Wednesday, October 23, 2024

ಪ್ರಾಯೋಗಿಕ ಆವೃತ್ತಿ

ಅರಸು-ರಾಜೀವ್ ಗಾಂಧಿ ಅವರ ದೂರದೃಷ್ಟಿ ನಮಗೆಲ್ಲರಿಗೂ ಮಾದರಿ

ನಮ್ಮ ದೇಶದ ಮತ್ತು ರಾಜ್ಯದ ಭವಿಷ್ಯ ರೂಪಿಸಿದ ರಾಜೀವ್ ಗಾಂಧಿ ಮತ್ತು ಡಿ.ದೇವರಾಜ ಅರಸು ಅವರ ದೂರದೃಷ್ಟಿ ನಮಗೆಲ್ಲರಿಗೂ ಮಾದರಿ ಎಂದು ಮಾಜಿ ಸಚಿವ ನರೇಂದ್ರ ಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಡಿ.ದೇವರಾಜ ಅರಸು ಮತ್ತು ರಾಜೀವ್ ಗಾಂಧಿ ಜನ್ಮದಿನಾಚರಣೆ ಆಚರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ರಾಜಕೀಯ ಪರಿಸ್ಥಿತಿಯ ಸಂದರ್ಭದಲ್ಲಿ ದೇವರಾಜ್ ಅರಸು ಮತ್ತು ರಾಜೀವ್ ಗಾಂಧಿ ಅವರನ್ನು ನಾವು ನೆನಪಿಸಿಕೊಳ್ಳಬೇಕಿದೆ.

ಈ ದೇಶದ ತಂತ್ರಜ್ಞಾನ ಇಂದು ಈ ಮಟ್ಟಕ್ಕೆ ಬೆಳೆದಿರುವ ಹಿಂದೆ ಸಂಪರ್ಕ ಕ್ರಾಂತಿ ಮಾಡಿದ ರಾಜೀವ್ ಗಾಂಧಿ ಅವರಿಗೆ ಸಲ್ಲಬೇಕು.ಇಂದು ಮಾಧ್ಯಮ ಕ್ಷೇತ್ರದಲ್ಲಿ ಪೈಪೋಟಿ ಬರಲು ಕ್ಷಣಾರ್ಧದಲ್ಲಿ ದೃಶ್ಯ ಕಣ್ಮುಂದೆ ತೋರಿಸಲು ತಂತ್ರಜ್ಞಾನ ಮುಖ್ಯ ಕಾರಣವಾಗಿದೆ. ರಾಜೀವ್ ಗಾಂಧಿಯವರ ಮಾಡಿದ ಸಂಪರ್ಕ ಕ್ರಾಂತಿ ದೇಶಕ್ಕೆ ನೀಡಿದ ಸೌಭಾಗ್ಯ ಎಂದರು.

ಅದೇ ರೀತಿ ದೇವರಾಜ ಅರಸರು ಬಡವರಿಗೆ, ನಿರ್ಗತಿಕರಿಗೆ, ಮನೆ ಇಲ್ಲದವರಿಗೆ ಮನೆ ಕೊಡಿಸುವ ಕೆಲಸ ಮಾಡಿದವರು.ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ವಸತಿ ಸೌಲಭ್ಯ,ಉಳುವವನೆ ಭೂಮಿ ಒಡೆಯ ಎಂಬ 20 ಅಂಶಗಳ ಕಾರ್ಯಕ್ರಮವನ್ನು ರಾಜ್ಯದಲ್ಲಿ ಅನುಷ್ಠಾನದ ತಂದು ಸಾಮಾಜಿಕ ನ್ಯಾಯದ ಹರಿಕಾರ ಆದವರು ದೇವರಾಜ ಅರಸು ಎಂದು ಬಣ್ಣಿಸಿದರು.

