋಲಿಸಿಬಿಟ್ಟಿತು ಎಂದು ಭಾವಿಸುವುದು ಅತ್ಯುತ್ಪ್ರೇಕ್ಷೆಯ ಮಾತಾಗುತ್ತದೆ.
ಅದೇನೇ ಇರಲಿ, ನಾಗರಿಕ ಸಮಾಜದ ಸಂಘಟಿತ ಪ್ರಯತ್ನಗಳ ಪ್ರಭಾವದ ಬಗೆಗಿನ ಅಂದಾಜುಗಳು ಬಗ್ಗೆ ಏನೇ ವ್ಯತ್ಯಾಸಗಳಿದ್ದರೂ ಈ ಚುನಾವಣೆಯಲ್ಲಿ ನಾಗರಿಕ ಸಮಾಜ ಮೊದಲಿಗಿಂತ ಕ್ರಿಯಾಶೀಲವಾಗಿ ಜನರೊಂದಿಗೆ ಭಾಗವಹಿಸಿದ್ದು ದೀರ್ಘಕಾಲೀನ ದೃಷ್ಟಿಯಿಂದ ಕರ್ನಾಟಕಕ್ಕೆ ಒಳ್ಳೆಯದನ್ನೇ ಮಾಡುವ ಸಾಧ್ಯತೆ ಇದೆ.
ಆದ್ದರಿಂದ ಕರ್ನಾಟಕದ ನಾಗರಿಕ ಸಮಾಜ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ತನ್ನ ಕ್ರಿಯಾಶೀಲತೆಯನ್ನು ಉಳಿಸಿಕೊಂಡು, ಅಸೆಂಬ್ಲಿ ಚುನಾವಣೆಯ ಪ್ರಚಾರದಲ್ಲಿ ಆಗಿರಬಹುದಾದ ತಪ್ಪುಗಳಿಂದ ಕೆಲವು ಪಾಠಗಳನ್ನು ಕಲಿಯುವ ಅಗತ್ಯವಂತೂ ಇದ್ದೇ ಇದೆ.
ಜನರಲ್ಲಿ ತಾನು ಜನರ ವಕ್ತಾರ ಎಂಬ ಅಭಿಪ್ರಾಯಕ್ಕಿಂತ ಕಾಂಗ್ರೆಸ್ ವಕ್ತಾರ ಎಂಬ ಪರೋಕ್ಷ ಅಭಿಪ್ರಾಯ ಬರದಂತೆ ಎಚ್ಚರವಹಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ರಧಾನವಾಗಿ ಸಂವಿಧಾನ ಪರ, ಜನಪರ ಹಾಗೂ ಫ಼್ಯಾಸಿಸ್ಟ್ ವಿರೋಧಿ ಅಜೆಂಡಾಗಳನ್ನು ಮುಂದುಮಾಡಿಕೊಂಡು ಜನರ ನಡುವೆ ಪ್ರಚಾರ ಮಾಡುವುದು ದೀರ್ಘ ಕಾಲೀನ ದೃಷ್ಟಿಯಿಂದ ಅಪೇಕ್ಷಣೀಯ ಮತ್ತು ಸ್ವಾಗತಾರ್ಹ ಕ್ರಮವಾಗುತ್ತದೆ.
ಬಿಜೆಪಿ ಮತ್ತು ಜೆಡಿಎಸ್ ನಡುವೆ ಏರ್ಪಡಲಿರುವ ಮೈತ್ರಿಕೂಟದ ಹಿನ್ನೆಲೆಯಲಿ ಈ ಪ್ರಚಾರದ ಚುನಾವಣಾ ಲಾಭ ಕಾಂಗ್ರೆಸ್ಸಿಗೇ ಆದರೂ , ನಾಗರಿಕ ಸಮಾಜದ ಪ್ರಚಾರದ ರಾಜಕೀಯ ಮತ್ತು ಸೈದ್ಧಾಂತಿಕ ಲಾಭ ನಾಗರಿಕ ಸಮಾಜದ ದೂರಗಾಮಿ ಸಾಂವಿಧಾನಿಕ ಆಶಯಗಳಿಗೆ ತಕ್ಕಂತೆ ಪುನರ್ ರೊಪಿಸಿಕೊಳ್ಳುವ ಅಗತ್ಯವಂತೂ ಖಂಡಿತಾ ಇದ್ದೇ ಇದೆ. ಹಾಗೂ ತಾನು ಜನಹಿತವನ್ನು ಕಾಯುವ ಶಾಶ್ವತ ಜನಪಕ್ಷವಾಗಿ ಉಳಿದರೆ ಮಾತ್ರ ಒಳಿತು ಸಾಧ್ಯ.
ಇದಿಷ್ಟು ಕರ್ನಾಟಕ ಮಾದರಿ ಪ್ರತಿರೋಧದ ಬಗ್ಗೆ .
ಕರ್ನಾಟಕ ಮಾದರಿ ಅಭಿವೃದ್ಧಿಯ ವೈರುಧ್ಯಗಳು
ಗ್ಯಾರಂಟಿಗಳ ಮಾದರಿಯ ವಾರಂಟಿಯೆಷ್ಟು?
ಆದರೆ ಇದರ ಜೊತೆಜೊತೆಗೆ ಇಂದಿನ ಸಂದರ್ಭದಲ್ಲಿ ಬಿಜೆಪಿಯ ವಿರುದ್ಧ ಕಾಂಗ್ರೆಸ್ಸಿನ ಐತಿಹಾಸಿಕ ಗೆಲುವಿಗೆ ಪ್ರಧಾನ ಕಾರಣಗಳಲ್ಲಿ ಒಂದಾದ ಐದು ಗ್ಯಾರಂಟಿಗಳು ಮತ್ತದ ಸುತ್ತಾ ಕಟ್ಟಿಕೊಳ್ಳಲಾಗಿರುವ ಕಥನಗಳು ಇದು ಒಂದು ಕರ್ನಾಟಕ ಮಾದರಿ ಅಭಿವೃದ್ಧಿ ಎಂಬ ಉತ್ಪ್ರೇಕ್ಷಿತ ಕಥನವನ್ನೂ ಹುಟ್ಟುಹಾಕಿದೆ.
ಕರ್ನಾಟಕ ಮಾದರಿ ಯ ಅಧಿಕೃತ ಪ್ರಸ್ತಾಪ ಈ ಸಾಲಿನ ಸಿಧ್ಧರಾಮಯ್ಯ ನವರ ಬಜೆಟ್ಟಿನಲ್ಲಿದೆ.

ಅದು ಸ್ಥೂಲವಾಗಿ ಗ್ಯಾರಂಟಿಗಳ ಮೂಲಕ ಮಾಡುತ್ತಿರುವ ವಿತರಣಾ ನ್ಯಾಯವನ್ನು ಕರ್ನಾಟಕ ಮಾದರಿ ಎಂದು ಹೇಳುತ್ತದೆ.
ಜನೋಪಕಾರಿ ಹಾಗೂ ಜನಕಲ್ಯಾಣದ ಸಾಂವಿಧಾನಿಕ ಜವಾಬ್ದಾರಿಯನ್ನು ಒಂದಷ್ಟು ಪೂರೈಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಕರ್ನಾಟಕದ ಹಾಗೂ ರಾಷ್ಟ್ರೀಯ ಬಿಜೆಪಿ ಮತ್ತು ಪ್ರಧಾನಿ ಮೋದಿ ಅತ್ಯಂತ ಅನೈತಿಕವಾಗಿ ಹಾಗೂ ಕಾರ್ಪೊರೇಟ್ ಕುಲದ ಹಿತದ್ರೂಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅವಹೇಳನ ಮಾಡಲು ಮತ್ತು ಅವನ್ನು ಶತಾಯ ಗತಾಯ ವಿಫ಼ಲಗೊಳಿಸಲು ಪ್ರಯತ್ನಿಸುತ್ತಲೇ ಇದ್ದಾರೆ.
