Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಮರ್ಷಿಯಲ್‌ ಜೊತೆಗೆ ಗಂಭೀರವಾದ ಸಾಮಾಜಿಕ ಸಂದೇಶ ನೀಡುವ ”ಕ್ರಾಂತಿ”

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ವಿ ಹರಿಕೃಷ್ಣ ಕಾಂಬಿನೇಶನ್‌ನಲ್ಲಿ ಈ ಹಿಂದೆ ತೆರೆಗೆ ಬಂದಿದ್ದ ಯಜಮಾನ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ಇದೀಗ ಈ ಹಿಟ್‌ ಜೋಡಿ ಕ್ರಾಂತಿ ಸಿನಿಮಾದ ಮೂಲಕ ಸಿನಿ ಪ್ರೇಕ್ಷಕರನ್ನು ಎದುರುಗೊಂಡಿದೆ. ಹಾಡುಗಳು ಮತ್ತು ಟ್ರೈಲರ್‌ ಮೂಲಕ ಸಾಕಷ್ಟು ನೀರಿಕ್ಷೆಗಳನ್ನು ಹುಟ್ಟು ಹಾಕಿದ್ದ ಕ್ರಾಂತಿ ಚಿತ್ರದ ವಿಮರ್ಶೆ ಇಲ್ಲಿದೆ.

ನಟ ದರ್ಶನ್‌ ಪ್ರಚಾರದ ಸಂದರ್ಭದಲ್ಲಿ ಹೇಳಿಕೊಂಡಂತೆ ಇಡೀ ಕ್ರಾಂತಿ ಸಿನಿಮಾ ಅಳಿವಿನಂಚಿನಲ್ಲಿರುವ ಸರ್ಕಾರಿ ಶಾಲೆಗಳ ಸುತ್ತ ಮೂಡಿಬಂದಿದೆ. ದುರ್ಗಾ ತಾಲೂಕಿನ, ಪೇಟೆ ಬೀದಿಯ ವಿದ್ಯಾಮಂದಿರ ಸರ್ಕಾರಿ ಶಾಲೆ, ಶಾಲೆಗೆ ಶತಮಾನದ ಸಂಭ್ರಮ. ಅದೇ ಸಂದರ್ಭದಲ್ಲಿ ಬಂಡವಾಳಶಾಹಿಗಳು, ರಾಜಕಾರಣಿಗಳು ಮತ್ತು ಸ್ಥಳೀಯ ಗೂಂಡಾಗಳ ವಕ್ರದೃಷ್ಟಿ ನೂರು ವರ್ಷಗಳ ಇತಿಹಾಸ ಇರುವ ಆ ಶಾಲೆಯ ಮೇಲೆ ಬೀಳುತ್ತದೆ. ವಿದೇಶದಲ್ಲಿ ಪ್ರಖ್ಯಾತ ಬ್ಯುಸಿನೆಸ್‌ಮ್ಯಾನ್‌ ಎನ್ನಿಸಿಕೊಂಡಿರುವ ಕಥಾನಾಯಕ ಅಳಿವಿನಂಚಿನಲ್ಲಿರುವ ತನ್ನೂರಿನ, ತಾನು ಕಲಿತ ಸರ್ಕಾರಿ ಶಾಲೆಯನ್ನು ದುಷ್ಟಕೂಟ ಕೈಯಿಂದ ರಕ್ಷಿಸಿಕೊಳ್ಳುತ್ತಾನೆಯೇ ಎಂಬುದು ಚಿತ್ರದಲ್ಲಿರುವ ತಿರುವು. ಕ್ರಾಂತಿ, ʼವಿದ್ಯಾಮಂದಿರ ಸರ್ಕಾರಿ ಶಾಲೆʼಯೊಂದರ ಸುತ್ತ ಮೂಡಿಬಂದಿರುವ ಕಥೆಯಲ್ಲ. ಅಳಿವಿನಂಚಿನಲ್ಲಿರುವ, ಈಗಾಗಲೇ ಮುಚ್ಚಿ ಹೋಗಿರುವ ಸಾವಿರಾರು ಸರ್ಕಾರಿ ಶಾಲೆಗಳು, ಬಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕಥೆ ಮತ್ತು ವ್ಯಥೆಗಳನ್ನು ಕಮರ್ಷಿಯಲ್‌ ಹೂರಣವನ್ನು ಬೆರೆಸಿ ಭಾವನಾತ್ಮಕವಾಗಿ ತೆರೆಗೆ ಅಳವಡಿಸಲಾಗಿದೆ.

