Thursday, September 19, 2024

ಪ್ರಾಯೋಗಿಕ ಆವೃತ್ತಿ

ಮುಂದಿನ ಪೀಳಿಗೆಗೆ ಕೆಂಪೇಗೌಡರ ಜೀವನ- ಸಾಧನೆ ತಿಳಿಸುವುದು ಅಗತ್ಯ

ಕೆಂಪೇಗೌಡರ ವ್ಯಕ್ತಿತ್ವ,ಜೀವನ,ಸಾಧನೆ ಆಡಳಿತವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆ ಅನಾವರಣ ಮತ್ತು ಕೆಂಪೇಗೌಡ ಉದ್ಯಾನವನ(ಥೀಮ್ ಪಾರ್ಕ್)ವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೆಂಬರ್ 11ರಂದು ಉದ್ಘಾಟನೆ ಮಾಡಲಿದ್ದಾರೆ ಎಂದು ಬಿಜೆಪಿ ಯುವ ನಾಯಕ, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ವ್ಯಕ್ತಿತ್ವ, ಆಡಳಿತ ಮತ್ತು ಜೀವನವನ್ನು ಜನರಿಗೆ,ಮುಂದಿನ ಪೀಳಿಗೆಗೆ ತಿಳಿಸುವ ಕೆಲಸಕ್ಕಾಗಿ 23 ಎಕರೆ ವಿಶಾಲ ಪ್ರದೇಶದಲ್ಲಿ ಕೆಂಪೇಗೌಡ ಉದ್ಯಾನವನ ಮಾಡಲಾಗುತ್ತಿದೆ. ದೇಶದ ಹೆಮ್ಮೆಯ ಶಿಲ್ಪಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಏಕತಾ ಪ್ರತಿಮೆ ಸರದಾರ ವಲ್ಲಭಭಾಯಿ ಪಟೇಲ್ ಹಾಗೂ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ನಿರ್ಮಿಸಿದ ರಾಮ ಸುತಾರ್ ಅವರೇ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ನಿರ್ಮಿಸಿದ್ದಾರೆ ಎಂದರು.

ನಾಡಪ್ರಭು ಕೆಂಪೇಗೌಡರು ಪ್ರತಿಮೆಯನ್ನು ಸ್ಥಾಪಿಸಲು ಬಿಜೆಪಿ ಸರ್ಕಾರ 2019-20 ನೇ ಸಾಲಿನಲ್ಲಿ ಯಡಿಯೂರಪ್ಪನವರು ನಿರ್ಧರಿಸಿದ್ದರು‌‌. ಅದರಂತೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವಥ್ ನಾರಾಯಣ್ ಅವರಿಗೆ ಕೆಂಪೇಗೌಡರ ಪಾರಂಪರಿಕ ತಾಣಗಳಾದ ಮಾಗಡಿ, ಬೆಂಗಳೂರು,ಬೆಂಗಳೂರು ಗ್ರಾಮಾಂತರ ಮತ್ತಿತರ ಕಡೆಗಳಲ್ಲಿ ಅವರ ಜೀವನ, ಸಾಧನೆಯ ಮಹತ್ವದ ಅಂಶಗಳ ಸಂಗ್ರಹ ಕಾರ್ಯಕ್ಕೆ ನೇಮಿಸಿದರು ‌ಅಲ್ಲದೆ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ ಜೀವ ತುಂಬ ಕೆಲಸ ಮಾಡಿದರು ಎಂದರು.

ಕಂಚಿನ ಪ್ರತಿಮೆ ಅನಾವರಣದ ಜಾಗದಲ್ಲಿ ಪವಿತ್ರ ಮೃತ್ತಿಕಾ( ಮಣ್ಣು) ಸಂಗ್ರಹಣ ಅಭಿಯಾನಕ್ಕೆ ಅಕ್ಟೋಬರ್ 21 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದು, ಜಿಲ್ಲೆಯಲ್ಲಿ ಅಕ್ಟೋಬರ್ 24 ರಿಂದ ನವೆಂಬರ್ 7ರವರೆಗೆ 15 ದಿನಗಳ ಕಾಲ ನಾಡಪ್ರಭು ಕೆಂಪೇಗೌಡರ ರಥಯಾತ್ರೆ ಸಾಗಲಿದೆ.ಈ ರಥಯಾತ್ರೆಯನ್ನು ಎಲ್ಲಾ ಸಮುದಾಯದ ಜನರು, ಸಂಘ-ಸಂಸ್ಥೆಗಳೊಂದಿಗೆ ಜಿಲ್ಲೆಯಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಾಗುವುದು. ಎಲ್ಲಾ ಪಕ್ಷಗಳು ಮುಖಂಡರು ಪಕ್ಷಬೇಧ ಮರೆತು ಮುಕ್ತ ಮನಸ್ಸಿನಿಂದ ಸ್ವಾಗತ ಕೋರಬೇಕೆಂದು ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ವಕ್ತಾರ ಮಂಜುನಾಥ್, ಶಂಕರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!