ಹೀಗಾಗಿ ಜನಪರ ಸಂಘಟನೆಗಳು ಮತ್ತು ಚಿಂತಕರು ಮತ್ತು ವಿಶ್ಲೇಷಕರು ಗ್ಯಾರಂಟಿಗಳ ಜನೋಪಯೋಗಿ ಆರ್ಥಿಕ ಹಾಗೂ ಸಾಮಾಜಿಕ ಪ್ರಯೋಜನಗಳನ್ನು ಮುಂದಿಡುತ್ತಾ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಸಕಾರಣವಾಗಿ ಮತು ಸತರ್ಕವಾಗಿ ಸಮರ್ಥಿಸುತ್ತಿದ್ದಾರೆ. ಆ ಮೂಲಕ ಬಿಜೆಪಿಯ ಫ಼್ಯಾಸಿಸ್ಟ್ ರಾಜಕೀಯ ಸಿದ್ಧಾಂತದ ಹಿಂದಿನ ಜನವಿರೋಧಿ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಸಮರ್ಥವಾಗಿ ಬಯಲು ಮಾಡುತ್ತಿದ್ದಾರೆ.
ಆದರೆ ಗ್ಯಾರಂಟಿಗಳ ಸಮರ್ಥನೆಗಳು ಕೆಲವು ವಲಯದಲ್ಲಿ ಇನ್ನೂ ಒಂದೆರೆಡು ಹೆಜ್ಜೆ ಮುಂದೆ ಹೋಗಿ ಅಪೇಕ್ಷಣೀಯ ಮತ್ತು ಕಾರ್ಯಸಾಧುವಾದ ಏಕೈಕ ಜನಪರ ಮಾದರಿ- ಕರ್ನಾಟಕ ಮಾದರಿ ಎಂಬ ಹಂತಕ್ಕೆ ತಲುಪುತ್ತಿದೆ. ಹಾಗೂ ಮೂಲಭೂತವಾಗಿ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನೇ ಅಪ್ಪಿಕೊಂಡಿರುವ ಕಾಂಗ್ರೆಸ್ ಸರ್ಕಾರ ಈ ಅವಕಾಶವನ್ನು ಬಳಸಿಕೊಂಡು ತನ್ನದೊಂದು ಪರ್ಯಾಯ ಆರ್ಥಿಕ ಮಾದರಿ ಯೆಂದು ಪ್ರತಿಪಾದಿಸುತ್ತಿದೆ.
ಆದರೆ ಕಾಂಗ್ರೆಸ್ ಮುಂದಿಟ್ಟಿರುವ ಗ್ಯಾರಂಟಿ ಮಾದರಿಯನ್ನು ಅನಿವಾರ್ಯ ಮಾತ್ರವಲ್ಲ ಅಪೇಕ್ಷಣೀಯ ಕರ್ನಾಟಕ ಮಾದರಿ ಎಂದು ಒಪ್ಪಿಕೊಂಡರೆ ಕರ್ನಾಟಕ ಎಚ್ಚರ ತಪ್ಪುವ ಎಲ್ಲಾ ಅವಕಾಶಗಳೂ ಇವೆ.
ಏಕೆಂದರೆ ಈ ಕಥನದಲ್ಲಿ ಹಲವಾರು ಮೂಲಭೂತ ಸಮಸ್ಯೆಗಳಿವೆ. ಆಳವಾದ ಅಂತರ್ಗತ ವೈರುಧ್ಯಗಳಿವೆ.
1.ಕಾರ್ಪೊರೇಟ್ ಪರ ಅಭಿವೃದ್ಧಿ ವರ್ಸಸ್ ಸಾಮಾಜಿಕ ನ್ಯಾಯ
ಸಿದ್ಧರಾಮಯ್ಯನವರ ಬಜೆಟ್ಟನ್ನು ಗ್ಯಾರಂಟಿಗಳನ್ನು ಹೊರತುಪಡಿಸಿ ಕೂಲಂಕಷವಾಗಿ ವಿಶ್ಲೇಷಿಸಿದರೆ ಅದರಲ್ಲಿ ಪ್ರಸ್ತಾಪಿತವಾಗಿರುವ ಅಭಿವೃದ್ಧಿ ಮಾದರಿ
(ಟ್ರಿಲಿಯನ್ ಡಾಲರ್ ಎಕಾನಮಿ ಮತ್ತು ಅದನ್ನು ಸಾಧಿಸಬೇಕೆಂದು ಹಾಕಿಕೊಂಡಿರುವ ಮಾದರಿ-ಮಾರ್ಗಗಳು )
ಮೋದಿ ಮಾದರಿಯ ನಕಲಾಗಿದೆ!
ವಾಸ್ತವದಲ್ಲಿ ಬಜೆಟ್ಟಿನಲ್ಲಿ ಹಾಕಿಕೊಂಡಿರುವ ಗುರಿ ಮತ್ತು ಅದನ್ನು ಸಾಧಿಸಲು ಗುರುತಿಸಿರುವ ಮಾರ್ಗಗಳು ಮತ್ತು ಒಂಭತ್ತು ಕ್ಶೇತ್ರಗಳು ಎಲ್ಲವೂ 2022 ರಲ್ಲಿ ಬೊಮ್ಮಾಯಿ ಸರ್ಕಾರ ಕಾರ್ಪೊರೇಟ್ ಉದ್ಯಮಿ ಮೋಹನ್ ದಾಸ್ ಪೈ ಅವರ ನೇತೃತ್ವದಲ್ಲಿ ಮೋದಿಯವರ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸನ್ನು ನನಸು ಮಾಡಲು ಹಾಕಿಕೊಟ್ಟ ಹೆಜ್ಜೆಗಳನ್ನೇ ಸಿದ್ಧರಾಮಯ್ಯನವರ ಬಜೆಟ್ಟೂ ಕೂಡ ಅನುಸರಿಸಿದೆ .
ಇದರ ಅರ್ಥ ಗ್ಯಾರಂಟಿಗಳನ್ನು ಕೊಡುವುದನ್ನು ಬಿಟ್ಟರೆ ಅಭಿವೃದ್ಧಿ ಮದರಿಯಲ್ಲಿ ಮೋದಿ-ಬೊಮ್ಮಾಯಿಗಳ ಕಾರ್ಪೊರೇಟ್ ಪರ ನವ ಉದಾರವಾದಿ ಬಂಡವಾಳಶಾಹಿ ಅಭಿವೃದ್ಧಿ ಮಾದರಿಗೂ ಸಿದ್ಧರಾಮಯ್ಯನವರ ಅಭಿವೃದ್ಧಿ ಮಾದರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದಾಯಿತಲ್ಲವೇ?
