ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಂದೀಶ್ ತಿಳಿಸಿದರು.
ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷ ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರವನ್ನು ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ. ನಾಲ್ಕು ಶಾಲೆಗಳ ಮಕ್ಕಳಿಗೆ ವಾರಕ್ಕೆ ಒಂದರಂತೆ ತಿಂಗಳಿಗೆ ನಾಲ್ಕು ಬಾರಿ ಮೊಟ್ಟೆಗಳನ್ನು ಉಚಿತವಾಗಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದಾಜು 250ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಹೆಮ್ಮನಹಳ್ಳಿ ಗ್ರಾಮದ ಶಾಲೆಗೆ ಹೋಗಿ ಬರಲು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿತ್ತು. ಹಾಗಾಗಿ ಮಕ್ಕಳ ಅನುಕೂಲಕ್ಕಾಗಿ ಪ್ರತಿದಿನ ಆಟೋ ವ್ಯವಸ್ಥೆ ಮಾಡಲಾಗಿದೆ. ಕೆಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿತ್ತು. ಹಾಗಾಗಿ ಟ್ರಸ್ಟ್ ವತಿಯಿಂದ ಶಿಕ್ಷಕರನ್ನು ಸಹ ನಿಯೋಜನೆ ಮಾಡಲಾಗಿದ್ದು, ಅವರ ಮಾಸಿಕ ವೇತನವನ್ನು ಟ್ರಸ್ಟ್ ವತಿಯಿಂದಲೇ ಭರಿಸಲಾಗುತ್ತಿದೆ ಎಂದರು.
ಹೆಮ್ಮನಹಳ್ಳಿ ಸರ್ಕಾರಿ ಶಾಲೆಗೆ ಇದೇ ಗ್ರಾಮದ ಉದ್ಯಮಿ ರಾಜಕುಮಾರ್ ಎಂಬುವವರು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ತಮ್ಮ ಸ್ವಂತ ಹಣ ಅಂದಾಜು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಡೆಸ್ಕ್, ಚೇರ್, ಆಟೋಪಕರಣ, ಗೋಡೆ ಬರಹವನ್ನು ಮಾಡಿಸಿದಲ್ಲದೆ, ಸುಸಜ್ಜಿತ ಶೌಚಾಲಯದ ಕಾಮಗಾರಿಗೂ ಮುಂದಾಗಿದ್ದು, ಇವರ ಸೇವೆ ಶ್ಲಾಘನೀಯವಾಗಿದೆ ಎಂದು ಕೊಂಡಾಡಿದರು.
ಗ್ರಾಮ ಸಭೆಯಲ್ಲಿ ಮಕ್ಕಳು ಹಲವು ಸಮಸ್ಯೆಗಳ ಬಗ್ಗೆ ದೂರನ್ನು ನೀಡಿದ್ದಾರೆ. ಅದರಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಗ್ರಾಮ ಪಂಚಾಯಿತಿ ಹಾಗೂ ಟ್ರಸ್ಟ್ ವತಿಯಿಂದ ಬಗೆಹರಿಸಲಾಗುವುದು. ಉಳಿದ ಸಮಸ್ಯೆಗಳು ಬಗ್ಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಪದ್ಮಾ, ಸಿಡಿಪಿಓ ಪ್ರದೀಪ್ ಕುಮಾರ್,ಸದಸ್ಯರಾದ ಉಮೇಶ್, ನಾಗೇಶ್, ಜ್ಯೋತಿ, ಸೌಭಾಗ್ಯಮ್ಮ, ಕಮಾಲಾಕ್ಷಿ, ವೀಣಾ ಶ್ಯಾಂ ಪ್ರಸಾದ್, ಪಿಡಿಓ ಲೀಲಾವತಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.




