ಮಂಡ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಯಾರ ಒತ್ತಡಕ್ಕೂ ಮಣಿದಿಲ್ಲ ಅಥವಾ ನನ್ನನ್ನು ಯಾರು ಬಲಿಪಶು ಮಾಡಿಲ್ಲ, ಮತದಾರರ ತೀರ್ಪಿಗೆ ನಾನು ಬದ್ದನಾಗಿದ್ದೇನೆಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯ್ ಆನಂದ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸ್ಪರ್ಧೆಗೆ ಮಾಜಿ ಶಾಸಕರು ಸೇರಿದಂತೆ ಹಲವು ಮುಖಂಡರು ಬೆಂಬಲ ಸೂಚಿಸಿದ್ದಾರೆ. ನನಗೆ 15 ಸಾವಿರಕ್ಕೂ ಹೆಚ್ಚು ಮತಗಳು ಲಭಿಸಿವೆ. ನನ್ನ ಚುನಾವಣೆಗೆ ಶ್ರಮಿಸಿದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಮತ ನೀಡಿದ ಮತದಾರರಿಗೆ ಹೃದಯ ಪೂರ್ವಕ ಧನ್ಯವಾದ ಅರ್ಪಿಸುತ್ತೇನೆಂದರು.
ಚುನಾವಣಾ ಸ್ಪರ್ಧೆಯಿಂದ ನಾನು ಸಾಲಗಾರನಾಗಿಲ್ಲ, ಜನರ ಭಿಕ್ಷೆಯ ಹಣದಲ್ಲಿ ಚುನಾವಣೆ ಎದುರಿಸಿದ್ದೇನೆ. ರಾಷ್ಟೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳ ಅಬ್ಬರದಲ್ಲಿ ನನಗೆ ಲಭಿಸಿರುವ ಮತಗಳ ಬಗ್ಗೆ ತೃಪ್ತಿಯಿದ್ದು, ಈ ಸಂಬಂಧ ಅನ್ಯರನ್ನು ದೂಷಿಸುವುದು ಬೇಡ. ನಮ್ಮೆಲ್ಲರ ನೀರಿಕ್ಷೆಯಷ್ಟು ಮತಗಳು ಬಾರದಿರಬಹುದು. ಆದರೆ ನನಗೆ ದೊರಕಿರುವ ಮತಗಳು ಪ್ರಾಮಾಣಿಕತೆಯ ಮತಗಳಾಗಿವೆ ಎಂದು ನುಡಿದರು.
ಇದನ್ನೂ ಓದಿ : ಸ್ವಾಭಿಮಾನಿ ಬಣದ ಕೆ.ಎಸ್.ವಿಜಯ್ ಆನಂದ್ ಹರಕೆಯ ಕುರಿಯಲ್ಲ
ಮಾಜಿ ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಮುಂದಿನ ದಿನಗಳಲ್ಲೂ ನಾವೆಲ್ಲ ಒಟ್ಟಾಗಿದ್ದು, ಚುನಾವಣೆ ಎದುರಿಸಲು ಮುಂದಾಗುತ್ತೇವೆ. ಜೆಡಿಎಸ್ ಪಕ್ಷದ ವೈಫಲ್ಯದಿಂದ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆಂದು ವ್ಯಾಖ್ಯಾನಿಸಿದರು.
ವಿಜಯ್ ಆನಂದ್ ಅವರನ್ನು ಯಾರು ಬಲಿಪಶು ಮಾಡಲು ಸಾಧ್ಯವಿಲ್ಲ, ನನ್ನ ಆರಂಭದ ಎರಡು ಚುನಾವಣೆಯಲ್ಲೂ ಸೋಲು ಕಂಡ ನಂತರ ಮೂರನೇ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜನರೇ ಹಣ ಹಾಗೂ ಮತ ನೀಡಿ ಹಾರೈಸಿರುವುದು ನಮ್ಮ ಸುದೈವವೆಂದರು.
ಜಿ.ಪಂ.ಮಾಜಿ ಸದಸ್ಯ ಹೆಚ್.ಎನ್.ಯೋಗೇಶ್ ಮಾತನಾಡಿ, ನಮ್ಮ ಅಭ್ಯರ್ಥಿಗೆ 15300 ಕ್ಕೂ ಹೆಚ್ಚು ಮತಗಳು ಲಭಿಸಿವೆ. ಮತ ಗಳಿಕೆ ಪ್ರಮಾಣದ ಬಗ್ಗೆ ತೃಪ್ತಿ ಇದ್ದು, ಕೆಲ ರಾಷ್ಟೀಯ ಪಕ್ಷಗಳ ಅಭ್ಯರ್ಥಿಗಳಿಗೆ ಠೇವಣೆ ಜಪ್ತಿಯಾಗಿದ್ದು, ನಮ್ಮ ಸ್ಪರ್ಧೆ ಸಮಯೋಚಿತವಾಗಿತ್ತು ಎಂದರು.
ಎಲ್ಲರ ಸಹಮತದ ಅಭ್ಯರ್ಥಿಯಾಗಿ ವಿಜಯ್ ಆನಂದ್ ಅವರನ್ನು ಕಣಕ್ಕಿಳಿಸಲಾಗಿತ್ತು. ಮುಂಬರುವ ದಿನಗಳಲ್ಲೂ ಸಾಮೂಹಿಕ ಹೊಣೆಗಾರಿಕೆಯಿಂದ ಕಾರ್ಯತಂತ್ರ ರೂಪಿಸಲಾಗುವುದೆಂದು ತಿಳಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ತಿಮ್ಮೇಗೌಡ, ಲೋಕೇಶ್, ಪುಟ್ಟಸ್ವಾಮಿ ಇತರರು ಉಪಸ್ಥಿತರಿದ್ದರು.