ಆದರೆ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಮಾದರಿ ಸಾಮಾಜಿಕ ನ್ಯಾಯಕ್ಕೆ ತದ್ವಿರುದ್ಧವಾದ ಆಶಯ ಮತ್ತು ತತ್ವಗಳನ್ನು ಹೊಂದಿದೆ. ಮತ್ತು …
…ಸಾಮಾಜಿಕ ನ್ಯಾಯ ಎನ್ನುವುದು ಕೇವಲ ಅಭಿವೃದ್ಧಿ ಫಲಗಳ ವಿತರಣೆಗೆ ಸೀಮಿತವಾದ ತತ್ವವಲ್ಲ. ಅಭಿವೃದ್ಧಿ ಮಾದರಿಯಲ್ಲು ಅದು ಪ್ರತಿಫ಼ಲಿತವಾಗದಿದ್ದರೆ ವಾರಂಟಿಗೆ ಮುಂಚೆ ಗ್ಯಾರಂಟಿಗಳೂ ಕೂಡ ವಿಫಲವಾಗುತ್ತವೆ.
ಏಕೆಂದರೆ ಈ ಅಭಿವೃದ್ಧಿ ಮಾದರಿಯು ಕಾರ್ಪೊರೇಟ್ ಬಂಡವಾಳಕ್ಕೆ ಅಧಿಕ ಲಾಭ ತಂದುಕೊಂಡುವ ಅವಕಾಶಗಳನ್ನು ಸೃಷ್ಟಿಸಿ ಅವರ ಹೂಡಿಕೆಯನ್ನು ಉತ್ತೇಜಿಸಿ, ಕರ್ನಾಟಕದ ರಾಜ್ಯ ಜಿಡಿಪಿ ಹೆಚ್ಚಳವನ್ನು ಸಾಧಿಸುವ ಗುರಿಯನ್ನು ಹೊಂದಿದೆಯೇ ವಿನಾ ಉದ್ಯೋಗ ಸೃಷ್ಟಿಸುವ ಬಂಡವಾಳ ಹೂಡಿಕೆಯನ್ನಲ್ಲ. ಮೋದಿಯ ಅಭಿವೃದ್ಧಿ ಮಾದರಿಯಂತೆ ಕಾಂಗ್ರೆಸ್ ನ ಅಭಿವೃದ್ಧಿ ಮಾದರಿಯ ಚಾಲಕ ಸ್ಥಾನದಲ್ಲಿರುವವರು ಸಹ ಕಾರ್ಪೊರೇಟ್ ಬಂಡವಾಳಶಾಹಿಗಳೇ ವಿನಾ ಈ ದೇಶದ ಬಹುಸಂಖ್ಯಾತರಾದ ಸಣ್ಣ ರೈತ, ರೈತ ಕೂಲಿ, ಕಾರ್ಮಿಕ, ಸಣ್ಣಪುಟ್ಟ ಉದ್ಯಮಿಗಳಲ್ಲ.
ಮೋದಿ ಅಭಿವೃದ್ಧಿ ಮಾದರಿಯು ವಿದೇಶದಿಂದ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸದ ಸೆಮಿ ಕಂಡಕ್ಟರ್, ಗ್ರೀನ್ ಹೈಡ್ರೊಜನ್ ಇನ್ನಿತ್ಯಾದಿ ಅಧಿಕ ಬಂಡವಾಳ ಮತ್ತು ಉನ್ನತ ತಂತ್ರಜ್ನಾನ ಅವಲಂಬಿತ ಹೂಡಿಕೆಯನ್ನು ಅವಲಂಬಿಸಿದೆ ಮತ್ತು ಅದನ್ನೇ ದೆಶದ ಅಭಿವೃದ್ಧಿ ಎಂದು ಘೋಷಿಸುತ್ತದೆ.
ಸಿದ್ಧರಾಮಯ್ಯನವರ ಬಜೆಟ್ಟಿನಲ್ಲೂ ಔದ್ಯಮಿಕ ಅಭಿವೃದ್ಧಿ ಮಾದರಿ ಇದೇ ಆಗಿದೆ. ಜನಸಾಮಾನ್ಯರಿಗೆ ಬೇಕಾದ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಇರುವುದು ಕೇವಲ ಜನಪರ ದೂರದ್ರೂಷ್ಟಿ ಉಳ್ಳ ಸಾರ್ವಜನಿಕ ಹೂಡಿಕೆಗೆ ಅರ್ಥತ್ ಸರ್ಕಾರಿ ಹೂಡಿಕೆಗೆ ಮಾತ್ರ. ಆ ರೀತಿ ಉದ್ಯೋಗ ಸೃಷ್ಟಿಯಾದರೆ ಮಾತ್ರ ಜನರ ಆದಾಯ ಹೆಚ್ಚುತ್ತದೆ.
ಆಗ ಮಾತ್ರ ಜನರು ಗ್ಯಾರಂಟಿಗಳ ಅನಿವಾರ್ಯ ಊರುಗೋಲನ್ನು ಅವಲಂಬಿಸದೆ ತಮ್ಮ ಕಾಲಮೇಲೆ ತಾವು ನಿಲ್ಲಲು ಸಾಧ್ಯ.
ಆದರೆ ಮೋದಿ ಸರ್ಕಾರದಂತೆ ಸಿದ್ಧರಾಮಯ್ಯನವರ ಸರ್ಕಾರವೂ ಸಹ ಹೂಡಿಕೆ ಎಂದರೆ ಕೇವಲ ಖಾಸಗಿ ಹೂಡಿಕೆಯೆಂದೇ ಅರ್ಥಮಾಡಿಕೊಂಡಿದೆ. ಸಿದ್ಧರಾಮಯ್ಯನವರ ಬಜೆಟ್ಟಿನುದ್ದಕೂ ಅದೇ ಪ್ರತಿಫ಼ಲನಗೊಂಡಿದೆ.
ಒಂದು ಜನಪರ ಮಾದರಿ ಸರ್ಕಾರದ ಆರ್ಥಿಕ ದೃಷ್ಟಿಕೋನವು ಇಂದಿನ ಅಗತ್ಯ ಹಾಗೂ ಅನಿವಾರ್ಯವಾದ ಗ್ಯಾರಂಟಿಗಳನ್ನು ಖಾತರಿ ಮಾಡುತ್ತಲೇ ಗ್ಯಾರಂಟಿಗಳ ಅಗತ್ಯ ಬೀಳದ ಸಮಾಜ ಜನಪರ ಆರ್ಥಿಕತೆಯ ಸೃಷ್ಟಿಯನ್ನು ಒಳಗೊಂಡಿರಬೇಕು.
ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ನಾಡಿನ ಜಾಗೃತ ಜನಪರ ಚಿಂತಕರ ಸಭೆಯಲ್ಲಿ ಮಂತ್ರಿಗಳಾದ ಕೃಷ್ಣ ಭೈರೇಗೌಡರು ಸಮಸ್ಯೆ ಇರುವುದು ನವ ಉದಾರವಾದಿ ಕಾರ್ಪೊರೇಟ್ ಬಂಡವಳಶಾಹಿ ಅಭಿವೃದ್ಧಿ ಮಾದರಿಯಲ್ಲಿ ಎಂಬುದನ್ನು ಖಡಾಕಂಡಿತವಾಗಿ ನಿರಾಕರಿಸಿದರು. ಮತ್ತು ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಲಾಭದಿಂದ ವಂಚಿತರಾದ ಕೆಲವು ಸಮುದಾಯಗಳಿಗೆ ಗ್ಯಾರಟಿಗಳನ್ನು ಕೊಟ್ಟರೆ ಸಾಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅದೇ ರೀತಿ ಇತ್ತೀಚೆಗೆ ದಿ ಹಿಂದೂ ಪತ್ರಿಕೆಯಲ್ಲಿ ಗ್ಯಾರಂಟಿಗಳನ್ನು ಸಮರ್ಥಿಸಿಕೊಳ್ಳುತ್ತಾ ಕಾಂಗ್ರೆಸ್ಸಿನ ಅಧಿಕೃತ ವಕ್ತಾರ ಹಾಗೂ ಅರ್ಥಶಾಸ್ತ್ರಜ್ನ ಪ್ರವೀಣ್ ಚಕ್ರವರ್ತಿಯವರು ನಿರುದ್ಯೋಗ ಎಂಬ ರೋಗ ನಿವಾರಣೆಗೆ ನಮ್ಮ ಅರ್ಥಿಕತೆಯಲ್ಲಿ ಪರಿಹಾರವಿಲ್ಲದಾಗ, ಗ್ಯಾರಂಟಿ ಎಂಬ ನೋವು ನಿವಾರಕ ಅಗತ್ಯ ಎಂದು ಹೇಳುತ್ತಾ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಸೃಷ್ಟಿಯಾದ ನಿರುದ್ಯೋಗಕ್ಕೆ ಕಾಂಗ್ರೆಸ್ ಸರ್ಕಾರದ ಬಳಿಯೂ ನಿವಾರಣೋಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗಿದ್ದಲ್ಲಿ ಇದು ಕರ್ನಾಟಕವು ಅಪೇಕ್ಷಿಸುವ ಕರ್ನಾಟಕ ಮಾದರಿ ಹೇಗಾಗಲು ಸಾಧ್ಯ?
ವಾಸ್ತವವೆಂದರೆ ಈ ಬಗೆಯ ಮಾನವೀಯ ಮುಖವಾಡದ ಆದರೆ ಸಾರದಲ್ಲಿ ಕಾರ್ಪೊರೇಟ್ ಕ್ಯಾಪಿಟಲಿಸ್ಟ್ ಆರ್ಥಿಕತೆಗಳು ಇಂದಿನ ನವ ಉದಾರವಾದಿ ಯುಗದಲ್ಲಿ ವೆಲ್ಫೇರ್ ಗಳನ್ನೂ ಕೂಡ ಗ್ಯಾರಂಟಿ ಮಾಡದೆ ಕ್ರಮೇಣವಾಗಿ ವಿಫಲವಾಗಿವೆ. ಅಪಾರ ಅಸಮಾನತೆಗಳನ್ನು ಮತ್ತು ಸಾಮಾಜಿಕ ಸಂಕ್ಷೋಭೆಗಳನ್ನು ಹುಟ್ಟಿಹಾಕಿವೆ..
ಏಕೆಂದರೆ ಇಂದಿನ ನಿಯೋಲಿಬರಲ್ ಜಾಗತಿಕ ಬಂಡವಾಳಶಾಹಿ ಆರ್ಥ ವ್ಯವಸ್ಥೆಯಲ್ಲಿ ವೇಲ್ಫೇರ್ ನ ಆಯಸ್ಸು ತುಂಬಾ ಕಡಿಮೆ. ಬದಲಿಗೆ ಅದರ ನಿಶ್ಚಿತ ವೈಫಲ್ಯದ ರಾಜಕೀಯ ಪರಿಣಾಮವಾಗಿ ಬಲಪಂಥೀಯ ಹಾಗೂ ನವ ಫ್ಯಾಶಿವಾದಿ ಆಳ್ವಿಕೆಗಳು ನೆಲೆಗೊಳ್ಳುತ್ತಿವೆ.
ಬಂಡವಾಳ ಶಾಹಿ ವ್ಯವಸ್ಥೆ ಬದಲಾಗದೆ ಜನಪರ, ಜನಹಿತ ಸಮಾಜ ಮಾದರಿ ಸಾಧ್ಯವಿಲ್ಲ…
ಮೇಲಾಗಿ, ಬಂಡವಾಳಶಾಹಿ ಅಬಿವೃದ್ಧಿ ಮಾದರಿಯು ಇಂದು ಜಾಗತಿಕ ತಾಪಮಾನ ಹೆಚ್ಚಳ ಇನ್ನಿತ್ಯಾದಿಗಳಿಗೆ ಕಾರಣವಾಗಿ, ವಾಯು ಮಂಡಲದಿಂದ ಹಿಡಿದು ಭೂಮಂಡಲದ ತನಕ ಜಗತ್ತಿನ ಅಸ್ಥಿತ್ವಕ್ಕೆ ಸಂಚಕಾರ ತರುತ್ತಿರುವ ಸಂದರ್ಭದಲ್ಲಿ ಯಾವುದೇ ಜನಪರ ಮಾದರಿ, ಅಥವಾ ಕರ್ನಾಟಕ ಮಾದರಿ, ಬಂಡವಾಳಶಾಹಿ ಮಾದರಿಯನ್ನು ನಿರಾಕರಿಸದೆ ಹೇಗೆ ತಾನೇ ಒಂದು ಮಾದರಿಯಾಗಲು ಸಾಧ್ಯ?
ಬಿಜೆಪಿ ಸರ್ಕಾರ ಎರಡೂ ಕೈಗಳಲ್ಲಿ ಕಾರ್ಪೊರೇಟ್ ಕತ್ತಿಗಳನ್ನು ಹಿಡಿದುಕೊಂಡು ಜನರ ಮೇಲೆ ಪ್ರಹಾರಗಳನ್ನು ನಡೆಸುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಕಾರ್ಪೊರೇಟ್ ಕತ್ತಿ ಮತ್ತೊಂದು ಕೈಯಲ್ಲಿ ಮುಲಾಮು (ಗ್ಯಾರಂಟಿ)ಗಳನ್ನು ಹಿಡಿದುಕೊಂಡಿದೆ. ಬಿಜೆಪಿ ಗಿಂತ ವಾಸಿ . ಆದರೆ ಸಂವಿಧಾನ ಕಾರ್ಪೊರೇಟ್ ಬಂಡವಾಳಶಾಹಿ ಪ್ರಹಾರದಿಂದ ಜನರನ್ನು ಸಂಪೂರ್ಣವಾಗಿ ಮುಕ್ತಮಾಡುವ ಜವಾಬ್ದಾರಿ ಮತ್ತು ಮಾದರಿಯನ್ನು ಪ್ರಭುತ್ವದ ಮುಂದಿಟ್ಟಿದೆಯಲ್ಲವೇ?
ಕರ್ನಾಟಕ ಮಾದರಿಯ ಚರ್ಚೆಯಲ್ಲಿ ಸಂವಿಧಾನ ಮಾದರಿಗೆ ಭಿನ್ನವಾದ ಮಾದರಿಗಳ ವೈಫಲ್ಯಗಳನ್ನು (ರಾಜಕೀಯ ಮತ್ತು ರಾಜಕೀಯ ಆರ್ಥಿಕತೆ ಬದಲಾಗದೆ ಯಾವ ಪಕ್ಷಗಳು ಇದಕಿಂತ ಭಿನ್ನಾವಾದದ್ದನ್ನು ಮಾಡಲಾರವು ಎಂಬುದು ಬೇರೆ ವಿಚಾರ ) ಚರ್ಚಿಸದೆ ಕೇವಲ ಗ್ಯಾರಂಟಿಗಳ ಸಕಾರಾತ್ಮಕ ಸಾಮಾಜಿಕ ಪರಿಣಾಮಗಳನ್ನು ಮಾತ್ರ ಪ್ರತಿಪಾದಿಸುವುದು ಕಾಂಗ್ರೇಸ್ ಪಕ್ಷಕ್ಕೆ ಅನಿವಾರ್ಯವಿರಬಹುದು .
