Thursday, September 19, 2024

ಪ್ರಾಯೋಗಿಕ ಆವೃತ್ತಿ

”ಗುಡಿ, ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ” ಎಂಬುದನ್ನು ಶೂದ್ರವರ್ಗ ಇನ್ನೂ ಅರ್ಥೈಸಿಕೊಂಡಿಲ್ಲ: ಸೇನಾನಿ

ರಾಷ್ಟ್ರಕವಿ ಕುವೆಂಪು ಅವರು ‘ಗುಡಿ, ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ’ ಎಂದು ಕರೆ ನೀಡಿ ಹಲವು ದಶಕಗಳೇ ಉರುಳಿದರೂ ಇಂದಿಗೂ ಶೂದ್ರ ವರ್ಗ ಅಥವಾ ಶೋಷಿತ ಸಮುದಾಯಗಳು ತಮ್ಮ ಮನೋಭಾವವನ್ನು ಬದಲಿಸಿಕೊಂಡಿಲ್ಲ ಎಂದು ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಸೇನಾನಿ ವಿಷಾದಿಸಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕುವೆಂಪು ವಿಚಾರ ವೇದಿಕೆ ಆಯೋಜಿಸಿದ್ದ `ಕುವೆಂಪು ವೈಚಾರಿಕತೆಯ ಅಭಿಯಾನ ಮತ್ತು ಕೈಪಿಡಿ ಬಿಡುಗಡೆ ಸಮಾರಂಭ’ದಲ್ಲಿ ಕೈಬಿಡಿ ಬಿಡುಗಡೆ ಮಾತನಾಡಿದ ಅವರು, ಹಾಡಿಯಲ್ಲಿನ ಅಭಿವೃದ್ಧಿಗಾಗಿ ನಾವು ಪ್ರಯತ್ನಿಸಿದ್ದೆವು. ಆದರೆ, ನಮಗೆ ಒಂದು ದೇವಸ್ಥಾನ ಕಟ್ಟಿಸಿಕೊಡಿ ಎಂದು ಪಟ್ಟುಹಿಡಿದ ಪ್ರಸಂಗವನ್ನು ಉದಾಹರಿಸಿ, ಜನರು ಇಂದಿಗೂ ಮೌಢ್ಯವನ್ನೇ ಉಸಿರಾಡುತ್ತಿದ್ದಾರೆಂದು ಹೇಳಿದರು.

ಇಂದಿನ ಯುವಜನರು ವ್ಯಾಟ್ಸಪ್ ಯೂನಿವರ್ಸಿಟಿಯಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ. ಅವರಿಗೆ ಓದುವ ವ್ಯವಧಾನ ಕಡಿಮೆಯಾಗುತ್ತಿದೆ. ಕುವೆಂಪು ಅವರು ಹೆಚ್ಚು ಕೇಂದ್ರೀಕರಿಸಿದ್ದೇ ಯುವಜನರ ಮೇಲೆ. ಆದರೆ ಅವರ ವೈಚಾರಿಕ ಚಿಂತನಗೆಳನ್ನು ಅಂದಿನ ರೈತಸಂಘ, ದಲಿತ ಸಂಘರ್ಷ ಸಮಿತಿ ಹೆಚ್ಚು ಅನುಕರಿಸಿದ್ದಲ್ಲದೆ, ಪ್ರಚಾರವನ್ನೂ ಮಾಡಿದವು. ಈ ದಿನಗಳಲ್ಲಿ ವಿಶ್ವಮಾನವ ಸಂದೇಶ ಯುವಜನರ ಕೈಗೆ ತಲುಪಿ ಅವರು ಓದಿ ತಿಳಿದುಕೊಂಡರೆ ಒಂದಷ್ಟು ಬದಲಾವಣೆ ಕಾಣಲು ಸಾಧ್ಯ ಎಂದರು.