ಇಂದು ಬಹಳಷ್ಟು ರಾಜಕಾರಣಿಗಳು ಸುಳ್ಳು ಹೇಳಿಕೊಂಡು ಜನರನ್ನು ಮರಳು ಮಾಡುತ್ತಿದ್ದಾರೆ. ಕಾಲಾಹರಣ ಮಾಡಿಕೊಂಡು ನಾಟಕೀಯವಾಗಿ ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ ಇಂತಹ ನಾಯಕರಿಲ್ಲ ಎಂಬ ಕೊರಗು ಕಾಡುತ್ತಿದೆ.ಅರಸು ಮತ್ತು ರಾಜೀವ್ ಗಾಂಧಿ ಅವರ ಹೆಸರ ಅಚ್ಚಳಿಯದೆ ನಿಂತಿದೆ. ಕಾಂಗ್ರೆಸ್ ಪಕ್ಷ ದೇಶ ಕಟ್ಟುವ ಮತ್ತು ಬಡವರ ಕಣ್ಣೀರು ಒರೆಸುವ ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕಿದೆ‌ ಎಂದರು.

ತಾಕತ್ತಿದ್ರೆ ತಡೆಯಿರಿ

ನಮ್ಮ ನಾಯಕ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೊಟ್ಟೆ ಎಸೆದ ಧೂರ್ತರ ಹಿಂದೆ ಆರ್ ಎಸ್ ಎಸ್,ಬಿಜೆಪಿ ಕುಮ್ಮಕ್ಕು ಇರುವ ಬಗ್ಗೆ ಅವರೇ ಹೇಳಬೇಕು. ಜವಾಬ್ದಾರಿಯುತ  ವಿರೋಧ ಪಕ್ಷದ ನಾಯಕರ ಮೇಲೆ ದುರ್ವರ್ತನೆ ತೋರಿದ ದುರುಳರನ್ನು ಪೋಷಿಸುವ ಧೂರ್ತರಿಗೆ ಧಿಕ್ಕಾರ ಎಂದರು.

ಈ ದೇಶದಲ್ಲಿ ಆರ್ ಎಸ್ ಎಸ್, ಬಿಜೆಪಿ ಬಲವಂತವಾಗಿ ತಮ್ಮ ಸಿದ್ಧಾಂತ ಹೇರುವ ಪ್ರಯತ್ನ ನಡೆಸುತ್ತಿವೆ.ಕಾಂಗ್ರೆಸ್ ಕಾರ್ಯಕರ್ತರು ಯಾವುದಕ್ಕೂ ಅಂಜುವುದಿಲ್ಲ.ಆಗಸ್ಟ್ 26 ಕ್ಕೆ ನಾವೆಲ್ಲಾ ಲಕ್ಷಾಂತರ ಜನ ಕೊಡುಗು ಜಿಲ್ಲೆಗೆ ಬರುತ್ತಿದ್ದೇವೆ.

ದುರಾಡಳಿತ,ಲಂಚಗುಳಿತನ ಮಾಡುತ್ತಿರುವ ಬಿಜೆಪಿ, ಸಂಘಪರಿವಾರದ ಯಾವ ಬೆದರಿಕೆ, ದಬ್ಬಾಳಿಕೆಗೂ ನಾವು ಬಗ್ಗಲ್ಲ.ತಾಕತ್ತಿದ್ದರೆ 26 ಕ್ಕೆ ನಾವು ಕೊಡಗಿಗೆ ಬರುತ್ತಿದ್ದು, ತಾಕತ್ತಿದ್ರೆ ತಡೆಯಿರಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ರಾಷ್ಟ್ರಪ್ರೇಮಿಗಳ ಪಕ್ಷ .ಯಾರ ದಬ್ಬಾಳಿಕೆಗೂ ಕಾಂಗ್ರೆಸ್ಸಿಗರು ಬಗ್ಗಲ್ಲ. ಸಂವಿಧಾನದ ಹೆಸರಲ್ಲಿ ಈ ದೇಶ ನಡೆಯಬೇಕೇ ಹೊರತು ಸರ್ವಾಧಿಕಾರದಿಂದಲ್ಲ.ಇಂತಹ ಆಡಳಿತ ನಡೆಸಲು ಕಾಂಗ್ರೆಸ್ಸಿಗರು ಎಂದಿಗೂ ಬಿಡಲ್ಲ ಎಂದು ಗುಡುಗಿದರು.

ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜು, ಸುಂದರ್ ರಾಜು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!