ಆದರೆ ಜನಪರ ಕರ್ನಾಟಕ ಮಾದರಿಯ ಅನ್ವೇಷಣೆ ಮಾಡುವವರು ಅಂಥಾ ಮಿತಿಗಳನ್ನು ವಿಧಿಸಿಕೊಳ್ಳುವ ಅಗತ್ಯವಿಲ್ಲ.
2. ಅರಸು ಮಾದರಿ ಭೂಸುಧಾರಣೆ ಎಷ್ಟು ಕ್ರಾಂತಿಕಾರಿ?
ಅದೇ ರೀತಿ ಕರ್ನಾಟಕ ಮಾದರಿಯ ಪ್ರಶ್ನೆ ಬಂದಾಗಲೆಲ್ಲಾ ದೇವರಾಜು ಅರಸು ಅವರು ತಮಗಿದ್ದ ಮಿತಿಗಳ ನಡುವೆಯೂ ಜಾರಿ ಮಾಡಿದ ಭೂ-ಸುಧಾರಣೆ ಮತ್ತು ಅವರು ರಾಜಕೀಯ ಪಡಸಾಲೆಯನ್ನು ಮೇಲ್ಜಾತಿಗಳ ಯಾಜಮಾನ್ಯದಿಂದ ವಿಮುಕ್ತಿಗೊಳಿಸಿದ ರಾಜಕೀಯ ಪ್ರಜಾತಂತ್ರೀಕರಣವನ್ನು ಮಾದರಿಯಾಗಿ ಮುಂದಿಡಲಾಗುತ್ತದೆ.

ಆದರೆ ಈಗಾಗಲೇ ಹಲವಾರು ಅಧ್ಯಯನಗಳು ಸಾಬೀತು ಪಡಿಸಿರುವಂತೆ ಕರ್ನಾಟಕದಲ್ಲಿ ಭೂ ಸುಧಾರಣೆಗಳು ಅಂಥಾ ಯಶಸ್ಸನ್ನೇನೂ ಪಡೆದಿಲ್ಲ . ಪ್ರಖ್ಯಾತ ರಾಜಕೀಯ ಶಾಸ್ತ್ರಜ್ಞ ಅತುಲ್ ಕೊಹ್ಲಿ ತಮ್ಮ
“ Regime Types and Poverty Reforms in India”
https://www.jstor.org/stable/2758596
ಎಂಬ ಅಧ್ಯಯನದಲ್ಲಿ ತೋರಿಸಿಕೊಡುವಂತೆ:
1) ಒಂದು ಕ್ರಾಂತಿಕಾರಿ ಭೂ ಸುಧಾರಣಾ ನೀತಿ
2) ಒಂದು ಕ್ರಾಂತಿಕಾರಿ ರಾಜಕೀಯ ನಾಯಕತ್ವ
ಮತ್ತು
3) ತಳಮಟ್ಟದ ಜನ ಚಳವಳಿ ಇದ್ದಾಗ ಮಾತ್ರ ಭೂ ಸುಧಾರಣೆಗಳು ಯಶಸ್ವಿಯಾಗಿವೆ.
ಎರಡನೆಯದನ್ನು ಬಿಟ್ಟರೆ ಮಿಕ್ಕೆರಡು ಇಲ್ಲದ ಕರ್ನಾಟಕದಲ್ಲಿ ಮೂರೂ ಇದ್ದ ಪ. ಬಂಗಾಳ ಮತ್ತು ಕೇರಳದಲ್ಲಿ ನಡೆದಂಥ ಭೂ ಸುಧಾರಣೆಗಳು ನಡೆಯಲಿಲ್ಲ ಎಂಬುದು ಅವರ ಅಧ್ಯಯನದ ಸಾರಾಂಶ. ಮೇಲಿನ ಮೂರೂ ಇಲ್ಲದ ಅಂದಿನ ಉತ್ತರ ಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕಿಂತ ಬಹಳ ಅದ್ವಾನ.
https://www.jstor.org/stable/2758596
ಪ. ಬಂಗಾಳ ಮತ್ತು ಕೇರಳಗಳ ಮಾದರಿಗಳಿಗೂ ಮಿತಿಗಳಿತ್ತು. ಆದರೆ ಅದು ಪ್ರಧಾನವಾಗಿ ಅದು ಕಾಲ ಮತು ಸಂದರ್ಭದ ಮಿತಿಗಳು.
ಐವತ್ತು ವರ್ಷಗಳ ನಂತರ ಕರ್ನಾಟಕದ ಮಾದರಿಯನ್ನು ಹುಡುಕುವಾಗ ಅರಸು ನೀತಿ ಮತ್ತದರ ಕಾಲ- ಸಂದರ್ಭಗಳ ಮಿತಿಗಳು ಇತರ ಮಾದರಿಗಳ ಜೊತೆ ತುಲನಾತ್ಮಕವಾಗಿ ಚರ್ಚೆಯಾಗಬೇಕಲ್ಲವೇ?
3.ಅರಸು- ಮಂಡಲ್ ಮಾದರಿಯ ಅಡ್ಡಪರಿಣಾಮಗಳನ್ನು ನಿವಾರಿಸಿಕೊಳ್ಳುವುದು ಹೇಗೆ?
ಹಾಗೆಯೆ ಈಗ ಹಿಂತಿರುಗಿ ನೋಡಿದಾಗ ಮಂಡಲ್ ಕ್ರಾಂತಿಗೆ ಮುಂಚೆಯೇ ಅರಸು ಕ್ರಮಗಳು ಕರ್ನಾಟಕದಲ್ಲಿ ಉಂಟು ಮಾಡಿದ ಬಲಹೀನ ಜಾತಿಗಳ ರಾಜಕೀಯ ಸಬಲೀಕರಣ ತನ್ನಂತೆ ತಾನೇ ಒಂದು ಪ್ರಜಾತಾಂತ್ರಿಕ ಮುನ್ನೆಡೆಯಾದರೂ ಇದರಿಂದ ಆಯಾ ಸಮುದಾಯಗಳ ಸಾಮಾನ್ಯರ ರಾಜಕೀಯ- ಆರ್ಥಿಕ ಸಬಲೀಕರಣ ಏಕಾಗಲಿಲ್ಲ ಎಂದು ವಿಶ್ಲೇಷಿಸದೆ ಅದನ್ನು ಯಥಾವತ್ ಈಗಲೂ ಒಂದು ಮಾದರಿಯೆಂದು ಒಪ್ಪಿಕೊಳ್ಳಬಹುದೇ?
ಮತ್ತೊಂದು ಕಡೆ ಭೂ ಒಡೆತನ ಉಳ್ಳ ಶೂದ್ರ ಜಾತಿಗಳ ರಾಜಕೀಯ-ಆರ್ಥಿಕ ಸಬಲೀಕರಣ ದಲಿತ ವಿರೋಧಿ ಸಾಮಾಜಿಕತೆಯನ್ನು ಆ ಮೂಲಕ ನವ ಬ್ರಾಹ್ಮಣ್ಯ ಹಾಗೂ ಆ ನಂತರ ಹಿಂದೂತ್ವವನ್ನು ಗಟ್ಟಿಗೊಳಿಸಿದ ಪರಿಯನ್ನು ಹಾಗೂ ಅದಕ್ಕೆ ಪರಿಹಾರವನ್ನು ವಿಶ್ಲೇಷಿಸದೆ 70-90ರ ಮಾದರಿಯನ್ನು ಈಗಲೂ ಮಾದರಿಯೆಂದು ಒಪ್ಪಿಕೊಳ್ಳಬಹುದೇ?