ಸರ್ಕಾರಿ ಶಾಲೆಗಳ ಸಮಸ್ಯೆಯ ಎಳೆಯನ್ನಿಟ್ಟುಕೊಂಡು ಕ್ರಾಂತಿ ಸಿನಿಮಾ ಪ್ರಾರಂಭವಾದ ಕೆಲವೇ ಹೊತ್ತಿಗೆ ದರ್ಶನ್‌ ಸೂಟು ಬೂಟು ಹಾಕಿಕೊಂಡು ರಾಯಲ್‌ ಎಂಟ್ರಿ ಕೊಟ್ಟಾಗ ಮತ್ತದೇ ಕಮರ್ಷಿಯಲ್‌ ಕಥೆ ಶುರುವಾಯ್ತು ಎನ್ನಿಸಿತು. ಸರ್ಕಾರಿ ಶಾಲೆಗಳ ಕುರಿತ ಗಂಭೀರ ವಿಚಾರದ ಸುತ್ತ ಕಥೆ ಹೆಣೆದು, ದರ್ಶನ್‌ರಂಥ ಖ್ಯಾತ ನಟರ ಮೂಲಕ ಅದನ್ನು ಪ್ರೇಕ್ಷಕರಿಗೆ ದಾಟಿಸಲು ಹೊರಟಾಗ ಅನಗತ್ಯ ಹಾಸ್ಯಕ್ಕೆ ನಿರ್ದೇಶಕರು ಹೆಚ್ಚು ಒತ್ತು ನೀಡಿದ್ದು ಒಪ್ಪಲಾಗಲಿಲ್ಲ.

ಚಿತ್ರ: ಕ್ರಾಂತಿ | ನಿರ್ದೇಶನ: ವಿ ಹರಿಕೃಷ್ಣ | ತಾರಾಗಣ: ದರ್ಶನ್‌, ರಚಿತಾ ರಾಮ್‌, ವಿ ರವಿಚಂದ್ರನ್‌, ಬಿ ಸುರೇಶ್‌, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ರವಿಶಂಕರ್‌, ಸಾಧು ಕೋಕಿಲಾ, ಸಂಯುಕ್ತಾ ಹೊರನಾಡ್‌, ಸುಮಲತಾ ಅಂಬರೀಶ್‌, ಸಂಪತ್‌ ರಾಜ್‌, ಧರ್ಮಣ್ಣ, ಗಿರೀಶ್‌ ಶಿವಣ್ಣ, ವೀರಸಂಗಯ್ಯ, ಧರ್ಮೇಂದ್ರ, ಗಿರಿಜಾ ಲೋಕೇಶ್‌ | ಭಾಷೆ: ಕನ್ನಡ | ಸಂಗೀತ ನಿರ್ದೇಶನ : ವಿ ಹರಿಕೃಷ್ಣ | ಛಾಯಾಗ್ರಹಣ : ಕರುಣಾಕರ್‌ ಎ | ನಿರ್ಮಾಪಕರು : ಶೈಲಜಾ ನಾಗ್‌ |

ಪ್ರೇಕ್ಷಕರಿಗೆ ಮನರಂಜನೆಯೂ ಬೇಕಲ್ಲವೇ ಎಂಬುದು ಸಬೂಬಾದರೆ ಅದನ್ನೂ ಒಪ್ಪಲಾಗುವುದಿಲ್ಲ. ಇಂಟರ್‌ವಲ್‌ ಸಮೀಪಿಸುವವರೆಗಿನ ಮನರಂಜನೆಯ ಸರ್ಕಸ್‌ ಪ್ರೇಕ್ಷಕರನ್ನು ಒಂದೆರೆಡು ಬಾರಿ ನಗಿಸಲು ಸಾಧ್ಯವಾಯಿತಾದರೂ, ಹೇಳಿಕೊಳ್ಳುವಂತಹ ವಿಶೇಷ ಅನುಭವನ್ನೇನೂ ನೀಡಲಿಲ್ಲ. ಇಂಟರ್‌ವಲ್‌ ನಂತರವೇ ಕ್ರಾಂತಿಯ ಅಸಲಿ ಕಥೆ ತೆರೆದುಕೊಳ್ಳುತ್ತದೆ. ಕೊನೆಯ ನಿಮಿಷಗಳಲ್ಲಂತೂ ಚಿತ್ರದ ಕಥೆ ದಿಟ್ಟಿಸಿ ನೋಡುವಂತೆ ಹಿಡಿದಿಟ್ಟುಕೊಳ್ಳುತ್ತದೆ.

