Saturday, October 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೃಷ್ಣ ಅವಿರೋಧ ಆಯ್ಕೆ

ಮಳವಳ್ಳಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಂ.ಎನ್ ಕೃಷ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನಂತರ ಮಾತನಾಡಿದ ಎಂ.ಎನ್.ಕೃಷ್ಣ, ಆಯ್ಕೆಗೆ ಸಹಕರಿಸಿದ ಎಲ್ಲಾರಿಗೂ ಅಭಿನಂದನೆ ಸಲ್ಲಿಸುತ್ತೇನೆ, ಸದಸ್ಯರ ಸಹಕಾರದೊಂದಿಗೆ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ದಿಪಡಿಸುವುದಾಗಿ ಭರವಸೆ ನೀಡಿದರು.

ನಗರೋತ್ಥಾನ ಯೋಜನೆಯಡಿ ಸಮರ್ಪಕ ಕಾಮಗಾರಿ ಮಾಡದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ದ ಪುರಸಭೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ವಾರ್ಡ್ಗಳಲ್ಲಿ ನಡೆದಿರುವ ಕಾಮಗಾರಿಗಳ ವಿವರಗಳನ್ನು ಕೂಡಲೇ ನೀಡಬೇಕೆಂದು ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.

ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರೋತ್ಥಾನ ಯೋಜನೆಯಲ್ಲಿ ಪಟ್ಟಣದಲ್ಲಿ ಯಾವ ವಾರ್ಡ್ಗಳಲ್ಲಿ ಏನೇನು ಕೆಲಸಗಳನ್ನು ಮಾಡಬೇಕಿದೆ. ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸುವ ವಿಚಾರವಾಗಿ ಇಂದ್ರಮ್ಮ, ಅತೀಯಾ ಬೇಗಂ ಸೇರಿದಂತೆ ಇತರೆ ಸದಸ್ಯರು ಮಾತನಾಡಿ, ನಗರೋತ್ಥಾನ ಯೋಜನೆಯಡಿ ಸಮಗ್ರವಾಗಿ ಕಾಮಗಾರಿ ಮಾಡದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು, ವಾರ್ಡ್ಗಳಲ್ಲಿ ಯಾವುದೇ ಸರಿಯಾದ ಕಾಮಗಾರಿ ನಡೆದಿಲ್ಲ, ಮಾಹಿತಿ ನೀಡುವವರೆಗೂ ಇಂದಿರುವ ಅಭಿವೃದ್ದಿ ಕಾಮಗಾರಿಗಳ ವಿಷಯವನ್ನು ಮುಂದಿನ ಸಭೆಗೆ ಮುಂದೂಡಬೇಕೆಂದು ಆಗ್ರಹಿಸಿದರು.

ಸದಸ್ಯ ಸಿದ್ದರಾಜು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಪಾರ್ಕ್ ನಿರ್ಮಿಸಬೇಕು. ೧೯೯೫ರಲ್ಲಿ ಪುರಸಭೆಗೆ ಸೇರಿರುವ ಮಾರೇಹಳ್ಳಿ, ಉಗ್ರಾಪುರದದೊಡ್ಡಿ, ಮಂಚನಹಳ್ಳಿ ಬಳಿ ಒಳಚರಂಡಿ ನಿರ್ಮಾಣ ಮಾಡಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಎಂ.ಎನ್.ಶಿವಸ್ವಾಮಿ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಮಾತನಾಡಿ, ಈಗಾಗಲೇ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ೧೦ ಲಕ್ಷ ರೂ.ನಿಗದಿಯಾಗಿದೆ ಎಂದರು.

ಸದಸ್ಯ ಟಿ.ನಂದಕುಮಾರ್ ಮಾತನಾಡಿ, ಜನವರಿಯಿಂದ ಆಗಸ್ಟ್ ವರೆಗೆ ಜನನ ಪ್ರಮಾಣದಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯು ಕುಸಿತ ಕಂಡಿದ್ದು, ಜಿಲ್ಲೆಯಲ್ಲಿ ಹೆಣ್ಣು ಭ್ರೂಣಹತ್ಯೆ ವ್ಯಾಪಕವಾಗಿದ್ದು, ಪುರಸಭೆ ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಸದಸ್ಯರಾದ ಕುಮಾರ್, ಎಂ.ಎನ್.ಶಿವಸ್ವಾಮಿ ಮತ್ತು ಎಂ.ಟಿ.ಪ್ರಶಾಂತ್ ಮಾತನಾಡಿ, ಫ್ಲೆಕ್ಸ್ ಅಳವಡಿಕೆಯಲ್ಲಿ ಸಾಕಷ್ಟು ತಾರತಯ್ಯವಾಗಿದ್ದು, ಇಂಥ ತಪ್ಪುಗಳನ್ನು ಸರಿಪಡಿಸುವ ದೃಷ್ಟಿಯಿಂದ ಮೂರು ದಿನಗಳ ಅವಧಿ ನಿಗದಿ ಮಾಡಿ ಶುಲ್ಕ ವಿಧಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಮುಖ್ಯಾಧಿಕಾರಿ ನಾಗರತ್ನ, ಉಪಾಧ್ಯಕ್ಷ ಬಸವರಾಜು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!