ಈ ಭೂ- ಸುಧಾರಣೆಗಳು ಮತ್ತು ಆ ನಂತರದ ಹಸಿರು ಕ್ರಾಂತಿ ಮತ್ತು ಮಂಡಲ್ ಕ್ರಾಂತಿಗಳು ಪರಿಣಾಮದಲ್ಲಿ ಶೂದ್ರ ಜಾತಿಗಳೊಳಗಿನ ಮೇಲ್ ಸ್ತರವನ್ನು ಮತ್ತಷ್ಟು ಬಲಿಷ್ಠಗೊಳಿಸಿ ದಲಿತರನ್ನು ಮತ್ತು ದಲಿತರಿಗೆ ಸಮೀಪವಾಗಿದ್ದ ದಲಿತರಂಥ ಅಸಹಾಯಕ ಜಾತಿಗಳನ್ನು ಇನ್ನಷ್ಟು ನಿತ್ರಾಣಗೊಳಿಸಿದವು. 1967ರಿಂದ ಪ್ರಾರಂಭವಾದ ಕಿಲ್ವೇನ್ಮನಿ ಯಿಂದ 2006 ರ ಖೈರ್ಲಾಂಜಿ ವರೆಗಿನ ಭಾರತದ ಕಥನ ಇದೆ ಅಲ್ಲವೇ?
ಆನಂದ್ ತೇಲ್ತುಂಬಡೆ ಯವರು ಈ ಬಗ್ಗೆ ಸಾಕಷ್ಟು ವಿದ್ವತ್ಪೂರ್ಣವಾಗಿ ಚರ್ಚಿಸಿದ್ದಾರೆ.
https://navayana.org/products/the-persistence-of-caste/?v=c86ee0d9d7ed
ಹಾಗಿದ್ದಲ್ಲಿ 2023 ರಲ್ಲಿ ನಿಂತು ದೇವರಾಜು ಅರಸು ಮಾದರಿ ಅಥವಾ ಕರ್ನಾಟಕ ಮಾದರಿಯ ಬಗ್ಗೆ ಮಾತಾಡುವಾಗ ಭೂ ಸುಧಾರಣೆಯ ರಾಜಕೀಯ ಆರ್ಥಿಕತೆಯ ಈ ಇತಿಹಾಸವನ್ನು ಮರೆತು ಮಾತಾಡಲು ಸಾಧ್ಯವೇ?
ಕರ್ನಾಟಕದ ಮಾದರಿಯೊಂದು ವರ್ತಮಾನದಲ್ಲಿ ಈ ಎಲ್ಲಾ ಮೂಲಭೂತ ನ್ಯೂನತೆಗಳನ್ನು ಸರಿಪಡಿಸಿಕೊಳ್ಳದೆ ಹುಟ್ಟಿಕೊಳ್ಳುವುದು ಸಾಧ್ಯವೇ?
4. ಸೌಹಾರ್ದ ಪರಂಪರೆಗೆ ವರ್ತಮಾನದಲ್ಲಿ ಕಸುವೇಕಿಲ್ಲ?
ಕರ್ನಾಟಕ ಮಾದರಿಯ ಬಗೆಗಿನ ಹೆಮ್ಮೆಯು ನಮ್ಮ ಕರ್ನಾಟಕದ ಸಮಾಜದ ಸೌಹಾರ್ದ ಪರಂಪರೆಯ ಹೆಮ್ಮೆಯನ್ನೂ ಒಳಗೊಳ್ಳುತ್ತದೆ
ಆದರೆ ಇಂದು ನವ ಉದಾರವಾದ ಮತ್ತು ಹಿಂದುತ್ವ ಫ್ಯಾಶಿಸಂ ಹಿಂದಿ ಬೆಲ್ಟನ್ನು ಮಾತ್ರವಲ್ಲದೆ ಕಮ್ಯುನಿಸ್ಟ್ ಕೇರಳ , ದ್ರಾವಿಡ ತಮಿಳುನಾಡು, ಪ್ರಗತಿಪರ ಕರ್ನಾಟಕ , ಅಂಬೇಡ್ಕರ್ ವಾದಿ ಮಹಾರಾಷ್ಟ್ರ , ಕ್ರಿಶ್ಚಿಯನ್ ಈಶಾನ್ಯ ಭಾರತ ..ಎಲ್ಲೆಡೆಯಲ್ಲೂ ಬಲವಾದ ನೆಲೆಯನ್ನು ಪಡೆದುಕೊಳ್ಳುತ್ತಿದೆ. ಆಯಾ ಪ್ರದೇಶಗಳ ಸಂದರ್ಭಕ್ಕೆ ತಕ್ಕಂತೆ ಅಲ್ಲಿನ ಇತಿಹಾಸವನ್ನು ಸಂಘಪರಿವಾರ ಹಿಂದುತ್ವಕ್ಕೆ ಒಗ್ಗಿಸುತ್ತಿದೆ.
ಹಿಂದುತ್ವ ಮತ್ತು ಹಿಂದೂ ಧರ್ಮಗಳ ನಡುವೆ ಹಲವು ಮೂಲಭೂತ ವ್ಯತ್ಯಾಸಗಳಿವೆಯಾದರೂ ಹಿಂದುತ್ವ ಅರಳಿರುವುದು ಹಿಂದೂ ಧರ್ಮದ ಕೊರಕಲಿನೊಳಗಿಂದಲೇ ಅಲ್ಲವೇ?
ಅಂಬೇಡ್ಕರ್ ಅವರು ಗುರುತಿಸುವಂತೆ ಜಾತಿ – ಅಸ್ಪೃಶ್ಯತೆಯ ಅನಾಗರಿಕತೆಯೇ ಹಿಂದೂ ಇತಿಹಾಸ.
ಹೀಗಾಗಿ ನಾವು ಇಂದು ಪ್ರಗತಿಪರ ಎಂದು ಆತುಕೊಳ್ಳುತ್ತಿರುತ್ತಿರುವ ಪರಂಪರೆಯನ್ನು ಭಾಗಗಳನ್ನೂ ಕೂಡ ಹಿಂದೂತ್ವವಾದಿಗಳು ಬಹಳ ಸುಲಭವಾಗಿ ಬ್ರಾಹ್ಮಣೀಯ ಹಾಗೂ ಹಿಂದುತ್ವವಾದಿಗೊಳಿಸುತ್ತಿದ್ದಾರೆ.
https://thewire.in/politics/karnataka-election-lingayat-hindutva
ಹೀಗಾಗಿ ನಮ್ಮ ವರ್ತಮಾನಕ್ಕೆ ಪರಂಪರೆಯು ಕಸುವು ಕೊಡುವ ಬಗೆ ಹೇಗೆ?