`ಹೂವಿನ ಹಾರವೂ ಬಲು ಭಾರವಾಗಿದೆ’
ಕುವೆಂಪು ಅವರು ಶಿವಮೊಗ್ಗದವರಾದರೂ ಮಂಡ್ಯಕ್ಕೂ ಅವರಿಗೂ ಬಹಳ ನಂಟಿತ್ತು. ಏಕೆಂದರೆ ದೇಶದಲ್ಲೇ ಮೊದಲ ಬಾರಿಗೆ ರೈತನನ್ನು ನೇಗಿಲಯೋಗಿ ಎಂದು ಸಂಭೋಧಿಸಿದ್ದು ಕುವೆಂಪು. ಅವರ ಮಂತ್ರ ಮಾಂಗಲ್ಯ ಸೂತ್ರವನ್ನೂ ಅತಿಹೆಚ್ಚು ಅನುಸರಿಸಿದ ಜಿಲ್ಲೆಯೂ ಮಂಡ್ಯವೇ ಆಗಿದೆ. ಅವರು ತಮಗೆ ಸಂದ ಗೌರವದ ಕುರಿತು `ಹೂವಿನ ಹಾರವೂ ಬಲು ಭಾರವಾಗಿದೆ’ ಎಂದು ನುಡಿದಿದ್ದೂ ಕೂಡ ಇದೇ ಮಂಡ್ಯದ ಕರ್ನಾಟಕ ಸಂಘದಲ್ಲಿ. ಆದ್ದರಿಂದ ಕುವೆಂಪು ಅವರ ಚಿಂತನೆಯನ್ನು ಯುವ ಜನತೆ ತಿಳಿದು ಜಾಗೃತರಾಗಬೇಕಿದೆ ಎಂದು 
ಜಗದೀಶ್‌ಕೊಪ್ಪ ಹೇಳಿದರು.

ಹಿರಿಯ ಚಿಂತಕ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ರಾಜಕೀಯ ಮತ್ತು ಧರ್ಮ ಇವೆರಡೂ ಜನರನ್ನು ಅಧೀನ ಅಥವಾ ಗುಲಾಮಗಿರಿಯಲ್ಲಿ ಇಟ್ಟುಕೊಳ್ಳುವ ಪ್ರವೃತ್ತಿಯನ್ನು ಬೆಳೆಸುತ್ತಿದ್ದು, ಸ್ವತಃ ಅತ್ಯಂತ ಭ್ರಷ್ಟ ಕೂಪದಲ್ಲಿ ಮುಳುಗಿವೆ. ರಾಜಕೀಯ ಮತ್ತು ಧರ್ಮ ಇವೆರಡೂ ಕೂಡ ಪ್ರಶ್ನಿಸುವವರನ್ನು ವಿರೋಧಿಸುತ್ತವೆ. ಅಂತಹವರನ್ನು ಸಹಿಸುವುದಿಲ್ಲ. ಇದರ ವಿರುದ್ಧವೇ ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಕ್ರಾಂತಿಯ ಕಿಡಿ ಹಾರಿಸಿ ಜಾಗೃತಿ ಪಸರಿಸಿದ್ದಾರೆಂದು ಸ್ಮರಿಸಿದರು.

ಹಾಗಾಗಿ ಇಂದು ನಮಗೆ ಬೇಕಿರುವುದು ಸಹಬಾಳ್ವೆಯ ವಿವೇಕ, ಅದುವೇ ನಮ್ಮ ಮಂತ್ರವಾಗಬೇಕಿದೆ. ಏಕೆಂದರೆ ಪ್ರಭುತ್ವವನ್ನು ವಿರೋಧಿಸುವ ಧೈರ್ಯ ಬೇಕಿದೆ. ಅದನ್ನೇ ಕುವೆಂಪು ಅವರು ಪ್ರತಿಪಾದಿಸಿದ್ದು, ೨೦ನೇ ಶತಮಾನದ ಸಾಹಿತ್ಯ ಪರಂಪರೆಯಲ್ಲಿ ಅನೇಕ ಪ್ರತಿಭೆಗಳನ್ನು ಕಂಡೆವು. ಅವರಲ್ಲಿ ಕುವೆಂಪು ವಿಶಿಷ್ಠರಾಗಿದ್ದಾರೆಂದು ಬಣ್ಣಿಸಿದರು.