ದರ್ಶನ್‌ ಹಾಡುಗಳಿಗೆ ಹೆಚ್ಚಾಗಿ ಹೆಜ್ಜೆ ಹಾಕುವವರಲ್ಲ ಎಂಬುದು ತಿಳಿದಿದೆ. ಅವರು ಡ್ಯಾನ್ಸ್‌ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಬೊಂಬೆ ಹಾಡಿನಲ್ಲಿ ಕೇವಲ ಅವರ ಕಟ್ಟುಮಸ್ತಾದ ದೇಹವನ್ನೇ ಫೋಕಸ್‌ ಮಾಡಿ ನ್ಯೂನ್ಯತೆಯನ್ನು ಮರೆಮಾಚಲು ನಿರ್ದೇಶಕರು ಪಟ್ಟಿರುವ ಪ್ರಯತ್ನ ತಕ್ಕ ಮಟ್ಟಿಗೆ ಫಲ ನೀಡಿದೆ. ಆದರೆ, ನಾಯಕ ಹಾಡಿನುದ್ದಕ್ಕೂ ಸುಮ್ಮನೆ ಅತ್ತಿಂದಿತ್ತ ಓಡಾಡುತ್ತ ಕಾಲ ಕಳೆಯುವದನ್ನು ನೋಡುವುದು ತ್ರಾಸದಾಯಕವೇ ಸರಿ.

ಈ ಚಿತ್ರದಲ್ಲಿ ಎರಡು ಮೆಚ್ಚುಗೆಗೆ ಅರ್ಹವಾದ ಅಂಶಗಳು ಕಂಡವು. ನಾಯಕಿಯ ಕೈಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ʼಪರಿಸರದ ಕತೆʼ ಕೃತಿಯನ್ನು ಕಂಡು ಖುಷಿಯಾಯಿತು. ರೈತ ಹೋರಾಟಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟ ರೈತ ಮುಖಂಡ ವೀರಸಂಗಯ್ಯನವರನ್ನು ಚಿತ್ರದಲ್ಲಿ ರೈತ ನಾಯಕನನ್ನಾಗಿಯೇ ತೋರಿಸಿ ಅವರಿಗೆ ಗೌರವ ಸಲ್ಲಿಸಿದ ಪರಿ ಇಷ್ಟವಾಯಿತು. ಬಿ ಸುರೇಶ್‌ ಅವರ ಅರ್ಥಗರ್ಭಿತ ಸಂಭಾಷಣೆಗಳು ಕೂಡ ಸೆಳೆದವು.

ಖಾಸಗಿ ಶಾಲೆಗಳು ಮುಚ್ಚಿದರೆ, ಅಲ್ಲಿನ ಸೌಕರ್ಯಗಳಲ್ಲಿ ವತ್ಯಯಗಳಾದರೆ ಗೋಳಾಡುವ ಜನ ಅದೇ ಸರ್ಕಾರಿ ಶಾಲೆಗಳು ಮುಚ್ಚಿದಾಗ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾದಾಗ ತೀವ್ರವಾಗಿ ಆಡಳಿತ ವರ್ಗವನ್ನು ಪ್ರಶ್ನಿಸುವುದಿಲ್ಲ. ಖಾಸಗಿ ಶಾಲೆಗಳಿಗೆ ನೀಡುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಸರ್ಕಾರಿ ಶಾಲೆಗಳಿಗೆ ನೀಡಬೇಕು ಎಂಬ ವಿ ಹರಿಕೃಷ್ಣ ಅವರ ಸಂದೇಶ ನೋಡುಗರಿಗೆ ತಲುಪಿದೆ.

