Tuesday, November 24, 2026

ಪ್ರಾಯೋಗಿಕ ಆವೃತ್ತಿ

ಯಾರ ಮೆಚ್ಚುಗೆಗಾಗಿ ದುಬಾರಿ ವೆಚ್ಚದ ಕಾವೇರಿ ಆರತಿ : ರವೀಂದ್ರ ಶ್ರೀಕಂಠಯ್ಯ

ಕಾವೇರಿ ಆರತಿಗೆ ನನ್ನ ವಿರೋಧವಿಲ್ಲ, ಆದರೆ 92 ಕೋಟಿ ರೂ. ವೆಚ್ಚದಲ್ಲಿ, ಅಣೆಕಟ್ಟೆಯ ಸನಿಹದಲ್ಲಿ ಕಾವೇರಿ ಆರತಿ ಮಾಡಲು ಹೊರಟಿರುವುದು ಯಾರನ್ನು ಮೆಚ್ಚಿಸಲು ಎಂದು ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಆರತಿಗೆ ಶ್ರೀರಂಗಪಟ್ಟಣ ಬಳಿ ಇರುವ ಸ್ನಾನಘಟ್ಟ ಸೂಕ್ತ ಪ್ರದೇಶವಾಗಿದ್ದು, ನಾನು ಶಾಸಕನಾಗಿದ್ದ ವೇಳೆ 8 ಕೋಟಿ ರೂ. ಅನುದಾನದಲ್ಲಿ ಮೆಟ್ಟಿಲುಗಳ ನವೀಕರಣ ಮಾಡಲಾಗಿದೆ. ಆ ಸ್ಥಳದಲ್ಲಿ ಕಡಿಮೆ ವೆಚ್ಚದಲ್ಲಿ ಕಾವೇರಿ ಆರತಿ ಧಾರ್ಮಿಕ ಕಾರ್ಯ ಮಾಡಿದರೆ ಅಣೆಕಟ್ಟೆಯ ಸುರಕ್ಷತೆ ಜೊತೆಗೆ ಶ್ರೀರಂಗಪಟ್ಟಣ ಅಭಿವೃದ್ದಿ ಸಾಧ್ಯವಾಗುತ್ತದೆ ಎಂಬುವುದನ್ನು ಜಿಲ್ಲೆಯ ಜನಪ್ರತಿನಿಧಿಗಳು ಅರಿತುಕೊಳ್ಳಬೇಕೆಂದರು.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನೀರು ಕೊಂಡೊಯ್ಯುವ ಯೋಜನೆಗೆ ರೈತರ ವಿರೋಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮಸ್ಯೆ ಬಗೆಹರಿಸಲು ಸರ್ಕಾರದ ಪ್ರತಿನಿಧಿಗಳು ಆಸಕ್ತಿ ವಹಿಸಬೇಕೆಂದರು.

ನೀರು ಕೊಡಲು ವಿಫಲ

ಕನ್ನಂಬಾಡಿ ಅಣೆಕಟ್ಟೆ ವ್ಯಾಪ್ತಿಯ ಜಮೀನುಗಳಲ್ಲಿ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗೆ ನೀರು ಹರಿಸಲು ವಿಫಲವಾಗಿರುವ ಸರ್ಕಾರ ಜೂನ್ ತಿಂಗಳಲ್ಲಿ ಬಾಗಿನ ಅರ್ಪಣೆಯ ಶಿಲಾನ್ಯಾಸ ನೆರವೇರಿಸಲು ಯಾವ ಪುರುಷಾರ್ಥಕ್ಕೆ ಮುಂದಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು.

ಕಳೆದ ಮೇ ತಿಂಗಳಲ್ಲಿ ಅಣೆಕಟ್ಟೆಯಲ್ಲಿ ಸುಮಾರು 95 ಅಡಿ ನೀರು ಶೇಖರಣೆ ಆಗಿದ್ದರೂ ಒಂದು ಕಟ್ಟು ನೀರು ಹರಿಸದೇ ಭತ್ತದ ಇಳುವರಿ ಕುಂಠಿತವಾಗಲು ಕಾರಣವಾದ ಕೃಷಿ ಸಚಿವರು ಈ ಬಗ್ಗೆ ಮೌನವಾಗಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಅಂತಿಮ ಹಂತದಲ್ಲಿ ನಾಟಿ ಮಾಡಿರುವ ಭತ್ತ, ಬೆಳೆದು ನಿಂತಿರುವ ಕಬ್ಬು, ತೆಂಗು, ಅಡಿಕೆ ಸೇರಿದಂತೆ ಹಲವು ಬೆಳೆಗಳಿಗೆ ನೀರು ನೀಡಿ, ರೈತರನ್ನು ರಕ್ಷಿಸಬೇಕಾದ ಜಿಲ್ಲೆಯ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿ ಇದುವರೆಗೂ ನಾಲೆಗಳಲ್ಲಿ ನೀರು ನಿಲ್ಲಿಸಿ, ಗುತ್ತಿಗೆದಾರನ ಹಿತ ಕಾಯಲು ಮುಂದಾಗಿರುವುದು ನಾಚಿಕೆಗೇಡು ಎಂದು ಹರಿಹಾಯ್ದರು.

