Saturday, November 21, 2026

ಪ್ರಾಯೋಗಿಕ ಆವೃತ್ತಿ

ಸ್ವಾಭಿಮಾನಿ ಬಣದ ಕೆ.ಎಸ್.ವಿಜಯ್ ಆನಂದ್ ಹರಕೆಯ ಕುರಿಯಲ್ಲ

ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಮೊಮ್ಮೊಗ ಜೆಡಿಎಸ್ ಪಕ್ಷದ ವಿರುದ್ದ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಾಗಲೇ ಅವರನ್ನು ಹರಕೆಯ ಕುರಿ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಆದರೆ ನಿಜಕ್ಕೂ ವಿಜಯ್ ಆನಂದ್ ಹರಕೆಯ ಕುರಿಯಾದರೆ ಎಂಬುದನ್ನು ನಾವು ಗಮನಿಸಬೇಕಾಗಿದೆ.

ಹೇಳಿ ಕೇಳಿ ವಿಜಯ್ ಆನಂದ್ ಒಂದು ಪ್ರಬುದ್ಧ ರಾಜಕೀಯ ಹಿನ್ನೆಲೆ ಇರುವ ಕುಟುಂಬದ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ರಾಜಕೀಯ ಏಳು ಬೀಳುಗಳನ್ನು ಕಂಡಿದ್ಧಾರೆ. ಮಂಡ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಇವರು, ಪ್ರಬುದ್ದ ಹಾಗೂ ವಿವೇಚನೆಯುಳ್ಳ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ವ್ಯಕ್ತಿಯನ್ನು ಮತ್ತೊಬ್ಬರು ನಿಯಂತ್ರಿಸಲು ಸಾಧ್ಯವೇ ? ಆಗೊಂದು ವೇಳೆ ನಿಯಂತ್ರಿಸಲು ಪ್ರಯತ್ನಿಸಿದರೆ ಅದನ್ನು ಅರಿಯದಷ್ಟು ಮುಗ್ಧರೇ ವಿಜಯ್ ಆನಂದ್.

ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವಿಜಯ್ ಆನಂದ್, ಆ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಂತೂ ಸತ್ಯ. ಹೀಗಿರುವಾಗ ತನಗೆ ಇಬ್ಬರು ಮಹಾನ್ ನಾಯಕರು ಟಿಕೆಟ್ ತಪ್ಪಿಸಿದರು ಎಂದು ಅವರೇ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೇ ಟಿಕೆಟ್ ತಪ್ಪಿಸಿದ ಕಾರಣದಿಂದಲೇ, ತನ್ನ ಇರುವಿಕೆಯನ್ನು ವಿಜಯ್ ಆನಂದ್ ತೋರ್ಪಡಿಸಿದ್ದು ತಪ್ಪೇ ? ಘಟನಾಘಟಿ ನಾಯಕರ ಎದುರು ತನ್ನ ಪ್ರತಿರೋಧವನ್ನು ವ್ಯಕ್ತಪಡಿಸಿ ಸ್ವತಂತ್ರವಾಗಿ ಕಣಳಿದ್ದು ಸಾಂಘಿಕ ಹೋರಾಟ ನಡೆಸಿದ್ದು ತಪ್ಪೇ ? ಈ ಚುನಾವಣೆಯ ಮೂಲಕ ವಿಜಯ್ ಆನಂದ್ ಒಂದರ್ಥದಲ್ಲಿ ಮಂಡ್ಯ ಕ್ಷೇತ್ರದ ಮತದಾರರಿಗೆ ಪರಿಚಯವಾಗಿದ್ದಾರೆ. ವಿಜಯ್ ಆನಂದ್ ತಮ್ಮ ಮೊದಲ ಚುನಾವಣೆಯಲ್ಲಿಯೇ ಸುಮಾರು 15 ಸಾವಿರದಷ್ಟು ಮತಗಳನ್ನು ಗಳಿಸಿ ಜನರ ಮನಸಿನಲ್ಲಿ ಉಳಿದಿದ್ದಾರೆ.

ಇದನ್ನೂ ಓದಿ :  ನನ್ನನ್ನು ಯಾರು ಬಲಿಪಶು ಮಾಡಿಲ್ಲ, ಮತದಾರರ ತೀರ್ಪಿಗೆ ಬದ್ದನಾಗಿದ್ದೇನೆ – ವಿಜಯ್ ಆನಂದ್

ಕಡಿಮೆ ಅವಧಿಯಲ್ಲಿ ವಿಜಯ್ ಪರವಾಗಿ ವಿದ್ಯಾರ್ಥಿಗಳು, ಯುವಜನರು, ಪ್ರಾಧ್ಯಾಪಕರು ಸೇರಿದಂತೆ ಮಂಡ್ಯದ ಮತದಾರರು ಅವರ ಚುನಾವಣೆಯ ಭಾಗವಹಿಸುವಿಕೆಯನ್ನು ಬೆಂಬಲಿಸಿದ್ದಾರೆ. ಅವರು ಸೋಲುತ್ತಾರೋ ?  ಗೆಲ್ಲುತ್ತಾರೋ ? ಎನ್ನುವುದನ್ನು ಲೆಕ್ಕಿಸದೆ, ಅಭಿಮಾನದಿಂದ ಸಾಭಿಮಾನಿ ವಜ್ರಕ್ಕೆ ತಮ್ಮ ಮುದ್ರೆ ಒತ್ತಿದ್ದಾರೆ.
ರಾಜ್ಯದ ಚುನಾವಣೆಯಲ್ಲಿ ಅನುಭವಿ, ಮುತ್ಸದಿ ಘಟಾನುಘಟಿಯರು ಸೋಲುಂಡಿರುವಾಗ, ವಿಜಯ್ ಆನಂದ್ ತಮ್ಮ ಪ್ರಯತ್ನದ ಮೂಲಕ ಮತದಾರರ ಪ್ರಭುವಿನ ಮಸ್ತಕದಲ್ಲಿ ದಾಖಲಾಗಿದ್ದಾರೆ.

