Thursday, September 19, 2024

ಪ್ರಾಯೋಗಿಕ ಆವೃತ್ತಿ

ಉಡುಪಿ ಪ್ರಕರಣದಲ್ಲಿ ಪೊಲೀಸರು ಕಾನೂನಿನಂತೆ ನಡೆದುಕೊಂಡಿದ್ದಾರೆ – ಖುಷ್ಬೂ ಸುಂದರ್

ಉಡುಪಿ ಪ್ರಕರಣವನ್ನು ರಾಜಕೀಕರಣಗೊಳಿಸಬೇಡಿ, ಪೊಲೀಸರು ಕಾನೂನಿನಂತೆ ನಡೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ತಿಳಿಸಿದ್ದಾರೆ.

ಇಂದು ಉಡುಪಿಗೆ ಭೇಟಿ ನೀಡಿ ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರ ಜೊತೆ ಮಾತುಕತೆ ನಡೆಸಿದ ಬಳಿಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಇದು ಒಂದು ಸೂಕ್ಷ್ಮ ವಿಚಾರವಾಗಿದ್ದು, ಇದನ್ನು ಯಾರು ರಾಜಕೀಕರಣಗೊಳಿಸಬಾರದು. ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ತನಿಖೆ ಇನ್ನು ಮುಗಿದಿಲ್ಲ. ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಒಂದು ದಿನದಲ್ಲಿ ನಿರ್ಧಾರ ಮಾಡಲು ಆಗಲ್ಲ. ಪೊಲೀಸರು ಕಾನೂನಿನಂತೆ ನಡೆದುಕೊಂಡಿದ್ದಾರೆ” ಎಂದು ಹೇಳಿದರು.

ಯಾರು ವದಂತಿಗಳನ್ನು ಹರಡಬಾರದು. ಯುವತಿಯರ ರಕ್ಷಣೆ ನಮಗೆ ಮುಖ್ಯ. ಯುವತಿಯರು ನಮ್ಮ ಕುಟುಂಬದವರು. ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿರುವುದು ಮುಖ್ಯ. ನಾನು ಧಾರ್ಮಿಕ ಅಥವಾ ರಾಜಕೀಯ ಮಾಡಲು ಇಲ್ಲಿ ಬಂದಿಲ್ಲ, ಒಬ್ಬ ಪೋಷಕರಾಗಿ ಇದನ್ನು ಬಗೆಹರಿಸಬೇಕು. ರಾಜಕಾರಣಿಗಳು ರಾಜಕೀಯ ಪಕ್ಷಗಳು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದರು.

ಎಫ್ಐಆರ್ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕಾಲೇಜು ಆಡಳಿತ ಮಂಡಳಿ ನಿನ್ನೆ ಈ ಬಗ್ಗೆ ಪತ್ರಿಕಾಗೋಷ್ಠಿ ಮಾಡಿದೆ. ಯಾವುದೇ ದೂರು ಬಾರದ ಕಾರಣ ಪೊಲೀಸರು ದೂರು ದಾಖಲಿಸಿಲ್ಲ ಅಲ್ಲದೆ ತಾನು ದೂರ ನೀಡಲು ಬಯಸುವುದಿಲ್ಲ ಎಂದು ಸಂತ್ರಸ್ತೆ ಪತ್ರದ ಮೂಲಕ ಹೇಳಿದ್ದಾರೆ. ಕಾಲೇಜು ಆಡಳಿತ ಮಂಡಳಿ ಪತ್ರಿಕಾಗೋಷ್ಠಿಯ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ʼವಿಡಿಯೋ ಡಿಲೀಟ್ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದ ನಂತರ ಪ್ರಕರಣ ದಾಖಲಿಸಲಾಗಿದೆ. ಯಾವುದೇ ಸುಳಿವು ಇಲ್ಲದೆ, ವಿಡಿಯೋ ಇಲ್ಲದೆ ಪೊಲೀಸರು ಪ್ರಕರಣ ದಾಖಲಿಸುವುದು ಹೇಗೆ? ಹಿಂದೆ ನಿಂತು ಪೊಲೀಸರನ್ನು ದೂರುವುದು ಸುಲಭ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಅವರಿಗೆ ಸ್ವಾತಂತ್ರ್ಯ ನೀಡಬೇಕು. ಪ್ರಕರಣದ ತನಿಖೆಯಲ್ಲಿ ವಿಳಂಬವಾದರೆ ಮಹಿಳಾ ಆಯೋಗ ಕ್ರಮ ಕೈಗೊಳ್ಳುತ್ತದೆ. ಸದ್ಯ ನಾವು ಸುಮೋಟೋ ಪ್ರಕರಣ ದಾಖಲಿಸಲು ನಿರ್ಧರಿಸಿಲ್ಲ. ಮಾಹಿತಿ ಸಂಗ್ರಹದ ಬಳಿಕ ನಿರ್ಧಾರ ತಿಳಿಸುತ್ತೇವೆʼ ಎಂದು ಅವರು ತಿಳಿಸಿದರು.

