Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾವೇರಿ ಹೋರಾಟ ಮುಂದುವರಿಸಲು ರೈತ ಹಿತರಕ್ಷಣಾ ಸಮಿತಿ ನಿರ್ಣಯ

ರಾಜ್ಯದಿಂದ ಮೇಲಿಂದ ಮೇಲೆ ತಮಿಳುನಾಡಿಗೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ಆದೇಶ ನೀಡುತ್ತಿರುವ ಹಿನ್ನೆಲೆಯಲ್ಲಿ 2024ರ ಜನವರಿ ಅಂತ್ಯದವರೆಗೆ ಮಂಡ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಹೋರಾಟವನ್ನು ಮುಂದುವರಿಸಲು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಿರ್ಣಯ ಕೈಗೊಂಡಿದೆ.

ಮಂಡ್ಯನಗರದ ಹೋರಾಟದ ವೇದಿಕೆಯಲ್ಲಿಯೇ ಸಭೆ ನಡೆಸಿದ ಸಮಿತಿಯ ಮುಖಂಡರು, ಸರದಿ ಉಪವಾಸವು ಡಿ.31ರವರೆಗೆ ನಡೆಯಲಿದ್ದು, ಅನಂತರದ ದಿನವೂ ಉಪವಾಸ ಮುಂದುವರಿಸಬೇಕೆ ? ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು, ಅದೇ ರೀತಿ ಜ.1ರಂದು ಕರಪತ್ರ ಚಳವಳಿ ನಡೆಸಲಾಗುವುದು, ಇದರ ಜೊತೆಗೆ ನೀರಾವರಿ ಮತ್ತು ಕಾನೂನು ತಜ್ಞರ ಜೊತೆಗೆ ಚರ್ಚಿಸಲಾಗುವುದು ಹಾಗೂ ಚಳವಳಿಯ ಸ್ವರೂಪದ ಬಗ್ಗೆ ಕಾವೇರಿ ಹೋರಾಟಗಾರರ ಜೊತೆ ಚರ್ಚಿಸಿ ವಿಭಿನ್ನ ಹೋರಾಟಕ್ಕೆ ಮುಂದಾಗಲಾಗುವುದೆಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ತಿಳಿಸಿದರು.

ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಆದೇಶಗಳನ್ನು ರಾಜ್ಯ ಸರ್ಕಾರ ನಿರಂತರವಾಗಿ ಪಾಲನೆ ಮಾಡುತ್ತಿರುವುದು, ಕಾವೇರಿ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ ತೋರುತ್ತಿರುವುದು, ಧರಣಿ ಸ್ಥಳಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಷ್ಟ ನಿಲುವು ಘೋಷಿಸದಿರುವುದು, ಕಾನೂನು ಹೋರಾಟದ ಬಗ್ಗೆ ಹೋರಾಟಗಾರರಿಗೆ ಮತ್ತು ರಾಜ್ಯದ ಜನತೆಗೆ ಸಮರ್ಪಕ ಮಾಹಿತಿ ನೀಡದಿರುವುದು, ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ ಮಾಡದೆ ಶಾಸಕರ ಪ್ರಶ್ನೆಗೆ ಉತ್ತರವೂ ನೀಡದೆ ಬೇಜವಾಬ್ದಾರಿತನ ತೋರಿರುವುದು, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮುಂದಾಗದೆ ಅನುದಾನದ ಲಭ್ಯತೆ ನೋಡಿಕೊಂಡು ನೀರಾವರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಹೊಣೆಗೇಡಿತನ ಪ್ರದರ್ಶಿಸಿರುವುದು, ಕಾವೇರಿ ಹೋರಾಟಗಾರರ ಜೊತೆ ಮಾತುಕತೆ ನಡೆಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು,

ಕಾವೇರಿ ಕೊಳ್ಳದ ಎಂಟು ಜಿಲ್ಲೆಗಳ ಶಾಸಕರು, ಸಂಸದರು ತಮ್ಮ ಹೊಣೆಗಾರಿಕೆ ನಿರ್ವಹಿಸದೇ ನಿರ್ಲಕ್ಷ ತೋರಿದ್ದು ಅದೇ ರೀತಿ ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ, ಜಾತ್ಯಾತೀತ ಜನತಾದಳ ಕಾವೇರಿ ವಿಚಾರದಲ್ಲಿ ಜನತೆಗೆ ಮೋಸ ಮಾಡುತ್ತಿವೆ ಎಂದು ದೂರಿದರು.

ಸಭೆಯಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮುಖಂಡರಾದ ಬೋರೇಗೌಡ, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ದಸಂಸ ಎಂ.ವಿ.ಕೃಷ್ಣ, ನಿವೃತ್ತ ಇಂಜಿನಿಯರ್ ಕೆಂಪೇಗೌಡ, ಉಮೇಶ್, ಎಸ್ ನಾರಾಯಣ್, ರಮೇಶ್, ಸುಜಾತ, ಎ ಎಲ್ ಬಸವೇಗೌಡ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