Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಾಲಾ ಮಕ್ಕಳಿಗೆ ಹಾಲಿನ ಪುಡಿ ಬದಲು ಟೆಟ್ರಾಪ್ಯಾಕ್‌ ಹಾಲು

ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರುವ ಕೆನೆಭರಿತ ಹಾಲಿನ ಪುಡಿ ಬದಲಿಗೆ ಟೆಟ್ರಾಪ್ಯಾಕ್‍ ಹಾಲು ವಿತರಿಸಲು ಕೆಎಂಎಫ್ ತೀರ್ಮಾನಿಸಿದೆ. ಈ ಕುರಿತಂತೆ ಕೆಎಂಎಫ್ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.

ಶಾಲೆಗಳಲ್ಲಿ ಮಕ್ಕಳಿಗೆ ವಿತರಿಸುವ ಹಾಲಿನ ಪೌಡರ್ ಬಳಕೆಗೆ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಅದೇ ರೀತಿ ಗರ್ಭಿಣಿಯರು ಸಹ ಹಾಲಿನ ಪೌಡರ್ ಬಳಕೆಗೆ ನಿರಾಸಕ್ತಿ ತೋರುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಹೀಗಾಗಿ, ಹಾಲಿನ ಪೌಡರ್ ಬದಲು ಟೆಟ್ರಾಪ್ಯಾಕ್ ಹಾಲು ನೀಡಿದರೆ ಸದ್ಭಳಕೆಯಾಗಬಹುದೆಂದು ಮುಂದಿನ ವರ್ಷದಿಂದ ಶಾಲಾ ಮಕ್ಕಳಿಗೆ 180 ಎಂಎಲ್ ಟೆಟ್ರಾಪ್ಯಾಕ್ ಹಾಲು ನೀಡಲು ಕೆಎಂಎಫ್‌ ನಿರ್ಧಿರಿಸಿದೆ. 

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಅವರ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ಬಜೆಟ್‍ನಲ್ಲಿ ಟೆಟ್ರಾಪ್ಯಾಕ್ ಹಾಲು ವಿತರಿಸುವ ಯೋಜನೆಗೆ ಗ್ರೀನ್ ಸಿಗ್ನಲ್ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಕೆಎಂಫ್‌ ವ್ಯವಸ್ಥಾಪಕ ನಿರ್ದೇಶಕ ಸತೀಶ್‌, “ಶಾಲಾ ಮಕ್ಕಳಿಗೆ ಟೆಟ್ರಾಪ್ಯಾಕ್‌ ವಿತರಿಸುವ ಬಗ್ಗೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಅಧಿಕೃತವಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಶುಚಿತ್ವದ ದೃಷ್ಠಿಯಿಂದ ಟೆಟ್ರಾಪ್ಯಾಕ್‌ ಹಾಲು ನೀಡುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೇ, ಟೆಟ್ರಾಪ್ಯಾಕ್‌ನ ಹಾಲಿನ ಅವಧಿಯೂ ತುಂಬಾಯಿದೆ. ಹಾಲಿನ ಪುಡಿ ಕೆಟ್ಟುಹೋಗುವ ಸಾಧ್ಯತೆಗಳಿವೆ” ಎಂದರು

ಗದಗ ಜಿಲ್ಲೆಯ ರಾಜೂರು ಗ್ರಾಮದ ಅಂಗನಾಡಿ ಕಾರ್ಯಕರ್ತೆ ಬಸಮ್ಮ ವ್ಯಾಪಾರಿ, “ನಮ್ಮ ಅಂಗನವಾಡಿ ಕೇಂದ್ರದಲ್ಲಿ 25 ಮಕ್ಕಳು ಮತ್ತು 25ಕ್ಕೂ ಅಧಿಕ ಗರ್ಭಿಣಿಯರಿಗೆ ಪ್ರತಿ ದಿನ ಪುಡಿ ಹಾಲನ್ನೇ ವಿತರಿಸುತ್ತಿದ್ದೇವೆ. ಶುರುವಿನಲ್ಲಿ ಮಕ್ಕಳು ತುಸು ನಿರಾಸಕ್ತಿ ತೋರಿಸಿದರೂ ಆಮೇಲೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಹಾಲಿನ ಪುಡಿಗೆ ಒಂದಷ್ಟು ಸಕ್ಕರೆ ಮಿಕ್ಸ್‌ ಮಾಡಿದರೆ ಆಯ್ತು. ಇದೀಗ ಪುಡಿ ಹಾಲಿಗೆ ಮಕ್ಕಳು ಒಗ್ಗಿಕೊಂಡಿದ್ದಾರೆ. ಆದರೆ, ಟೆಟ್ರಾಪ್ಯಾಕ್ ಹಾಲು ನೀಡಿದ್ರೆ ಏನು ಮಾಡುತ್ತಾರೋ ಗೊತ್ತಿಲ್ಲ. ಹಾಲಿನ ಪುಡಿ ಕೊಟ್ಟಿದ್ದರೆ ಒಳ್ಳೆಯದಿತ್ತು” ಎಂದು ತಿಳಿಸಿದರು.

ರಾಜ್ಯದಲ್ಲಿ ಕ್ಷೀರಭಾಗ್ಯ ಯೋಜನೆಯಲ್ಲಿ ಹಾಲಿನ ಪೌಡರ್ ವಿತರಿಸುವಲ್ಲಿ ಹಲವು ಲೋಪಗಳಿದ್ದವು. ಬಡ ಮಕ್ಕಳ ಹಾಲಿನ ಪೌಡರ್‌ಗಳನ್ನು ಅಕ್ರಮ ಸಾಗಾಟ ಮಾಡುತ್ತಿರುವ ಪ್ರಕರಣಗಳು ವರದಿಯಾಗಿದ್ದವು. ಹಾಗಾಗಿ ಟೆಟ್ರಾಪ್ಯಾಕ್ ಹಾಲು ವಿತರಿಸಲು ಮುಂಬರುವ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ.

ಕರ್ನಾಟಕ ಸರ್ಕಾರವು 2013-14ನೇ ಶೈಕ್ಷಣಿಕ ವರ್ಷದ ಆರಂಭದಿಂದ 1ರಿಂದ 10ನೇ ತರಗತಿಯ ಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿತು. ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲ ಮಕ್ಕಳಿಗೆ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಮಿ.ಲೀ. ಹಾಲನ್ನು ವಾರದಲ್ಲಿ 3 ದಿನ ನೀಡಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!