ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 27 ವರ್ಷಗಳ ನಂತರ ಅಧಿಕಾರ ಹಿಡಿದಿದೆ.ಸತತ ಎರಡು ಅವಧಿ ಆಡಳಿತ ನಡೆಸಿದ್ದ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಸೋಲು ಅನುಭವಿಸಿದೆ. ಸತತ ಮೂರು ಸಲ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ವಿರುದ್ಧ 4089 ಮತಗಳ ಅಂತರದಿಂದ ಪರಾಜಿತರಾಗಿದ್ದಾರೆ. ಇದರೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ ರಾಜಕೀಯ ಜೀವನದಲ್ಲಿ ದೊಡ್ಡ ಹಿನ್ನಡೆ ಉಂಟಾಗಿದೆ.
ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು, ಬಿಜೆಪಿ 48 ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ. ಮೂರನೇ ಬಾರಿಗೆ ಗೆದ್ದು ಸರ್ಕಾರ ರಚಿಸುವ ನಿರೀಕ್ಷೆಯಲ್ಲಿದ್ದ ಎಎಪಿ 22 ಸ್ಥಾನಗಳೊಂದಿಗೆ ಹೀನಾಯ ಸೋಲು ಕಂಡಿದೆ. ಚುನಾವಣೆಯಲ್ಲಿ ಎಎಪಿಯನ್ನು ಮುನ್ನಡೆಸುತ್ತಿದ್ದ ಘಟಾನುಘಟಿ ನಾಯಕರೇ ಸೋಲುಂಡಿದ್ದಾರೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರವಾಲ್, ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ,ಸತ್ಯೇಂದ್ರ ಜೈನ್ ಸೇರಿದಂತೆ ಹಲವಾರು ಪ್ರಮುಖ ನಾಯಕರು ಸೋಲುಂಡಿದ್ದಾರೆ. ದೆಹಲಿ ಅಧಿಕಾರದಿಂದ ಹೊರಗುಳಿಯುವುದು ಮಾತ್ರವಲ್ಲದೆ, ಜನಪ್ರತಿನಿಧಿಗಳ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.
ಭ್ರಷ್ಟಾಚಾರ ಆರೋಪ, ಬಂಧನ, ಜೈಲುವಾಸ ಅನುಭವಿಸಿದ್ದ ಅರವಿಂದ ಕೇಜ್ರವಾಲ್, ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ, ಮತ್ತೆ ಜನಾಭಿಪ್ರಾಯ ಪಡೆದು ಮುಖ್ಯಮಂತ್ರಿ ಆಗುತ್ತೇನೆಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನವದೆಹಲಿ ಕೇತ್ರದಿಂದ ಸ್ಪರ್ಧಿಸಿದ್ದ ಕೇಜಿವಾಲ್ ಅವರು ಬಿಜೆಪಿಯ ಪರ್ವೇಶ್ ವರ್ಮಾ ಎದುರು ಸೋಲು ಅನುಭವಿಸಿರುವುದು ದೊಡ್ಡ ಹಿನ್ನಡೆಯಾಗಿದೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿ 2 ವರ್ಷ ಜೈಲುವಾಸ ಅನುಭವಿಸಿ, ಹೊರಬಂದಿದ್ದ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಜಂಗ್ಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಬಿಜೆಪಿಯ ತರವಿಂದರ್ ಸಿಂಗ್ ವರ್ಮಾ ವಿರುದ್ಧ ಸೋಲು ಕಂಡಿದ್ದಾರೆ. ಎಎಪಿ ಕೋರ್ ಕಮಿಟಿಯ ಸದಸ್ಯರಾದ ಸತ್ಯೇಂದ್ರ ಜೈನ್ ಅವರೂ ಕೂಡ ಸೋಲುಂಡಿದ್ದಾರೆ.
ಇನ್ನು, ಕೇಜಿವಾಲ್ ರಾಜೀನಾಮೆಯ ಬಳಿಕ ದೆಹಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದ, ಕೇಜಿವಾಲ್ ಜೈಲಿನಲ್ಲಿದ್ದಾಗ ಎಎಪಿಯನ್ನು ಮುನ್ನಡೆಸಿದ್ದ ಆತಿಶಿ ಮರ್ಲಾನ್ ಅವರು ಕಲ್ಕಾಜಿ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಬಿದುರಿ ಎದುರು ಗೆಲುವು ಸಾಧಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಅವರು ಈಗಾಗಲೇ ಸೋತಿರುವುದರಿಂದ ಆತಿಶಿಯವರು ದೆಹಲಿಯ ಮುಂದಿನ ವಿಧಾನಸಭೆಯಲ್ಲಿ ವಿಪಕ್ಷ ನಾಯಕಿಯಾಗುವ ಸಾಧ್ಯತೆ ಇದೆ.




