ಪ್ರಜಾಪ್ರಭುತ್ವ ವಿರೋಧಿ ನೆಲೆಯಲ್ಲಿ ಸರ್ವಾಧಿಕಾರಿ ಧೋರಣೆಯ ಅಧಿಕಾರ ನಡೆಸುತ್ತಿರುವ ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್ ಜೋಶಿಯನ್ನು ಅಮಾನತುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಕನ್ನಡ ನಾಡುನುಡಿ ಜಾಗೃತಿ ಸಮಿತಿಯ ಪ್ರೊ.ಬಿ.ಜಯಪ್ರಕಾಶ್ ಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಳೆದ ಮೂರುವರೆ ವರ್ಷಗಳಲ್ಲಿ ಉಂಟಾಗಿರುವ ಆರ್ಥಿಕ ಆಶಿಸ್ತನ್ನು ವಿಚಾರಣೆಗೆ ಒಳಪಡಿಸಬೇಕು. ಕಸಾಪ ಮೂಲ ಆಶಯ ಮತ್ತು ತಾತ್ವಿಕತೆಗೆ ಧಕ್ಕೆ ತರುವ ರೀತಿಯಲ್ಲಿ ಆಗಿರುವ ಬೈಲಾ ತಿದ್ದುಪಡಿಯನ್ನು ರದ್ದುಗೊಳಿಸುವುದು ಹಾಗೂ ಪ್ರಸ್ತಾವಿತ ಬೈಲಾ ತಿದ್ದುಪಡಿಯನ್ನು ತಡೆಹಿಡಿಯಬೇಕೆಂದು ಆಗ್ರಹಿಸಿದರು.
ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾಗಿದ್ದ ಮಹೇಶ್ ಜೋಶಿ ಅವರಿಗೆ ಬೆಂಗಳೂರು ನಗರ ಸಿವಿಲ್ ನ್ಯಾಯಾಲಯವು 1.20 ಲಕ್ಷ ರೂ ದಂಡ ವಿಧಿಸಿದ್ದು ದಂಡದ ಮೊತ್ತವನ್ನು ಶೇಕಡಾ 24ರಷ್ಟು ಬಡ್ಡಿ ಸಮೇತ ದೂರುದಾರರಿಗೆ ಪರಿಹಾರವಾಗಿ ನೀಡಬೇಕೆಂದು ಆದೇಶ ನೀಡಿದೆ. ಇಂತಹ ವ್ಯಕ್ತಿ 1978ರಿಂದ 1986ವರೆಗೆ ಅಧ್ಯಕ್ಷರಾಗಿದ್ದ ಹಂಪನಾ ಅವರ ಆಡಳಿತ ಕ್ರಮವನ್ನು ಕುರಿತು ಆಕ್ಷೇಪಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಜೋಶಿ ವೆಚ್ಚ ಮಾಡಿದ್ದು 22.06 ಲಕ್ಷ ರೂ
ಕಸಾಪ ಹಾಲಿ ಅಧ್ಯಕ್ಷ ಜೋಶಿ ಸಿದ್ಧಪಡಿಸಿರುವ ಜಮಾ ಖರ್ಚಿನ ವಿವರದಂತೆ ಅಧ್ಯಕ್ಷರ ವೇತನ – ರೂ 4,20,000/-, ದಿನಭತ್ಯೆ – ರೂ 7,62,329/-, ಪ್ರಯಾಣ ವೆಚ್ಚ – ರೂ 6,70,267 ವಾಹನ ನಿರ್ವಹಣೆ ವೆಚ್ಚ – ರೂ 93,319/- ಮನೆ ದಿನಪತ್ರಿಕೆಗಳ ವೆಚ್ಚ ರೂ – 33,419/-, ದೂರವಾಣಿ ಜಂಗಮವಾಣಿಗಳ ವೆಚ್ಚ – ರೂ 43,519/-, ಕಾರು ಇಂಧನ ವೆಚ್ಚ – ರೂ 18,310/-, ಒಟ್ಟು ರೂ- 22,06,553/- ವೆಚ್ಚವನ್ನು ಪಡೆದಿರುತ್ತಾರೆ. ಈ ಹಿಂದಿನ ಯಾವೊಬ್ಬ ಅಧ್ಯಕ್ಷರು ಪಡೆಯದೆ ಇದ್ದ ಭತ್ಯೆಗಳನ್ನು ಜೋಶಿ ಪಡೆದಿದ್ದಾರೆ. ಈ ಬಗ್ಗೆ ಮೇ 17ರಂದು ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆಯುವ ಕನ್ನಡ ನಾಡುನುಡಿ ಜಾಗೃತಿ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗುವುದು ಪ್ರೊ.ಜಯಪ್ರಕಾಶ್ ಗೌಡ ತಿಳಿಸಿದರು.
2023-24ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧಕರ ತನಿಖಾ ವರದಿಯಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ, ಕಾಮಗಾರಿಗಳ ಬಗ್ಗೆ, ಕಟ್ಟಡ ನವೀಕರಣದ ಬಗ್ಗೆ ಹಾಗೂ ಇನ್ನಿತರ ಲೋಪದೋಷಗಳನ್ನು ಎತ್ತಿ ಹಿಡಿದಿರುವ ಬಗ್ಗೆ ಚರ್ಚಿಸಲಾಗುವುದು ಎಂದರು.
ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಈ ಹಿಂದಿನ ಸರ್ಕಾರ ನೀಡಿರುವ ಸಚಿವಸಂಪುಟ ದರ್ಜೆಯ ಸ್ಥಾನಮಾನವನ್ನು ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸಲಾಗುವುದು. ಕಸಾಪ ಆಜೀವ ಸದಸ್ಯತ್ವ ಪಡೆದು ಕನ್ನಡ ಸೇವೆ ಮಾಡುತ್ತಿರುವ ಸದಸ್ಯರನ್ನು ಚುನಾಯಿತ ಅಧ್ಯಕ್ಷರನ್ನು ಷೋಕಾಸ್ ನೋಟೀಸ್ ನೀಡಿ ಸದಸ್ಯತ್ವ ರದ್ದುಪಡಿಸುತ್ತಿರುವುದು, ಅಮಾನತ್ತುಗೊಳಿಸುತ್ತಿರುವ ಆದೇಶವನ್ನು ಹಿಂಪಡೆಯಲು ಒತ್ತಾಯಿಸಲಾಗುವುದು ಎಂದರು.
ಮಂಡ್ಯ ಸಮ್ಮೇಳನದ ಖರ್ಚುವೆಚ್ಚವನ್ನು ನೀಡದ ಹಾಲಿ ಅಧ್ಯಕ್ಷರು ಮುಂದಿನ ವರ್ಷ ಬಳ್ಳಾರಿಯಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚಿಗೆ ಸರ್ಕಾರದಿಂದ 40 ಕೋಟಿ ರೂ. ಬೃಹತ್ ಮೊತ್ತವನ್ನು ಕೇಳುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಡಾ.ಮೀರಾಶಿವಲಿಂಗಯ್ಯ, ಸುನಂದ ಜಯರಾಂ, ಧರಣೀಂದ್ರಯ್ಯ, ಪ್ರೊ.ಜಿ.ಟಿ.ವೀರಪ್ಪ, ಡಿ.ಪಿ.ಸ್ವಾಮಿ ಹಾಗೂ ಹೆಚ್.ವಿ.ಜಯರಾಂ ತಿಳಿಸಿದರು.