ದರ್ಶನ್‌, ಎಂದಿನಂತೆ ಆಕ್ಷನ್‌ ಹೀರೋ ಆಗಿ ಗಮನ ಸೆಳೆಯುತ್ತಾರೆ. ಪ್ರಾಮುಖ್ಯತೆಯೇ ಇಲ್ಲದ ಪಾತ್ರದಲ್ಲಿ ರಚಿತಾ ರಾಮ್‌ ಚೆಂದವಾಗಿ ಕಾಣಿಸಿಕೊಂಡಿದ್ದಾರೆ. ವಿ ರವಿಚಂದ್ರನ್‌ ಮೌನದಲ್ಲೇ ಹೆಚ್ಚು ಇಷ್ಟವಾಗುತ್ತಾರೆ. ಬಿ ಸುರೇಶ್‌ ನಟನೆ ಅದ್ಭುತ. ಮುಖ್ಯಮಂತ್ರಿ ಚಂದ್ರು, ಉಮಾಶ್ರೀ ಜೋಡಿ ಚೆನ್ನಾಗಿದೆ. ರವಿಶಂಕರ್‌ ಅಬ್ಬರ, ಸಾಧು ಕೋಕಿಲಾ ಅವರ ಹಾಸ್ಯ ಎಲ್ಲವೂ ತಕ್ಕ ಮಟ್ಟಿಗೆ ಗಮನ ಸೆಳೆಯುತ್ತದೆ. ಸಂಯುಕ್ತಾ ಹೊರನಾಡ್‌, ಸುಮಲತಾ ಅಂಬರೀಶ್‌, ಸಂಪತ್‌ ರಾಜ್‌, ಧರ್ಮಣ್ಣ, ಗಿರೀಶ್‌ ಶಿವಣ್ಣ, ವೀರಸಂಗಯ್ಯ, ಧರ್ಮೇಂದ್ರ, ಗಿರಿಜಾ ಲೋಕೇಶ್‌ ಎಲ್ಲರೂ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಹರಿಕೃಷ್ಣ, ಚಿತ್ರಕಥೆ ಮತ್ತು ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದು, ಹಾಡುಗಳು ಕೇಳುವಂತಿವೆ. ವಿದೇಶದ ಪ್ರೇಕ್ಷಣೀಯ ಸ್ಥಳಗಳನ್ನು ಅದ್ಭುತವಾಗಿ ಸೆರೆ ಹಿಡಿದ ಕರುಣಾಕರ್‌ ಅವರ ಛಾಯಾಗ್ರಹಣ ಕೂಡ ಚೆನ್ನಾಗಿದೆ.

ಕ್ರಾಂತಿ ಪಕ್ಕಾ ಕಮರ್ಷಿಯಲ್‌ ಸಿನಿಮಾ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕಮರ್ಷಿಯಲ್‌ ಜೊತೆಗೆ ಗಂಭೀರವಾದ ಸಾಮಾಜಿಕ ಸಂದೇಶ, ಕೌಟುಂಬಿಕ ಕಥಾಹಂದರ, ದರ್ಶನ್‌ ವರ್ಚಸ್ಸಿಗೆ ಬೇಕಾಗುವಷ್ಟು ಮಾಸ್‌ ಆಕ್ಷನ್‌ ಡ್ರಾಮಾ ಎಲ್ಲವೂ ಚಿತ್ರದಲ್ಲಿದೆ. ಕೆಲವು ಆಕ್ಷನ್‌ಗಳು ಅತಿರೇಕದ್ದು ಎನ್ನಿಸುತ್ತವೆ. ದರ್ಶನ್‌ ಸಿನಿಮಾ ನೋಡುವವರಿಗೆ ಅದು ಮಾಮೂಲಿಯೇ ಬಿಡಿ.

ಕ್ರಾಂತಿ ಒಮ್ಮೆ ನೋಡಬಹುದಾದ ಸರಳ ಕಥಾಹಂದರದ ಕಮರ್ಷಿಯಲ್‌ ಸಿನಿಮಾ ಎನ್ನಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!