ಯಾವುದೇ ಪಕ್ಷದ ಸಾಂಪ್ರದಾಯಿಕ ವೋಟುಗಳಿಲ್ಲದೆ, ಪಕ್ಷೇತರವಾಗಿ ಎಲ್ಲಾ ಬೂತ್ ಗಳಲ್ಲಿ ಸಿದ್ದ ಕಾರ್ಯಕರ್ತ ಪಡೆ ಇಲ್ಲದೆ, ಶಾಸಕ ಶ್ರೀನಿವಾಸ್ ಬೆಂಬಲಿಗರು, ನಗರಸಭಾ ಸದಸ್ಯರು ಪಕ್ಷ ನಿಷ್ಠೆ ಹೆಸರೇಳಿ ಬಿಟ್ಟಾಗಲೂ ತಾನು ಗಂಭೀರ ಚುನಾವಣೆಯನ್ನು ಎದುರಿಸುತ್ತೇನೆಂದು ಕಣಕ್ಕೆ ಧುಮುಕಿದ ವ್ಯಕ್ತಿಯನ್ನು ಹರಕೆಯ ಕುರಿ ಎಂದು ವ್ಯಾಖ್ಯಾನಿಸುವುದು ಎಷ್ಟು ಸರಿ ? ಮತದಾರರು ವಿಜಯ್ ಆನಂದ್ ಒಳ್ಳೆಯ ವ್ಯಕ್ತಿ. ಮನೆತನ, ಕುಟುಂಬ ನಿತ್ಯ‌ಸಚಿವ ಕೆ.ವಿ. ಶಂಕರೇಗೌಡರ ಕುಟುಂಬದವರು ಎಂದೆಲ್ಲ ಹೇಳಿದರೂ ಅವು ಭಾವನಾತ್ಮಕವಾಗಿ ವೋಟ್ ಬ್ಯಾಂಕ್ ಅಗುವಲ್ಲಿ ಕಷ್ಟವಾಯಿತು.

ಈ ಚುನಾವಣೆಯ ಎಂಬ ಯೂನಿವರ್ಸಿಟಿಯಲ್ಲಿ ಚುನಾವಣೆಯ ಹಲವು ಮಜಲುಗಳು ಅವರ ಅರಿವಿಗೆ ಈಗಾಗಲೇ ಬಂದಿರುತ್ತವೆ. ವಿಜಯ್ ಆನಂದ್  ಇರುವ ಕಡಿಮೆ ಅವಧಿಯಲ್ಲಿ ನಿರ್ಧರಿಸಿ ಕಣಕ್ಕಿಳಿದಿದ್ದಾರೆ. ಯಾವುದೇ ರಾಜಿ ಇಲ್ಲದೇ, ಯಾವುದೇ ದಗಲಬಾಜಿ, ಕೊಂಕುಗಳಿಗೆ ತಲೆಕೆಡಿಸಿಕೊಳ್ಳದೇ ಈ ಚುನಾವಣೆಯಲ್ಲಿ ಹಲವು ಅವ್ಯಕ್ತವಾದ ಪಾಠಗಳನ್ಮು ಕಲಿತಿದ್ದಾರೆ. ಇರುವ ಕಡಿಮೆ ಅವಧಿಯಲ್ಲಿ ತಮ್ಮ ಸಾಮರ್ಥ್ಯವನ್ನು ತಿಳಿದುಕೊಂಡಿದ್ದಾರೆ.

ಪಕ್ಷದ ಟಿಕೆಟ್ ಕೈ ತಪ್ಪಿತು ಎಂದು ಕೈ ಕಟ್ಟಿ ಕುಳಿತುಕೊಳ್ಳದೇ ಸ್ಪರ್ಧಾ ಮನೋಭಾವದಿಂದ ಚುನಾವಣೆ ಎದುರಿಸಿ, ಸೋಲಿನ ನಂತರವೂ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವುದು ಉತ್ತಮ ಬೆಳವಣಿಗೆಯೇ ಆಗಿದೆ. ”ನಾಯಕನಾಗಲೂ ಹೋರಾಡುವವನು ಸೋಲಲು ಸಿದ್ದನಿರಬೇಕು” ಎಂಬ ನುಡಿಯಂತೆ ವಿಜಯ್ ಆನಂದ್ ಈ ಚುನಾವಣೆಯಲ್ಲಿ ತಾನೇ ಇದ್ದ ಜೆಡಿಎಸ್ ಪಕ್ಷದ ವಿರುದ್ಧ ಸಾತ್ವಿಕ ಪ್ರತಿರೋಧ ದಾಖಲಿಸಿ, ಜನರ ಮನಸ್ಸಿನಲ್ಲಿ ನೆಲೆಯೂರುವ ಪ್ರಯತ್ನ ಮಾಡಿದ್ದಾರೆ. ಹೀಗಿರುವಾಗ ಅವರು ಹರಕೆಯ ಕುರಿಯಾದರೂ ಎಂಬುದು ಎಷ್ಟು ಸರಿ ಅಲ್ಲವೇ ?

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