ಸದ್ಯ ಸಾಮಾಜಿಕ ಜಾಲತಾಣ ತಾಂತ್ರಿಕತೆಯಿಂದ ಪ್ರತಿಯೊಬ್ಬರು ತನಿಖಾಧಿಕಾರಿ ನ್ಯಾಯಾಧೀಶರಾಗಲು ಮುಂದಾಗಿದ್ದಾರೆ. ಇದನ್ನು ಯಾರು ಮಾಡಬೇಡಿ. ವದಂತಿಗಳನ್ನು ಯಾರು ಹರಡಬೇಡಿ. ಕಾನೂನಿಗೆ ಅದರ ಕೆಲಸ ಮಾಡಲು ಬಿಡಿ ಎಂದು ಖುಷ್ಬೂ ಸುಂದರ್ ತಿಳಿಸಿದರು.

ಇನ್ನು ಬಿಜೆಪಿ ಪಕ್ಷ ಉಡುಪಿ ಪ್ರಕರಣ ಖಂಡಿಸಿ ಇಂದು ರಾಜ್ಯದ ಹಲವೆಡೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ. ಎಬಿವಿಪಿ ಕೂಡ ಬೀದಿಗಿಳಿದಿದೆ.

ಈ ಕುರಿತು ಪ್ರತಿಕ್ರಿಯಸಿರುವ ಕಾಂಗ್ರೆಸ್, “ಇರುವೆಯನ್ನು ಆನೆ ಎಂದು ನಂಬಿಸಲು ಹೊರಟಿದ್ದ ಬಿಜೆಪಿ
ಹಾಗೂ ಬಿಜೆಪಿಯ ಟೂಲ್ ಕಿಟ್ ಗ್ಯಾಂಗಿನ ಕನಸಿಗೆ ಮತ್ತೊಮ್ಮೆ ತಣ್ಣೀರು ಎರಚಿದ್ದಾರೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಹಾಗೂ ಬಿಜೆಪಿ ನಾಯಕಿ ಖುಷ್ಬು. ಉಡುಪಿ ಕಾಲೇಜಿನ ಘಟನೆಯು ಷಡ್ಯಂತ್ರವಲ್ಲ, ವಿದ್ಯಾರ್ಥಿನೀಯರ ಮೊಬೈಲ್ ಗಳಲ್ಲಿ ಯಾವುದೇ ವಿಡಿಯೋಗಳು ಪತ್ತೆಯಾಗಿಲ್ಲ, ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋ ಹರಿಬಿಡಲಾಗಿದೆ, ಪೊಲೀಸರು ಸಮರ್ಪಕ ತನಿಖೆ ನಡೆಸಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಬೇಕು. ಇದನ್ನು ಕೇವಲ ಹುಡುಗಾಟಿಕೆಯ ಘಟನೆಯಾಗಿಯಷ್ಟೇ ನೋಡಬೇಕು ಹೊರತು ರಾಜಕೀಯಕ್ಕೆ ಬಳಸಬಾರದು ಎಂಬ ಸ್ವತಃ ಬಿಜೆಪಿ ನಾಯಕಿಯ ಸಂದೇಶವನ್ನು ಬಿಜೆಪಿಗರು ಅರಗಿಸಿಕೊಳ್ಳಲು ಸಾಧ್ಯವೇ! ಸರ್ಕಾರವನ್ನು ವಿರೋಧಿಸಲು ವಿಷಯಗಳಿಲ್ಲದೆ ಕಂಗಲಾಗಿರುವ ಬಿಜೆಪಿ ಈಗ ಬಾತ್ ರೂಮಿನ ರಾಜಕೀಯಕ್ಕೆ ಹೊರಟಿದೆ!” ಎಂದು ಕಿಡಿಕಾರಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!