ನೀವು ಕಲ್ಪಿತ ಪಾತ್ರಧಾರಿಗಳು, ಸುಳ್ಳು ಹೋರಾಟಗಾರರಾದ ಉರಿಗೌಡ ನಂಜೇಗೌಡ ಪ್ಲೆಕ್ಸ್ ಹಾಕಿದರೆ, ಅದೇ ಜಾಗದಲ್ಲಿ ನಾವು ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಭಗತ್ ಸಿಂಗ್ ಅವರ ಕಟೌಟ್ ಹಾಕುತ್ತೇವೆಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಹನ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯನಗರದ ಸಂಜಯ ವೃತ್ತದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನದ ಅಂಗವಾಗಿ ರ್ನಾಟಕ ವಿದ್ಯಾರ್ಥಿ ಸಂಘಟನೆ ವತಿಯಿಂದ ಮೇಣದಬತ್ತಿ ಬೆಳಗಿ ನಮನ ಸಲ್ಲಿಸುವ ಮೂಲಕ ಆಚರಿಸಿ ಅವರು ಮಾತನಾಡಿದರು.
ಬಿಜೆಪಿ, ಸಂಘ ಪರಿವಾರ ಮುಖಂಡರು ನಕಲಿ ಹೋರಾಟಗಾರರಾದ ಉರಿಗೌಡ, ನಂಜೇಗೌಡರನ್ನು ಮುನ್ನೆಲೆಗೆ ತಂದರೆ, ನಾವು ನೈಜ್ಯ ಹೋರಾಟಗಾರ ಕ್ರಾಂತಿಕಾರಿ ಭಗತ್ ಸಿಂಗ್ ಅವರನ್ನು ಅವರ ಮುಂದೆ ನಿಲ್ಲಿಸುತ್ತೇವೆ ಎಂದು ಎಚ್ಚರಿಸಿದರು.
ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಮಾತನಾಡಿ, 23ನೆ ವರ್ಷಕ್ಕೆ ದೇಶಕ್ಕಾಗಿ ಬಲಿದಾನಗೈದ ಭಗತ್ ಸಿಂಗ್ ಅವರಂತಹ ಹೋರಾಟಗಾರರು ಮನೆ ಮನೆಯಲ್ಲೂ ಜನಿಸಬೇಕಾಗಿದೆ. ಈ ಹಿಂದೆ ಬಿಳಿಯರು ನಮ್ಮನ್ನು ಶೋಷಣೆ ಮಾಡುತ್ತಿದ್ದರು. ಈಗ ಕಂದು ಬಣ್ಣದವರು ಆಡಳಿತ ಸ್ಥಾನದಲ್ಲಿ ಕುಳಿತು ಬಂಡವಾಳ ಶಾಹಿಗಳಿಗೆ ದೇಶವನ್ನು ಮಾರಾಟ ಮಾಡುತ್ತಿದ್ದಾರೆ. ಇಂತಹ ದುರಾಡಳಿತದ ವಿರುದ್ಧ ಭಗತ್ ಸಿಂಗ್ ನಂತೆ ಯುವ ಜನತೆ ಹೋರಾಟಕ್ಕಿಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆರ್‍ಮುಗಂ, ನಯನಕುಮಾರ್, ನಂದಕಿಶೋರ್, ನವೀನ್, ಆದಿತ್ಯ, ಸ್ವಾಮಿ, ಪೂಜಾ, ನಿತ್ಯ, ಸೌಮ್ಯ, ಹರ್ಷಿತಾ ಹಾಗೂ ನೇತ್ರಾ ಉಪಸ್ಥಿತರಿದ್ದರು.