ನಿರಂಕುಶಮತಿ ಎಂದರೆ ನಿರಂಕುಶ ಪ್ರಭುತ್ವವನ್ನು ಬಿಡಿಸಿಕೊಳ್ಳಲು, ಸಂಯಮಪೂರ್ಣವಾದ ಬುದ್ಧಿ ಸ್ವಾತಂತ್ರ್ಯ ಎಂಬ ಅರ್ಥವಿದೆ. ಹಾಗಾಗಿ ಸಾಹಿತ್ಯ ಮಾತ್ರ ಸ್ವಾಯತ್ತ ಮನೋಭಾವವನ್ನು ಬೆಳೆಸಲು ಸಾಧ್ಯ. ಆ ಸ್ವಾಯತ್ತ ಪ್ರಜ್ಞೆ ಪ್ರಜ್ಞೆಯೇ ಇಂದಿನ ಅಗತ್ಯ ಎಂದು ಪ್ರತಿಪಾದಿಸಿದರು.

ಈ ಪ್ರಜ್ಞೆಯನ್ನು ಬೆಳೆಸಲೆಂದೇ ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಕೆಲಸ ಮಾಡಿದ್ದಾರೆ. ಸಮಾಜವನ್ನು ಸೃಜನಶೀಲಗೊಳಿಸುವ ಕೆಲಸವನ್ನು ಎಲ್ಲ ಆಯಾಮಗಳಿಂದಲೂ ಮಾಡಿದ್ದಾರೆ. ಆದ್ದರಿಂದ ಇಂದಿನ ಹೊಸ ತಲೆಮಾರು ಕುವೆಂಪು ಅವರನ್ನು ಓದಿಕೊಂಡರೆ ಖಂಡಿತ ಹೊಸ ರೀತಿಯ ವೈಚಾರಿಕ ಪ್ರಜ್ಞೆ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕುವೆಂಪು ವಿಚಾರ ವೇದಿಕೆಯ ಎನ್.ಜಗದೀಶ್‌ಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವರ್ತಮಾನದ ಈ ಜಗತ್ತಿನಲ್ಲಿ ವಿಶ್ವಮಾನವ ಪ್ರಜ್ಞೆಯಿಂದ ಬದುಕುವುದು ಅನಿವಾರ್ಯವಾಗಿದೆ. ಇದಕ್ಕೆ ಪೂರಕವಾಗಿ ಕುವೆಂಪು ಅವರ ವೈಚಾರಿಕ ಭಾಷಣಗಳ ಸುವರ್ಣ ಮಹೋತ್ಸವದ ಅಂಗವಾಗಿ ಅವರ ವಿಶ್ವಮಾನವ ಸಂದೇಶ ಮತ್ತು ವಿಚಾರ ಕ್ರಾಂತಿಗೆ ಆಹ್ವಾನ ಈ ಭಾಷಣಗಳ ಸಂಕ್ಷಿಪ್ತ ಸಂದೇಶಗಳನ್ನು ನಾಡಿನ ಯುವ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಮಂಡ್ಯದ ಸಮಾನ ಮನಸ್ಕ ಗೆಳೆಯರು ಕೈಪಿಡಿಯನ್ನು ಮುದ್ರಿಸಿ ಎಲ್ಲೆಡೆ ಉಚಿತವಾಗಿ ಹಂಚುವ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದರು.

ವೇದಿಕೆಯಲ್ಲಿ ಅಂಕಣಕಾರ ಬಿ.ಚಂದ್ರೇಗೌಡ, ವಿಚಾರವಾದಿ ಟಿ.ಎಲ್.ಕೃಷ್ಣೇಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!