ಈ ವಿದ್ಯಮಾನದಲ್ಲಿ ಕರ್ನಾಟಕದಲ್ಲಿ ಪ್ರಮಾಣಾತ್ಮಕ ವ್ಯತ್ಯಾಸಗಳಿರಬಹುದೇ ವಿನಾ ಗುಣಾತ್ಮಕ ವ್ಯತ್ಯಾಸಗಳಲ್ಲ. ಏಕೆ ನಮ್ಮ ನಾಡಿನ ಅಬ್ರಾಹ್ಮಣ ಬೌದ್ಧ, ಜೈನ, ಲಿಂಗಾಯತ, ಶಾಕ್ತ, ಭಕ್ತಿ ಪರಂಪರೆಗಳು ಬ್ರಾಹ್ಮಣೀಯ ಹಿಂದೂತ್ವವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುತ್ತಿಲ್ಲ? ಏಕೆ ಆ ಶ್ರಮಣ ಪರಂಪರೆಯನ್ನು ಹಿಂದೂತ್ವ ತನ್ನ ಭಾಗಾವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ ?
ಕರ್ನಾಟಕದ ಸೌಹಾರ್ದ ಪರಂಪರೆಯ ಬಗ್ಗೆ ಹೆಮ್ಮೆ ಪಡಬಹುದಾದರೂ, ಮೇಲಿನ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ ಕೇವಲ ಸೌಹಾರ್ದ ಚರಿತ್ರೆಯನ್ನು ನೆನಪಿಗೆ ತರುವುದರಿಂದಲೇ ವರ್ತಮಾನದಲ್ಲಿ ಜೀವಂತ ಮೌಲ್ಯವಾಗುವುದೇ?
ಏಕೆಂದರೆ ಪರಂಪರೆಯನ್ನು Re-enact ಮಾಡಲು ಸಾಧ್ಯವಿಲ್ಲ. ಊಳಿಗಮಾನ್ಯ ಇತಿಹಾಸದ ಕಾಲಘಟ್ಟದಲ್ಲಿ ರಾಜಕೀಯ ಪ್ರಭುತ್ವ, ಧಾರ್ಮಿಕ ಪ್ರಭುತ್ವ ಮತ್ತು ಮತ್ತು ಆರ್ಥಿಕ ಹಿಡಿತನಗಳು ಒಂದೇ ಕೇಂದ್ರದಿಂದ ಸಂಭವಿಸುತ್ತಿತ್ತು. ಹೀಗಾಗಿ ಆಗ ಜನಪರ ಬಂಡಾಯ ಧರ್ಮಗಳೂ ಸಹ ಸಾರದಲ್ಲಿ ಆರ್ಥಿಕ, ರಾಜಕೀಯ ಬಂಡಾಯಗಳಾಗಿರುತ್ತಿದ್ದವು. ಆಧುನಿಕ ಬಂಡವಾಳಶಾಹಿ ಕಾಲದಲ್ಲಿ ಈ ಶಕ್ತಿಗಳು ಸ್ವಾಯತ್ತ ಹಾಗೂ ಸಂಯೋಜಿತ ಕೇಂದ್ರಗಳಾಗಿರುವಾಗ ವರ್ತಮಾನದಲ್ಲಿ ಹಿಂದುತ್ವ ಸಾಂಸ್ಕೃತಿಕ ಯಾಜಮಾನ್ಯವನ್ನು ಎದುರುಗೊಳ್ಳುವುದು ಹೇಗೆ ?
5. ಸುಧಾರಣೆಗಳು ಬದಲಾವಣೆ ತರದ ಸಂದರ್ಭದ ಮಾದರಿ ಯಾವುದು?
ಅಂಬೇಡ್ಕರ್ ಅವರು ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ಈ ದೇಶದ ದಮನಿತ ಜನತೆಯ ಶತ್ರುಗಳೆಂದು ಗುರುತಿಸುತ್ತಾರೆ. ಹೀಗಾಗಿ ಬಂಡವಾಳಶಾಹಿಯನ್ನು ಮಣಿಸಲು ಪ್ರಭುತ್ವ ಸಮಾಜವಾದ ಹಾಗೂ ಬ್ರಾಹ್ಮಣಶಾಹಿಯನ್ನು ಮಣಿಸಲು ಜಾತಿ ನಿರ್ಮೂಲನೆಯನ್ನು ಕಾರ್ಯಕ್ರಮವನ್ನಾಗಿ ಮುಂದಿಡುತ್ತಾರೆ.
ಭಾರತಕ್ಕೂ ಹಾಗೂ ಕರ್ನಾಟಕಕ್ಕೂ ಇದೆ ಮಾದರಿಯಾಗಬೇಕಲ್ಲವೇ?
ಇದನ್ನು ಬಿಟ್ಟು ಬೇರೆ ಮಾದರಿಗಳು ಡೈವರ್ಷನ್ ಅಥವಾ ರಾಜಿ ಆಗುವುದಿಲ್ಲವೇ?
ಉದಾಹರಣೆಗೆ ಅಂಬೇಡ್ಕರ ಅವರು ಭೂ-ಸುಧಾರಣೆ ನೀತಿಗಳಿಂದ ಈ ದೇಶದಲ್ಲಿ ಜಾತಿ ವ್ಯವಸ್ಥೆ ಗಟ್ಟಿಗೊಳ್ಳುತ್ತದೆ ಮತ್ತು ದಲಿತರಿಗೆ ವಿಮೋಚನೆಯಾಗುವುದಿಲ್ಲ ಎಂದು ಅದನ್ನು ವಿರೋಧಿಸಿದ್ದರು. ಅದರ ಬದಲಿಗೆ ತಾನು ಕಮ್ಯುನಿಸ್ಟ್ ವಿರೋಧಿಯಾದರೂ ರಷ್ಯಾ ಮಾದರಿಯಲ್ಲಿ ಭೂಮಿಯ ರಾಷ್ಟ್ರೀಕರಣ ಮತ್ತು ಸಾಮೂಹಿಕ ಕೃಷಿ ಜಾರಿಯಾಗಬೇಕು ಎಂದು ಪ್ರತಿಪಾದಿಸಿದ್ದರು.
(BAWS, Vol. 1, p. 408) ಮತ್ತು (BAWS, Vol. 15, p. 960).
ಹಾಗಿದ್ದಲ್ಲಿ ದೇವರಾಜ್ ಅರಸ್ ಅವರ ಸುಧಾರಣೆ ಮತ್ತು ಅಂಬೇಡ್ಕರ್ ಅವರ ಕ್ರಾಂತಿಕಾರಿ ಬದಲಾವಣೆ ಇವೆರಡರಲ್ಲಿ ಕರ್ನಾಟಕದ ಮಾದರಿ ಯಾವುದಾಗಬೇಕು ಎಂಬ ಪ್ರಶ್ನೆಯನ್ನು ಚರ್ಚಿಸಬೇಕಲ್ಲವೇ?
6. ಸಂವಿಧಾನವನ್ನು ಬೆಳಸದೆ ಉಳಿಸಲು ಸಾಧ್ಯವೇ?
ಎಲ್ಲಕ್ಕಿಂತ ಮುಖ್ಯವಾಗಿ ಅಂಬೇಡ್ಕರ್ ಅವರೇ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾದರೂ, ಸಂವಿಧಾನದ ಮುನ್ನುಡಿಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಪ್ರತಿಫಲಿಸಿದರೂ…
ಸಂವಿಧಾನದ ಕೀಲಕ ಭಾಗಗಳಲ್ಲಿ ಬಂಡವಾಳಶಾಹಿ ನಾಶ ಮತ್ತು ಜಾತಿ ವ್ಯವಸ್ಥೆಯ ನಾಶಗಳು ಸೇರ್ಪಡೆಯಾಗಲಿಲ್ಲ…
ಅದು ನಮ್ಮ ಸ್ವಾತಂತ್ರ್ಯ ಹಾಗೂ ಸಂವಿಧಾನದ ಮಿತಿಯಲ್ಲವೇ?