ಕೃಷಿ ಸಚಿವರ ತವರಿನಲ್ಲೇ ರೈತ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಶೇ.30ರಷ್ಟು ಭತ್ತದ ಇಳುವರಿ ಕಡಿಮೆಯಾಗಿದೆ. ಕಬ್ಬು ಸೇರಿದಂತೆ ಇತರೆ ಬೆಳೆಗಳು ಒಣಗುತ್ತಿದ್ದರೂ ನೀರು ಹರಿಸದಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ಹೊರ ಹಾಕಿದರು.

ಬೆಳೆ ರಕ್ಷಣೆಗಾಗಿ ನಾಲೆಗಳಿಗೆ ನೀರು ಹರಿಸಲು ರೈತರು ಮನವಿ ಮಾಡಿದರೆ ರೈತರಿಗೆ ಕೆಲಸವಿಲ್ಲವೇ ಎಂದು ಹೀಯಾಳಿಸುವ ಶಾಸಕ ರಮೇಶ್ ಬಾಬು ಅವರು ಯಾವ ಧೈರ್ಯದಿಂದ ರೈತರ ಬಳಿ ತೆರಳುತ್ತಾರೆಂದು ಪ್ರಶ್ನಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗುವಿನಹಳ್ಳಿ, ಕೊತ್ತತ್ತಿ, ತಗ್ಗಹಳ್ಳಿ ಸೇರಿದಂತೆ ಹಲವು ಕಡೆ ಕಬ್ಬಿನ ಫಸಲು ಒಣಗುತ್ತಿರುವ ದೃಶ್ಯವನ್ನು ಪ್ರದರ್ಶಿಸಿದ ಮಾಜಿ ಶಾಸಕರು ಮದ್ದೂರು ಮತ್ತು ಮಳವಳ್ಳಿ ಭಾಗದ ರೈತರ ಸ್ಥಿತಿ ಏನಾಗಿರಬೇಕು, ಆ ಭಾಗದ ಶಾಸಕರು ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.

ಭತ್ತ ಖರೀದಿ ಕೇಂದ್ರ ತೆರೆಯಲು ನಿರಾಸಕ್ತಿ

ಭತ್ತ ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ನಿರಾಸಕ್ತಿ ತೋರಿರುವುದು ನಾಚಿಕೆಗೇಡಿನ ವರ್ತನೆ. ಬೆಲೆ ಕುಸಿತ ಹಾಗೂ ಇಳುವರಿ ನಷ್ಟದಿಂದ ರೈತರು ಪರಿತಪಿಸುತ್ತಿದ್ದಾರೆ. ಕೇಂದ್ರ ಸರ್ಕಾರ 2300 ರೂ. ಬೆಂಬಲ ಬೆಲೆ ನೀಡಿ ಭತ್ತ ಖರೀದಿಗೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯದೇ ಕ್ವಿಂಟಾಲ್ ಭತ್ತ ಕೇವಲ 1800 ರಿಂದ 1900 ರೂ.ಗೆ ಮಾರಾಟವಾಗುತ್ತಿದ್ದು, ನಷ್ಟಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.

ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಿದ್ದರೂ ನೀರು ಹರಿಸಲು ಮೀನಾಮೇಷ ಏಣಿಸುವ ಸರ್ಕಾರ ನಾಲೆಗಳ ಆಧುನೀಕರಣಕ್ಕೆ ಸಾವಿರಾರು ಕೋಟಿ ಅನುದಾನ ನೀಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಯುವ ರೈತರು ಕೃಷಿ ತ್ಯಜಿಸುವ ದಾರಿಯಲ್ಲಿರುವಾಗ ಸರ್ಕಾರ ಹಾಗೂ ಕೃಷಿ ಸಚಿವರಿಗೆ ರೈತರನ್ನು ಕಂಡರೆ ತಾತ್ಸಾರವೇ ಎಂದು ಕಿಡಿಕಾರಿದರು.

ಬಾಗಿನ ಅರ್ಪಣೆಯ ವೇಳೆ ನಾಲೆಗಳಿಗೆ ಕೂಡಲೇ ನೀರು ಹರಿಸಲು ಆದೇಶಿಸಿದ ಮಾನ್ಯ ಮುಖ್ಯಮಂತ್ರಿಗಳ ಆದೇಶಕ್ಕೆ ಒಂದು ದಿನದ ಮೌಲ್ಯವೇ ಎಂದು ಪ್ರಶ್ನಿಸಿದ ಅವರು ಸಿಡಿಎಸ್ ನಾಲೆಗೆ ಒಂದು ದಿನ ನೀರು ಹರಿಸಿ ನೀರು ನಿಲ್ಲಿಸಿದ್ದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಲೋಕೇಶ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