ಬದಲಿಗೆ ಅವುಗಳ ಅಮಾನವೀಯ ಅಭಿವ್ಯಕ್ತಿಗಳನ್ನು ನಿಯಂತ್ರಿಸುವ ಅಧಿಕಾರವನ್ನು ಮಾತ್ರ ಸಂವಿಧಾನ ಪ್ರಭುತ್ವಕ್ಕೆ ಕೊಡುತ್ತದೆ.
ಹೀಗಾಗಿ ಹಿಂತಿರುಗಿ ನೋಡಿದರೆ ದೇವರಾಜ್ ಅರಸ್, 69 ರ ಇಂದಿರಾ ಗಾಂಧಿ, ಬಂಗಾಲ್ ಮತ್ತು ಕೇರಳ ಗಳ ಸಂಸದೀಯ ಕಮ್ಯುನಿಸ್ಟ್ ಮಾದರಿ ಗಳೆಲ್ಲಾ ಸಂವಿಧಾನದ ಆಶಯಗಳನ್ನು ಪೂರೈಸಲು ವಿಫ಼ಲವಾದವು ಎಂದಾಗುವುದಿಲ್ಲವೇ? ಹೀಗಾಗಿ ಈ ಮಾದರಿಗಳು ಸಾರದಲ್ಲಿ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ಶಕ್ತಿಗಳ ಉಳಿವು ಮತ್ತು ಬೆಳವನ್ನು ನಿರ್ಮೂಲನೆ ಮಾಡುವಲ್ಲಿ ವಿಫಲವಾಗಿವೆ ಎಂದಾಗುವುದಿಲ್ಲವೇ? ಅವುಗಳು ರೂಪು ಮಾತ್ರ ಬದಲಾಗಿ ಮತ್ತಷ್ಟು ಪ್ರಬಲವಾಗಿ ಮುಂದುವರೆಯಲು ಸಹಾಯಕವಾಗಿವೆ ಎಂದು ಹೇಳಬಹುದೇ?
ಒಂದರ್ಥದಲ್ಲಿ ಕಳೆದ 75 ವರ್ಷದಲ್ಲಿ ರಾಜಕೀಯ ಪ್ರಜಾತಂತ್ರವೇ ಸಾಮಾಜಿಕ ಪ್ರಜಾತಂತ್ರವನ್ನು ಹಾಗೂ ಆರ್ಥಿಕ ಪ್ರಜಾತಂತ್ರದ ಸಾಧ್ಯತೆಯನ್ನು ನಾಶ ಮಾಡುತ್ತಾ ಬಂದಿದೆ. ಹೀಗಾಗಿ ಇದೀಗ ನಮ್ಮ ಸಂವಿಧಾನದ ಸಂದಿಯಿಂದಲೇ ಸಂವಿಧಾನ ಬದ್ಧವಾಗಿ ಬ್ರಾಹ್ಮಣಶಾಹಿ ಹಿಂದುತ್ವ ಹಾಗೂ ನರಹಂತಕ ಕಾರ್ಪೊರೇಟ್ ಬಂಡವಾಳಶಾಹಿಯ ಹಿಂದುತ್ವ ಫ್ಯಾಸಿಸಂ ದೇಶವನ್ನು ಆವರಿಸುತ್ತಿವೆ.
ಆದ್ದರಿಂದ ಬದಲಾವಣೆಯ ಯಾವುದೇ ಮಾದರಿ ಸಂವಿಧಾನದ ಅಪರಿಪೂರ್ಣತೆಯನ್ನು ನಿವಾರಿಸುವಷ್ಟು ಕ್ರಾಂತಿಕಾರಿಯಾಗದೆ ಫ್ಯಾಸೀಸಂ ಅನ್ನು ಸೋಲಿಸಬಲ್ಲದೇ?
7. ಬಿಜೆಪಿಯೇತರ ಮಾದರಿಗಳ ಮೇಲಿರುವ ಹಿಂದೂತ್ವ ಯಾಜಮಾನ್ಯದ ಸಮಸ್ಯೆ
ಅಷ್ಟೇ ಮುಖ್ಯವಾಗಿ ಕಾಂಗ್ರೆಸ್ಸನ್ನು ಒಳಗೊಂಡಂತೆ ಎಲ್ಲಾ ವಿರೋಧ ಪಕ್ಷಗಳ ಮೇಲೂ ಇರುವ ನವಉದಾರವಾದದ ಮತ್ತು ಬ್ರಾಹ್ಮಣೀಯ ಹಿಂದುತ್ವದ ಹೆಜಿಮೊನಿಯಿಂದಾಗಿಯೇ ಇಂದು ಹಿಂದುತ್ವ ಫ್ಯಾಸಿಸಂ ಬೆಳೆಯುತ್ತಿರುವುದಲ್ಲವೇ? ಮತ್ತು ಚುನಾವಣಾ ಪ್ರಜಾತಂತ್ರ ವೆಂಬುದು ಹಿಂದುತ್ವ ಫ್ಯಾಸಿಸಂ ಅನ್ನು ನವೀಕರಿಸುವ ಸಾಧನವಾಗಿಬಿಟ್ಟಿಲವೇ?
ಹೀಗಾಗಿ ಬದಲಾವಣೆಯ ಮಾರ್ಗದ ಮಾದರಿಗಳು ಕೂಡ ಇಲ್ಲಿಯವರೆಗೆ ಅನುಸರಿಸಿಕೊಂಡು ಬಂದ ಮಾದರಿಗಳಿಗಿಂತ ಭಿನ್ನವಾಗಿರಬೇಕಿಲ್ಲವೇ?
8. ಜಾಗತಿಕ ಸವಾಲಿಗೆ ಜಾಗತಿಕ ಮಾದರಿಯೇ?
ಕೊನೆಯದಾಗಿ ಸರ್ವರಿಗೂ ಸಮಪಾಲು ಮತ್ತು ಸಮಬಾಳಿನ ಆಶಯಗಳನ್ನು ಇಂದಿನ ಜಾಗತಿಕ ಆರ್ಥಿಕತೆ ಮತ್ತು ಸರ್ವ ವ್ಯಾಪಿ ಹಿಂದುತ್ವ ಗಳ ವಿರುದ್ಧ ಸೆಣೆಸುತ್ತಾ ಸಾಧಿಸಬೇಕು ಎಂದಾದರೆ ಅದನ್ನು ಒಂದು ರಾಜ್ಯ, ಒಂದು ದೇಶ, ಒಂದು ಸಮುದಾಯ, ಒಂದು ಮಾದರಿಯಲ್ಲಿ ಮಾಡಲು ಸಾಧ್ಯವೇ?
ಇವೇ ಇನ್ನಿತ್ಯಾದಿ ಪ್ರಶ್ನೆಗಳನ್ನು – ಪರಿಹಾರಗಳನ್ನು ಒಳಗೊಳ್ಳದ ಕರ್ನಾಟಕದ ಮಾದರಿ ಮತ್ತದರ ಬಗೆಗಿನ ಚರ್ಚೆ ಸಮಸ್ಯಾತ್ಮಕವಲ್ಲವೇ?




